Saturday 14 October 2017

ದೀಪಾವಳಿಯ ದೇವೀರಮ್ಮ,,,,, ದೇವೀರಮ್ಮನ ಗುಡ್ಡ

ದೀಪಾವಳಿ ಹಬ್ಬ ಅಂದರೆ ನಮಗೆ ಹಬ್ಬಗಳ ಹಬ್ಬ ಅಂತ ನನಗನ್ನಿಸುತ್ತೆ. ಮನೆಗಳಲ್ಲಿ ಚಿಕ್ಕವರಿಂದ ಹಿಡಿದು ಅಜ್ಜಿ ತಾತನ ವರೆಗಿನ ಎಲ್ಲರಿಗು ಸಂತಸ  ಹುಮ್ಮಸ್ಸು ಕೊಡುವ ಹಬ್ಬ ಎಂತಲೇ ಹೇಳಬಹುದು. ಬೆಳಕಿನ ಹಬ್ಬ. ನಾನು ಈ ಹಬ್ಬಕ್ಕೆ ಹಬ್ಬಗಳ ಹಬ್ಬ ಅಂತ ಯಾಕೆ ಅನ್ನಿಸುತ್ತೆ ಅಂದ್ರೆ ಈ ದೀಪಾವಳಿ ಹಬ್ಬದಲ್ಲಿ  ಬಲೀಂದ್ರ ಪೂಜೆ, ಹಿರಿಯರ ಪೂಜೆ, ಲಕ್ಷ್ಮಿ ಪೂಜೆ, ದೇವೀರಮ್ಮನ ಪೂಜೆ, ಕೆರಕನ ಪೂಜೆ ಹೀಗೆ ಹಲವಾರು ದೇವರುಗಳಿಗೆ ಹಲವಾರು ರೀತಿಯ ಸಿಹಿ ಮತ್ತು ಖಾರದ ತಿಂಡಿಗಳನ್ನು ಮಾಡಿ ಪೂಜೆ ಸಲ್ಲಿಸುವ ವಾಡಿಕೆ ಇದೆ.  ಅದಕ್ಕಾಗಿ ಇದನ್ನು ಹಬ್ಬಗಳ ಹಬ್ಬ ಅಂದರೆ ತಪ್ಪಾಗಲ್ಲ ಅಲ್ವ. ಈ ಎಲ್ಲ ಪೂಜೆಗಳನ್ನ  ಸುಮ್ನೆ ಮಾಡೋಲ್ಲ ಅದೆಲ್ಲದಕ್ಕೂ ಕಾರಣಗಳು ಇವೆ. ಬಲೀಂದ್ರ ಪೂಜೆ ಮಾಡೋದು ಬಲಿ ಚಕ್ರವರ್ತಿಗೆ ಭೂಮಿಗೆ ಸ್ವಾಗತ ಮಾಡುವ ಮತ್ತು ಆತನನ್ನು  ಸಂತಸ ಪಡಿಸಲು ಮತ್ತು ಹಿರಿಯರ ಪೂಜೆ ಮಾಡೋದು ನಮ್ಮ ಪಿತೃಗಳ ಆತ್ಮಕ್ಕೆ ಶಾಂತಿ ಸಿಗಲೆಂದು. ಲಕ್ಷ್ಮಿ ಪೂಜೆ ಮಾಡೋದು ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಗಿರಲೆಂದು, ಇನ್ನೊಂದು ಈ ದೇವೀರಮ್ಮ ಪೂಜೆ.  ನಾನು ಹಿಂದೆ ಬರೆದಿರುವ ಪೂಜೆಗೆ ನಾನು ಚಿಕ್ಕವಳಿದ್ದಾಗ ಒಂದು ರೀತಿಯ ಸಮಾಧಾನಕರ ಉತ್ತರ ಸಿಗುತ್ತಿತ್ತು ಆದ್ರೆ ಈ ದೇವೀರಮ್ಮನ ಪೂಜೆ ಯಾಕೆ ಮಾಡ್ತೀವಂತ ನಂಗೆ ಗೊತ್ತಿರಲಿಲ್ಲ.  ಈಗ ಸ್ವಲ್ಪ ಅದರ ಬಗ್ಗೆ ಗೊತ್ತಾದ್ದರಿಂದ ಈ ದೇವೀರಮ್ಮ ಪೂಜೆ ಬಗ್ಗೆ ಬರೀತಿದೀನಿ.  ಈ ದೇವೀರಮ್ಮ ಅಂದ್ರೆ ಪಾರ್ವತಿ.  ಪಾರ್ವತಿಯ ಹಲವು ಅವತಾರಗಳಲ್ಲಿ ಈ ದೇವೀರಮ್ಮನ ಅವತಾರವು ಒಂದು.



ದೀಪಾವಳಿಯಂದು ಮನೆಗಳಲ್ಲಿ ದೇವೀರಮ್ಮನ ಪೂಜೆ :-  ನಮ್ಮ ಊರಿನ ಕಡೆ ಎಲ್ಲರ ಮನೆಗಳಲ್ಲಿ ದೀಪಾವಳಿ ಹಬ್ಬದಂದು ಎಳ್ಳಿನ ಚಿಗಣಿ ಮತ್ತು ಅಕ್ಕಿಯಿಂದ ಮಾಡಿದ  ತಮ್ಮಟದಲ್ಲಿ  ಎರೆಡೆರೆಡು ದೀಪಗಳ  ಆಕಾರವನ್ನು ಮಾಡಿ ಎಣ್ಣೆಯ ಬದಲು ಹಾಲನ್ನ ಮೀಸಲು ಕಟ್ಟಿ ಕಾಯಿಸಿದ ತುಪ್ಪವನ್ನು ಹಾಕಿ ಮದ್ಯದಲ್ಲಿ ಕಡ್ಲೆ ಬತ್ತಿಯನ್ನ ಇಟ್ಟು ಹೂ ಹಣ್ಣು ಕಾಯಿಗಳನ್ನ ಇಟ್ಟು ಪೂಜಿಸಿ ನಂತರ ಉತ್ತರ ದಿಕ್ಕಿಗೆ ಮುಖ ಮಾಡಿ ದೇವೀರಮ್ಮನಿಗೆ ಬೆಳಗುತ್ತಾರೆ. ವರ್ಷದಲ್ಲಿ ಒಮ್ಮೆ ಈ  ರೀತಿ ಪೂಜೆ ಮಾಡಿದರೆ ದೇವೀರಮ್ಮ ನಮ್ಮನ್ನ ವರ್ಷವಿಡೀ ಕೈ ಹಿಡಿದು ಕಾಪಾದುತ್ತಾಳೆ ಅನ್ನೋ ನಂಬಿಕೆ ನಮ್ಮೂರುಗಳಲ್ಲಿ ಇದೆ.



ಈ ಮೇಲಿನ ಪೂಜೆ ಬಗ್ಗೆ ಹೇಳಿದ ಮೇಲೆ ಈ ದೇವೀರಮ್ಮ ಯಾರು ಅನ್ನೋ ಪ್ರಶ್ನೆ ನಮ್ಮ ತಲೆಯಲ್ಲಿ ಬರೋದು ಸಹಜ ಅಲ್ವ. ಹೌದು ನಂಗು ಈ ಪ್ರಶ್ನೆ ನಾನು ಚಿಕ್ಕವಳಿದ್ದಾಗ ಹಬ್ಬದ ದಿನ ಬರ್ತಿತ್ತು. ಅಲ್ಲದೆ ನಮ್ಮೂರಿನ ಕಡೆ ದೀಪಾವಳಿಯಲ್ಲಿ  ದೇವೀರಮ್ಮನ ಗುಡ್ಡಕ್ಕೆ ಹೋಗಿ ದೇವೀರಮ್ಮನ ದರ್ಶನ ಮತ್ತು ದೀಪೋತ್ಸವ ನೋಡುವ ಪಧ್ಧತಿ ಇದೆ. ಮನೆಗಳಲ್ಲಿ ಈ  ಚಿಗಣಿ ಮತ್ತು ತಮ್ಟದ ದೀಪಗಳನ್ನ ಬೆಳಗುವ ಮೂಲಕ  ಆ ಬೆಟ್ಟಕ್ಕೆ, ದೆವೀರಮ್ಮನಿಗೆ ಇಲ್ಲಿಂದಲೇ ಪೂಜೆ ಸಲ್ಲಿಸುತ್ತೇವೆ ಅನ್ನೋ ನಂಬಿಕೆ ನಮ್ಮಲ್ಲಿ ಇದೆ.  ಆಗ ಅದರ ಬಗ್ಗೆ ಯೋಚಿಸೋದಕ್ಕಿಂದ ಪೂಜೆ ಮುಗಿದು ಹೊಟ್ಟೆ ತುಂಬಿಸಿಕೊಳೋ  ಕಡೆ,  ಹೊಸ ಬಟ್ಟೆ, ಪಟಾಕಿಗಳ  ಕಡೆ ನನ್ನ ಗಮನ ಇರ್ತಿತ್ತು.  ಯಾರ್ಯಾರು ಮನೇಲಿ ಎಂತೆಂತಾ ಪಟಾಕಿ ಹೊಡಿತಾರೆ ಅನ್ನೋ ಕಡೆ ಜಾಸ್ತಿ ಸಡಗರ ಇರ್ತಿತ್ತು. 

ದೇವೀರಮ್ಮನ ಗುಡ್ಡದ ಕಥೆ :- 

ಈ ದೇವೀರಮ್ಮನ ಗುಡ್ಡ ಇರುವುದು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನ ಗಿರಿ ಸಾಲುಗಳಲ್ಲಿ ಚಂದ್ರ ದ್ರೋಣ ಪರ್ವತಕ್ಕೆ ಅಂಟಿಕೊಂಡಿದೆ.  ಈ  ದೇವೀರಮ್ಮ ಪಾರ್ವತಿಯ ಅವತಾರಗಳಲ್ಲಿ ಒಂದು ಅವತಾರವಾಗಿದೆ. ಮಹಿಷಾಸುರನ ಸಂಹಾರದ ನಂತರ ತನ್ನ ವಿಶ್ವ ರೂಪಗಳನ್ನು ಜಗತ್ತಿಗೆ ತೋರಿಸಿ ಶಾಂತ ರೂಪ ತಳೆದು ಈ ದೇವೀರಮ್ಮನ ಅವತಾರದಲ್ಲಿ ಈ ದೇವೀ ಗುಡ್ಡಕ್ಕೆ ಬಂದು ನೆಲೆಸುತ್ತಾಳೆ  ಎಂಬ ನಂಬಿಕೆ ಇದೆ. 

ಇನ್ನೊಂದು ಕಥೆಯಲ್ಲಿ ಆಗಿನ ಕಾಲದಲ್ಲಿ ಅಲ್ಲಿ ಇದ್ದಂಥಹ ಸಂತರುಗಳಾದ ದತ್ತಾತ್ರೇಯ, ರುದ್ರಮುನಿ, ಮುಳ್ಳಯ್ಯ, ಸೀತಾಲಯ್ಯ, ಗಲ್ಲಹಳ್ಳಿ ಅಜ್ಜಯ್ಯ ಅವರುಗಳು ಈ ದೇವಿಗಿರಿ ಬೆಟ್ಟದಲ್ಲಿ ಬಂದು ನೆಲೆಸಲು ಕೇಳಿಕೊಳ್ಳುತ್ತಾರೆ ಎಂಬ ಪ್ರತೀತಿ ಇದೆ. 

ನರಕ ಚತುರ್ದಶಿ ಯಂದು ಮಾತ್ರ ಈ ದೇವಿಯ ಗುಡಿಯ ಬಾಗಿಲನ್ನು ತೆರೆದು ಪೂಜೆ ಸಲ್ಲಿಸಲಾಗುತ್ತದೆ. ಅಂದು ಇಲ್ಲಿ ದೀಪೋತ್ಸವ  ನಡೆಯುತ್ತದೆ. ಇದನ್ನ ನೋಡಲು ನಾಡಿನ ಹಲವಾರು ಕಡೆಗಳಿಂದ ಜನರು ಬರುತ್ತಾರೆ. ಹರಕೆ ಇರುವವರು ಚಪ್ಪಲಿಗಳನ್ನ ಹಾಕದೆ ಈ ಬೆಟ್ಟ ಹತ್ತುವರು.


 ದೇವೀರಮ್ಮನ ಗುಡ್ಡದ  ಕೆಳಗೆ ಇರುವ ದೇವೀರಮ್ಮನ ಗುಡಿ :-

















ದೇವೀರಮ್ಮನ ಗುಡ್ಡ :-  2017 ರ 


deveerammanabetta, images,
ದೇವೀರಮ್ಮನ ಗುಡ್ಡ  ಚಿಕ್ಕಮಗಳೂರು ಜಿಲ್ಲೆ:- 


Wednesday 11 October 2017

ದೀಪಾವಳಿ ಬಗೆಗಿನ ಪೌರಾಣಿಕ ಹಿನ್ನೆಲೆ ಮತ್ತು ಜನಪದ ಕಥೆಗಳು

ಭಾರತೀಯರಿಗೆ ಹಬ್ಬಗಳನ್ನ  ಆಚರಿಸುವುದೆಂದರೆ ಎಲ್ಲಿಲ್ಲದ ಸಡಗರ. ಬಹುಶಃ ಭಾರತದಲ್ಲಿ ಆಚರಿಸುವಷ್ಟು  ಹಬ್ಬಗಳು ಬೇರೆ ಯಾವ ದೇಶಗಳಲ್ಲೂ ಇಲ್ಲ ಅಂತ ಅನ್ನಿಸುತ್ತೆ.   ಈ ಹಬ್ಬಗಳನ್ನ ಮಾಡುವ  ಮೂಲಕ  ದುಡಿತದ ಜಂಜಾಟದಿಂದ ಒಂದಷ್ಟು ನೆಮ್ಮದಿಯನ್ನು ಕಾಣಬಯಸುತ್ತಾರೆ. ಬಂಧುಗಳು- ಗೆಳೆಯರೊಂದಿಗೆ ಸಂಭ್ರಮ ಆಚರಿಸಿ ಖುಷಿಯಿಂದ  ಕಾಲ  ಕಳೆಯುತ್ತಾರೆ. ಅಂತಹ ಹಬ್ಬಗಳಲ್ಲಿ ದೀಪಾವಳಿಯು ಒಂದು. ಪ್ರತಿಯೊಬ್ಬ ಭಾರತೀಯರೂ ದೀಪಾವಳಿಯ ಹಬ್ಬದ ಸಡಗರದಲ್ಲಿ ತೇಲುತ್ತಾರೆ. ದೀಪಾವಳಿ ಹಬ್ಬವನ್ನು ಪ್ರಪಂಚದಲ್ಲಿ ಯಾವ ಮೂಲೆಯಲ್ಲಿದ್ದರೂ ಬಹಳ ಸಂತೋಷ ಸಡಗರದಿಂದ ಆಚರಿಸುತ್ತಾರೆ. ದೀಪಾವಳಿ ಹಬ್ಬ ಬಂತೆಂದರೆ ಎಲ್ಲರಿಗೂ ಖುಷಿಯೋ ಖುಷಿ. ಅದರಲ್ಲಿ ಪ್ರಮುಖವಾಗಿ ಮಕ್ಕಳಿಗೆ, ಹೊಸ ಬಟ್ಟೆಗಳನ್ನು ತೊಟ್ಟು, ಸಿಹಿತಿಂಡಿಗಳನ್ನು ಹಂಚಿ, ಪಟಾಕಿಗಳನ್ನು ಸಿಡಿಸಿ ಬಹಳ ವಿಜೃಂಭಣೆಯಿಂದ ಈ ಹಬ್ಬ ಆಚರಿಸುತ್ತಾರೆ.

  ಅಂತರ್ಜಾಲ ಸಂಗ್ರಹ 


ಯಾವುದೇ ಹಬ್ಬವಾದರೂ ಅದಕ್ಕೆ ಒಂದು ಬಲವಾದ  ಪೌರಾಣಿಕ ಹಿನ್ನೆಲೆ ಇಲ್ಲವೇ ಜನಪದ ನಂಬಿಕೆಗಳು ಬಲವಾಗಿ ಪ್ರಭಾವ  ಬೀರಿರುತ್ತವೆ.  ಹಾಗೆ ನಾನು ದೀಪಾವಳಿ ಹಬ್ಬದ ಬಗ್ಗೆ  ಕೇಳಿ ಮತ್ತು ಓದಿ  ತಿಳಿದುಕೊಂಡ  ಕೆಲವು ಕಥೆಗಳನ್ನ ಇಲ್ಲಿ ಕಲೆಹಾಕುವ ಪ್ರಯತ್ನ ಮಾಡಿದ್ದೇನೆ. ಸದ್ಯಕ್ಕೆ ಗೊತ್ತಿರುವ ಎರೆಡು ಕಥೆಗಳು ಇಲ್ಲಿವೆ.


ಪೌರಾಣಿಕ ಹಿನ್ನೆಲೆ :-  ನರಕ ಚತುರ್ದಶಿಯ ಎರಡನೇ ದಿವಸ ಬಲಿಪಾಡ್ಯಮಿ.  ಇದರ ಪೌರಾಣಿಕ ಹಿನ್ನೆಲೆಯು ಹೀಗಿದೆ.
  ಅಂತರ್ಜಾಲ ಸಂಗ್ರಹ 
ಹಿರಣ್ಯಕಶಪುವಿನ ಪುತ್ರ ಪ್ರಹ್ಲಾದನು ಮಹಾ ವಿಷ್ಣುಭಕ್ತನಾಗಿದ್ದ. ಆತನ ಮಗ ವಿರೋಚನ ಈ  ವಿರೋಚನನ ಮಗನೇ ಬಲಿಚಕ್ರವರ್ತಿ. ಈತನು ಕೂಡಾ ವಿಷ್ಣುಭಕ್ತನೇ ಆದರೆ ರಾಕ್ಷಸ ವಂಶದಲ್ಲಿ ಹುಟ್ಟಿದವನಾದ್ದರಿಂದ  ಪ್ರವೃತ್ತಿಯನ್ನು ಬಿಡುತ್ತಿರಲಿಲ್ಲ. ಈತನ ರಾಜ್ಯವು ತುಂಬಾ ಸಮೃದ್ಧಿಯಿಂದ ಕೂಡಿತ್ತು.  ಋಷಿಗಳ ತಪಸ್ಸಿಗೆ ತಪೋಭಂಗ ಮಾಡುತ್ತಿದ್ದನು. ಯಜ್ಞಯಾಗಾದಿಗಳಿಗೆ ಅಡ್ಡಿಮಾಡುತ್ತಿದ್ದನು.  ಈತನನ್ನು ಸಂಹಾರಮಾಡಬೇಕೆಂದು   ಋಷಿಗಳು ವಿಷ್ಣುವಿನಲ್ಲಿ ಕೇಳಿಕೊಂಡರು.  ಹೋರಾಟ ನಡೆಸಿ ಆತನನ್ನು ಮಟ್ಟ ಹಾಕುವುದು ಕಷ್ಟ ಸಾಧ್ಯವಾಗಿತ್ತು.

ದಾನ ಮಾಡುವುದರಲ್ಲೂ ಎತ್ತಿದ ಕೈ ಈ ಬಳಿ ಚಕ್ರವರ್ತಿಯಾದಾಗಿತ್ತು. ಅದೇ  ಬಲಿಚಕ್ರವರ್ತಿಗೆ ಉರುಳಾಗಿ ಪರಿಣಮಿಸಿತು.  ಒಮ್ಮೆ ಅಶ್ವಮೇಧಯಾಗ ಮಾಡಬೇಕೆಂಬ ಆಲೋಚನೆ ಮಾಡುತ್ತಾನೆ . ಈ ಯಾಗ ಮಾಡುವಾಗ ಯಾರೇ ಏನೇ ಬೇಡಿದರೂ  ಅವರು ಕೇಳಿದ ವಸ್ತುಗಳನ್ನು ದಾನವಾಗಿ ಕೊಡಬೇಕೆಂಬ ನಿರ್ಧಾರವನ್ನು ಕೈಗೊಂಡನು.

ಶುಕ್ರಾಚಾರ್ಯ  ಋಷಿಮುನಿಯು  ಈತನಿಗೆ ಈ ಕೆಲಸ ಮಾಡಬೇಡ ಎಂಬುದಾಗಿ ಸಲಹೆಯಿತ್ತನು. ಆದರೆ ಋಷಿಮುನಿಯ ಈ ಮಾತಿಗೆ ಬಲಿಚಕ್ರವರ್ತಿ ಬೆಲೆ ಕೊಡಲಿಲ್ಲ. ಅಶ್ವಮೇಧ ಯಾಗ ನಡೆಯಿತು. ಬಂದವರಿಗೆಲ್ಲಾ ದಾನ ಕೊಡಲಾರಂಭಿಸಿದ ಇದೇ ಸಮಯದಲ್ಲಿ ಬಲಿಚಕ್ರವರ್ತಿಯನ್ನು ಸಂಹಾರ ಮಾಡಲು ಸರಿಯಾದ  ಸಮಯವೆಂದು ಭಾವಿಸಿದ ವಿಷ್ಣುವು, ವಾಮನ ರೂಪವನ್ನು ತಾಳಿ ಬಳಿ ಚಕ್ರವರ್ತಿ ಯಾಗ ನಡೆಸುತ್ತಿರುವ  ಸ್ಥಳಕ್ಕೆ ಬಂದನು. ಬಂದವನೇ ತನಗೆ ದಾನ ನೀಡಬೇಕೆಂದು ಕೇಳಿಕೊಂಡನು.

ದಾನ ನೀಡುವ ಮೊದಲು ಸಂಪ್ರೋಕ್ಷಣೆ ಬಿಡುವ ಪದ್ಧತಿಯಿದೆ. ಅಂದರೆ ತಮ್ಮ ಕಮಂಡಲದಲ್ಲಿ ನೀರನ್ನು ತೆಗೆದುಕೊಂಡು ಅದನ್ನು ದಾನ ಕೊಡುವವರ ಕೈಗೆ ಹಾಕಲಾಗುವುದು. ಈ ಸಮಯದಲ್ಲಿ ಶುಕ್ರಾಚಾರ್ಯರು ಬಲಿಚಕ್ರವರ್ತಿಯನ್ನು ಉಳಿಸುವ ಸಲುವಾಗಿ ಕಪ್ಪೆರೂಪ ತಾಳಿ ಕಮಂಡಲದ ರಂಧ್ರದಲ್ಲಿ ಸೇರಿಕೊಂಡರು. ಹಾಗಾಗಿ ಸಂಪ್ರೋಕ್ಷಣೆ ಮಾಡಬೇಕಾದರೆ ನೀರು ಬೀಳುತ್ತಿರಲಿಲ್ಲ.ಶುಕ್ರಾಚಾರ್ಯರ ಕುಯುಕ್ತಿಯನ್ನು ಅರಿತ ವಿಷ್ಣು ಪರಮಾತ್ಮ ದರ್ಭೆಯನ್ನು ತೆಗೆದುಕೊಂಡು ಬಲಿಚಕ್ರವರ್ತಿಯಲ್ಲಿ ಏನೋ ಕಸ ಸಿಕ್ಕಿಕೊಂಡಂತಿದೆ ಅದನ್ನು ತೆಗೆಯುತ್ತೇನೆ ಎಂದು ಕಮಂಡಲದ ನಾಳಕ್ಕೆ ಚುಚ್ಚಿದನು. ಅದು ಕಪ್ಪೆಯ ಕಣ್ಣನ್ನು ಚುಚ್ಚಿತು. ಹೀಗಾಗಿ ಶುಕ್ರಾಚಾರ್ಯರು ತಮ್ಮ ಒಂದು ಕಣ್ಣನ್ನು ಕಳೆದುಕೊಂಡರು. ನಂತರಸಂಪ್ರೋಕ್ಷಣೆ ಸರಾಗವಾಗಿ ನೆರವೇರಿತು. ಮುಂದೆ ಬಲಿಚಕ್ರವರ್ತಿ ತಮಗೇನು ನೀಡಬೇಕೆಂದು ವಾಮನನಲ್ಲಿ ಕೇಳಿಕೊಂಡನು. ಆಗ ವಾಮನನು ನನಗೆ ಮೂರು ಹೆಜ್ಜೆ ಜಾಗ ನೀಡಿದರೆ ಸಾಕು ಎಂದು ಹೇಳುತ್ತಾನೆ.   ಸರಿ ಎಂದು ಬಲಿಚಕ್ರವರ್ತಿ ನಿನ್ನ ಜಾಗವನ್ನು ತೆಗೆದುಕೋ ಎಂದು ಹೇಳುತ್ತಾನೆ.

ವಾಮನನ ರೂಪದಲ್ಲಿದ್ದ ವಿಷ್ಣುವು ತ್ರಿವಿಕ್ರಮನ ರೂಪ ತಾಳಿ ದೊಡ್ಡ ಆಕಾರವಾಗಿ ಎದ್ದು ನಿಲ್ಲುತ್ತಾನೆ. ತ್ರಿವಿಕ್ರಮನ ಒಂದನೇ ಹೆಜ್ಜೆ ಇಡೀ ಭೂಮಿಯನ್ನು ಆವರಿಸಿತು. ಎರಡನೇ ಹೆಜ್ಜೆಯನ್ನು ಆಕಾಶದ ಮೇಲಿಟ್ಟನು. ಮೂರನೇ ಹೆಜ್ಜೆ ಎಲ್ಲಿಡಬೇಕೆಂದು ಚಕ್ರವರ್ತಿಯನ್ನು ಕೇಳಿದಾಗ, ಬೇರೇನೂ ತೋಚದ ಬಲಿ, ತನ್ನ ತಲೆಯ ಮೇಲೆ ಇಡುವಂತೆ ಕೇಳಿಕೊಂಡನು. ಮೂರನೇ ಹೆಜ್ಜೆಯನ್ನು ಆತನ ತಲೆಮೇಲಿಟ್ಟು ತ್ರಿವಿಕ್ರಮನು ಬಲಿಚಕ್ರವರ್ತಿಯನ್ನು ಪಾತಾಳಲೋಕಕ್ಕೆ ತಳ್ಳಿದನು.

ಆ ಸಮಯದಲ್ಲಿ ಬಲಿ ಚಕ್ರವರ್ತಿಯಲ್ಲಿ ವಾಮನನು ಯಾವುದಾದರೊಂದು ವರವನ್ನು ಕೇಳೆಂದಾಗ ಬಲಿಚಕ್ರವರ್ತಿಯು ಪ್ರತಿವರ್ಷವು  ತಾನು ಭೂಮಿಗೆ ಆಗಮಿಸಿಬೇಕೆಂದು, ಭೂಮಿಯಲ್ಲಿ ತನ್ನ ನೆನಪಿಗಾಗಿ ಆ ದಿನವನ್ನು ಆಚರಿಸಬೇಕು ಎಂಬುದಾಗಿ ಕೇಳಿದನು. ಅಲ್ಲದೆ, ಆ ದಿನವು ತನ್ನ ಸಾಮ್ರಾಜ್ಯದಲ್ಲಿರುವಂತೆಯೇ, ಸರ್ವ ಸಮೃದ್ಧಿ ಪರಿಪಾಲನೆಯಿಂದ ಕೂಡಿರಬೇಕೆಂದು ಆಶಿಸಿದನು.ಅದರಂತೆ  ಬಲಿಚಕ್ರವರ್ತಿಗೆ ವಿಷ್ಣುವು ಒಂದು ವರ ನೀಡುತ್ತಾನೆ.  ಅದೇನೆಂದರೆ ಆಶ್ವೀಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜಿಸುವರು. ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ ಪೂಜೆ ಕೈಗೊಳ್ಳುತ್ತಾರೆ. ಅದರಂತೆಯೇ, ದೀಪಾವಳಿಯ ವೇಳೆ ಒಂದು ದಿನವನ್ನು ಬಲಿಪಾಡ್ಯಮಿ ಎಂದು ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ಪೂಜೆ, ಗೋ ಪೂಜೆ, ಇವುಗಳನ್ನು ಮಾಡಲಾಗುವುದು. ಯಾಕೆಂದರೆ, ಬಲಿಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು. ಅದಕ್ಕೆ ಪೂಜೆಗಳನ್ನು, ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.ಸರ್ವಸಮೃದ್ಧಿಯುಂಟಾಗಿ, ಧನ-ಕನಕಗಳು ವೃದ್ಧಿಯಾಗುವಂತೆ ಇದೇ ದಿನ ಧನಲಕ್ಷ್ಮಿ ಪೂಜೆಯ ಮೂಲಕ ಲಕ್ಷ್ಮಿಯನ್ನು ಒಲಿಸಿಕೊಳ್ಳಲಾಗುತ್ತದೆ. ಈ ರೀತಿ ಮಾಡುವುದರಿಂದ ಬಲಿ ಚಕ್ರವರ್ತಿಯ ರಾಜ್ಯದಲ್ಲಿದ್ದಂತೆ ಎಲ್ಲಾ ಸುಖೋಪಭೋಗಗಳು ದೊರೆಯುವುದು ಎಂಬ ನಂಬಿಕೆ ಜನರಲ್ಲಿದೆ.

ದೀಪಾವಳಿ ಬಗೆಗಿನ ಜಾನಪದ ಕಥೆ :-
ಒಂದೂರಲ್ಲಿ ಒಬ್ಬ  ಅರಸನಿದ್ದ.  ಅವನಿಗೆ ಏಳು ಮಂದಿ ಹೆಣ್ಣುಮಕ್ಕಳು. ಅವರಲ್ಲಿ ಕೊನೆಯ ಮಗಳೆಂದರೆ ಅವನಿಗೆ ತುಂಬಾ ಮುದ್ದು. ಒಂದು  ದಿನ, ತನ್ನ ಹೆಣ್ಣು ಮಕ್ಕಳನ್ನು ಕರೆದು, ತನಗೆ ಗಂಡುಮಕ್ಕಳಿಲ್ಲದ  ಕಾರಣ, ನಿಮ್ಮ ನಿಮ್ಮ ಜೀವನದ ಗುರಿಯು ತಾನು ಹೇಳುವ ರೀತಿ ರಾಜ್ಯಭಾರ ಮಾಡಬೇಕು ಎಂದು ಹೇಳಿ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ವಹಿಸುತ್ತಾಬರುತ್ತಾನೆ. ಎಲ್ಲರು ತನ್ನ ತಂದೆಯ ಆಸೆಯಂತೆ ನಡೆದುಕೊಳ್ಳಲು ಒಪ್ಪಿಗೆ ನೀಡುತ್ತಾರೆ. ಆದರೆ ಚಿಕ್ಕ ಮಗಳು ಮಾತ್ರ ತಾನು  ನನ್ನದೇ ಆದ ಗುರಿಯೊಂದಿಗೆ ನಾನು ಹುಟ್ಟಿದ್ದೇನೆ ತನಗೆ ಯಾವ ಜವಾಬ್ದಾರಿಯನ್ನು ಹೇರಬಾರದು ಎಂದು ಹೇಳುತ್ತಾಳೆ. ಇದರಿಂದ ಸಿಟ್ಟಾದ ಆ ಅರಸ  ಆಕೆಯನ್ನು ಒಬ್ಬ ಭಿಕ್ಷುಕನಿಗೆ ಮದುವೆ ಮಾಡಿ ಅರಮನೆಯಿಂದ ಹೊರಗೆ ಕಳುಹಿಸಿದ. ಆದರೂ, ಎಷ್ಟಾದರೂ ಪ್ರೀತಿಯ ಮಗಳಲ್ಲವೇ? ಪಿತೃಪ್ರೇಮದಿಂದಾಗಿ ತನ್ನ ತಪ್ಪಿನ ಅರಿವಾಗಿ ಮಗಳಿಗೆ  ಒಂದು ವರವನ್ನು ಬೇಡುವಂತೆ ಕೇಳಿದ. ಇದಕ್ಕೆ ಅವಳು ಕೇಳಿದ್ದೇನೆಂದರೆ, ಕಾರ್ತಿಕ ಅಮಾವಾಸ್ಯೆಯ ರಾತ್ರಿಯಂದು ಆತನ ಇಡೀ  ಸಾಮ್ರಾಜ್ಯವು ಕತ್ತಲಲ್ಲಿ ಇರಬೇಕೆಂಬ ವಿಚಿತ್ರ ಬೇಡಿಕೆಯನ್ನ ಇಡುತ್ತಾಳೆ.  ಇದಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿದ ರಾಜ.  ಕಾರ್ತಿಕ ಅಮಾವಾಸ್ಯೆಯ ಒಂದು ದಿನ  ತನ್ನ ರಾಜ್ಯದ ಜನತೆಗೆ ಮನೆಯಲ್ಲಿ ದೀಪಗಳನ್ನ ಹಚ್ಚದಂತೆ ಆಜ್ಞೆ ಹೊರಡಿಸುತ್ತಾನೆ. ಆ ದಿನ ಆ ಕೊನೆಯ ಮಗಳು ಮಾತ್ರ ಕಗ್ಗತ್ತಲಲ್ಲಿ  ಕಾಡಿನಲ್ಲಿರುವ ತನ್ನ ಗುಡಿಸಲಿನಲ್ಲಿ ಹಣತೆ ಉರಿಸಿದಳು. ಅವತ್ತು  ಆ ದೀಪವನ್ನು ಗಮನಿಸಿ  ಲಕ್ಷ್ಮೀದೇವಿಯು  ಆಕೆಯ ಮನೆಗೆ ಬಂದು. ಆ  ರಾತ್ರಿ ಆಶ್ರಯವನ್ನು ಕೇಳುತ್ತಾಳೆ. ಆಗ ಆ ಭಿಕ್ಷುಕನ ಹೆಂಡತಿಯಾಗಿದ್ದ ಕೊನೆ ಮಗಳು ಲಕ್ಷ್ಮಿಗೆ  ಮರಳಿ ಹೋಗದಂತಿದ್ದರೆ ಮಾತ್ರವೇ ಮನೆಯೊಳಗೆ ಬರಮಾಡಿಕೊಳ್ಳುವುದಾಗಿ  ಶರತ್ತು ಹಾಕಿದಳು. ಇದೇ ದಿನವನ್ನು ದೀಪಾವಳಿ ಅಮಾವಾಸ್ಯೆಯಲ್ಲಿ  ಶ್ರೀ ಲಕ್ಷ್ಮೀಯ ಪೂಜೆ ಆಚರಿಸಲಾಗುತ್ತದೆ.






Saturday 7 October 2017

ಈ ಹಂಟರ್ಸ್ ಮೂನ್, ಟೂ ಸನ್ಸ್ , ಚೇಸಿಂಗ್ ಮೂನ್ ಅಂದ್ರೆ ಏನು?

ಈ ಹಂಟರ್ಸ್  ಮೂನ್, ಟೂ ಸನ್ಸ್ , ಚೇಸಿಂಗ್ ಮೂನ್  ಅಂದ್ರೆ ಏನು?



ಇಡೀ ಪ್ರಪಂಚದಲ್ಲಿ , ಎಲ್ಲ ದೇಶಗಳಲ್ಲಿಯೂ ದಿನ, ತಿಂಗಳು ವರ್ಷಗಳನ್ನ ಕಂಡುಹಿಡಿದಿರುವುದು ಸೂರ್ಯ ಮತ್ತು ಚಂದ್ರನ ಚಲನೆಯ ಮೂಲಕವೇ. ಸೂರ್ಯನ ಚಲನೆಗಿಂತ   ಚಂದ್ರನ ಚಲನೆಯನ್ನು ತಿಳಿಯಲು ತುಂಬಾ ಸುಲಭ ಅದು ಕೂಡ ಅಮಾವಾಸ್ಯೆ ಹುಣ್ಣಿಮೆಗಳ ಮೂಲಕ. ಪ್ರಪಂಚದಲ್ಲಿನ ಎಲ್ಲ ಪಂಚಾಂಗಗಳು ಕೂಡ ಈ  ಚಂದ್ರನ ಚಲನೆಯ ಆಧಾರದ ಮೇಲೆ ಆಗಿವೆಯೇನೋ ಎಂಬುದು ನನ್ನ ಅನಿಸಿಕೆ.

ನಮ್ಮಲ್ಲಿ ಅಮಾವಾಸ್ಯೆ ಹುಣ್ಣಿಮೆಗಳಿಗೆ ಹೆಸರುಗಳು ಇರುವಂತೆ ವಿದೇಶಿಯರು ಕೂಡ ಪ್ರತಿ ಹುಣ್ಣಿಮೆ ಮತ್ತು ಅಮ್ಮಾವಸ್ಯೆಗೆ ಒಂದೊಂದು ಹೆಸರುಗಳನ್ನಿಟ್ಟಿರುವುದು ಕೂಡ ವಿಶೇಷವೇ.   ಮೊನ್ನೆ  ಗುರುವಾರದಂದು ಅಮೆರಿಕೆಯ ಕೆನಡಾ ದಲ್ಲಿ ಹುಣ್ಣಿಮೆಯನ್ನ ಹಂಟರ್ಸ್ ಮೂನ್, ಟೂಸನ್ಸ್ ,  ಚೇಸಿಂಗ್ ಮೂನ್ ಎಂದು ಅನೇಕ ಹೆಸರುಗಳಿಂದ ಕರೆದು, ಅಕ್ಟೋಬರ್ ೫ ಗುರುವಾರದ  ಹುಣ್ಣಿಮೆಯನ್ನು ಸ್ಪೆಷಲ್ ಎಂದು ಹೇಳಿದ್ದಾರೆ. ಅದಕ್ಕೆ ಕಾರಣ ಅಂದು ಸೂರ್ಯನ ಮುಳುಗುವಿಕೆ ಮತ್ತು ಚಂದ್ರನ ಹುಟ್ಟು ಎರೆಡನ್ನು ಕೂಡ ನಾವು ಕಾಣಬಹುದಾಗಿತ್ತು . ಒಂದೇ ದಿನ ಸೂರ್ಯ ಮತ್ತು ಚಂದ್ರನನ್ನು ಕಂಡ ದಿನ ಅದಾಗಿತ್ತು. ಇದು ಕಲ್ಪನೆಯಲ್ಲ ಸತ್ಯ. ಅದಕ್ಕೆ ಸಾಕ್ಷಿ ಈ ಚಿತ್ರಗಳು.




Thursday 5 October 2017

ಸೀಗೆ ಹುಣ್ಣಿಮೆ

ನಮ್ಮ ಸಂಪ್ರದಾಯದಲ್ಲಿ ಎಲ್ಲ ಅಮಾವಾಸ್ಯೆ ಮತ್ತು ಹುಣ್ಣಿಮೆಗಳಿಗೆ ಅದರದೇ  ಆದ  ಹೆಸರು ಮತ್ತು ವಿಶೇಷತೆಗಳಿವೆ. ಅವುಗಳಿಗೆ  ಪ್ರಕೃತಿಯಯಲ್ಲಾಗುವ ಬದಲಾವಣೆಗಳ ಜೊತೆ- ಜೊತೆಗೆ ವಿಶೇಷತೆಗಳು ಕೂಡ ಅಂಟಿಕೊಂಡು ಬಂದಿರಬಹುದು ಎಂದು ನಾವು ಅಂದುಕೊಳ್ಳಬಹುದು.


ನಾವುಗಳು ಆಚರಿಸುವ  ಹುಣ್ಣಿಮೆಗಳು ಈ ರೀತಿ ಇವೆ. ಬನದ ಹುಣ್ಣಿಮೆ, ಭರತ ಹುಣ್ಣಿಮೆ, ಹೋಳಿ ಹುಣ್ಣಿಮೆ, ದವನದ ಹುಣ್ಣಿಮೆ, ಆಗಿ ಹುಣ್ಣಿಮೆ(ಅಧಿಕ) ಕಾರಹುಣ್ಣಿಮೆ, ಕಡ್ಲಿ ಕಡುಬು ಹುಣ್ಣಿಮೆ [ಗುರುಪೂರ್ಣಿಮಾ], ನೂಲ ಹುಣ್ಣಿಮೆ, ಅನಂತ ಹುಣ್ಣಿಮೆ, ಸೀಗೆ ಹುಣ್ಣಿಮೆ, ಗೌರಿ ಹುಣ್ಣಿಮೆ, ಹೊಸ್ತಿಲ ಹುಣ್ಣಿಮೆ.


ಇವತ್ತು ಸೀಗೆ ಹುಣ್ಣಿಮೆ. ಇವತ್ತಿನ ಸೀಗೆ ಹುಣ್ಣಿಮೆಯೂ  ಕೂಡ ಕೆಲವೊಂದು ವಿಶೇಷತೆಯನ್ನು ಹೊಂದಿದೆ. ಇಂದು ಪ್ರತಿ ಹಳ್ಳಿಗಳಲ್ಲಿ ರೈತರು ತಮ್ಮ ಹೊಲ, ಗದ್ದೆಗಳಲ್ಲಿ, ತೋಟಗಳಲ್ಲಿ ಈ ಸೀಗೆ ಹುಣ್ಣಿಮೆಯ  ಹಬ್ಬವನ್ನಾಚರಿಸುತ್ತಾರೆ.  ಈ ಸೀಗೆ ಹುಣ್ಣಿಮೆಯನ್ನು ಭೂ ತಾಯಿಯ ಸೀಮಂತ ಎಂದು ಕೂಡ ಕರೆಯುವುದುಂಟು.

 ಈ ಸೀಗೆ ಹುಣ್ಣಿಮೆ ಸಮಯದಲ್ಲಿ ಭತ್ತ , ಅಡಿಕೆ, ರಾಗಿ , ಜೋಳ  ಇನ್ನು ಅನೇಕ ಮುಂಗಾರಿನಲ್ಲಿ ಬಿತ್ತಿದ ಬೆಳೆಗಳು ಕಾಳುಗಟ್ಟಿ, ತೆನೆ ತುಂಬಿ, ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುತ್ತವೆ. ಭೂಮಿ ತಾಯಿ ಯನ್ನ ಹೆಣ್ಣಿಗೆ ಹೋಲಿಸಿ ಹೊಲಗಳಲ್ಲಿನ ಬೆಳೆ ತುಂಬಿಕೊಡಿರುವುದರಿಂದ ಆಕೆ ಗರ್ಭ ಕಟ್ಟಿದ ಹೆಣ್ಣು ಎಂದು ಕಲ್ಪಿಸಿಕೊಂಡು ಆಕೆಗೆ ಸೀಮಂತ  ಮಾಡುವ ರೀತಿ ಈ ಸೀಗೆ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ.

ಈ ಸೀಗೆ ಹುಣ್ಣಿಮೆ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ನನಗೆ ತಿಳಿದ ಮಟ್ಟಿಗೆ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಪೈರು ಚೆನ್ನಾಗಿ ಬರಲೆಂದು  ಹೊಲಗಳಿಗೆ ಪೂಜೆ ಸಲ್ಲಿಸುತ್ತಾರೆ. ತಮ್ಮ ಜಾನುವಾರಗಳಿಗೆ ಪೂಜೆ ಮಾಡುತ್ತಾರೆ. ಹೊಲಗಳ ನಾಲ್ಕು ದಿಕ್ಕುಗಳಲ್ಲಿ ಚರಗ ಚೆಲ್ಲುತ್ತಾರೆ. ಎತ್ತಿನ ಸಗಣಿಯಿಂದ 5 ಉಂಡೆಗಳನ್ನು ಮಾಡಿ ಅದಕ್ಕೆ ಹೂವುಗಳನ್ನ ಸಿಕ್ಕಿಸಿ ಪಾಂಡವರು ಎಂದು ಪೂಜಿಸುತ್ತಾರೆ. ಕೆಲವು ಮುತ್ತೈದೆಯರಿಗೆ ಉಡಿ ತುಂಬುತ್ತಾರೆ.ತುಂಬುತ್ತಾರೆ. ಹೊಲ ಗದ್ದೆಗಳಲ್ಲಿ ತಮ್ಮ ಕುಟುಂಬದವರ ಮತ್ತು ಬಂಧು ಬಾಂಧವರುಗಳ  ಜೊತೆ ಕೂಡಿ ಕುಳಿತು ಊಟ ಮಾಡುತ್ತಾರೆ.