Friday, 21 April 2017

ಪಂಚಾಂಗ - ಜ್ಯೋತಿಷ ಶಾಸ್ತ್ರ, ಪುರಾಣ - ಪುಣ್ಯ ಕಥೆಗಳಲ್ಲಿ ಅಕ್ಷಯ ತೃತೀಯ


ಆಡುಮಾತಿನಲ್ಲಿ "ಅಕ್ಷತದಿಗೆ" ಎಂದು ಕರೆಸಿಕೊಳ್ಳುವ 'ಅಕ್ಷಯತೃತೀಯ'ದ ದಿನ ಪುರಾತನ ಕಾಲದಿಂದಲೂ ವಿಶೇಷತೆಯನ್ನು ಪಡೆಯುತ್ತಾ ಬಂದಿದೆ. ಈ ದಿನ ಜನರು ಆಸ್ತಿ, ಚಿನ್ನಬೆಳ್ಳಿ ಕೊಳ್ಳಲು, ಒಳ್ಳೆಕೆಲಸ ಪ್ರಾರಂಭ ಮಾಡಲು ಒಳ್ಳೆಯ ದಿನ ಎಂದು ಹೇಳುವರು. ಈ ಅಕ್ಷಯ ತೃತೀಯ ದಿನ ಚಿನ್ನ, ಬೆಳ್ಳಿ, ವಜ್ರ, ರತ್ನಾಭರಣ, ಭೂಮಿ ಇವುಗಳ ಖರೀದಿ, ಆಸ್ತಿಯಲ್ಲಿ ಹೂಡಿಕೆಗೆ ಪ್ರಶಸ್ತವೆನಿಸಿದೆ ಮತ್ತು ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಈ ದಿನ  ಕುಬೇರ, ವಿಷ್ಣು, ಲಕ್ಷ್ಮಿ ಇವರುಗಳ ಪೂಜೆ ಮಾಡಲಾಗುತ್ತದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿ ಯನ್ನು ಪೂಜಿಸಿದರೆ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಈ ದಿನದಂದು ಬೆಳ್ಳಿ ಬಂಗಾರದ ಅಂಗಡಿಗಳಲ್ಲಿ ವ್ಯಾಪಾರ ತುಂಬಾ ಜೋರಾಗಿ ನಡೆಯುತ್ತದೆ. ಅಕ್ಷಯ ತೃತೀಯದಂದು ಶುಭಕಾರ್ಯಗಳನ್ನು ಮಾಡಿದರೆ ಹಾಗೂ ದಾನ ಮಾಡಿದರೆ ಹೆಚ್ಚಿನ ಪ್ರತಿಫಲ ಉಂಟಾಗುವುದೆಂಬ ಪ್ರತೀತಿಯಿದೆ. ನಮ್ಮ ಹೆಣ್ಣುಮಕ್ಕಳು ಒಡವೆಯನ್ನು ಖರೀದಿಸಲು ತುಂಬಾ ಇಷ್ಟ ಪಡುತ್ತಾರೆ. ಏಕೆಂದರೆ ಅದು ಕೂಡ ಅಪತ್ಕಾಲಕ್ಕೆ ನೆರವಾಗುವ ಆಸ್ತಿಯಲ್ಲವೇ. ಹಾಗೇ ಹೆಣ್ಣಿನ ಸೌದರ್ಯದ ಮತ್ತು ಹೆಮ್ಮೆಯ ಪ್ರತೀಕ ಈ ಒಡವೆ. ಅಲ್ಲದೇ ಈ ನಂಬಿಕೆ ತಲಾಂತರಗಳಿಂದ ಇಷ್ಟು ಗಟ್ಟಿಯಾಗಿ ಜನರು ನಂಬಿಕೊಂಡು ಬಂದಿದ್ದಾರೆಂದರೆ ಏನು ಅರ್ಥ?  ಆ ದಿನದ ಮಹಿಮೆಯಿಂದ  ನಂಬಿದವರ ಜೀವನದಲ್ಲಿ ಒಳ್ಳೆಯದು ಆಗಿದೆ ಎಂದೇ ಅರ್ಥ. ಅಲ್ಲವೇ? ನಮ್ಮ ಭಾರತೀಯ ಪಂಚಾಗ ಸುಮ್ಮನೆ ಬಂದಿಲ್ಲ ಅದು ಒಂದು ವಿಜ್ಞಾನ. ಎನ್ನುವುದಕ್ಕೆ ಇದು ಕೂಡ ಒಂದು ಸಾಕ್ಷಿ.





ವೈಶಾಖ ಮಾಸದ - ಶುಕ್ಲ ಪಕ್ಷದ - ಮೂರನೇ ದಿನವೇ 'ಅಕ್ಷಯ ತೃತೀಯ'. ಹಿಂದುಗಳ ಪವಿತ್ರ ದಿನಗಳಲ್ಲಿ ಅತ್ಯಂತ ಪವಿತ್ರವಾದ ನಾಲ್ಕು "ಪೂರ್ಣಮುಹೂರ್ತ" ಗಳಲ್ಲಿ  (ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ ಹಬ್ಬದ ದಿನಗಳು) ಇದು ಒಂದು. ಈ ದಿನಗಳಲ್ಲಿ  ಒಳ್ಳೆಯ ಕೆಲಸ ಮಾಡಲು  ಪಂಚಾಂಗ ನೋಡುವ ಅವಶ್ಯಕತೆ ಇರುವುದಿಲ್ಲ ಎಂದು ನಮ್ಮ ಹಿರಿಯರು ಹೇಳಿದ ನೆನಪು. ಈ ದಿವಸ ಸಾಮಾನ್ಯವಾಗಿ ಯಾವುದೇ ಒಳ್ಳೆ  ಕೆಲಸವನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಈ ದಿವಸ ಜೀವನದ ಹೊಸ ಉದ್ಯೋಗಗಳನ್ನು ಪ್ರಾರಂಭಿಸುವುದು ಶುಭಕರ. ಈ ತೃತೀಯ ತಿಥಿಯ ಜೊತೆ ರೋಹಿಣಿ ನಕ್ಷತ್ರವಿದ್ದರೆ, ಮಹಾ ಪುಣ್ಯಕರವೆಂದು ಪುರಾಣದಲ್ಲಿದೆ.

ಪಂಚಾಂಗದಲ್ಲಿ ಅಕ್ಷಯ ತೃತೀಯ 
ಅಕ್ಷಯ ತೃತೀಯದಂದು  ಸೂರ್ಯ ಮತ್ತು ಚಂದ್ರರು ಏಕಕಾಲದಲ್ಲಿ ತಮ್ಮ ತಮ್ಮ ಶಕ್ತಿಯುತಸ್ಥಾನ - ಉಚ್ಚರಾಶಿಯಲ್ಲಿ (ಸೂರ್ಯ - ಮೇಷರಾಶಿಯಲ್ಲಿ ಮತ್ತು ಚಂದ್ರ - ವೃಶಭಾರಾಶಿಯಲ್ಲಿ) ಇರುವದರಿಂದ ಎಲ್ಲಾ ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾಗಿರುತ್ತದೆ. ಸೂರ್ಯನು  ಆತ್ಮ ಮತ್ತು ದೇಹ ಪ್ರತಿಬಿಂಬಿಸಿದರೆ, ಚಂದ್ರನು  ಮನಸ್ಸುಮತ್ತು ಬುಧ್ಧಿ ಮೇಲೆ ಪ್ರಭಾವ ಬೀರುತ್ತಾನೆ. ಈ ರೀತಿಯಾಗಿ  ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಎಂದು ಹೇಳುವರು.

ಅಕ್ಷಯ ತೃತೀಯ ಹಬ್ಬದ ದಿನವನ್ನ ಹೇಗೆ ಲೆಕ್ಕ ಹಾಕುತ್ತಾರೆ.
ಈ ಹಬ್ಬವನ್ನ ಚಂದ್ರ ಮತ್ತು ಸೂರ್ಯ ಇಬ್ಬರೂ ತಮ್ಮ ತಮ್ಮ ಉಚ್ಚ ರಾಶಿಯಲ್ಲಿ ಇರುವ ದಿನದಂದು ಆಚರಿಸುತ್ತಾರೆ. ಸೂರ್ಯನು ತನ್ನ ಉನ್ನತ ಸ್ತಾನವಾದ ಮೇಶರಾಶಿಯಲ್ಲಿ - ಅಂದರೆ ಸೌರಮಾನ ಲೆಕ್ಕದ ಮೇಷ ಮಾಸದಲ್ಲಿ - ಪೂರ್ತಿ 30 ದಿನಗಳು ಇರುತ್ತಾನೆ. ಸೂರ್ಯ ತಿಂಗಳಿಗೊಮ್ಮೆ ರಾಶಿ ಬದಲಾಯಿಸಿದರೆ, ಚಂದ್ರ ದಿನಕ್ಕೊಮ್ಮೆ ನಕ್ಷತ್ರ ಬದಲಾಯಿಸುತ್ತಾನೆ (ಅಂದಾಜು ಎರಡೂವರೆ ದಿನಕ್ಕೊಂದು ರಾಶಿ). ಹಾಗಾಗಿ ಈ ಮೇಷ ಮಾಸದ ಯಾವ ದಿನದಂದು ಚಂದ್ರ ತನ್ನ ಉಚ್ಚ ಸ್ತಾನದಲ್ಲಿ ಇರುತ್ತಾನೋ ಅಂದೇ ಈ ಅಕ್ಷಯ ತೃತೀಯ. ಚಾಂದ್ರಮಾನ ಲೆಕ್ಕದ ಮೂಲಕ ನೋಡಿದರೆ ಈ ದಿನ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನ ಆಗಿರುತ್ತದೆ. 




ಪುರಾಣ ಪುಣ್ಯ ಕಥೆಗಳಲ್ಲಿ ಅಕ್ಷಯ ತೃತೀಯದ ವಿಶೇಷತೆ:
  • ಈ ದಿನ ಹಲವು  ಮಹತ್ಕಾರ್ಯಗಳು ಶುರುವಾದ ದಿನ 
    • ಕೃತಯುಗ (ಸತ್ಯ ಯುಗ) ಶುರುವಾದ ದಿನ ಎಂದು ಹೇಳಲಾಗುತ್ತದೆ.
    • ವೇದವ್ಯಾಸರು ಗಣಪತಿ ಆಶೀರ್ವಾದ ಪಡೆದು  ಮಹಾಭಾರತ ಬರೆಯಲು ಪ್ರಾರಂಭಿಸಿದ ದಿನ.
    • ಗಂಗಾ ಮಾತೆ ಕೈಲಾಸದಿಂದ ಭೂಮಿಗೆ ಇಳಿದ ದಿನ ಎಂದು ಹೇಳಲಾಗುತ್ತದೆ.
  • ಈ ದಿನ ಹಲವು ಮಹಾತ್ಮರು ಹುಟ್ಟಿದ ದಿನ 
    • ಜಗಜ್ಯೋತಿ ಬಸವಣ್ಣ ಹುಟ್ಟಿದ ದಿನ.
    • ಬಲರಾಮ ಜಯಂತಿ ಅನ್ನೂ ಇಂದು ಆಚರಿಸಲಾಗುತ್ತದೆ. 
    • ವಿಷ್ಣು ಪರಶುರಾಮನಾಗಿ ಅವತಾರವೆತ್ತಿದ ದಿನ.  
  • ಇನ್ನೂ ಹಲವು ಮಹತ್ ಘಟನೆಗಳು ಈ ದಿನ ನಡೆದಿವೆ ಎಂದು ಪುರಾಣಗಳು ಹೇಳುತ್ತವೆ 
    •  ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದದಿನ.
    • ಪಾಂಡವರು ವನವಾಸದಲ್ಲಿದ್ದಾಗ ಕೃಷ್ಣನ ಆದೇಶದಂತೆ ಸೂರ್ಯನನ್ನು ಪ್ರಾರ್ಥಿಸಿ, ದ್ರೌಪದಿ ಅಕ್ಷಯ ಪಾತ್ರೆಯನ್ನು ಪಡೆದಿದ್ದು ಈ ಅಕ್ಷಯ ತೃತೀಯದ ದಿನವೇ.
    • ಪಾಂಡವರು ತಮ್ಮ ವನವಾಸ, ಅಜ್ಞಾತವಾಸದ ನಂತರ ಶಸ್ತ್ರಾಸ್ತ್ರಗಳನ್ನು ಪುನಃ ಪಡೆದ ದಿನ.
    • ಈ ದಿನ ವಿಷ್ಣು ಮತ್ತು ಲಕ್ಷ್ಮಿ ಗಂಗಾಸ್ನಾನ ಮಾಡಿ, ಗಂಗೆಯನ್ನು ಪುಜಿಸಿದ್ದರೆಂದು. ಅಂದಿನಿಂದ ಗಂಗಾ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆ ಎಂಬ ರೂಢಿ ಬಂದಿತು ಎಂದು ಹೇಳಲಾಗುತ್ತದೆ.
    • ಕೃಷ್ಣನು  ಕುಚೇಲನನ್ನು ಸತ್ಕರಿಸಿದ ಪುಣ್ಯ ದಿನ.
ಈ ಎಲ್ಲ ವಿಶೇಷತೆಗಳು ನಡೆದದ್ದು ಈ ಅಕ್ಷಯ ತೃತೀಯ ದಿನದಂದೇ ಎಂದು ಪುರಾಣಗಳ ಕಥೆಗಳು ಹೇಳುತ್ತವೆ. ಈ ದಿನ ಅಕ್ಷಯ ತೃತೀಯ ಆಚರಿಸಿದವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆಶಿಸೋಣ. ಎಲ್ಲರ ಸಂಪತ್ತು ಅಕ್ಷಯವಾಗಲಿ. ಎಲ್ಲರಿಗೂ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು.





ಜ್ಯೋತಿಷ ಶಾಸ್ತ್ರದ ಮೂಲಕ ಅಕ್ಷಯ ತೃತೀಯ:  

ಅಕ್ಷಯ ತೃತೀಯ  ಯಾವ ನಕ್ಷತ್ರದಲ್ಲಿ ಬಂದರೆ ಹೆಚ್ಚು ಶ್ರೇಷ್ಠ ?
ಈ ಹಬ್ಬ 'ತೃತೀಯ ತಿಥಿ' (ತದಿಗೆಯ ದಿನ) ಯಲ್ಲಿ ಮತ್ತು 'ವೃಷಭ ರಾಶಿ'ಯ ದಿನ ಆಚರಣೆ ಮಾಡುತ್ತಾರೆ ಅಂತ ತಿಳೀತು. ಆದರೆ ಈ ವೃಷಭ ರಾಶಿ ಮತ್ತು ತೃತೀಯ ತಿಥಿ ಎರಡೂ ಜೊತೆಯಲ್ಲಿ ಬರುವಾಗ ಅಂದು ಮೂರು ನಕ್ಷತ್ರಗಳಲ್ಲಿ (ಕೃತಿಕಾ, ರೋಹಿಣಿ, ಮೃಗಶಿರ) ಯಾವುದಾದರೊಂದು ಬರುವ ಸಾಧ್ಯತೆ ಇದೆ.  ಅಕ್ಷಯ ತೃತೀಯ, ಶುಕ್ಲ ಪಕ್ಷದ 'ಮೂರನೇ' ದಿನ / 'ತೃತೀಯ ತಿಥಿ' ಯಲ್ಲಿ ಬರುತ್ತೆ ಅಂತ ಹೆಸರೇ ಹೇಳುತ್ತೆ.

ಟಿಪ್ಪಣಿ 1 :  7 ಗ್ರಹಗಳು 360 ಡಿಗ್ರಿ ವೃತ್ತದ ಯಾವ ಯಾವ ಡಿಗ್ರಿ ಯಲ್ಲಿ ಉಚ್ಚರಾಗಿರುತ್ತಾರೆ
  • ಸೂರ್ಯ : ಮೇಷದ 19ನೇ ಡಿಗ್ರಿ (ಅಂದರೆ 18°00' - 18°59')(ಪೂರ್ಣ ವೃತ್ತದ 19ನೆ ಡಿಗ್ರಿ);
  • ಚಂದ್ರ   : ವೃಶಭದ 3ನೇ ಡಿಗ್ರಿ; (ಪೂರ್ಣ ವೃತ್ತದ 33ನೆ ಡಿಗ್ರಿ);
  • ಗುರು    : ಕಟಕ ರಾಶಿಯ 15ನೆ ಡಿಗ್ರಿ; (ಪೂರ್ಣ ವೃತ್ತದ 105ನೆ ಡಿಗ್ರಿ);
  • ಬುಧ    : ಕನ್ಯಾ ರಾಶಿಯ 15ನೆ ಡಿಗ್ರಿ; (ಪೂರ್ಣ ವೃತ್ತದ 165ನೆ ಡಿಗ್ರಿ);
  • ಶನಿ     : ತುಲಾ ರಾಶಿಯ 21ನೆ ಡಿಗ್ರಿ; (ಪೂರ್ಣ ವೃತ್ತದ 201ನೆ ಡಿಗ್ರಿ);
  • ಮಂಗಳ : ಮಕರ ರಾಶಿಯ 28ನೆ ಡಿಗ್ರಿ; (ಪೂರ್ಣ ವೃತ್ತದ 298ನೆ ಡಿಗ್ರಿ);
  • ಶುಕ್ರ    : ಕುಂಭ ರಾಶಿಯ 27ನೆ ಡಿಗ್ರಿ; (ಪೂರ್ಣ ವೃತ್ತದ 327ನೆ ಡಿಗ್ರಿ);

ಟಿಪ್ಪಣಿ 2: ಡಿಗ್ರಿ ಲೆಕ್ಕಾಚಾರ 
  1. ಒಂದು ಪೂರ್ಣ ವೃತ್ತ = 360 ಡಿಗ್ರಿ. 
  2. ಈ 360 ಡಿಗ್ರಿ ವೃತ್ತವನ್ನ 12 (ರಾಶಿಗಳು) ಭಾಗಗಳಾಗಿ ಮಾಡಿದಾಗ ಒಂದೊಂದು ರಾಶಿಗೆ 30 ಡಿಗ್ರಿ ಆಗುತ್ತೆ.
  3. ಈ 360 ಡಿಗ್ರಿ ವೃತ್ತವನ್ನ 27 ನಕ್ಷತ್ರಗಳಿಗೆ ಹಂಚಿದರೆ ಒಂದೊಂದು ನಕ್ಷತ್ರಕ್ಕೆ 13° 20' ಬರುತ್ತೆ. 
  4. 27 ನಕ್ಷತ್ರಗಳನ್ನ 12 ರಾಶಿಗಳಿಗೆ ಹಂಚಿದರೆ ಒಂದೊಂದು ರಾಶಿಗೆ ಎರಡೂವರೆ ನಕ್ಷತ್ರಗಳು ಬರುತ್ತವೆ.
  5. ಒಂದು ನಕ್ಷತ್ರದಲ್ಲಿ ನಾಲ್ಕು ಪಾದಗಳಿರುತ್ತವೆ ಹಾಗಾಗಿ ಒಂದೊಂದು ಪಾದ 3° 20' ಜಾಗವನ್ನಾಕ್ರಮಿಸುತ್ತೆ.
  6. ಒಂದು ರಾಶಿಗೆ ಎರಡೂವರೆ ನಕ್ಷತ್ರಗಳಾದ್ದರಿಂದ ಮತ್ತು ಒಂದು ನಕ್ಷತ್ರಕ್ಕೆ 4 ಪಾದಗಳಾದ್ದರಿಂದ ಒಂದು ರಾಶಿಗೆ 10 ಪಾದಗಳು. ಇದು 13° 20' ಆಗುತ್ತೆ .    
ಉದಾಹರಣೆ:   
ಮೇಷರಾಶಿಯಲ್ಲಿ ನ 10 ಪಾದ (ಎರಡೂವರೆ ನಕ್ಷತ್ರ) ಗಳು = 4 ಅಶ್ವಿನಿ  + 4 ಭರಣಿ + 2 ಕೃತ್ತಿಕಾ = 4*3° 20' + 4*3° 20'+ 2*3° 20' = 30ಡಿಗ್ರಿ

ಮೇಲಿನ ಉದಾಹರಣೆಯಲ್ಲಿ ಹೇಳಿದಂತೆ, ಮೇಷ ರಾಶಿಯಲ್ಲಿ ಅಶ್ವಿನಿ ನಕ್ಷತ್ರ, ಭರಣಿ ನಕ್ಷತ್ರ ಮತ್ತು ಕೃತಿಕಾದ ಮೊದಲ ಎರಡು ಪಾದಗಳು ಬರುತ್ತವೆ. ವೃಶಭ ರಾಶಿಯಲ್ಲಿ ಕೃತಿಕಾ ನಕ್ಷತ್ರ ದ ಮೂರು ಮತ್ತು ನಾಲ್ಕನೇ ಪಾದಗಳು ಮತ್ತು ರೋಹಿಣಿ, ಮೃಗಶಿರ ನಕ್ಷತ್ರಗಳು ಬರುತ್ತವೆ. ನಾವು ಮಾತಿನಲ್ಲಿ ಸೂರ್ಯ ಮೇಷರಾಶಿಯಲ್ಲಿ ಉಚ್ಚನಾಗಿರುತ್ತಾನೆ ಅಂತ ಹೇಳಿದರೂ,  ಇನ್ನೂ ಆಳಕ್ಕಿಳಿದು ನೋಡಿದರೆ ಈ ಸೂರ್ಯ ಮೇಷ ರಾಶಿಯ ಭರಣಿ  ನಕ್ಷತ್ರ (13° 20' ರಿಂದ 26° 40') ದಲ್ಲಿ  ಮಾತ್ರ ನಿಜವಾಗಿ ಉಚ್ಚ (19 ಡಿಗ್ರಿ - ಭರಣಿ ೩ನೆ ಪಾದ)  ನಾಗಿರುತ್ತಾನೆ ಅಂತ ತಿಳಿಯುತ್ತೆ.

ಸರಳೀಕರಿಸಿ ನಾವು ಚಂದ್ರನು ವೃಶಭರಾಶಿಯಲ್ಲಿ ಉಚ್ಚನಾಗಿರುತ್ತಾನೆ ಅಂತ ಹೇಳಿದರೂ, ಸರಿಯಾಗಿ ಲೆಕ್ಕ ಹಾಕಿದರೆ ಈ ಚಂದ್ರ ವೃಷಭ ರಾಶಿಯ ಕೃತಿಕಾ ನಕ್ಷತ್ರದ 3ನೇ ಪಾದದಲ್ಲಿ ತನ್ನ ನಿಜ ಉಚ್ಚ ಸ್ತಾನದಲ್ಲಿರುತ್ತಾನೆ. ಹಾಗಾಗಿ ನಮ್ಮ ಕೆಲ ಪುರಾಣಗಳಲ್ಲೂ ಕೃತಿಕ ನಕ್ಷತ್ರದಲ್ಲಿ ಬಂದ ಅಕ್ಷಯ ತೃತೀಯ ಹಬ್ಬ ಅತಿ ವಿಶೇಷ ಎನ್ನುತ್ತಾರೆ.

ಇನ್ನೊಂದು ಪುರಾಣ ಕತೆಯ ಮೂಲಕ ಯೋಚನೆ ಮಾಡೋದಾದರೆ, ಚಂದ್ರನಿಗೆ 27 ಜನ  ( ಇವೇ 27 ನಕ್ಷತ್ರಗಳು) ಹೆಂಡತಿಯರು ಅನ್ನುತ್ತಾರೆ. ಚಂದ್ರ ತನ್ನ ಪ್ರತಿ ಹೆಂಡತಿಯ ಜೊತೆ ಒಂದೊಂದು ದಿನ ಇರುತ್ತಾನೆ ಎನ್ನುವ ಕತೆ ಇದು. ಈ 27 ಹೆಂಡತಿಯರಲ್ಲಿ ರೋಹಿಣಿ ಚಂದ್ರನಿಗೆ ಪ್ರಿಯವಾದ ಹೆಂಡತಿ ಅಂತೆ. ಹಾಗಾಗಿ ಕೆಲ ಕತೆಗಳು ರೋಹಿಣಿ ನಕ್ಷತ್ರದ ದಿನ ಬಂದ (ಅಂದರೆ ಚಂದ್ರ ರೋಹಿಣಿ ನಕ್ಷತ್ರದಲ್ಲಿದ್ದಾಗ)  ಅಕ್ಷಯ ತೃತೀಯ ಶ್ರೇಷ್ಠ ಅನ್ನುವ ನಂಬಿಕೆ ಹೊಂದಿದ್ದಾರೆ. ಸೋಮವಾರ ಚಂದ್ರನ ವಾರವಾದ್ದರಿಂದ, ಈ ತದಿಗೆಯಂದು ರೋಹಿಣಿ ನಕ್ಷತ್ರವಿದ್ದು ಸೋಮವಾರವಾಗಿದ್ದರೆ ಇನ್ನೂ ಹೆಚ್ಚು ಶ್ರೇಷ್ಠ ಅನ್ನುವ ನಂಬಿಕೆ ಇದೆ.                

(ಚಿತ್ರಗಳು;ಗೂಗಲ್ಲಿನಿಂದ)

No comments:

Post a Comment