Monday, 1 August 2016

ವಿಶಿಸ್ಟ ವ್ಯಕ್ತಿತ್ವದ ಅಕ್ಕಮಹಾದೇವಿ - the genuine mystic

ಹನ್ನೆರಡನೆಯ ಶತಮಾನದಲ್ಲಿ ಹೊಸ ಸಮಾಜವನ್ನು ಕಟ್ಟಲು ಚಿಂತಿಸಿದ ಮತ್ತು ಕ್ರಾಂತಿಕಾರಕ  ಶಿವಶರಣರು ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ನಡೆಯುತಿದ್ದ ಅನ್ಯಾಯ ಶೋಷಣೆಗಳನ್ನ ಕಣ್ಣಾರೆ ಕಂಡು ಅವುಗಳ ವಿರುದ್ದ ತಪ್ಪು-ಸರಿ ವಿಚಾರಗಳನ್ನು ಆಡುಭಾಷೆಯಲ್ಲಿ ತಮ್ಮ ವಚನಗಳ ಮೂಲಕ ಜನರಿಗೆ ಅರ್ಥವಾಗುವಂತೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು. ಹನ್ನೆರಡನೆಯ ಶತಮಾನದಲ್ಲಿ ಅಸ್ಪೃಶ್ಯತೆ ಮತ್ತು ಸ್ತ್ರೀ ತಾರತಮ್ಯ  ತಾಂಡವವಾಡುತಿತ್ತು. ಸ್ತ್ರೀಯರು ಮತ್ತು ಶೂದ್ರರು ವೇದ ಶಾಸ್ತ್ರಗಳನ್ನು ಓದಲು ಅನರ್ಹರು, ದೇವಸ್ಥಾನಗಳಿಗೆ ಇವರ ಪ್ರವೇಶವಿಲ್ಲ ಎನ್ನುವ ವೇದಶಾಸ್ತ್ರಗಳನ್ನ ಇವರು ವಿರೋಧಿಸಿದರು. ಮಹಿಳೆಯರು ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳಲ್ಲಿ ಪುರುಷರಸ್ಟೇ ಸಮಾನರು ಎಂಬುದನ್ನು ತಿಳಿಸಿಕೊಟ್ಟರು.

ಅಕ್ಕಮಹಾದೇವಿಯವರ ಕಾಲ್ಪನಿಕ ಚಿತ್ರಪಟ 

ಇಂತಹ ಸಮಯದಲ್ಲಿ ಮಹಿಳೆಯರಿಗೆ ಸಿಕ್ಕ ಲಿಂಗದೀಕ್ಷೆಯಿಂದಾದಗಿ ಶಿವಶರಣೆಯರಾದರು.  ಅವರಿಗೆ ಸಿಕ್ಕ  ವಿದ್ಯಾಭ್ಯಾಸ ಸಮಾಜದಲ್ಲಿ ಸಮಾನತೆ ಮತ್ತು  ಅವರು ಚಿಂತನಶೀಲರಾಗಿ ತಮ್ಮಲ್ಲಿ ವಿಶಿಸ್ಟ ವ್ಯಕ್ತಿತ್ವ ರೂಪಿಸಿಕೊಳ್ಳಲು ಅನುವು ಮಾಡಿಕೊಟ್ಟಿತು. ಇಂತಹ ಶಿವಶರಣೆಯರಲ್ಲಿ  ಅಕ್ಕಮಹಾದೇವಿಯ ವ್ಯಕ್ತಿತ್ವ, ಯೋಚನಾಲಹರಿ, ಅವಳ ಬದುಕು ಮತ್ತು ಆಕೆಯ ಅನುಭವಗಳು ಮಹಿಳಾ ಪ್ರಾಧಾನ್ಯತೆಗೆ ಕನ್ನಡಿ ಹಿಡಿದಂತೆ ಭಾಸವಾಗುತ್ತದೆ.  

ಹೀಗೆ  ಸಾಮಾಜಿಕ ಬದಲಾವಣೆಗಳು ನಡೆಯುತಿದ್ದ ಸಮಯದಲ್ಲಿ ಶಿವಭಕ್ತರ ಮನೆಯಲ್ಲಿ ಮಗಳಾಗಿ ಹುಟ್ಟಿದ ಅಕ್ಕಮಹಾದೇವಿ ಗುರುವಾದ ಗುರುಲಿಂಗ ದೇವರಿಂದ ಲಿಂಗದೀಕ್ಷೆಯನ್ನು  ಪಡೆಯುತ್ತಾಳೆ. ಅಕ್ಕ ಕನ್ನಡ ಸಾಹಿತ್ಯ ಲೋಕದ ಮೊದಲ ಕವಯಿತ್ರಿ ಮತ್ತು ವಚನಗಾರ್ತಿ. ಇವಳ ವಚನಗಳ ಅಂಕಿತನಾಮ 'ಚೆನ್ನಮಲ್ಲಿಕಾರ್ಜುನ'. ಪುರುಷ ಪ್ರಧಾನ ಸಮಾಜವನ್ನು ಧಿಕ್ಕರಿಸಿ ನಿಂತು ಯಶಸ್ವಿಯಾದ ಸಾಧನೆ ಅಕ್ಕಮಹಾದೇವಿಯದ್ದು. ಹನ್ನೆರಡನೆಯ ಶತಮಾನದಲ್ಲಿ ಮಹಿಳೆಯರ ಸ್ಥಾನಮಾನ ಅಸ್ಟಕ್ಕಸ್ಟೇ ಇತ್ತು  ಇಂಥಹ  ಸಮಯದಲ್ಲಿ ಶ್ರೇಷ್ಠ ಅನುಭಾವಿಯಾಗಿ ಹೊಮ್ಮಿ ಹಾಗೂ ವಚನಕಾರ್ತಿಯಾಗಿ ಮೆರೆದು ಎಲ್ಲರ ಗೌರವಕ್ಕೆ ಪಾತ್ರಳಾದ ಅಕ್ಕಮಹಾದೇವಿ ಸಾಧಿಸಿದ ಆಧ್ಯಾತ್ಮಿಕ ಔನ್ನತ್ಯ ಮತ್ತು ಸಾಹಿತ್ಯ ಮಟ್ಟ ಶರಣೆಯರ ಗುಂಪಿನಲ್ಲಿ ಅತಿ ವಿರಳ ಎಂದೇ ಹೇಳಬಹುದು.     

ಹದಿನಾರರ ಹರೆಯದಲ್ಲಿ ತನ್ನ ಊರಿನ ರಾಜ ಕೌಶಿಕ ನೊಡನೆ ಮದುವೆಯಾಗಿ ನಾನಾ ರೀತಿಯ ಮಾನಸಿಕ ಯಾತನೆಗಳನ್ನು ಅನುಭವಿಸಿ, ವಿಘಟನೆಯನ್ನು ಹೊಂದಿ, ಭೋಗ-ಭಾಗ್ಯಗಳನ್ನೆಲ್ಲಾ ಧಿಕ್ಕರಿಸಿ, ವಿರಕ್ತ ದಿಗಂಬರೆಯಾಗಿ, ಆಗಿನ ಸಮಾಜದ ಕಟ್ಟು ಕಟ್ಟಳೆಗಳನ್ನು ವಿರೋಧಿಸಿ ನಿರಾಕಾರ ಮೂರ್ತಿ  ಚನ್ನಮಲ್ಲಿಕಾರ್ಜುನ   ನನ್ನ ಗಂಡ ಎಂದು ಹೇಳುತ್ತ ಹೊರಟ ಧೀಮಂತ ವೀರ ಮಹಿಳೆ ಈ ಅಕ್ಕಮಹಾದೇವಿ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ  ಇದ್ದ ಕೀಳು ಸ್ಥಾನಮಾನ, ಕಿರುಕುಳ, ಹಿಂಸೆ, ಕಟ್ಟುನಿಟ್ಟುಗಳ, ವಿರುಧ್ಧ ತಿರುಗಿಬಿದ್ದ ದಿಟ್ಟ ಮಹಿಳೆ ಇವಳು. ರಾಜಪ್ರಭುತ್ವವನ್ನು ಧಿಕ್ಕರಿಸಿದ ಮತ್ತು ಆಗಿನ ಸಮಾಜದಲ್ಲಿ  ವಿವಾಹಿಕ ಜೀವನವನ್ನು ಮುರಿದುಕೊಂಡ  ಹೆಣ್ಣು ಕೂಡ ಇವಳು ಮೊದಲಿನವಳೆಂದೇ ಹೇಳಬಹುದು. ಅಕ್ಕ ತನ್ನ  ವಚನಗಳಲ್ಲಿ ಸಮಾಜವನ್ನು ನೇರವಾಗಿ ವಿಮರ್ಶಿಸಿಲ್ಲ  ಬದಲಾಗಿ ಅವಳ ಸ್ವವಿಮರ್ಶೆಯಲ್ಲಿ  ಅಂದಿನ  ಸಮಾಜದಲ್ಲಿನ ಹೆಣ್ಣಿನ  ಚಿತ್ರಣವನ್ನು ನಾವು ಕಾಣಬಹುದಾಗಿದೆ.

ಕನ್ನಡ ಸಾಹಿತ್ಯಕ್ಕೆ ಮತ್ತು ವಚನ ಸಾಹಿತ್ಯಕ್ಕೆ ತನ್ನದೇ ಆದ ವಿಶಿಸ್ಟ ಕೊಡುಗೆಯನ್ನು ನೀಡಿರುವ ಅಕ್ಕನ ವಚನಗಳು ಕನ್ನಡ ಹೆಣ್ಣಿನ ಸಂವೇದನೆಯ ಅಭಿವ್ಯಕ್ತಿಯ ಮೊದಲ ಕುರುಹುಗಳಾಗಿ ಅಚ್ಚರಿಯನ್ನುಂಟುಮಾಡುತ್ತವೆ. ವಚನ ಸಾಹಿತ್ಯದ ಉಜ್ವಲ ನಕ್ಷತ್ರ ಮತ್ತು ಆದರ್ಶ ಮಹಿಳೆ ಈ ಅಕ್ಕಮಹಾದೇವಿ ಎಂದು ಹೇಳಬಹುದು.
ತೀ.ನಂ.ಶ್ರೀ. ಅವರು ಹೀಗೆ ಹೇಳಿದ್ದಾರೆ. "ಅಕ್ಕನ ವಚನಗಳ ಬಹುಭಾಗ ನಿಜವಾಗಿಯೂ ರಸಾರ್ಥವಾದದ್ದು ಉಪಮಾನಗಳಿಂದ ಚಿತ್ರಕಲ್ಪನೆಗಳಿಂದ ಮನೋಹರವಾಗಿರತಕ್ಕದ್ದು, ಅವಳದು ಕವಿಯ ಹೃದಯ, ಕವಿಯ ಕಣ್ಣು ಎಂಬುದನ್ನು ಸರತಕ್ಕದ್ದು" ಎಂದಿದ್ದಾರೆ.
ಡಾ. ರಂ.ಶ್ರೀ ಮುಗಳಿಯವರು ಅಕ್ಕನನ್ನು ಕುರಿತು ಹೀಗೆ ಹೇಳಿದ್ದಾರೆ. "ಮಹಾದೇವಿ ಅಕ್ಕನು ವ್ಯಕ್ತಿ ವಿಶಿಷ್ಟದಿಂದಲೂ, ವಚನ ಮಹಿಮೆಯಿಂದಲೂ ಮೇಲಾದ ಶಿವಶರಣೆ, ನಮಗೆ ತಿಳಿದ ಮಟ್ಟಿಗೆ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಅವಳೇ ಮೊದಲನೆಯ ಕವಯಿತ್ರಿ ಆಧ್ಯಾತ್ಮ ಮತ್ತು ಗದ್ಯ ಕವಿತ್ವ ಇವುಗಳ ಸಂಮಿಳನಕ್ಕಾದರೂ ಅಕ್ಕ ಮೊದಲಗಿತ್ತಿ."
ಎಲ್.ಬಸವರಾಜುರವರು "ಉಡುತಡಿಯಲ್ಲಿ ಉದ್ಭವಿಸಿ ಕಲ್ಯಾಣದಲ್ಲಿ ಕವಲೊಡೆದು ಕನ್ನಡ ನಾಡಿನ ಹೊಲ ಮೇದೆಯನ್ನೆಲ್ಲ ಕ್ಷಣಾರ್ಧದಲ್ಲಿ ಪಳಚ್ಚನೆ ಪ್ರಜ್ವಲಿಸುವಂತೆ ಮಾಡಿ ಶ್ರೀಶೈಲದ ಕದಳಿಯಲ್ಲಿ ಕಣ್ಮರೆಯಾದಳು ಅಕ್ಕಮಹಾದೇವಿ."ಎಂದಿದ್ದಾರೆ.

ಅಕ್ಕಮಹಾದೇವಿಯ ವಚನಗಳ ಒಳಗಿನ  ಅರ್ಥ ;-


೧.ಹರನೇ ನೀನೆನಗೆ ಗಂಡನಾಗಬೇಕೆಂದು
ಅನಂತಕಾಲ ತಪಸಿದ್ದೆ ನೋಡಾ
ಚಿಕ್ಕಂದಿನಿಂದಲೂ ಶರಣಸತಿ ಲಿಂಗಪತಿ ಭಾವನೆಯನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡ ಅಕ್ಕಮಹಾದೇವಿ ಶಿವಭಕ್ತ ಸಂಪನ್ನೆಯಾಗಿದ್ದಳು. ಇಸ್ಟದೈವ ಚೆನ್ನಮಲ್ಲಿಕಾರ್ಜುನನಿಗೆ ತನ್ನ ಬದುಕನ್ನು ಮುಡಿಪಾಗಿಟ್ಟಿದ್ದಳು.ತನ್ನ ತನು ಮನವನ್ನು ಆಕೆಯ ಮನದೈವ ಪತಿ ಚನ್ನಮಲ್ಲಿಕಾರ್ಜುನನನ್ನು ನೋಡುವ ಕಾತರದಿಂದ ಹಂಬಲಿಸುತ್ತ, ಹುಡುಕಾಡುತ್ತಾ ಅವನಲ್ಲಿ ಐಕ್ಯವಾಗುವ ಬಯಕೆ ತನ್ನ ಆತ್ಮ ಸಾಧನೆಯಲ್ಲಿ ಮುನ್ನಡೆದು ಅನುಭಾವಿಯಾಗಿ ಮೆರೆದಳು.

೨.ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ
ಎಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ ಚೆಲುವಂಗೆ ನಾನೊಲಿದೆ
ಎಲೆ ಅಪ್ಪಗಳಿರಾ ಮಲ್ಲಿಕಾರ್ಜುನನೆಂಬ ಗಂಡಂಗೆ 
ಮಿಗೆ ಮಿಗೆ ಒಲಿದೆ ಅಪ್ಪಗಳಿರಾ 
ಅಕ್ಕಮಹಾದೇವಿ ಪರವಸ್ತುವಿನಲ್ಲಿ ಇತ್ತ ಪ್ರೇಮ ಅಚಲವಾದದ್ದು,ಅಲೌಕಿಕ ವಾದದ್ದು. ಪ್ರೇಮ ಮತ್ತು ಭಕ್ತಿ -ಶ್ರದ್ಧೆ ಜೊತೆಗೆ ಪರಮಾತ್ಮನ ಸ್ವರೂಪ, ಮಹಿಮೆ, ಆತನ ಸಾಕ್ಷಾತ್ಕಾರಕ್ಕಾಗಿ ಹಂಬಲ, ವಿರಹ, ವ್ಯಾಕುಲತೆ,ಆತನ ನೆನಪು, ಜಾಗೃತ ಸ್ವಪ್ನಾವಸ್ಥೆಯಲ್ಲಿ ಪ್ರೇಮ ಪರಾಕಾಸ್ಟೆಯಿಂದ ಸತಿ ಪತಿ ಭಾವದಲ್ಲಿ ಬಾಳುತಿದ್ದ ಅಕ್ಕ ಪರಮಾತ್ಮನ ಸ್ವರೂಪವನ್ನು ಬಹಳ ಮಾರ್ಮಿಕವಾಗಿ ಹೀಗೆ ವರ್ಣಿಸಿದ್ದಾಳೆ. 

೩. ಬೆಟ್ಟದ ಮೇಲೊಂದು ಮನೆಯಮಾಡಿ ಮೃಗಗಳಿಗಂಜಿದೊಡೆನಯ್ಯ   ...........
ಈ ಜಗತ್ತಿನಲ್ಲಿ ಹುಟ್ಟಿದಮೇಲೆ ಇಲ್ಲಿ ಜೀವನ ನಡೆಸಬೇಕಾದ್ದು ಅನಿವಾರ್ಯ. ನಮಗೆ ಸಿಕ್ಕ ಈ  ಬದುಕಿನಲ್ಲಿ ಸ್ತುತಿ, ನಿಂದನೆಗಳು ಬಂದರೂ, ಎಂಥ ಕಷ್ಟ, ಕಾರ್ಪಣ್ಯ ಬಂದರೂ  ಸಮಾಧಾನದಿಂದ ಇರಬೇಕು, ಅವುಗಳನ್ನು ಧೈರ್ಯದಿಂದ ಸ್ವೀಕರಿಸಬೇಕು ಇವು ಅಕ್ಕನ ದಿಟ್ಟ ಮಾತುಗಳಿವು. 

೪.ಗುಣ ದೋಷ ಸಂಪಾದನೆಯ ಮಾದುವನ್ನಕ್ಕ 
ಕಾಮದ ಒಡಲು, ಕ್ರೋಧನ ಗೊತ್ತು, ಲೋಭದ ಇಕ್ಕೆ,
ಮೋಹದ ಮಂದಿರ, ಮದದಾವರಣ, ಮತ್ಸರದ ಹೊದಿಕೆ 
ಆ ಭಾವವರತಲ್ಲದೆ ಚೆನ್ನಮಲ್ಲಿಕಾರ್ಜುನನ ಅರಿವುದಕ್ಕೆ ಇಂಬಿಲ್ಲ ಕಾಣಿರಣ್ಣಾ, 
ಮನಸ್ಸಿನ ಅನಿಮಿತ್ತ ವೈರಿಗಳೆನಿಸಿದ ಕಾಮಾದಿ ಗುಣಗಳು ಜೀವನಕ್ಕೆ ದೋಷವನ್ನುಂಟು ಮಾಡುತ್ತವೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಕಾರಣವಿಲ್ಲದೆ ಮಾನವನನ್ನು ನಾಶಗೊಳಿಸುತ್ತವೆ. ಅವುಗಳನ್ನು ಸುಜ್ಞಾನದಿಂದ ಪಳಗಿಸಬೇಕು ಎಂದು ಅಕ್ಕ ನುಡಿದಿದ್ದಾಳೆ.

ವಚನ ಸಾಹಿತ್ಯದ ಆದರ್ಶ ಮಹಿಳೆಯಾಗಿ ಎದ್ದು ನಿಂತ ಅಕ್ಕಮಹಾದೇವಿಯ ವಚನಗಳನ್ನು ಇಡಿಯಾಗಿ ನೋಡಿದಾಗ ಅವುಗಳಲ್ಲಿ ಎದ್ದು ಕಾಣುವ ಅಂಶಗಳೆಂದರೆ ಅವಳ ವೈಯುಕ್ತಿಕ ಹೋರಾಟ, ಅವಳ ವಚನಗಳಲ್ಲಿ ಸಮಾಜವನ್ನು ಕುರಿತಂತೆ ವಿಮರ್ಶೆ, ಟೀಕೆಗಳು ಬಹು ಅಪರೂಪವಾಗಿ ಕಾಣಿಸಿಕೊಳ್ಳುತ್ತವೆ. ಸಾಮಾಜಿಕ ಬದುಕನ್ನು ಗಮನಿಸದಿದ್ದರು ಅವಳು ಅವುಗಳಿಗೆ ಪ್ರತಿಕ್ರಿಯಿಸಿದ ರೀತಿಯೇ ಭಿನ್ನವಾಗಿವೆ. ಸಮಾಜದ ವ್ಯವಸ್ಥೆಯನ್ನು ತಿರಸ್ಕರಿಸಿ, ಗಂಡ ಕೌಶಿಕ ರಾಜನನ್ನು ಬಿಟ್ಟು ತನ್ನ ಪತಿ ಚೆನ್ನಮಲ್ಲಿಕಾರ್ಜುನ ಎಂದು ಹುಡುಕಿಕೊಂಡು ಹೋದ ಅಕ್ಕಮಹಾದೇವಿ ತನ್ನ ವಚನಗಳಲ್ಲಿ "ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ " ಎಂದು ಸಾಂಸಾರಿಕ ಜೀವನದ ಬಗ್ಗೆ ತನ್ನ ಗೌರವವನ್ನು ತಿಳಿಸಿದ್ದಾಳೆ. ಆ ಕಾಲದಲ್ಲಿ ಆತ್ಮ ಸಾಧನೆಯು ಎಲ್ಲರಿಗೂ ತೆರೆದ ಬಾಗಿಲು ಹಾಗಾಗಿ ಸನ್ಯಾಸ ಸ್ವೀಕರಿಸಬೇಕೆಂದು ಯಾವ ವಚನಕಾರರು ಭೋದಿಸಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ಅಕ್ಕಳ ವಿಶಿಸ್ಟ ವರ್ತನೆಯು ಅಂದಿನ ಸಮಾಜಕ್ಕೆ ಅರ್ಥವಾಗದೆ ಟೀಕೆಗೆ ಗುರಿಯಾಗಬೇಕಾಯಿತು.




   


  

      

No comments:

Post a Comment