ಶರಣರಲ್ಲಿ
"ಕಾಯವೇ ಕೈಲಾಸ" ಅಂತ ಪ್ರತಿಪಾದಿಸಿ, ನಂಬಿ ಬದುಕಿದ ಜನರಿಗೆ ಎಷ್ಟು ಮಹತ್ವವಿದೆಯೋ, ಅಸ್ಟೇ ಮಹತ್ವ "ಕಾಯಕವೇ ಕೈಲಾಸ" ಅಂತ ನಂಬಿ ಬದುಕಿದವರಿಗಿದೆ.
"ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದರರೂ ಕಾಯಕದೊಳಗೆ ಅ೦ದು ನಂಬಿ ಬದುಕಿದ
ಆಯ್ದಕ್ಕಿ ಮಾರಯ್ಯನವರದ್ದು ಒಂದು ಎತ್ತರವಾದರೆ, "ಕಾಡಿನ
ಸೋಪ್ಪಾಯಿತ್ತಾದಡೂ ಕಾಯಕದಿಂದ ಬಂದುದು ಲಿಂಗಾರ್ಪಿತ" ಎಂದು ಬಾಳಿ ಬದುಕಿ ದಾರಿ ತೋರಿದ
ನುಲಿಯಚಂದಯ್ಯನವರದ್ದು ಇನ್ನೊಂದು ಎತ್ತರ. ಇವರ ಬಗ್ಗೆ ಒಂದು ಸಣ್ಣ ವಿವರ ಹೀಗಿದೆ.
ವಚನಕಾರ - ನುಲಿಯ ಚಂದಯ್ಯ
ಕಾಲ- 1160
ಅಂಕಿತನಾಮ- ಚಂದೇಶ್ವರಲಿಂಗ
ಲಭ್ಯ ವಚನಗಳ ಸಂಖ್ಯೆ- 48
ಕಾಯಕ- ಹಗ್ಗ ಹೊಸೆದು ಮಾರುವುದು
ಸಮಾಧಿ ಇರುವ ಸ್ಥಳ- ಆರ್.ನುಲೇನೂರು, ಚಿತ್ರದುರ್ಗ ಜಿಲ್ಲೆ.
ಕೃತಿಯ ವೈಶಿಸ್ಟ್ಯ- ಕಾಯಕ ನಿಸ್ಟೆ ಮತ್ತು ಜಂಗಮ ದಾಸೋಹ, ಇವರ ವಚನಗಳಲ್ಲಿ ಗಮನಾರ್ಹವಾದವು.
ನುಲಿಯ ಚಂದಯ್ಯರ ಸಮಾಧಿ ಮೇಲೆ ಈಗ ಇಟ್ಟಿರುವ ಮೂರ್ತಿ. |
ನುಲಿಯ ಚಂದಯ್ಯ ಬಸವಣ್ಣನವರ ಸಮಾಕಾಲೀನರು ಮತ್ತು ಅವರ ಜೊತೆ ಕೈಜೋಡಿಸಿದ ಪ್ರಮುಖ ಶರಣರಲ್ಲಿ ಒಬ್ಬರು .
ನುಲಿಯ ಚಂದಯ್ಯನವರ, ಇಡೀ ವಚನಗಳನ್ನು ಓದಿದಾಗ ಗುರು -ಲಿಂಗ-ಜಂಗಮ ಮತ್ತು ಕಾಯಕ - ದಾಸೋಹ ಎನ್ನುವ ಅಂಶಗಳ ಬಗ್ಗೆ ಆಳವಾದ ಒಳಹುಗಳು ತಿಳಿಯುತ್ತದೆ. ತಾನು ಕಾಯಕ ನಿರತನಾಗಿ ಪ್ರತಿನಿತ್ಯದ ಅನ್ನವನ್ನು ತಾನೇ ದುಡಿದು ತಿನ್ನಬೇಕು ಎನ್ನುವ ಕಾಯಕ ಸಿದ್ದಾಂತ ಅವರದಾಗಿತ್ತು. ಅದು ಆತನ ಇಷ್ಟದೈವ ಚಂದೇಶ್ವರ ಲಿಂಗಕ್ಕೆ ಒಪ್ಪುವುದು ಎಂದು ನಂಬಿದ್ದರು.
ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದವರಲ್ಲಿ ನುಲಿಯ ಚಂದಯ್ಯರೂ ಒಬ್ಬರು. ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಶಿವಣಗಿ. ಮುಂದೆ ಕಲ್ಯಾಣಕ್ಕೆ ಬಂದು, ಕಾಯಕ ದಾಸೋಹಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಇಷ್ಟಲಿಂಗದಲ್ಲಿ ಅತ್ಮೋನ್ನತಿ ಕಂಡುಕೊಂಡರು. ಮೆದೆ ಹುಲ್ಲಿನ ಹಗ್ಗ ಹೊಸೆಯುವ ಕಾಯಕ ಮಾಡಿ ಅದನ್ನ ಮಾರಿ ಬಂದ ಆದಾಯದಿಂದ ಗುರು ಲಿಂಗ ಜಂಗಮ ಸೇವೆಗೆ ಬಳಸುತ್ತಿದ್ದರು. ಚಂದೇಶ್ವರಲಿಂಗ ಎಂಬ ಅಂಕಿತನಾಮದಲ್ಲಿ ಅವರು ರಚಿಸಿದ 48 ವಚನಗಳು ಲಭ್ಯವಾಗಿವೆ.
ಕಲ್ಯಾಣ ಕ್ರಾಂತಿಯ ನಂತರ ಚೆನ್ನಬಸವಣ್ಣರೊಡನೆ ನುಲಿಯ ಚಂದಯ್ಯ ಉಳಿವಿಗೆ ಬರುತ್ತಾರೆ. ಚೆನ್ನಬಸವಣ್ಣ ಶಿವೈಕ್ಯರಾದ ನಂತರ ಅನೇಕ ಶಿವಶರಣರು ವಿವಿಧೆಡೆಗೆ ಹಂಚಿಹೋಗುತ್ತಾರೆ. ಆಗ ಬಸವಣ್ಣನವರ ಸಹೋದರಿ ಅಕ್ಕ ನಾಗಮ್ಮರೊಂದಿಗೆ ಚಂದಯ್ಯನವರು ಕಾಯಕ ಧರ್ಮ ಪ್ರಚಾರ ಮಾಡುತ್ತಾ ಉಳವಿ, ಶಿವಮೊಗ್ಗ, ಎಣ್ಣೆಹೊಳೆ, ನಂದಿಗ್ರಾಮ, ಶಾಂತಿಸಾಗರ, ಬೆಂಕಿಕೆರೆ, ಇತರೆಡೆಗಳಲ್ಲಿ ಸಂಚರಿಸಿ ಹೊಳಲ್ಕೆರೆ ತಾಲ್ಲೂಕು ದುಮ್ಮಿ ಗ್ರಾಮಕ್ಕೆ ಬರುತ್ತಾರೆ. ಈ ಮದ್ಯದಲ್ಲಿ ಎತ್ತಿನ ಹೊಳೆತೀರದಲ್ಲಿ ಅಕ್ಕ ನಾಗಮ್ಮ ಲಿಂಗೈಕ್ಯಳಾಗುತ್ತಾರೆ. ದುಮ್ಮಿ ಗ್ರಾಮದ ದುಮ್ಮಣ್ಣ ನಾಯಕನ ಪತ್ನಿ ಪದ್ಮಾವತಿಯು ಚಂದಯ್ಯನವರ ವಿಚಾರಧಾರೆಯನ್ನು ಮೆಚ್ಚಿ ಲಿಂಗದೀಕ್ಷೆ ಪಡೆಯುತ್ತಾಳೆ. ಅರಮನೆಯಲ್ಲಿ ಆಶ್ರಯ ನೀಡುತ್ತಾಳೆ. ಆದರೆ ನುಲಿಯ ಚಂದಯ್ಯ ಅರಮನೆ ವಾತಾವರಣ ತನ್ನ ಕಾಯಕ ಧರ್ಮಕ್ಕೆ ಒಗ್ಗದ ಕಾರಣ ಆ ಆಶ್ರಯವನ್ನು ನಿರಾಕರಿಸುತ್ತಾರೆ. ನಂತರ ಆಕೆ ತನ್ನ ತವರೂರು ಪದ್ಮಾವತಿ ಪಟ್ಟಣದ ಕೆರೆಯ ದಡದಲ್ಲಿ (ಈಗಿನ ಆರ್. ನುಲೇನೂರು ಗ್ರಾಮ ) ಶಿಲಾ ಮಂಟಪ ನಿರ್ಮಿಸಿ ನಿತ್ಯ ಕಾಯಕ ಮತ್ತು ದಾಸೋಹ ಮಾಡಲು ಕೇಳಿಕೊಳ್ಳುತ್ತಾಳೆ. ಕೆರೆಯ ನೀರಿನ ಬಳಕೆಯ ವಿಷಯದಲ್ಲಿ ಕೆಲವರು ವಿರೋಧವನ್ನು ಮಾಡುತ್ತಾರೆ. ಆಗ ನುಲಿಯ ಚಂದಯ್ಯ ತನ್ನ ಊರುಗೋಲಿನಿಂದ ನೆಲವನ್ನು ಕುಕ್ಕುತ್ತಾರೆ. ಅಲ್ಲಿ ನೀರಿನ ಚಿಲುಮೆ ಏಳುತ್ತದೆ. ಅಲ್ಲಿ ಒಂದು ಬಾವಿಯನ್ನು ನಿರ್ಮಿಸಿ ಅದನ್ನು ತನ್ನ ಕಾಯಕಕ್ಕೆ ಬಳಸಿಕೊಳ್ಳುತ್ತಾರೆ. ಇದನ್ನು "ಚಂದಯ್ಯನ ಬಾವಿ" ಎಂದು ಕರೆಯುತ್ತಾರೆ. ಈ ಬಾವಿ ಈಗಲೂ ಆ ಗ್ರಾಮದಲ್ಲಿದೆ.
ನುಲೆನೂರಿನ ಕಲ್ಯಾಣಿ / ಹೊಂಡ |
ನುಲಿಯ ಚಂದಯ್ಯನ ಗುಡಿ / ಸಮಾಧಿ - ಆರ್ ನುಲೇನೂರು |
ನುಲಿಯ ಚಂದಯ್ಯರ ಸಮಾಧಿ ಮೇಲೆ ಈಗ ಇಟ್ಟಿರುವ ಮೂರ್ತಿ. |
ತನ್ನ ಇಷ್ಟಲಿಂಗದ ಕೈಯಲ್ಲೇ ಹಗ್ಗ ಮಾರುವ ಕಾಯಕ ಮಾಡಿಸಿದವರೀತ ಎಂದು ಹೆಂಡದ ಮಾರಯ್ಯ ತನ್ನೊಂದು ವಚನದಲ್ಲಿ ಈತನ ಘನ ವ್ಯಕ್ತಿತ್ವವನ್ನು ನಾಟಕೀಯವಾಗಿ ನಿರೂಪಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ಈತನನ್ನು ಹಠಯೋಗಿ ಎಂದು ಕರೆಯಲ್ಪಟ್ಟಿದ್ದಾನೆ.
ನುಲಿಯ ಚಂದಯ್ಯನವರ ಕೆಲ ವಚನಗಳು!
ಕಂದಿಸಿ ಕುಂದಿಸಿ ಬಂಧಿಸಿ ಕಂಡವರ ಬೇಡಿತಂದು(ಸಮಗ್ರ ವಚನ ಸಂಪುಟ 7, ವಚನದ ಸಂಖ್ಯೆ 1291)
ಜಂಗಮಕ್ಕೆ ಮಾಡಿದೆನೆಂಬ ದಂದುಗದೋಗರ ಲಿಂಗಕ್ಕೆ ನೈವೇದ್ಯ ಸಲ್ಲ.
ತನು ಕರಗಿ ಮನ ಬಳಲಿ ಬಂದ ಚರದ ಅನುವರಿತು
ಸಂದಿಲ್ಲದೆ ಸಂಶಯವಿಲ್ಲದೆ ಜಂಗಮಲಿಂಗಕ್ಕೆ
ದಾಸೋಹವ ಮಾಡುವುದೆ ಮಾಟ.
ಕಾಶಿಯಕಾಯಿ ಕಾಡಿನ ಸೊಪ್ಪಾಯಿತ್ತಾದಡೂ
ಕಾಯಕದಿಂದ ಬಂದುದು ಲಿಂಗಾರ್ಪಿತ.
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ನೈವೇದ್ಯ ಸಂದಿತ್ತು.
ಗುರು ಇಷ್ಟವ ಕೊಟ್ಟು ಕೂಲಿಗೆ ಕಟ್ಟಿದ ಲಿಂಗ(ಸಮಗ್ರ ವಚನ ಸಂಪುಟ 7, ವಚನದ ಸಂಖ್ಯೆ 1295)
ವೃಷ್ಟವ ತೋರಿ ತನ್ನ ರಜತದ ಬೆಟ್ಟದ ಮೇಲಿರಿಸಿದ.
ಇಂತು ಗುರುಲಿಂಗಕ್ಕೆ ಮಾಡಿ
ಹಿಂದಣ ಮುಂದಣ ಸಂದೇಹಕ್ಕೀಡಾದೆ.
ಪ್ರಸಿದ್ಧವಪ್ಪ ಜಂಗಮಲಿಂಗಕ್ಕೆ ಸಂದೇಹವಿಲ್ಲದೆ
ಮನಸಂದು ಮಾಡಲಾಗಿ
ಚಂದೇಶ್ವರಲಿಂಗಕ್ಕೆ ಹಿಂದುಮುಂದೆಂಬುದಿಲ್ಲ.
ಶ್ರೀಗುರುವ ತಾನರಿದು ವರಗುರು ತಾನಾಗಬೇಕು.(ಸಮಗ್ರ ವಚನ ಸಂಪುಟ 7, ವಚನದ ಸಂಖ್ಯೆ 1295)
ಲಿಂಗನೈಷಿ*ಕೆಯಾಗಿ ಪೂಜಿಸಿಕೊಳಬೇಕು.
ಜಂಗಮ ತಾ ತ್ರಿವಿಧವ ಮರೆದು
ಜಂಘ ನಾಸ್ತಿಯಾಗಿ ಜಂಗಮವಾಗಬೇಕು.
ಜಂಗಮಕ್ಕೆ ಮಾಡಿ ನೀಡಿ ಸಂದು ಸಂಶಯವನಳಿದು
ನಮ್ಮ ಚಂದೇಶ್ವರಲಿಂಗವನರಿಯಬೇಕು ಕಾಣಾ,
ಎಲೆ ಅಲ್ಲಮಪ್ರಭುವೆ.
ಇದಿರ ಭೂತಹಿತಕ್ಕಾಗಿ ಗುರುಭಕ್ತಿಯ ಮಾಡಲಿಲ್ಲ.(ಸಮಗ್ರ ವಚನ ಸಂಪುಟ 7, ವಚನದ ಸಂಖ್ಯೆ 1285)
ಅರ್ತಿಗಾರಿಕೆಗಾಗಿ ಲಿಂಗವ ಬಿಟ್ಟು ಪೂಜಿಸಲಿಲ್ಲ.
ರಾಜ ಚೋರರ ಭಯಕ್ಕಂಜಿ ಜಂಗಮ ದಾಸೋಹವಮಾಡಲಿಲ್ಲ.
ಆವ ಕೃಪೆಯಾದಡೂ ಭಾವ ಶುದ್ಧವಾಗಿರಬೇಕು,
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿಯ ಬಲ್ಲಡೆ.
ಆರ್ ನುಲೆನೂರಿನಲ್ಲಿರುವ ನುಲಿಯ ಚಂದಯ್ಯನ ಗುಡಿಯ ಪಕ್ಕದ ಮತ್ತು ಮುಂದಿನ ನೋಟ!
ಇಲ್ಲಿ ಸಿಕ್ಕಿರುವ ಶಾಸನಗಳು ಮತ್ತು ಮೂರ್ತಿಗಳು
ಗೂಗಲ್ ಮ್ಯಾಪ್ ನಲ್ಲಿ ದಾರಿ
Photo credits to : Sandesh TJ Tavane
ನನ್ನ ಈ ಬರಹ ಮೆಚ್ಚಿ facebook ನಲ್ಲಿ like ಮಾಡಿ ಮತ್ತು share ಮಾಡಿರುವ ನನ್ನ ಎಲ್ಲ ಸ್ನೇಹಿತರಿಗೆ ನನ್ನ ಧನ್ಯವಾದಗಳು.
ReplyDeleteThis comment has been removed by a blog administrator.
ReplyDelete