ವಚನಕಾರರು ತಮ್ಮ ವಚನಗಳಲ್ಲಿ ಶಿವರಾತ್ರಿಯನ್ನು ಹೇಗೆ ಉಲ್ಲೇಖಿಸಿದ್ದಾರೆ ಎಂದು ತಿಳಿಯಲು ಮನಸಾಗಿ ವಚನ ಸಂಚಯದಲ್ಲಿ ಹುಡುಕಿದಾಗ ಸಿಕ್ಕ ವಚನಗಳನ್ನು ಈ ಬ್ಲಾಗ್ನಲ್ಲಿ ಇರಿಸುವ ಪ್ರಯತ್ನ ಮಾಡಿದ್ದೇನೆ.
ಅರ್ಚಿಸಲರಿಯೆ, ಪೂಜಿಸಲರಿಯೆ,
ನಿಚ್ಚ ಶಿವರಾತ್ರಿಯ ನಾ ಮಾಡಲರಿಯೆ.
ಕಪ್ಪಡಿವೇಷದಿಂದಾನು ಬಂದಾಡುವೆ, ಕಪ್ಪಡಿವೇಷದಿಂದ.
ಈಶ ನಾ ನಿಮ್ಮ ದಾಸರ ದಾಸಿಯ ದಾಸನಯ್ಯಾ,
ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನಯ್ಯಾ,
ಕೂಡಲಸಂಗಮದೇವಾ
ನಿಮ್ಮ ಲಾಂಛನ ಧರಿಸಿಪ್ಪ ಉದರಪೋಷಕ ನಾನಯ್ಯಾ. 342
--------------------------------------------------------------------------------
ಹೃದಯ ಕತ್ತರಿ, ತುದಿನಾಲಗೆ ಬೆಲ್ಲೇಂ ಭೋ !
ಆಡಿಹೆನು ಏಂ ಭೋ, ಹಾಡಿಹೆನು ಏಂ ಭೋ !
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿಹೆನು ಏಂ ಭೋ !
ಆನು ಎನ್ನಂತೆ, ಮನ ಮನದಂತೆ,
ಕೂಡಲಸಂಗಮದೇವ ತಾನು ತನ್ನಂತೆ. 280
--------------------------------------------------------------------------------
ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,
ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ವ ಕಾಣಿರೊ,
ಕೂಡಲಸಂಗನ ಶರಣನ
ಕಾಯವೆ ಕೈಲಾಸ ಕಾಣಿರೊ.
--------------------------------------------------------------------------------
ಜನ್ಮ ಹೊಲ್ಲೆಂಬೆನೆ, ಜನ್ಮವ ಬಿಡಲಹೆನು.
ಭಕ್ತರೊಲವ ಪಡೆವೆನೆ, ಭಕ್ತಿಯ ಪಥವನರಿವೆನು.
ಲಿಂಗವೆಂದು ಬಲ್ಲೆನೆ, ಜಂಗಮವೆಂದು ಕಾಬೆನು.
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಬಲ್ಲೆನೆ, ಕೈಲಾಸವ ಕಾಣಬಲ್ಲೆನು.
ಎನ್ನಲ್ಲಿ ನಡೆುಲ್ಲಾಗಿ, ನಾನು ಭಕ್ತನೆಂತಹೆನಯ್ಯಾ,
ಕೂಡಲಸಂಗಮದೇವಾ 292
--------------------------------------------------------------------------------
ಅಚ್ಚಿಗವೇಕಯ್ಯಾ ಸಂಸಾರದೊಡನೆ ?
ನಿಚ್ಚನಿಚ್ಚ ಶಿವರಾತ್ರಿಯ ಮಾಡುವುದು,
ಬೇಗ ಬೇಗ ಅರ್ಚನೆ-ಪೂಜನೆಯ ಮಾಡುವುದು,
ಕೂಡಲಸಂಗನ ಕೂಡುವುದು. 173
--------------------------------------------------------------------------------
`ಯಸ್ಯ ಕ್ರಿಯಾ ತಸ್ಯ ಭವತಿ' ಎಂದು ಕಟ್ಟಾಚಾರದಲು ಇದ್ದು,
ನಾನು ಅನುಸರಿಸಿಕೊಂಡು ನಡೆವನ್ನಕ್ಕ ಕರ್ಮಕಾಂಡಿಯಲ್ಲ.
ಉತ್ಪತ್ತಿ-ಸ್ಥಿತಿ-ಭೋಗ-ಭುಕ್ತಿ ಕಾಯವುಳ್ಳನ್ನಕ್ಕ ಭಕ್ತಿಕಾಂಡಿಯಲ್ಲ,
ಪರವು ಸಾಧ್ಯವಾಯಿತ್ತೆಂದು ಕ್ರೀಯೆಲ್ಲವ ಮೀರಿ ನಡೆವೆನು.
ಪರತತ್ವವನರಿದೆಹೆನೆಂಬನ್ನಕ್ಕ ಜ್ಞಾನಕಾಂಡಿಯಲ್ಲ.
ಇನ್ನು ಕರ್ಮಕಾಂಡ, ಭಕ್ತಿಕಾಂಡ, ಜ್ಞಾನಕಾಂಡ
ಈ ತ್ರಿವಿಧದಲ್ಲಿ ವಂಚಕನಾದಡೆ
ಈಸು ವಿಧದೊಳಗೆ ಅಂಗವಿಲ್ಲ,
ಮೇಲೆ ಸತ್ಪುರುಷರ ಸಂಗವಿಲ್ಲ,
ಯುಕ್ತಿಯಿಲ್ಲ, ಭಕ್ತಿಯೆಂತಹುದಯ್ಯಾ
ಬಲ್ಲವರ ಬೆಸಗೊಂಡಡೆ ಎನ್ನ ಬಿಮ್ಮು ಕೆಟ್ಟಿಹುದೆಂದು
ಮೆಲ್ಲನೆ ಪ್ರಸಂಗದಿಂದ ತಿಳಿದು ನೋಡುವೆ.
ಕೂಡಲಸಂಗಮದೇವಾ,
ಎನ್ನ ಗುಣವ ನೋಡದೆ
ಶಿವರಾತ್ರಿಯ ಸಂಕಣ್ಣಗಳಿಗೆ ಕರುಣಿಸಿದಂತೆ
ಎನಗೆ ಕೃಪೆಮಾಡಯ್ಯಾ.
--------------------------------------------------------------------------------
ಚೆನ್ನಬಸವಣ್ಣ
ಸೋಮವಾರ ಮಂಗಳವಾರ ಹುಣ್ಣಿಮೆ ಸಂಕ್ರಾಂತಿ ಶಿವರಾತ್ರಿ_
ಮೊದಲಾದ ತಿಥಿವಾರಂಗಳಲ್ಲಿ ಏಕಭುಕ್ತೋಪವಾಸಿಯಾಗಿ
ಆ ಕ್ಷುದ್ರ ತಿಥಿಗಳಲ್ಲಿ, ಮಾಡಿದ ನೀಚೋಚ್ಛಿಷ್ಟವಂ ತಂದು
ತನ್ನ ಕರಸ್ಥಲದ ಇಷ್ಟಲಿಂಗಕ್ಕೆ ಕೊಟ್ಟು ಕೊಂಡು ಭಕ್ತನೆನಿಸಿಕೊಂಡೆನೆಂಬ
ಅನಾಚಾರಿಯ ಮುಖವ ನೋಡಲಾಗದು ನೋಡಲಾಗದು.
ಅದೇನು ಕಾರಣವೆಂದಡೆ:
ದಿನ ಶ್ರೇಷ್ಠವೊ ? ಲಿಂಗ ಶ್ರೇಷ್ಠವೊ ? ದಿನ ಶ್ರೇಷ್ಠವೆಂದು ಮಾಡುವ
ದುರಾಚಾರಿಯ ಮುಖವ ನೋಡಲಾಗದು, ನೋಡಲಾಗದು, ಅದೆಂತೆಂದಡೆ:
ಆವ ದಿನ ಶ್ರೇಷ್ಠವೆಂದು ದಿನವೆ ದೈವವೆಂದು ಮಾಡುವನಾಗಿ,
ಅವನು ದಿನದ ಭಕ್ತನು.
ಅವನಂತಲ್ಲ ಕೇಳಿರಣ್ಣ ಸದ್ಭಕ್ತನು_ಲಿಂಗವೆ ಘನವೆಂದು ಜಂಗಮವೆ
ಶ್ರೇಷ್ಠವೆಂದು
ಆ ಲಿಂಗಜಂಗಮವೆ ಶ್ರೇಷ್ಠವೆಂದು ಆ ಲಿಂಗಜಂಗಮವೆ ದೈವವೆಂದು
ಮಾಡುವನಾಗಿ
ಆತ ಲಿಂಗಭಕ್ತನು. ಈ ಲಿಂಗಭಕ್ತಂಗೆ ದಿನದ ಭಕ್ತನ ತಂದು
ಸರಿಯೆಂದು ಹೋಲಿಸಿ ನುಡಿವಂಗೆ,
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ,
ಅವ ಭಕ್ತನಲ್ಲ, ಅವಂಗೆ ಅಘೋರನರಕ.
ಭವಿದಿನ_ತಿಥಿ_ವಾರಂಗಳಲ್ಲಿ ಕೂರ್ತುಮಾಡುವಾತ
ಭಕ್ತನಲ್ಲ. ಅಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವಾತ ಜಂಗಮವಲ್ಲ.
ಈ ಉಭಯರನು ಕೂಡಲಚೆನ್ನಸಂಗಯ್ಯ ಕುಂಭೀಪಾತಕ
ನಾಯಕನರಕದಲ್ಲಿಕ್ಕುವನು
--------------------------------------------------------------------------------
ಸೋಮವಾರ ಮಂಗಳವಾರ ಶಿವರಾತ್ರಿಯೆಂದು ಮಾಡುವ ಭಕ್ತರ
ಲಿಂಗಭಕ್ತಂಗೆ ನಾನೆಂತು ಸರಿಯೆಂಬೆನಯ್ಯಾ?
ದಿನ ಶ್ರೇಷ*ವೋ ಲಿಂಗ ಶ್ರೇಷ*ವೋ?
ದಿನ ಶ್ರೇಷ*ವೆಂದು ಮಾಡುವ
ಪಂಚಮಹಾಪಾತಕರ ಮುಖವ ನೋಡಲಾಗದು.
ಸೋಮೇ ಭೌಮೇ ವ್ಯತೀಪಾತೇ ಸಂಕ್ರಾಂತಿಶಿವರಾತ್ರಯೋಃ
ಏಕಭಕ್ತೋಪವಾಸೇನ ನರಕೇ ಕಾಲಮಕ್ಷಯಂ
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಇಂಥವರ ಮುಖವ ನೋಡಲಾಗದು.
--------------------------------------------------------------------------------
ಸಿದ್ಧರಾಮೇಶ್ವರ
ಮದ್ದುತಿಂದ ಮನುಜನಂತೆ ವ್ಯರ್ಥಹೋಗದಿರಾ, ಮನವೆ,
ವರ್ಷದಲಾದಡೂ ಒಂದು ದಿವಸ ಶಿವರಾತ್ರಿಯ ಮಾಡು
ಮನವೆ.
ಕಪಿಲಸಿದ್ಧಮಲ್ಲೇಶನೆಂಬ ಇಷ್ಟಂಗಕ್ಕೆ.
--------------------------------------------------------------------------------
ಮುಕ್ತಾಯಕ್ಕ
ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ ?
ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ ?
ಮಾಡ ಬನ್ನಿ ದಿನ ಶಿವರಾತ್ರಿಯ, ಕೇಳ ಬನ್ನಿ ಶಿವಾನುಭವವ,
ನೋಡ ಬನ್ನಿ ಅಜಗಣ್ಣನಿರವ ಬಸವಣ್ಣತಂದೆ.
--------------------------------------------------------------------------------
ಮೂರುಸಾವಿರ ಮುಕ್ತಿಮುನಿ
ಸಚ್ಚಿದಾನಂದ ಬ್ರಹ್ಮೋಪದೇಶ ಭಕ್ತಮಹೇಶ್ವರರು
ಪರಮಪಾತಕಸೂತಕಂಗಳ ಬಾಹ್ಯಾಂತರಂಗದಲ್ಲಿ ಹೊದ್ದದೆ,
ಸತ್ಯಶರಣರು ಮಾಡುಂಡುದೊಂದು ಕಾಯಕ,
ಬೇಡುಂಡುದೊಂದು ಕಾಯಕದಿಂದ ಗಳಿಸಿದಂಥ ಪದಾರ್ಥಗಳ,
ಗುರುಚರಪರಸ್ಥಿರಕ್ಕೆ ಷಟ್‍ಸ್ಥಲಸಂಬಂಧಗಳಿಂದ,
ಷಡ್ವಿಧಮಂತ್ರಗಳ ಸೊಮ್ಮಿನಿಂ ಸಂತೃಪ್ತರಾಗಿರ್ಪುದು.
ಆ ನಿಲುಕಡೆಯೆಂತೆಂದಡೆ :
ಶ್ರುತಿಗುರುಸ್ವಾನುಭವ ಸಾಕ್ಷಿಯಾಗಿ,
ಶ್ರೀಗುರುಲಿಂಗಜಂಗಮವೆ ಪರಾತ್ಪರವೆಂದು ಕಂಡು,
ಷಡುಸ್ಥಲಮಾರ್ಗವಿಡಿದು, ತನ್ನ ನಿಜವ ತಾನರಿಯದೆ,
ಭವಿಶೈವ ಬ್ಥಿನ್ನ ಕರ್ಮಿಗಳಂತೆ ಭಾವಭ್ರಮೆಗೆಟ್ಟು,
ಹೊಲಬುದಪ್ಪಿ, ಭೋಗಾಪೇಕ್ಷಿತರಾಗಿ,
ಹಲವು ಶಾಸ್ತ್ರೋಪದೇಶವಿಡಿದು,
ಕಾಶಿ ರಾಮೇಶ್ವರ ಕಂಚಿ ಕಾಳಹಸ್ತಿ ಪಂಪಾಕ್ಷೇತ್ರ
ಗೋಕರ್ಣ ಶ್ರೀಶೈಲಾದಿಯಾದ ತೀರ್ಥಯಾತ್ರೆ,
ವೀರಣ್ಣ ಬಸವಣ್ಣ ಮಲ್ಲಣ್ಣ ಹಾವಿಗೆ ದಂಡಾಗ್ರ ಗಿಳಿಲು ಶಂಖ
ಭಸ್ಮಗುಂಟಿಕೆ ತೀರ್ಥದಗುಂಬ ಹಾದಿಬೆನವ ಹಳ್ಳದ ಬೆನವ ವಾಸರದಯ್ಯ
ವಿನಾಯಕ ಶಕ್ತಿ ಗಣೇಶ ಚಂಡಿ ಚಾಮುಂಡಿಯಲ್ಲಿ
ಏಕನಾತಿ ಹಿರಿಹೊಳೆ ಜಟ್ಟಿಂಗ ತೆಪ್ಪದಾರತಿ ಪಂಚಪಾಂಡವರು
ಬನ್ನಿಮಹಾಂಕಾಳಿ ತುಳಸಿ ಬಿಲ್ವವೃಕ್ಷ
ಸಮಾದ್ಥಿ ಗದ್ದುಗೆ ಪುರಾಣ ವಚನಾರ್ಥಪುಸ್ತಕ
ಲೆಕ್ಕದ ಓಹಿ ಕತ್ತಿ ಕಂಡೇಪೂಜೆ, ಊರಬೀರ ಪೀರ ಗೋರಿ ಸತ್ತವರ ತಿಥಿ
ಚಿತ್ತಹೊಲೆ ಕರ್ಮದ ಗಂಗೆ ಗುಗ್ಗುಳ ಗೌರೀನೋಂಪಿ ದೀಪಹರಕೆ ಪೂಜೆ
ಕರಿಯಸೀರೆ ಊರ ಮಾರಿದೇವತೆ ಅಂಬಲಿ ಮಜ್ಜಿಗೆ ಕುಂಭ ಹೊಸ್ತಲ
ಮದುವೆಯಕಂಭ ಕುಂಭ ಸರಕಿನಗಂಟು
ಮಹತ್ವ ಮೆರೆದವರ ಪಾದಮುದ್ರೆ ಕಡೆಯಾದವಕ್ಕೆ,
ತನ್ನ ಕಾಯ ವಾಚ ಮನದಲ್ಲಿ ಹೊಳೆದು,
ಪಿತ-ಮಾತೆ ಸತಿ-ಸುತ ಒಡಹುಟ್ಟಿದವರು ಸೇವಕ ಕಡೆಯಾದವರಿಂದೆ
ತನ್ನ ಮನೆಯಲ್ಲಿ ಮಾಡಿದ ಎಡೆ
ವಾರಮೃತ್ಯೋದಕ, ಪಾದೋದಕಸಂಬಂಧವಾದ,
ವಿಭೂತಿ-ಗಂಧಾಕ್ಷತೆ-ಪುಷ್ಪ-ಪತ್ರಿ ಧೂಪ-ದೀಪ ಹಣ್ಣು-ಕಾಯಿ
ವಸ್ತ್ರಾಭರಣ-ಪಂಚಕಳಸ ಕಾಣಿಕೆ ಮೊದಲಾದ ಬ್ಥಿನ್ನವ
ಕರ್ಮಕ್ರಿಯಾಚಾರಲಿಂಗಬಾಹ್ಯರಾದ
ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರ ಪಾಶುಪತ ಕಾಳಾಮುಖಿ
ಯೋಗಿ-ಜೋಗಿ ಶ್ರವಣ-ಸನ್ಯಾಸಿ ಯತಿ-ವ್ರತಿ ಮನು-ಮುನಿ
ಗರುಡ-ಗಂಧರ್ವ ಯಕ್ಷ-ರಾಕ್ಷಸ ಸಿದ್ಧ-ಸಾಧ್ಯರುಪದೇಶವಿಡಿದು
ಚರಲಿಂಗೋದಯಘನಪಾದತೀರ್ಥವರ್ಪಿಸಿ,
ನೈವೇದ್ಯ ಮಾಡಿಸುವಂಥಾದ್ದೆ ಅನಾಚಾರ.
ಇದೇ ಭವಿಮಾಟಕೂಟ ಅಸತ್ಯದ ನಡೆನುಡಿಯ ವಿಚಾರದ ಪ್ರಥಮಪಾತಕ.
ಇದಕ್ಕೆ ಹರನಿರೂಪ ಸಾಕ್ಷಿ :
``ಶಿವಾಚಾರಸುಸಂಪನ್ನಃ ಕೃತ್ವ್ದಾನ್ಯದೈವಸ್ಯ ಪೂಜನಂ |
ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್ ||
ಅನಾಚಾರಿಕೃತಂ ಪಾಕಂ ಲಿಂಗನೈವೇದ್ಯಕಿಲ್ಬಿಷಂ |
ಲಿಂಗಾಚಾರಿಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ ||
ತದ್ದಿನಂ ದಿನದೋಷೇಣ ಶೋಣಿತಂ ಸುರಾಮಾಂಸಯೋಃ |
ಏಕಭುಕ್ತೋಪವಾಸೇನ ನರಕೇ ಕಾಲಮಕ್ಷಯಂ ||
ಸೌಮೇ ಭೌಮೇ ವ್ಯತಿಪಾತೇ ಸಂಕ್ರಾಂತಿಶಿವರಾತ್ರಿಯೋ |
ಶೈವಕರ್ಮೋಪವಾಸಿನಾಂ ನರಕೇ ಕಾಲಮಕ್ಷಯಂ ||
ಕಾರ್ತೀಕಮಾಘಶ್ರಾವಣ ಶೈವಪೂಜಾವಿಶೇಷತಃ |
ವೀರಶೈವಸ್ತಥಾ ಕೃತ್ವಾ ಸನ್ತಶ್ಟ ಪ್ರಾಕೃತೈಃ ಸಮಾಃ ||
ಸ್ಥಾವರಾರ್ಪಿತನೈವೇದ್ಯಾತ್ ನ ತೃಪ್ತಿರ್ಮಮ ಪಾರ್ವತಿ |
ಜಂಗಮಾರ್ಪಿತನೈವೇದ್ಯಾತ್ ಮಮ ತೃಪ್ತಿಶ್ಚ ಸರ್ವದಾ ||
ಸತ್ಪಾತ್ರದತ್ತವಿತ್ತಸ್ಯ ತದ್ಧನಂ ಸ್ವಧನಂ ಸುಖಂ |
ಅಪಾತ್ರದತ್ತ ವಿತ್ತಸ್ಯ ತದ್ಧನಂ ಸ್ವಸುಖಂ ಭವೇತ್ ||
ಚರಸ್ಯ ಗಮನೋ ನಾಸ್ತಿ ಭಕ್ತಸ್ಯ ಗೃಹಮಾಚರೇತ್ |
ಅನ್ಯಗೃಹಂ ಗಮಿಷ್ಯಂತಿ ಸದ್ಯೋ ಗೋಮಾಂಸಭಕ್ಷಣಮ್ ||
ಇಷ್ಟಲಿಂಗಮವಿಶ್ವಸ್ಯ ಅನ್ಯದೈವಮುಪಾಸತೇ |
ಶ್ವಾನಯೋನಿ ಶತಂ ಗತ್ವಾ ಚಾಂಡಾಲಗೃಹಮಾಚರೇತ್ ||
ಬಹುಲಿಂಗಪೂಜಕಸ್ಯ ಬಹುಭಾವಗುರುಸ್ತಥಾ |
ಬಹುಪ್ರಸಾದಂ ಭುಂಜಂತಿ ವೇಶ್ಯಾಪುತ್ರಸ್ತಥೈವ ಚ ||
ಅಭಕ್ತಜನಸಂಗಶ್ಚ ಮಂತ್ರಸ್ಯ ಚ ಆಗಮಃ |
ಅನ್ಯದೈವಪರಿತ್ಯಾಗಃ ಲಿಂಗಭಕ್ತಸ್ಯ ಲಕ್ಷಣಂ ||
ಲಿಂಗಧಾರಕಭಕ್ತಾನಾಂ ಲಿಂಗಬಾಹ್ಯಸತೀಸುತಾಃ |
ಆಲಿಂಗಿತಾ ಚುಂಬಿತಾಶ್ಚ ರೌರವಂ ನರಕಂ ವ್ರಜೇತ್ ||''
ಇಂತೆಂಬ ಹರಗುರುವಾಕ್ಯಪ್ರಮಾಣವದಾಗಿ,
ಸದ್ಭಕ್ತಶರಣಗಣಾರಾಧ್ಯರು ಭೂಪ್ರತಿಷ್ಠಾದಿಗಳ ಹೊದ್ದಿದಡೆ,
ಭವಬಂಧನವಪ್ಪದು ತಪ್ಪದು.
ಅದು ಕಾರಣವಾಗಿ ಗುರುಮಾರ್ಗಿಕರು ಹೊದ್ದದೆ,
ಭವಸಾಗರವ ದಾಂಟಿ, ನಿರ್ಧರದಿಂದಿಪ್ಪುದೊಂದು
ನರಗುರಿಗಳ ಪ್ರಥಮಪಾತಕನಿರಸನ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------------------------------------------------------------------------
ಕುಷ್ಟಗಿ ಕರಿಬಸವೇಶ್ವರ
ಶಂಕರದಾಸಿಮಯ್ಯಗೆ ಸುಂಕದಬಂಕಯ್ಯಗೆ
ಶಿವಲೆಂಕಮಂಚಣ್ಣಗೆ ಶಿವರಾತ್ರಿಯಯ್ಯಗಳಿಗೆ
ಸಿದ್ಧರಾಮಯ್ಯಗಳಿಗೆ ಚಿಮ್ಮುಲಿಗೆಯ ಚಂದಯ್ಯ
ಚಿಕ್ಕಯ್ಯ ಡೋಹರ ಕಕ್ಕಯ್ಯ
ಒಕ್ಕುಮಿಕ್ಕ ಪ್ರಸಾದವಯಿಕ್ಕೆಯ್ಯಲ್ಲಿ ಕೊಂಬ ಅಕ್ಕನಾಗಾಯಿಗೆ
ಹರಳಯ್ಯ ಮಧುವಯ್ಯ ಬಳ್ಳೇಶ್ವರಯ್ಯಗಳಿಗೆ
ಹಾವಿನಾಳ ಕಲ್ಲಯ್ಯಗಳಿಗೆ ಸರವೂರ ಬಂಕಯ್ಯಗೆ
ಸುರಗಿಯ ಚೌಡಯ್ಯಗೆ ಪರಿಪರಿಯ ಶರಣರಿಗೆ
ಶರಣು ಶರಣಾರ್ಥಿ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ.
--------------------------------------------------------------------------------
ಹಾವಿನಹಾಳ ಕಲ್ಲಯ್ಯ
ಹಾಹಾ ! ವೇದವೆ ತತ್ವವಾದಡೆ, ಮಾದಾರನ ಮನೆಯಲುಂಡನೊಬ್ಬ.
ನಿಧಾನವುಳ್ಳ ಉಪಾಧ್ಯಾಯರಾರೂ ಇಲ್ಲದಾದಡೆ,
ಶಾಸ್ತ್ರವೆ ತತ್ವವಾದಡೆ ಶಿವರಾತ್ರಿಯನೊಬ್ಬ
ಬೇಡಂಗಿತ್ತುದನೊಬ್ಬ ಶ್ರೋತ್ರಿಯಂಗೀಯಲಾಗದೆ ?
ಆಗಮವಿದ್ಥಿಯಲ್ಲಿ ಮಂತ್ರ ಮೂರುತಿಯೆಂಬ ಮಾತಂತಿರಲಿ.
ಆದ ಕೇಳಲಾಗದು ಭ್ರಾಂತು ಬೇಡ.
ಭಾವಮೂರುತಿ ಬಲ್ಲ ಪ್ರಮಾಣವಿದೆ.
ಆ ಕುಲವೆಂದಡೆ ಹೊಕ್ಕ ಕಕ್ಕಯ್ಯಗಳ ಮನೆಯ.
ಅಕ್ಕಟಾ, ನಿಮ್ಮ ತರ್ಕ ಮುಕ್ಕಾಯಿತ್ತು, ಲೋಕವರಿಯದೆ ?
ಕಲ್ಲಲಿಟ್ಟು ಕಾಲಲೊದೆದಡೆ, ಅಲ್ಲಿ ಮೂರುತಿ ನುಡಿಯಿತ್ತಲ್ಲಯ್ಯಾ.
ಬಲ್ವದನು ದ್ವಿಜರು ನೀವೆಲ್ಲರೂ ಹೇಳಿರೆ,
ಸಲ್ಲದು, ನಿಮ್ಮ ವಾದ ನಿಲ್ಲಲಿ, ಬಲ್ಲಿದ ನಡೆದುದೇ ಬಟ್ಟೆ.
ಮಹಾಲಿಂಗ ಕಲ್ಲೇಶ್ವರಾ, ಲಿಂಗಾಚಾರಿಗಳು ನಿಸ್ಸೀಮರಯ್ಯಾ.
--------------------------------------------------------------------------------
ಕಾಡಸಿದ್ಧೇಶ್ವರ
ಇಂತಪ್ಪ ತ್ರಿವಿಧಾಚರಣೆಯಲ್ಲಿ ಬ್ಥಿನ್ನಜ್ಞಾನಿಗಳಾಗಿ
ಬ್ಥಿನ್ನ ಕ್ರಿಯಗಳಾಚರಿಸಿ,
ಬ್ಥಿನ್ನಭಾವ ಮುಂದುಗೊಂಡು ವ್ರತವನಾಚರಿಸುವ
ಅಜ್ಞಾನಿಗಳಾದ ಜೀವಾತ್ಮರಿಗೆ
ಶಿವನು ಒಲಿ ಒಲಿ ಎಂದರೆ ಎಂತೊಲಿಯುವನಯ್ಯ ?
ಮತ್ತೆಂತೆಂದೊಡೆ :
ಸುಜ್ಞಾನೋದಯವಾಗಿ ಸಕಲಪ್ರಪಂಚ ನಿವೃತ್ತಿಯ ಮಾಡಿ,
ಶ್ರೀಗುರುಕಾರುಣ್ಯವ ಪಡೆದು, ಲಿಂಗಾಂಗಸಮರಸವಾಗಿ
ಸರ್ವಾಂಗಲಿಂಗಮಯ ತಾನೆಂದು ತಿಳಿದುನೋಡಿ,
ಅಂತಪ್ಪ ಘನಮಹಾಲಿಂಗ ಇಷ್ಟಬ್ರಹ್ಮವನು
ತನುವಿನಲ್ಲಿ ಸ್ವಾಯತವ ಮಾಡಿ,
ಆ ತನುಪ್ರಕೃತಿಯನಳಿದು
ಆ ಇಷ್ಟಲಿಂಗದ ಸತ್ಕ್ರಿಯವನಾಚರಿಸುವುದೇ
ದಿನಚರಿ ವಾರ ಸೋಮವಾರವ್ರತವೆಂಬೆ.
ಅಂತಪ್ಪ ಇಷ್ಟಬ್ರಹ್ಮದ ಚಿತ್ಕಲಾಸ್ವರೂಪವಾದ
ನಿಷ್ಕಲಪ್ರಾಣಲಿಂಗವನು ಮನದಲ್ಲಿ ಸ್ವಾಯತವಮಾಡಿ,
ಆ ಮನೋಪ್ರಕೃತಿಯನಳಿದು ಆ ನಿಷ್ಕಲ ಪ್ರಾಣಲಿಂಗದ
ಸುಜ್ಞಾನಕ್ರಿಯಗಳನಾಚರಿಸುವುದೇ
ದ್ವಾದಶಮಾಸದೊಳಗೆ ಶ್ರೇಷ್ಠವಾದ ಶ್ರಾವಣಮಾಸದವ್ರತವೆಂಬೆ.
ಅಂತಪ್ಪ ಇಷ್ಟಬ್ರಹ್ಮಾನಂದಸ್ವರೂಪವಾದ
ನಿರಂಜನಭಾವಲಿಂಗವನು -
ಧನವೆಂದಡೆ ಆತ್ಮ.
ಅಂತಪ್ಪ ಆತ್ಮನಲ್ಲಿ ಸ್ವಾಯತವ ಮಾಡಿ,
ಆ ಆತ್ಮಪ್ರಕೃತಿಯನಳಿದು, ಆ ನಿರಂಜನ ಭಾವಲಿಂಗದ
ಮಹಾಜ್ಞಾನಾಚರಣೆಯನಾಚರಿಸುವುದೇ
ದ್ವಾದಶಮಾಸ, ದ್ವಾದಶ ಚತುರ್ದಶಿ,
ದ್ವಾದಶ ಅಮವಾಸಿಯೊಳಗೆ ಮಾಘಮಾಸದ ಚತುರ್ದಶಿ
ಶಿವರಾತ್ರಿಅಮವಾಸೆಯ ವ್ರತವೆಂಬೆ.
ಇಂತೀ ತ್ರಿವಿಧಲಿಂಗ ಮೊದಲಾದ ಚಿದ್ಘನಲಿಂಗವು
ತನ್ನ ಸರ್ವಾಂಗದಲ್ಲಿ ಸ್ವಾಯತವುಂಟೆಂದು
ಶ್ರೀಗುರುಮುಖದಿಂ ತಿಳಿಯದೆ ಲಿಂಗವಿರಹಿತರಾಗಿ,
ಬಾಹ್ಯದ ಕ್ರಿಯೆಗಳ ಪಿಡಿದು ವ್ರತವನಾಚರಿಸುವುದೆಲ್ಲ
ಮಾಯಾವಿಲಾಸ ಭವದ ಬಟ್ಟೆ ಎಂದು ತಿಳಿಯದೆ
ಭವಭಾರಿಗಳಾಗಿ, ಭವಕ್ಕೆ ಭಾಜನವಾಗಿ ಕೆಟ್ಟು
ಮನು ಮುನಿ ದೇವ ದಾನವರು ಮಾನವರು ಮೊದಲಾದ
ಸಕಲ ಲೋಕಾದಿಲೋಕಂಗಳು ತಮ್ಮ ನಿಲುವು ತಾವಾರೆಂಬುದನ್ನರಿಯದೆ
ಇದಿರಿಟ್ಟು ಕೆಟ್ಟುಪೋದರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
--------------------------------------------------------------------------------
ಸೊಡ್ಡಳ ಬಾಚರಸ
ವೇದದವರನೊಲ್ಲದೆ ನಮ್ಮ ಮಾದಾರ ಚನ್ನಯ್ಯಂಗೊಲಿದ.
ಶಾಸ್ತ್ರದವರನೊಲ್ಲದೆ ಶಿವರಾತ್ರಿಯ ಸಂಕಣ್ಣಂಗೊಲಿದ.
ಆಗಮದವರನೊಲ್ಲದೆ ತೆಲುಗುಜೊಮ್ಮಯ್ಯಂಗೊಲಿದ.
ಪುರಾಣಕರ್ಮಿಗಳೆಂಬ ವಿಶಿಷ್ಟಬ್ರಹ್ಮರನೊಲ್ಲದೆ ಉದ್ಭಟಯ್ಯಂಗೊಲಿದ.
ಅಣ್ಣ ಕೇಳಾ ಸೋಜಿಗವ !
ದಾಸದುಗ್ಗಳೆಯರಿಗೊಲಿದ ಮುಕ್ಕಣ್ಣ ಸೊಡ್ಡಳ,
ಹಾರುವಣ್ಣಗಳಿಗೆ ಹೇಸಿ ಕದವನಿಕ್ಕಿಕೊಂಡನು
--------------------------------------------------------------------------------
ಕಾಡಸಿದ್ಧೇಶ್ವರ
ದ್ವಾದಶಮಾಸ, ಚತುದರ್ಶಿ, ದ್ವಾದಶಿ, ಅಮವಾಸಿಯೊಳಗೆ
ಮಾಘಮಾಸದ ಚತುರ್ದಶಿ,
ಶಿವರಾತ್ರಿ ಅಮವಾಸ್ಯೆ ಫಲಪುಣ್ಯ ಮಹಾದೊಡ್ಡದು ಎಂದು
ಸ್ಕಂದಪುರಾಣ ಬ್ರಹ್ಮೋತ್ತರಕಾಂಡ, ಶ್ರುತಿವಾಕ್ಯಗಳಿಂದ ಕೇಳಿ,
ಅಂತಪ್ಪ ಮಾಘಮಾಸದ ಚತುರ್ದಶಿದಿವಸ
ಒಂದೊತ್ತು ಉಪವಾಸವ ಮಾಡಿ,
ಪತ್ರಿ, ಪುಷ್ಪ. ಕಡ್ಡಿ, ಬತ್ತಿಯ ತಂದು
ಸಾಯಂಕಾಲಕ್ಕೆ ಸ್ನಾನವ ಮಾಡಿ,
ಜಂಗಮವ ಕರತಂದು ಅರ್ಚಿಸಿ,
ಲಿಂಗವ ಪತ್ರಿ, ಪುಷ್ಪ, ಅಭೀಷೇಕ, ಕಡ್ಡಿ, ಬತ್ತಿ,
ಏಕಾರತಿ ಪಂಚಾರತಿಗಳಿಂದ ಪೂಜಿಸಿ,
ಪಾದೋದಕವ ಸೇವಿಸಿ,
ಆ ಮೇಲೆ ತಮ್ಮ ಗೃಹದಲ್ಲಿ ಮಾಡಿದ ಉತ್ತಮವಾದ ಫಲಹಾರ ಜೀನಸುಗಳು
ಅಂಜೂರ, ದ್ರಾಕ್ಷಿ, ಹಲಸು, ತೆಂಗು, ಕಾರಿಕ, ಬಾಳೇಹಣ್ಣು
ಮೊದಲಾದ ಫಲಹಾರ
ಮತ್ತಂ, ಬೆಂಡು, ಬೆತ್ತಾಸ, ಖರ್ಜೂರ, ದೂದುಪೇಡೆ,
ಬುಂದೆ, ಲಡ್ಡು ಮೊದಲಾದ ಫಲಹಾರ.
ಇಂತಪ್ಪ ಫಲಹಾರ ಜೀನಸು ಎಡೆಮಾಡಿ ಪ್ರಸಾದವೆಂದು ಕೈಕೊಂಡು,
ಲಿಂಗಕ್ಕೆ ತೋರಿ ತೋರಿ ತಮ್ಮ ಮನಬಂದ ಪದಾರ್ಥವ
ಅಂಗಕ್ಕೆ ಗಡಣಿಸಿಕೊಂಡು,
ನಾವು ಇಂದಿನ ದಿವಸ ಉದಯದಿಂ ಸಾಯಂಕಾಲದ ಪರಿಯಂತರವಾಗಿ,
ಒಂದೊತ್ತು ಉಪವಾಸ ಮಾಡಿ ಶಿವಯೋಗ ಮಾಡಿದೆವೆಂದು
ಮೂಢ ಮಂದಮತಿ ಅಧಮರ ಮುಂದೆ ತಮ್ಮ ಬಿಂಕವ ಪೇಳಿ,
ರಾತ್ರಿಯಲ್ಲಿ ಜಾಗರಣಿ ಮಾಡಬೇಕೆಂದು
ತಮ್ಮ ಅಂಗದ ಮೇಲಣ ಲಿಂಗವ ಬಿಗಿಬಿಗಿದು ಕಟ್ಟಿಕೊಂಡು
ಸ್ಥಾವರಲಿಂಗದ ಗುಡಿಗೆ ಹೋಗಿ ಆ ಲಿಂಗದ ಪೂಜೆಯಿಂದ ಬೆಳಗ ಕಳೆದು
ಉದಯಕ್ಕೆ ಶಿವರಾತ್ರಿ ಅಮವಾಸೆ ದೊಡ್ಡದೆಂದು
ಹಳ್ಳ ಹೊಳೆಗೆ ಹೋಗಿ, ಛಳಿಯಲ್ಲಿ ತಣ್ಣೀರೊಳಗೆ ಮುಳುಗಿ,
ಸ್ನಾನವ ಮಾಡಿ ಬಂದು ಜಂಗಮವ ಕರಿಸಿ,
ಮೃಷ್ಟಾನ್ನವ ಹೊಟ್ಟೆತುಂಬ ಘಟ್ಟಿಸಿ,
ಶಿವರಾತ್ರಿ ಶಿವಯೋಗದ ಪಾರಣೆಯಾಯಿತೆಂದು
ಮಹಾ ಉಲ್ಲಾಸದಿಂ ತಮ್ಮೊಳಗೆ ತಾವೇ ಇಪ್ಪರಯ್ಯಾ.
ಇಂತಪ್ಪ ಅವಿಚಾರಿಗಳಾದ ಅಜ್ಞಾನ ಜೀವಾತ್ಮರಿಗೆ
ವೀರಮಾಹೇಶ್ವರರೆಂದಡೆ ಪರಶಿವಯೋಗಿಗಳಾದ ಶಿವಶರಣರು ನಗುವರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
--------------------------------------------------------------------------------
ಉರಿಲಿಂಗಪೆದ್ದಿ
ಸ್ವಸ್ತಿ ಸಮಸ್ತವಿದ್ಯಾದಿ ಮೂಲವಹ
ಋಕ್‍ಯಜುಸ್ಸಾಮಾಥರ್ವಣದಲ್ಲಿ ಅಂತರ್ಗತವಾಗಿಹ
ಶ್ರೀರುದ್ರ, ಪಂಚಬ್ರಹ್ಮ, ಶ್ವೇತಾಶ್ವತರ, ಬ್ರಹದಾರಣ್ಯಕ,
ಕೇನ, ಈಶ, ಜಾಬಾಲ, ಗರ್ಭ, ಕಾಲಾಗ್ನಿರುದ್ರ, ವಾಜಸನೇಯ,
ಶಿವಸಂಕಲ್ಪ, ಬ್ರಹ್ಮಬಿಂದು, ಕಾತ್ಯಾಯನ, ಕಣ್ವ
ಇತ್ಯಾದಿ ನಿಖಿಲೋಪನಿಷತ್ತುಗಳನ್ನು ಪ್ರತಿಪಾದಿಸಿ ನೋಡಲು,
ನಿತ್ಯಶುದ್ಧ ನಿರ್ಮಲಪರಶಿವನನ್ನು
ಸತ್ಯಶುದ್ಧ ಶಿವಾಚಾರಸಂಪನ್ನಭಕ್ತರನಲ್ಲದೆ
ವಿಸ್ತರಿಸಿ ಸ್ತುತಿಗೈದುದಿಲ್ಲ. ಅದಕ್ಕೆ ಶಪಥ,
ಆ ವೇದಪುರಷರ ಚಿತ್ತವೇ ಸಾಕ್ಷಿ.
ಶಿವನ ಶರಣರು ವಾಙõïಮಾನಸಾಗೋಚರರು ಎಂದು ಹೇಳುತ್ತಲಿದೆ ಶ್ರುತಿ.
ಅಖಿಲಬ್ರಹ್ಮಾಂಡಂಗಳಿಗೆ ಪಿತಮಾತೆಯಹ ಶಿವನಲ್ಲಿ
ಶಿವನ ಶರಣನು ಅವಿರಳನೆಂಬುದಕ್ಕೆ
`ಯಥಾ ಶಿವಸ್ತಥಾ ಭಕ್ತಃ' ಎಂಬ ವೇದವಾಕ್ಯವೇ ಪ್ರಮಾಣ.
`ನಾಭ್ಯಾ ಅಸೀದಂತರಿಕ್ಷಂ ಶೀಷ್ರ್ಣೋzõ್ಞ್ಯಃ ಸಮವರ್ತತ' ಎಂಬ ಶ್ರುತಿ,
ಸಕಲ ಬ್ರಹ್ಮಾಂಡಕೋಟಿಗಳು ಶಿವನ ನಾಭಿಕೂಪದಲ್ಲಿ
ಅಡಗಿಹವೆಂದು ಹೇಳಿತ್ತು.
`ಭಕ್ತಸ್ಯ ಹೃತ್ಕಮಲಕರ್ಣಿಕಾಮಧ್ಯಸ್ಥಿತೋ[s]ಹಂ ನ ಸಂಶಯಃ ಎಂಬ
ಶ್ರುತಿ,
ಅಂತಹ ಶಿವನು ಸದ್ಭಕ್ತನೊಳಗಡಗಿಹನೆಂದು ಹೇಳಿತ್ತು.
`ಅಘೋರೇಭ್ಯೋ[s]ಥ ಘೋರೇಭ್ಯೋ ಘೋರಘೋರತರೇಭ್ಯಃ
ಸರ್ವೇಭ್ಯಃ ಸರ್ವಶರ್ವೆರಭ್ಯೋ ನಮಸ್ತೆ ಅಸ್ತು ರುದ್ರರೂಪೇಭ್ಯಃ ಎಂಬ
ಶ್ರುತಿ,
ಶಿವನ ಅಘೋರಮೂರ್ತಿಯ ನಿತ್ಯತೇಜೋಮೂರ್ತಿಯೆಂದು ಹೇಳಿತ್ತು.
ಜ್ಯೋತಿರ್ಲಿಂಗತ್ವಮೇವಾರ್ಯೇ ಲಿಂಗೀ ಚಾಹಂ ಮಹೇಶ್ವರಿ
ತದೇತದವಿಮುಕ್ತಾಖ್ಯಂ ಜ್ಯೋತಿರಾಲೋಕ್ಯತಾಂ ಪ್ರಿಯೇ ಎಂಬ ವಾಕ್ಯ,
ಶರಣಸತಿ ಲಿಂಗಪತಿಯಹ ಶಿವನ ಶರಣನೇ ಜ್ಯೋತಿರ್ಲಿಂಗವೆಂದು ಹೇಳಿತ್ತು.
ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್ ಎಂಬ ಶ್ರುತಿ,
ಶಿವಧ್ಯಾನ ಸ್ತುತಿ ನಿರೀಕ್ಷಣೆ ಪೂಜೆಯಿಂದಲ್ಲದೆ
ಜನ್ಮ ಮೃತ್ಯು ಜರಾ ವ್ಯಾಧಿ ಹಿಂಗಿ
ಪರಮಸುಖ ಪರಮನಿರ್ವಾಣವಾಗದೆಂದು ಹೇಳಿತ್ತು.
`ಅಪವರ್ಗಪದಂ ಯಾತಿ ಶಿವಭಕ್ತೋ ನ ಚಾಪರಃ' ಎಂಬ ವಾಕ್ಯ,
ಮುಕ್ತಿ ಶಿವಭಕ್ತಂಗಲ್ಲದೆ ಮತ್ತೊಬ್ಬರಿಗಿಲ್ಲವೆಂದು ಹೇಳಿತ್ತು.
`ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣಪಿಂಗಲಂ
ಊಧ್ರ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ತೇ ನಮಃ' ಎಂಬ ಶ್ರುತಿ,
ಪರಬ್ರಹ್ಮವೆಂಬುದು ಶಿವನಲ್ಲದೆ
ಬೇರೆ ಬೇರೆ ಮತ್ತೊಂದು ವಸ್ತುವಿಲ್ಲವೆಂದು ಹೇಳಿತ್ತು.
`ಬ್ರಹ್ಮಣಿ ಚರತಿ ಬ್ರಾಹ್ಮಣಃ' ಎಂಬ ವಾಕ್ಯ,
ಅಂತಹ ಬ್ರಹ್ಮವ ಚಿಂತಿಸಿ ನಿರೀಕ್ಷಿಸಿ ಸ್ತುತಿಸಿ ಪೂಜಿಸಿ
ಪ್ರಸನ್ನಪ್ರಸಾದವ ಪಡೆವ ಸದ್ಭಕ್ತನೇ ಮಹಾಬ್ರಾಹ್ಮಣನೆಂದು ಹೇಳಿತ್ತು.
`ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ ವಿಶ್ವತಃ ಪಾತ್
ವಿಶ್ವಾಧಿಕೋ ರುದ್ರೋ ಮಹಾಋಷಿಸ್ಸರ್ವೋ ಹಿ ರುದ್ರಃ' ಎಂಬ ಶ್ರುತಿ, ಸಕಲ
ಜೀವರ ಶಿವನೆಂದು ಹೇಳಿತ್ತು.
`ಭಕ್ತಸ್ಯ ಚೇತನೋ ಹ್ಯಹಂ' ಎಂಬ ವಾಕ್ಯ,
ಶಿವಭಕ್ತಂಗೆ ನಾನೇ ಚೈತನ್ಯನೆಂದು ಹೇಳಿತ್ತು.
ಇಂತಪ್ಪ ಶಿವಲಿಂಗಾರ್ಚನೆಯ ಮಾಡುವ
ಶಿವಭಕ್ತನ ಶ್ರೀಮೂರ್ತಿಗಿನ್ನು ಸರಿಯುಂಟೆರಿ
`ವಾಚೋತೀತಂ ಮನೋತೀತಂ ಭಾವಾತೀತಂ ಪರಂ ಶಿವಂ
ಸರ್ವಶೂನ್ಯಂ ನಿರಾಕಾರಂ ನಿತ್ಯತ್ವಂ ಪರಮಂ ಪದಂ'
ಇಂತಪ್ಪ ಶಿವನಲ್ಲಿ ಅವಿನಾಭಾವರಪ್ಪ ಶರಣರ ಕಂಡಡೆ ಕರ್ಮಕ್ಷಯ,
ನೋಡಿದಡೆ ಕಣ್ಗೆ ಮಂಗಳತರ ನಿರುಪಮಸುಖ,
ನುಡಿಸಿದಡೆ ಶಿವರಾತ್ರಿ, ಸಂಭಾಷಣೆ ಮಾಡಿದಡೆ
ಜನ್ಮಕರ್ಮಬಂಧನನಿವೃತ್ತಿ, ಜೀವನ್ಮುಕ್ತನಹ,
ಇದು ನಿತ್ಯ ಕೇಳಿರಣ್ಣಾ.
ದರ್ಶನಾತ್ ಶಿವಭಕ್ತನಾಂ ಸಕೃತ್ಸಂಭಾಷಣಾದಪಿ
ಅತಿರಾತ್ರಸ್ಯ ಯಜ್ಞಸ್ಯ ಫಲಂ ಭವತಿ ನಾರದ
ಎಂದು ನಾರದಬೋಧೆಯಲ್ಲಿ ಈಶ್ವರ ಹೇಳಿದನು.
ಇಂತಪ್ಪ ಈಶ್ವರನ ಕಾಣವು ವೇದಂಗಳು.
`ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್'
ಎಂದುದಾಗಿ,
ಇಂತು ವೇದಕ್ಕತೀತನಹಂತಹ ಶಿವನ ಶರಣರ
ಮಾಹಾತ್ಮೆಯ ಹೊಗಳಲ್ಕೆ ವೇದಕ್ಕೆ ವಶವಲ್ಲ,
ಮಂದಮತಿಮಾನವರ ಮಾತಂತಿರಲಿ.
ಶಿವಶರಣರ ಮಹಾಮಹಿಮೆಗೆ ನಮೋ ನಮೋ ಎಂಬೆ ಕಾಣಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------------------------------------------------------------------------
ಜಕ್ಕಣಯ್ಯ
ಒಬ್ಬ ಶಿವಶರಣನು ಶಿವರಾತ್ರಿಯಲ್ಲಿ
ನಿತ್ಯ ಶಿವಯೋಗವ ಮಾಡುವುದ ಕಂಡೆನಯ್ಯ.
ಅದು ಹೇಗೆಂದಡೆ: ಅರುಹೆಂಬ ಸಮ್ಮಾರ್ಜನೆಯ ಮಾಡಿ,
ಕುರುಹೆಂಬ ಗದ್ದುಗೆಯ ನೆಲೆಯಂಗೊಳಿಸಿ,
ಸುಜ್ಞಾನವೆಂಬ ರಂಗವಾಲಿಯ ತುಂಬಿ,
ಚಂದ್ರಸೂರ್ಯಾದಿಗಳೆಂಬ ದೀವಿಗೆಯ ಮುಟ್ಟಿಸಿ,
ಮಹಲಿಂಗವೆಂಬ ಮೂರ್ತಿಯಂ ನೆಲೆಯಂಗೊಳಿಸಿ,
ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವಂ ನೀಡಿ,
ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ,
ನಿರ್ಮಳವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು,
ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ,
ಒಬ್ಬ ಮೂರ್ತಿ ನವರತ್ನದ ಹರಿವಾಣದಲ್ಲಿ
ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ, ಪಂಚದೀಪಂಗಳ ರಚಿಸಿ,
ಆ ಲಿಂಗಕ್ಕೆ ಓಂ ನಮೋ ಓಂ ನಮೋ ಎಂದು ಬೆಳಗುತಿರ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
--------------------------------------------------------------------------------
ಮೂರುಸಾವಿರ ಮುಕ್ತಿಮುನಿ
ಪರಮಬೆಳಗಿನಿಂದೆಸೆವ
ನಿಜವೀರಶೈವ ಭಕ್ತಜಂಗಮಲಿಂಗ ಘನಗಂಭೀರರು
ಪಂಚಾಭಿಷೇಕ ಮೊದಲಾದ ಅನಂತ ಅಭಿಷೇಕ
ಪತ್ರಿ ಪುಷ್ಪ ಫಲಹಾರ ಪಂಚಕಜ್ಜಾಯ ಪರಮಾನ್ನ ಪಾಯಸ
ಮೊದಲಾದ ಕಟ್ಟಳೆಗಳ ಮಾಡದೆ,
ವಾರ ತಿಥಿ ನಕ್ಷತ್ರ ವ್ಯತಿಪಾತ ವೈಧೃತಿ,
ಚಂದ್ರಸೂರ್ಯಗ್ರಹಣ ಹುಣ್ಣಿಮೆ ಅಮವಾಸ್ಯೆ
ಸತ್ತ ಹೆತ್ತ ಕರ್ಮದ ತಿಥಿಗಳು,
ಕಾರ್ತೀಕ ಮಾಘ ಶ್ರಾವಣ ಶಿವರಾತ್ರಿ ನವರಾತ್ರಿ
ಸಂಕ್ರಾಂತಿ ಕತ್ತಲರಾತ್ರಿ ದಿನರಾತ್ರಿಗಳೆಂಬ
ದಿವಾರ್ಚನೆ ಸಾಮಾನ್ಯದಾರ್ಚನೆ ಮೊದಲಾದ
ಶೈವಜಡಕರ್ಮಗಳ ಹೊದ್ದಲೀಯದೆ,
ಸತ್ಯಶುದ್ಧ ನಡೆನುಡಿಯಿಂದ
ಕೇವಲ ನಿಜಗುರುಲಿಂಗಜಂಗಮಮೂರ್ತಿಗಳ
ಬಂದ ಬರವ ನಿಂದ ನಿಲುಗಡೆಯನರಿದು,
ಅಷ್ಟವಿಧಾರ್ಚನೆ ಷೋಡಶೋಪಚಾರಗಳೊದಗಿದಂತೆ
ನಿಜಾನಂದಭರಿತದಿಂದರ್ಚನಂಗೈದು,
ಪರಶಿವಯೋಗಾನುಸಂಧಾನದಿಂದಾಚರಿಸುವುದೇ
ನಿರವಯಪ್ರಭು ಮಹಾಂತನ ಪ್ರತಿಬಿಂಬರೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------------------------------------------------------------------------
.
ಘಟ್ಟಿವಾಳಯ್ಯ
ಕೊಂಬಿನ ಮೇಲಣ ಬೇಡಂಗೆ ಶಿವರಾತ್ರಿಯನಿತ್ತನೆಂಬರು;
ಕಾಳಿದಾಸಂಗೆ ಕಣ್ಣನಿತ್ತನೆಂಬರು;
ಮಯೂರಂಗೆ ಮಯ್ಯನಿತ್ತನೆಂಬರು;
ಬಾಣಂಗೆ ಕಯ್ಯನಿತ್ತನೆಂಬುರು;
ಸಿರಿಯಾಳಂಗೆ ಮಗನನಿತ್ತನೆಂಬರು;
ಸಿಂಧುಬಲ್ಲಾಳರಾಯಂಗೆ ವಧುವನಿತ್ತನೆಂಬರು;
ದಾಸಂಗೆ ತವನಿಧಿಯನಿತ್ತನೆಂಬರು.
ಆರಾರ ಮುಖದಲ್ಲಿ ಇದೇ ವಾರ್ತೆ ಕೇಳಲಾಗದೀ ಶಬ್ದವನು.
ಲಿಂಗವಿತ್ತುದುಳ್ಳಡೆ ಅಚಳಪದವಾಗಬೇಕು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ
ಅದು ನಿಲದ ವಾರ್ತೆ.
--------------------------------------------------------------------------------
ಷಣ್ಮುಖಸ್ವಾಮಿ
ನಿಚ್ಚ ನಿಚ್ಚ ಶರಣಂಗೆ ಹಬ್ಬ ಆವಾಸಗಿರಿ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಶುದ್ಧಶಿವರಾತ್ರಿ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಜಾತ್ರೆ ಉತ್ಸವ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಪರಮಾನಂದದೋಕುಳಿ ತಾನೆ ಕಾಣಿರೊ.
ನಿಚ್ಚ ನಿಚ್ಚ ನಮ್ಮ ಅಖಂಡೇಶ್ವರನ ಶರಣಂಗೆ
ಒಸಗೆ ವೈಭವಂಗಳು ತಾನೆ ಕಾಣಿರೊ.
--------------------------------------------------------------------------------
ಘನಲಿಂಗಿದೇವ
ಲಿಂಗಾಂಗ ಸಂಬಂಧದ ಭೇದವನರಿಯದೆ
ನಾವು ಲಿಂಗಾಗಿಸಂಬಂಧಿಗಳೆಂದು
ಅಂದಚಂದವಾಗಿ ನುಡಿದುಕೊಂಬ
ಕ್ರಿಯಾಭ್ರಾಂತರು ನೀವು ಕೇಳಿರೋ
ಲಿಂಗಾಂಗ ಸಂಬಂಧದ ಉತ್ತರೋತ್ತರದ ನಿರ್ಣಯವ.
ಹೊರಗಣ ಹೂವನ್ನೆ ತಂದು
ಸ್ಥೂಲತನುವಿನ ಮೇಲಿಪ್ಪ ಆಚಾರಲಿಂಗಮಂ ಪೂಜೆಮಾಡಿ
ತನುವ ಸಮರ್ಪಿಸಿ ಬೇಡಿಕೊಂಡು
ಹೊರಗಣ ಹೊನ್ನು ಹೆಣ್ಣು ಮಣ್ಣು ಷಟ್ಕರ್ಮಂಗಳ
ಬಿಟ್ಟುದೇ ಇಷ್ಟಲಿಂಗಪೂಜೆ.
ಒಳಗಣ ಹೂವನ್ನೆ ತಂದು
ಸೂಕ್ಷ ್ಮತನುವಿನ ಮೇಲಿಪ್ಪ ಜಂಗಮಲಿಂಗಮಂ ಪೂಜೆಮಾಡಿ
ಮನವ ಸಮರ್ಪಿಸಿ ಉಪಾವಸ್ಥೆಯಂ ಮಾಡಿ
ಒಳಗಣ ಅಂತಃಕರಣಂಗಳಂ ಸುಟ್ಟುದೇ ಪ್ರಾಣಲಿಂಗಪೂಜೆ.
ಮನೋಮಧ್ಯದೊಳಿಪ್ಪ ಭಾವಪುಷ್ಪವನ್ನೆ ತಂದು
ಕಾರಣತನುವಿನ ಮೇಲಿಪ್ಪ ತೃಪ್ತಿಲಿಂಗಮಂ ಪೂಜೆ ಮಾಡಿ
ಸಂತೋಷವಂ ಸಮರ್ಪಿಸಿ ದೈನ್ಯಂಬಟ್ಟು
ಜ್ಞಾನ ಕ್ರಿಯೆಗಳಳಿದುದೇ ಭಾವಲಿಂಗಪೂಜೆ.
ಈ ಪ್ರಕಾರದ ಲಿಂಗಾಂಗ ಸಾಧಕತ್ವಮಂ
ಶಿವರಾತ್ರಿಯ ಸಂಕಣ್ಣಂಗೊಲಿದಂತೆ
ಎನಗೊಲಿದು ಕರುಣಿಸಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------------------------------------------------------------------------
ಅತ್ಯುತ್ತಮ ಸಂಗ್ರಹ. ಶರಣರ ಶಿವರಾತ್ರಿ ಎಂದು ತಿಳಿಯಲು ಹುಡುಕುತ್ತಿದ್ದಾಗ ಸಿಕ್ಕ ನಿಮ್ಮ ಲೇಖನ.
ReplyDeleteNssvsskhsekkbss
ReplyDelete