Friday 22 July 2016

sink hole of Mount Gambier--south australia-- ಕನ್ನಡ

ಪ್ರಕೃತಿಯ ಎಸ್ಟೋ ವಿಸ್ಮಯಗಳು ನಮ್ಮನ್ನು ಪುಳಕಿತರನ್ನಾಗುವಂತೆ ಮಾಡುತ್ತವೆ. ಹಾಗೆ ನಾವು ಅದರ ಬಗ್ಗೆ ಹೆಚ್ಚು ಹೆಚ್ಚು ಯೋಚಿಸುವಂತೆ ಮಾಡುತ್ತವೆ.ನಾವು MountGambier  ನಲ್ಲಿರುವ sink hole ನೋಡಿದಾಗ ಆದ ಅನುಭವ. ಇದು ನೋಡಲೇಬೇಕಾದ ಪ್ರಕೃತಿಯ ಸ್ವಂತ ರಚನೆ. ಎಂದೇ ಹೇಳಬಹುದು.  ಭೂಮಿ ಒಮ್ಮೊಮ್ಮೆ ವಿಕೋಪಕ್ಕೆ ತಿರುಗಿ ಆದ ಜ್ವಾಲಾಮುಖಿಗಳು, ಭೂಕಂಪನಗಳು ಮನುಷ್ಯನಿಗೆ ಒಂದೊಂದು ರೀತಿಯ  ಪಾಠಗಳನ್ನು ಕಲಿಸುತಿರುತ್ತವೆ. ಹಾಗೇ sinkhole ಭೂಮಿಯ ಕುಸಿತದಿಂದ ಆದ ಭೂಮಿಯ ಚಿತ್ರಣ ಎಂದೆನ್ನಬಹುದು. ಭೂಮಿಯ ಒಳಗಿನ ಟೊಳ್ಳು ಭಾಗಕ್ಕೆ ಅದರ ಮೇಲಿನ ಪದರವು ಕುಸಿದು ಭೂಭಾಗ ರಚನೆಯಾಗಿದೆ.


ಇದು ಆಗಿರುವುದು limestone ನ ಮೇಲ್ಛಾವಣಿಯಾ ಕುಸಿತದಿಂದ ಆಗಿದೆ. ನಾವು ಅದರ ಒಳಗೆ ಹೋಗಲು ಮೆಟ್ಟಿಲುಗಳು ಮಾಡಲಾಗಿದೆ. ನಾವು ಆ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದ್ರೆ ಆ sinkholeನ ಗೋಡೆಯ ಪದರ ಗಳಲ್ಲಿ  ನಮಗೆ ವಿಶೀಷತೆ ಎನಿಸುವುದು  ಭೂಮಿಯ ಒಳಪದರದ ರಚನೆಯನ್ನು ನಾವಿಲ್ಲಿ ಕಾಣಬಹುದಾಗಿದೆ. ಅಲ್ಲಲ್ಲಿ ಗಿಡ-ಗೆಂಟೆಗಳು ಬೆಳೆದಿವೆ. ಆ ಕಲ್ಲುಗಳ ಮೂಲಕ ಮತ್ತು ಗಿಡ-ಗೆಂಟೆಗಳ ಮೂಲಕ ನೀರು ಜಿನುಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇಲ್ಲಿ limestone ಗಳ ಮೂಲಕ ನೀರು ಜಿನುಗುವುದನ್ನು  ನಾವು ನೋಡಬಹುದಾಗಿದೆ. ತಳದಿಂದ  ಆಕಾಶವನ್ನು  ನೋಡಿದರೆ ಒಂದು ಗುಂಡಾದ ಗೆರೆ ಕೊರೆದ  ರೀತಿ ನೋಡಬಹುದು. ಆಕಾಶಕ್ಕೆ ಸೊನ್ನೆ ಬರೆದಂತೆ ಕಾಣುತ್ತದೆ.ಅಲ್ಲಿ ಒಂದು ಚಿಕ್ಕ ಉದ್ಯಾನ ವನ್ನು ಮಾಡಿದ್ದಾರೆ.

ಮಕ್ಕಳ ಜೊತೆ ಒಂದು ದಿನ ಕಾಲ ಕಳೆಯಲು ಒಳ್ಳೆ ಜಾಗ , ಅಲ್ಲಿ ಕಣ್ಣಾ ಮುಚ್ಚಾಲೆ ಆಟ ಆಡಬಹುದು ಮತ್ತು ಮಕ್ಕಳಿಗೆ  ಭೂಗೋಳದ ಬಗ್ಗೆ ಚಿಕ್ಕ ಪಾಠ ತಿಳಿಸಿಕೊಟ್ಟಂತೆ ಆಗುತ್ತದೆ.

ಅಲ್ಲಿ ನಾವು ತೆಗೆದ ಪೂರ್ತಿ sinkhole ನ  ಒಂದು ಫೋಟೋ-ಸ್ಪೇರ್ ಕೆಳಗಿನ ಲಿಂಕ್ ನಲ್ಲಿದೆ.
Photo-sphere of Sinkhole    https://photos.google.com


Thursday 21 July 2016

ನಮಗೆ ಇಷ್ಟ ಆಗೋ ಹಾಡುಗಳೆಲ್ಲ ದುಃಖದ ಹಾಡುಗಳೇ ಏಕೆ?- our sweetest songs are all saddest songs,,why?

ನಾನು ಹೀಗೇ ಬೇಜಾರಾಗಿ ಸ್ವಲ್ಪ ರಿಲಾಕ್ಸ್ ಆಗೋಣಾ ಅಂತ ನನ್ನ ಮೊಬೈಲ್ನಲ್ಲಿರೋ ಹಾಡುಗಳನ್ನ ಪ್ಲೇ ಮಾಡಿದೆ ಎಲ್ಲಾವೂ ಸುಮಧುರ ಗೀತೆಗಳೆ. ಕಡಿಮೆ ಅಂದ್ರೂ ಒಂದು ಗಂಟೆಗಿಂತ ಜಾಸ್ತಿ ಹೊತ್ತು ಆ ಹಾಡುಗಳನ್ನೇ ಕೇಳ್ತಾ ಇದ್ದೆ. ಈ ಹಾಡುಗಳನ್ನೆಲ್ಲಾ ಕೇಳ್ತಾ ಯಿದ್ರೆ ಮನಸ್ಸಿಗೆ ಏನೂ ರಿಲ್ಯಕ್ಷ್ ಆದಂಗೆ ಆಗುತ್ತೆ. ಕೆಲವೊಮ್ಮೆ ನನ್ನ ತಲೆನೋವಿಗೆ ಹಾಡುಗಳನ್ನ ಕೇಳುವುದೇ ಮೆಡಿಸನ್. ಹಾಗೆ ಮೊಬೈಲ್ ತೊಗೊಂಡ್ ಹಾಡುಗಳನ್ನ ಸ್ಕ್ರಾಲ್ ಮಾಡ್ತಾ ಹೋದೆ ಯಾವ್ದಾದ್ರೂ ಹಳೆ ಹಾಡು ತೆಗೆದು ಹಾಕಿ ಹೊಸ ಹಾಡುಗಳನ್ನು ಸೇರಿಸೋಣ ಅಂತ. ಅಲ್ಲೇ ನಂಗೆ ಆಗಿದ್ದು ಆಶ್ಚರ್ಯ. ಇದುವರೆಗೂ ನಾನು ಕೇಳಿದ ಹಾಡುಗಳೆಲ್ಲಾ ದುಃಖ ತುಂಬಿದ  ಹಾಡುಗಳು. ಅದರೂ ಮನಸ್ಸು ಈ ಹಾಡುಗಳನ್ನ ಇಷ್ಟ ಪಡುತ್ತೇ ಯಾಕೆ? ನನಗೆ ತೋಚಿದ್ದನ್ನ  ನಾನಿಲ್ಲಿ ಬರೀತಿದೀನಿ.


ನಾನು ಸಂಗೀತ ಕೇಳುವುದು ಮನಸ್ಸಿನ ರಿಲ್ಯಾಕ್ಸ್ ಗಾಗಿ ಆದ್ರೆ ಇಷ್ಟ ಆಗಿದ್ದು ಮಾತ್ರ ಈ ಬೇಜಾರು, ನಿರಾಸೆ, ಅಳು ಬರಿಸುವ ಹಾಡುಗಳು. ಯಾಕೆ ಈ ಹಾಡುಗಳೇ ನಂಗೆ ಇಷ್ಟ ಆದವು ಅಂತ  ನನ್ನ ನಾ ಕೇಳಿಕೊಂಡಾಗ ನನ್ನ ಮನಸ್ಸಿಗೆ ತೋಚಿದ್ದು. ಈ  ದುಃಖದ  ಹಾಡುಗಳು ನಮ್ಮ ಮನಸ್ಸಿನ ಹಳೆಯ ಅನುಭವಗಳಿಂದ ನಮಗಾದ ನೋವು, ನಿರಾಸೆ, ತಿರಸ್ಕಾರ, ಒಂಟಿತನ,  ಅವಮಾನ, ದುಃಖ, ಪ್ರೀತಿ, ಪ್ರೇಮ, ಆಲಸ್ಯ ಇನ್ನು ಅನೇಕ ಬಗೆಯ ಅಂಶಗಳನ್ನು ನಾವು ಜೀವನದಲ್ಲಿ ಒಮ್ಮೆಯಾದ್ರೂ ಅನುಭವಿಸಿರುತೇವೆ. ಅವು ಹಾಡಿನ ರೂಪದಲ್ಲಿ ಕೇಳಿದಾಗ ನಮಗೆ ಏನೂ ಒಂದು ರೀತಿಯ ಸಮಾಧಾನ ಹೇಳುವಂತೆ ಅನ್ನಿಸಿರುತ್ತವೆ. ಉದಾಹರಣೆಗೆ ತಾಯಿ-ತಂದೆಯ ವಾತ್ಸಲ್ಯ, ಅಣ್ಣ-ತಂಗಿಯರ ಬಾಂಧವ್ಯ, ಅಜ್ಜ-ಅಜ್ಜಿಯರ ಮುಗ್ಧ ಪ್ರೀತಿ, ಸ್ನೇಹಿತರ ಜೊತೆಗಿನ ಆಟ-ಪಾಠ-ಹೊಡೆದಾಟ, ಪ್ರೇಮಿಗಳ ಅಗಲಿಕೆ, ಹುಟ್ಟಿದಊರು, ನಾವು ಬಿಟ್ಟ ಶಾಲೆ, ಈ ಎಲ್ಲಾ ಅನುಭವಗಳನ್ನ ಕೊಡುವ  ಆ ಹಾಡುಗಳು  ಪದಗಳ ಜೊತೆ ಜೊತೆಗೇ ನಮ್ಮನ್ನ ಆ ಹಾಡಿನಲ್ಲಿ ಲೀನವಾಗುವಂತೆ ಮಾಡುತ್ತವೆ.


ಈ ದುಃಖದ ಹಾಡುಗಳು ನಮಗೆ ಇಷ್ಟವಾಗಲು ಕಾರಣ ಅವುಗಳಲ್ಲಿರುವ  ಸುಮಧುರ ರಾಗ  ಮತ್ತು ತಿಳಿಯಾದ ಸಂಗೀತ ಸಂಯೋಜನೆಯೂ ಒಂದು ಕಾರಣವಾಗಿರಬಹುದು ಅಲ್ಲವೇ? ಅಂತಲೂ ಅನಿಸಿತು. ಇವುಗಳನ್ನೆಲ್ಲ ಸರಿಯಾಗಿ ತಿಳಿಯಲು ಮಾನಸಿಕ ತಜ್ಞರು ಬೇಕು ಅನ್ನಿಸ್ತು, ಯಾಕಂದ್ರೆ ನಮ್ಮ ಮನಸಿನ ಅಂತರಾಳ ತಿಳಿಯಲು. ಸೈಂಟಿಸ್ಟ್ಗಳು ಬೇಕು ಅಂತ ಅನ್ನಿಸ್ತು, ಯಾಕಂದ್ರೆ ಈ ದುಃಖದ ಹಾಡುಗಳನ್ನು ಕೇಳಿದಾಗ ನಮ್ಮ ಮೆದುಳಿನಲ್ಲಾಗುವ ಕೆಮಿಕಲ್ ರಿಯಾಕ್ಷನ್ ತಿಳಿದುಕೊಳ್ಳಲು. ಇಂಜಿನೀಯರ್ ಗಳು ಬೇಕೆನ್ನುಸ್ತು ಯಾಕಂದ್ರೆ ಕೆಮಿಕಲ್ ರಿಯಾಕ್ಷನ್ ತಿಳಿದುಕೊಳ್ಳಲು ಬೇಕಾದ  ಟೆಕ್ನೋಲಜಿ  ಕಂಡುಹಿಡಿಯಲು. ಇವೆಲ್ಲ ಏನೇನೂ ಯೋಚನೆಗಳು ಮನಸ್ಸಲ್ಲಿ ಮೂಡಿಬಂದ್ವು. ಕೊನೆಗೆ ಇಸ್ಟೆಲ್ಲಾ  ಯೋಚನೆ ಮಾಡಿ ತಲೆ ಬಿಸಿ ಮಾಡಿಕೊಳ್ಳುವ  ಬದಲು ಇನ್ನೊಂದಿಸ್ಟು ಹಾಡು ಕೇಳೋಣ ಅಂತ ಮತ್ತೆ ಮೊಬೈಲ್ ಆನ್ ಮಾಡ್ದೆ ಮತ್ತದೇ ಹಾಡುಗಳು ಇಷ್ಟವಾದವು.

Tuesday 19 July 2016

ಮೈಸೂರು ಪ್ರಾಣಿ ಸಂಗ್ರಹಾಲಯದಲ್ಲಿರುವ ಪಳಿಯೊಳಿಕೆಯ ವೃಕ್ಷಕಾಂಡ ---fossils tree at mysore zoo


ಮೈಸೂರು ಪ್ರಾಣಿಸಂಗ್ರಹಾಲಯದಲ್ಲಿರುವ ಈ  ಮರದ ಕಲ್ಲು ದೂರದಿಂದ ನೋಡಲು ಮರದ ತುಂಡೇ ಅದರ ಹತ್ತಿರ ಹೋದಂತೆ ಅದು ಕಲ್ಲು ಎಂದು ಗೊತ್ತಾಗುವುದು. ಈ ಕಲ್ಲಿನಲ್ಲಿ ನಾವು ಮರದ ಕಾಂಡದ ಸೂಕ್ಷ್ಮ ರಚನೆಗಳನ್ನು ಕಾಣಬಹುದಾಗಿದೆ. ಮೈಸೂರ ಪ್ರಾಣಿ ಸಂಗ್ರಹಾಲಯಕ್ಕೆ ಹೋದಾಗ ಮರೆಯದೆ ಇದನ್ನು ನೋಡಿಬನ್ನಿ.




ಇಲ್ಲಿ ಪ್ರದರ್ಶಿಸಲಾಗಿರುವ ವೃಕ್ಷಕಾಂಡವು ಸುಮಾರು 15 ಕೋಟಿ ವರ್ಷಗಳಿಗಿಂತ ಪುರಾತನವಾದುದ್ದು. ಈ ಪಳಿಯೊಳಿಕೆಯ ವೃಕ್ಷಕಾಂಡವು ಆಂಧ್ರಪ್ರದೇಶದ ಆದಿಲಾಬಾದ್ ಜಿಲ್ಲೆಯ ಯಮನಪಲ್ಲಿ ಗ್ರಾಮದ ಬಳಿ ಜುರಾಸಿಕ್ ಯುಗದ ಕೋಟ ಶಿಲಾ ಸ್ತರಗಳಿಂದ ತಂದಿಡಲಾಗಿದೆ. ಶಿಲೆಯಾಗಿ ಪರಿವರ್ತನೆಯಾಗಿರುವ ಈ ಕಾಂಡದಲ್ಲಿ ವೃಕ್ಷದ ಸೂಕ್ಷ್ಮ ರಚನೆ ಕೂಡ ಪೂರ್ಣವಾಗಿ ಉಳಿದುಕೊಂಡಿದೆ. ಶಿಲೆಗಳ ಪರಸ್ಪರ ಪ್ರಾಚೀನತೆ ಹಾಗೂ ಭೂ ಚರಿತ್ರೆಯ ಕಾಲ ಚಕ್ರದಲ್ಲಿ ಸಸ್ಯವರ್ಗದ ವಿಕಾಸ, ವಾಯುಗುಣಗಳ ಬದಲಾವಣೆ ಮುಂತಾದುವುಗಳನ್ನು ನಿರ್ಧರಿಸಲು ಈ ವ್ರುಕ್ಷಾಕಾಂಡದ ಪಲಿಯೋಳಿಕೆಗಳ ಅಧ್ಯಯನದಿಂದ ಸಾಧ್ಯವಾಗುತ್ತದೆ.

--->ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣ
ಕರ್ನಾಟಕ (ದಕ್ಷಿಣ)ಬೆಂಗಳೂರು .   




 ನನ್ನ ಮೊಬೈಲ್ ಕ್ಯಾಮರಾದಲ್ಲಿ ಕ್ಲಿಕ್ಕಿಸಿಕೊಂಡ ಪಳಿಯೊಳಿಕೆ ವೃಕ್ಷಕಾಂಡದ ಚಿತ್ರಗಳು .







Sunday 17 July 2016

ನಮ್ಮ ಆಟಗಳಲ್ಲಿನ ಪಾಠ ಆ ಪಾಠಗಳಲ್ಲಿ ಪದಗಳ ಜೋಡ್ಸೋ ಆಟ

What ಅಂದ್ರೆ ಏನು?...
It ಇದು that ಅದು but ಆದರೆ what ಏನು? tell ಹೇಳು?
ನಿನ್ನಮ್ಮನೂರ್ಯಾವ್ದು?
ನಿನ್ತಾಯಿನಾಡ್ಯಾವ್ದು?
ರಜನಿ ಮೂರಜನಿ.. ಅಜನಿಕುಬಜನಿ.. ಕಸ್ತೂರಿಕಜನಿ!
ಆಕಡೆ ಈಕಡೆ ಬಾಳೆಕಂದು ನಡುವೆ ಗಣಪತಿ (ನಡುವೆ ನಾವು ಕುತ್ಕೊಂಡಿದ್ದಾಗ)
ಆಕಡೆ ಈಕಡೆ ಲಕ್ಸ್ಮಿಸರಸ್ವತಿ ನಡುವೆ ಗಣಪತಿ (ಇಷ್ಟಆಗೊವ್ರ ಜೊತೆ ಕುತ್ಕೊಂಡಿದ್ದಾಗ),
ಆಕಡೆ ಈಕಡೆ ದೆವ್ವಗಳು ನಡುವೆ ದೇವ್ರು (ಇಷ್ಟ ಇಲ್ಲದೆ ಇರೋರು ಆಕಡೆ ಈಕಡೆ ಇದ್ದಾಗ )
....................
"ಅಡ್ಡಮ್ ಪಿಡ್ಡಮ್ .. ಪಾಯ ಪರಂಗಿ .. ಲಾಟ್ಮಿ ಲೂಟ್ಮಿ .. ಚೆಲ್ಲಂ ಪಿಲ್ಲಂ" ಅಂತ ಶುರುವಾಗೋ ಆಟದಲ್ಲಿನ ಕೊನೇ ಬಾಗ ....
ನಿನ್ನ  ಕೈ ಎಲ್ಲೋಯ್ತು? ಸಂತಿಗೆ ಹೋಯ್ತು?
ಸಂತೆಗೇನ್ ತಂದೆ? ಕಾರಮಂಡಕ್ಕಿ ತಂದೆ.
ಕಾರಮಂಡಕ್ಕಿ ಏನ್ಮಾಡ್ದೆ? ಕದೀನ್ ಸಂದಿಲಿ ಬಚ್ಚಿಕೊಂಡು ತಿಂದೆ.
ಕದ ಏನ್ ಕೊಟ್ತು? ಚಕ್ಕೆ ಕೊಡ್ತು.
ಚಕ್ಕೆಏನು ಮಾಡ್ದೆ? ಒಲಿಗ್ ಕಚ್ಚಿದೆ.
ಓಲೆ ಏನುಕೊಡ್ತು? ಬೂದಿ ಕೊಡ್ತು.
ಬೂದಿ ಏನ್ಮಾಡ್ದೆ? ತಿಪ್ಪಿಗೆ ಹಾಕಿದೆ.
ತಿಪ್ಪೆ ಏನು ಕೊಡ್ತು? ಗೊಬ್ಬರ ಕೊಡ್ತು
ಗೊಬ್ಬರ ಏನು ಮಾಡ್ದೆ? ಹೊಲಕ್ಕಾಕಿದೆ.
ಹೊಲ ಏನು ಕೊಡ್ತು? ಸೇನ್ಗ ಕೊಡ್ತು.
ಸೇನ್ಗ ಏನು ಮಾಡಿದೆ? ಗಟ್ಟಿಗಟ್ಟಿದನ್ನಿಟ್ಕೊಂಡು ಜಳ್ಜಳ್ ಸಾಬ್ರಗ್ಕೊಟ್ಟೆ.
ಸಾಬರು ಏನು ಕೊಟ್ರು? ತೊಟ್ಲು ಕೊಟ್ರು.
ತೊಟ್ಲೊಳಗೆ ಎನಿತ್ತು? ಮಗು ಇತ್ತು.
ಮಗು ಕೈಲ್ಲಿ ಏನಿತ್ತು? ಗಿಳ್ಳಿತ್ತು.
ಗಿಳ್ಳೊಳಗೆ ಏನಿತ್ತು? ಅನ್ನ ಇತ್ತು.
ಅನ್ನದಲ್ಲಿ ಏನಿತ್ತು? ಬೆಲ್ಲ ಇತ್ತು.
ಬೆಲ್ಲದಲ್ಲೇನಿತ್ತು? ತುಪ್ಪಇತ್ತು.
ತುಪ್ಪದೊಳಗೆ ಏನಿತ್ತು? ನೊಣ ಇತ್ತು
(ಕಿವಿ ಇಟ್ಕೊಂಡು) ನೊಣತಿನ್ನ ಗೊಲ್ಲಜ್ಜ... ನೊಣತಿನ್ನ ಗೊಲ್ಲಜ್ಜ... ನೊಣತಿನ್ನ ಗೊಲ್ಲಜ್ಜ...
...................
(ಇದೇ ರೀತಿ ಕೈಗಳ ಬಳಸಿ ಆಡೋ ಬಳ್ಳಿ ಆಟದ ಕೊನೆಗೆ ಬರೋ ...ಒಲೆಯಲ್ಲಿನ ಬೂದಿ ತೆಗಿಯೋದು, ಮತ್ತದರ ಸುತ್ತಲಿನ ಭಾಗ ಬಿಟ್ಟು ಹೋಗಿದೆ).


....................................................................

ಕಣ್ಣಾ ಮುಚ್ಚೆ ಕಾಡೆ ಗೂಡೆ
ಉದ್ದಿನ ಮೂಟೆ, ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ ನಿಮ್ಮಯ ಹಕ್ಕಿ ಬಚ್ಚಿಟ್ಕೊಳ್ಳಿ
(ಅನ್ನೋದು ಅಂತೂ ತತ್ವ ತುಂಬಿರೋ ಸಾಲುಗಳು. ಹುಟ್ಟು ಸಾವಿನ ಗುಟ್ಟನ್ನು ವಿವರಿಸುವ ಪದಗಳಿವು.) 
................................................................
ಸಿದ್ದ ಗೊದ್ದ ಬಾವೀಲಿ ಬಿದ್ದ. 
ಎತ್ತಕೋದ್ರೆ ಕಚ್ಚಾಕ್ ಬಂದ.
ಬೆಲ್ಲ ಕೊಟ್ರೆ ಬೇಡ ಅಂದ.
ಗೊಣ್ಣೆ ಕೊಟ್ರೆ ಗುಳುಕ್ ಅಂತ ನುಂಗ್ದ.
 (ಇದು ಯಾರಾದ್ರೂ ಮಕ್ಳು ಅಥವಾ ಫ್ರೆಂಡ್ಸ್  ಅಳ್ತಾ ಇದ್ರೆ ಅವರನ್ನ ನಗ್ಸಾಕೆ ಅಂತ ಹೇಳುತಿದ್ವಿ)
.....................................................................
ಗಣೇಶ ಬಂದ ಕಾಯಿಕಡುಬು ತಿಂದ.
ಚಿಕ್ಕ ಕೆರೇಲಿ ಬಿದ್ದ.ದೊಡ್ಡ ಕೆರೇಲಿ ಎದ್ದ.
(ಇದು ಗಣೇಶ ಹಬ್ಬದಲ್ಲಿ ಎಲ್ಲ ಮಕ್ಕಳ ಬಾಯಲ್ಲಿ ಒಂದ್ಸಲ ನಾದ್ರೂ ಬರ್ತಿತ್ತು)
.......................................................................
ರತ್ತೋ ರತ್ತೋ ರಾಯನ ಮಗಳೇ 
ಬಿತ್ತೋ ಬಿತ್ತೋ ಭೀಮನ ಮಗಳೇ
ಹದಿನಾರೆಮ್ಮೆ ಕಾಯಲಾರೆ ಕರೆಯಲಾರೆ 
ಅವ್ವನ ಸೀರೆ ಮಡಿಸಲಾರೆ,ಅಪ್ಪನ ದುಡ್ಡು ಎಣಿಸಲಾರೆ
ಬೈತಲೆ ಬಸ್ವಿ ಕುಕ್ಕನೆ ಕೂತ್ಕೋ ಕೂರೆ ಬಸ್ವಿ.
..........................................................................
ಕಪ್ಪೆ ಕರಕರ ತುಪ್ಪ ಜನಿಜನಿ
ಮಾವಿನ ವಾಟೆ ಮರದಲಿ ತೊಗಟೆ 
ಹದ್ದಿನ ಕೈಲಿ ಸುದ್ದಿ ತರ್ಸಿ
ಕಾಗೆ ಕೈಲಿ ಕಂಕಣ ಕಟ್ಸಿ
ಗೂಬೆ ಕೈಲಿ ಗುಂಬ ತರ್ಸಿ
ಗಿಳಿ ಬಾಯ್ಲಿ ಮಂತ್ರ ಹೇಳ್ಸಿ
ಸೊಳ್ಳೆ ಬಾಯ್ಲಿ ಸೋಬಾನೆ ಹಾಡ್ಸಿ
ನರೀ ಜೊತೆ  ನಗಾರಿ ಹೊಡ್ಸಿ
ನೆಂಟರ  ಜೊತೆ ಮೆರವಣಿಗೆ ಮಾಡ್ಸಿ 
ಸನ್ಣಿ ಮದ್ವೆ ಶನಿವಾರ ಊಟಕೆ ಬನ್ನಿ ಭಾನುವಾರ
..............................................................................
ಅವಲಕ್ಕಿ ಪಾವಲಕ್ಕಿ 
ಕಾಂಚನ ಮಿಣಮಿಣ
ಡಂ ಡುಂ ಟಸ್ಸ ಪುಸ್ಸ ಕೂಯ್ ಕೊಟಾರ್
...............................................................................
ಒಂದು ಎರೆಡು ಬಾಳೆಲೆ ಹರಡು
ಮೂರು ನಾಕು ಅನ್ನ ಹಾಕು
ಐದು ಆರು ಬೇಳೆ ಸಾರು 
ಏಳು ಎಂಟು ಪಲ್ಯಕೆ ದಂಟು 
ಒಂಭತ್ತು ಹತ್ತು ಎಲೆಮುದಿರೆತ್ತು 
ಒಂದರಿಂದ ಹತ್ತು ಹೀಗಿತ್ತು ಊಟದ ಆಟವು ಮುಗಿದಿತ್ತು.
................................................................................
ಬಸ್ ಬಂತ್ ಬಸ್ಸು ,ಗೌರ್ಮೆಂಟ್ ಬಸ್ಸು
ಡುಮ್ಮ ಡುಮ್ಮಿ ಕೂತಿದ್ರು 
ದುಮ್ಮನ್ ಹೊಟ್ಟೆ ಡಂ ಅಂತು ಡುಮ್ಮಿ ಕಣ್ಣಲ್ಲಿ ನೀರ್ಬಂತು.
.................................................................................  

Thursday 14 July 2016

ಮುಂಗಾರು ಮಳೆಯ ನೆನಪಿನ ಮಳೆಯಲ್ಲಿ ಮಿಂದಾಗ - first rain memories

ಬೇಸಿಗೆಯ ಕಾಲದ ಬಿಸಿಲಿನಲ್ಲಿ ಬೆಂದು ಹೈರಾಣಾದ ಭೂಮಿಯ ಬದುಕಿನಲ್ಲಿ  ಮುಂಗಾರು ಮಳೆಯ ಹನಿಗಳು ನೆಲಕ್ಕೆ ಬೀಳುತ್ತಿದ್ದಂತೆ  ಭೂಮಿ ಒದ್ದೆಯಾಗುತ್ತಾ ಜೀವ ಸಂಕುಲಕ್ಕೆ ಜೀವ ತುಂಬುತ್ತಾ ಮುಗಿಲ ಮಾಯಾವಿಯಿಂದ  ಇಡೀ ಪ್ರಪಂಚಕ್ಕೆ ಜೀವಕಳೆ ಬರುವ ಸಮಯ ಅದು. ಮುಂಗಾರು ಮಳೆ ಹನಿಗಳು ಮುತ್ತುಗಳಂತೆ ಕಾದ ಭೂ ರಮೆಯ ಮೈ ಮೇಲೆ ತಾಕುತ್ತಲೇ ಘಂ ಎಂದು ಬರುವ  ಮಣ್ಣಿನ ಆ ವಾಸನೆ. ಹಾಗೆ ಬೆಂಕಿಯಂತಿದ್ದ ವಾತಾವರಣ ತಣ್ಣನೆಯ ಹಿತ ಅನುಭವಗಳನ್ನ ತರುತ್ತಾ ಮೂಡುವ ಕಾಮನ ಬಿಲ್ಲು, ಹಾಗೇ ಹೆದರಿಸುವಂಥಹ ಗಾಳಿಯ ಅಬ್ಬರ , ಗುಡುಗು-ಸಿಡಿಲುಗಳ ಭಯಂಕರ ಸದ್ದು, ಮಳೆ ಜೋರಾದಂತೆ ನೀರಿನ ಮೇಲೆ ದೀಪಗಳಂತೆ ಬೀಳುವ ಮಳೆಹನಿ, ಕೆಲವೊಮ್ಮೆ ಆಲಿಕಲ್ಲು ಮಳೆ, ಆಹಾ ಎಸ್ಟೊಂದು ನೆನಪಿನ ಸಾಗರ ಈ ಮುಂಗಾರು ಮಳೆಯ ಸಡಗರ.

ಬಿರು ಬೇಸಗೆಯ ತಾಪ ತಾಳರಾದೆ ವಲಸೆ ಹೋಗಿದ್ದ ಪ್ರಾಣಿ-ಪಕ್ಷಿಗಳು ತವರು ಸೇರುವ ಕಾಲ ಈ ಮುಂಗಾರು ಮಳೆಯಕಾಲ. ರೈತರು ತಮ್ಮ ಕಾಯಕ ಮಾಡಲು ಮುಂದಾಗುವ ಕಾಲ ನೇಗಿಲು, ಕುಂಟೆ , ಎತ್ತು, ಸಡ್ಡಿ ಗಳೊಡನೆ ಕೂಡಿ ತಮ್ಮ ತಮ್ಮ ಹೊಲ ಗದ್ದೆ ತೋಟಗಳಲ್ಲಿ ಭೂಮಿ ತಾಯಿ ಪೂಜೆ ಮಾಡಿ ಬೀಜಗಳನ್ನು ಬಿತ್ತುವ ಕಾಲ ಈ  ಮುಂಗಾರು ಮಳೆಯ ಕಾಲ.

ನಾವು ಚಿಕ್ಕವರಿದ್ದಾಗ  ಈ ಮಳೆ ಎಂದರೆ ಎಲ್ಲಿಲ್ಲದ ಸಡಗರ. ಅಲ್ಲಲ್ಲಿ ಗುಂಡಿಗಳಲ್ಲಿ ನಿಂತ ನೀರಲ್ಲಿ ಧೊಪ್ಪನೆ ಧುಮುಕಿ ಆನಂದಿಸಿದ ದಿನಗಳು, ಪಕ್ಕದಲ್ಲಿದ್ದವರಿಗೆ ನೀರನ್ನು ಚುಮುಕಿಸಿ ನಲಿದ ಕ್ಷಣಗಳು, ಮಳೆ ನಿಂತ ತಕ್ಷಣ ನಮ್ಮೂರ ಕೆರೆ, ಹೊಂಡ, ಕಲ್ಯಾಣಿ, ಬಾವಿಗಳ ನೀರಿನ ಮಟ್ಟ ಎಷ್ಟು ಮೇಲೆ ಬಂದಿದೆ ಎಂದು ಓಡಿಹೋಗಿ ನೋಡುತಿದ್ದುದು. ಈ ಮುಂಗಾರುಮಳೆ ನಮ್ಮ ಶಾಲಾದಿನಗಳಲ್ಲಿ  ನಮ್ಮ ಶಾಲಾ ಜೊತೆಗಾರ ಈ ಮಳೆಯೇ ಆಗಿತ್ತು. ಒಮ್ಮೊಮ್ಮೆ ಶಾಲೆಗೆ  ತಡವಾಗಿ  ಹೋಗಿ ಈ ಮಳೆರಾಯನ ನೆಪ ಹೇಳಿ ಒದೆಗಳಿಂದ ತಪ್ಪಿಸಿಕೊಂಡದ್ದು ಇದೆ.

ಶಾಲೆಯಿಂದ ಮನೆಗೆ ಬಂದಾಕ್ಷಣ ನಮ್ಮ ಮುಂದೆ  ಮಳೆಗಾಲದ ಸ್ಪೆಷಲ್ ಕಾಫೀ, ಟೀ ಗಳು ಅಂದರೆ ತುಳಸಿ, ಶುಂಟಿ, ಕೊತ್ತಂಬರಿ, ಜೀರಿಗೆ, ಮೆಣಸು ಇವುಗಳ ರುಚಿ ಸಿಗುವಂತಹ ಬಿಸಿ,ಬಿಸಿ ಟೀ, ಕಾಫೀ ಮತ್ತೆ ಬೇಸಿಗೆಯಲ್ಲಿ ಮಾಡಿ ಒಣಗಿಸಿಟ್ಟುಕೊಂಡಿದ್ದ ಹಪ್ಪಳ, ಸಂಡಿಗೆ, ಚಕ್ಕುಲಿಗಳು ಎಣ್ಣೆಯಲ್ಲಿ ಕುಣಿದಾಡಿ ಮಿಂದೆದ್ದು  ನಾವು ತಿನ್ನಲೆಂದೇ ತಟ್ಟೆಯಲ್ಲಿ  ತಯಾರಾಗಿ ಕುಳಿತಿರುತಿದ್ದವು. ಒಮ್ಮೊಮ್ಮೆ ಕೆಂಡದ ಮೇಲೆ ಸುಟ್ಟ ಉದ್ದಿನ ಹಪ್ಪಳ, ಜೋಳದ ಹಪ್ಪಳಗಳ ಜೊತೆ ತೆಂಗಿನಕಾಯಿ ಚೂರು ನೆಂಚಿಕೊಂಡು ತಿನ್ನುವುದು, ಹುರಿದ ಶೇಂಗಾ ಜೊತೆ ಬೆಲ್ಲ ನೆಂಚಿಕೊಂಡು ತಿನ್ನುತಿದ್ದುದು, ಸುಟ್ಟಹಲಸಿನಬೀಜ, ಸೂರ್ಯಕಾಂತಿ ಬೀಜ ಇವೆಲ್ಲ ಉಟಕ್ಕಿಂತ ಹೆಚ್ಚಾಗಿ ನಮ್ಮ ಹೊಟ್ಟೆ ಸೇರುತಿದ್ದವು. ಈ ಎಲ್ಲಾ ರುಚಿಗಳ ಮುಂದೆ ಈಗಿನ junk-food ಏನೂ ಅಲ್ಲ. ಇವೆಲ್ಲಾ ನಮ್ಮ junk-food.  ಆರೋಗ್ಯಕರ ಮತ್ತು ರುಚಿಕರ ಕುರುಕಲು ತಿಂಡಿಗಳು ಅವಾಗಿದ್ದವು.

ರಾತ್ರಿಯಾದರೆ ಸಾಕು ಕಪ್ಪೆರಾಯರ ಸಮೂಹದ ವಟವಟ ಸದ್ದು, ಚಿಟ್ಟೆಗಳ ಚಿಟರ್-ಚಿಟ್ರ್ ಸದ್ದುಗಳು, ರಾತ್ರಿ ವೇಳೆ ಕರೆಂಟ್ ಹೋದಾಗ ಬುಡ್ಡಿದೀಪ, ಎಣ್ಣೆ ದೀಪ, ಮುಂಬತ್ತಿ ಹಚ್ಚಿ ಅವುಗಳ ಮುಂದೆ ಕೂತು ಅವುಗಳ ಸುತ್ತ ಬರುವ ಹುಳುಗಳ ಜೊತೆ ಆಟವಾಡುತ್ತ ಕಾಲ ಕಳೆದದ್ದು, ಕರೆಂಟ್ ಬಂದ ತಕ್ಷಣ  happy birthday ಅಂತ ಕೂಗಿ ಉಫ್ ಅಂತ ದೀಪ ಕೆಡಿಸ್ತಿದ್ದುದು, ದೀಪ ಕೆಡಿಸಿದ ತಕ್ಷಣ ಮತ್ತೆ ಕರೆಂಟ್ ಹೋಗಿ ದೊಡ್ಡವರೊಡನೆ ಬೈಸಿಕೊಳ್ಳುತಿದ್ದುದು ಇವೆಲ್ಲ ಸಾಮಾನ್ಯವಾಗಿದ್ದವು.

ನೆನೆಯುತ್ತಾ ಕೂತರೆ ಆ ದಿನಗಳ ಹೊತ್ತು ಹೋದದ್ದೇ ಗೊತ್ತಾಗದು. ಈ ಮುಂಗಾರು ಮಳೆಯ ಮಾಯೆಯೇ ಅಂಥದ್ದು. ಅದು ಕೊಟ್ಟ ನೆನಪಿನ ಬುತ್ತಿ ಅಪಾರ. ಮುಂಗಾರು ಮಳೆ ಬಿದ್ದಾಕ್ಷಣ ಹೇಗೆ ಒಣಗಿರುವ ಬೀಜ ಮೊಳಕೆಯೊಡೆದು ಸಸಿಯಾಗುವುದೋ ಹಾಗೆ ಈ ಮಳೆ ಅನೇಕ ಪ್ರೇಮಿಗಳಿಗೆ ಪ್ರೀತಿಗೆ ಮುನ್ನುಡಿ ಬರೆದು ಕೊಟ್ಟ ಅನೇಕ ಉದಾಹರಣೆಗಳಿವೆ. ಎಸ್ಟೋ ಚಲನ ಚಿತ್ರ ಗಳಿಗೆ ಸ್ಪೂರ್ತಿಯಾಗಿದೆ. ಇಸ್ಟೆಲ್ಲಾ ಮಧುರ ನೆನಪಿನ ಬುತ್ತಿಯನ್ನು ಮತ್ತೆ ಮತ್ತೆ ಹೊತ್ತು ತರುವ ಈ ಮುಂಗಾರು ಮಳೆ ಎಲ್ಲರ ಚೈತನ್ಯದ ಶಕ್ತಿಯೇ ಸರಿ ಅಲ್ಲವೇ,!