Tuesday, 25 April 2017

ಬಸವನಬ್ಬವೋ ಅತ್ವ ಬಸವ ಜಯಂತಿಯೋ?

ಆಡುಮಾತಿನಲ್ಲಿ "ಬಸವನಬ್ಬ" ಅಂತ ಕರಯಲ್ಪಡುವ "ಬಸವಣ್ಣ ಹಬ್ಬ", ಯಾವಾಗಲು ನಮಗೆ ಬೇಸಿಗೆ ರಜೆ (ಏಪ್ರಿಲ್ - ಮೇ ತಿಂಗಳು) ಇರುವಾಗಲೇ ಬರುತಿತ್ತು. ಈ ಹಬ್ಬ ಒಂದೊಂದು ಕಡೆ ಒಂದೊಂದು ರೀತಿ ಆಚರಿಸುತ್ತಾರೆ. ನಾನು ಚಿಕ್ಕವಳಿದ್ದಾಗಿನಿಂದಲೂ ಈ ಬಸವನಬ್ಬ ಎಂದರೆ, ಬೆಳಿಗ್ಗೆ ಎದ್ದು ಮನೆ ಗುಡಿಸಿ-ಸಾರಿಸಿ, ಮನೆ ಹೊರಗಲ್ಲದೆ ಅಡುಗೆ ಮನೆ ಒಲೆಗೆ ರಂಗೋಲಿ ಹಾಕಿ, ಹರಿಶಿನ ಕುಂಕುಮ ಬೊಟ್ಟು ಇಟ್ಟು, ಪೂಜೆ ಮಾಡಿ ಅಡುಗೆ ಮಾಡಲು ಶುರು ಮಾಡೋದು. ಇದು ಹೆಣ್ಣು ಮಕ್ಕಳು ಮಾಡುತ್ತಿದ್ದ ಕೆಲಸ. ಗಂಡು ಮಕ್ಕಳು ಮನೆಯಲ್ಲಿ ಇದ್ದ ಹಸು, ಕರು, ಎತ್ತುಗಳಿಗೆ ಮೈ ತೊಳೆದು ಅವುಗಳ ಕೋಡುಗಳಿಗೆ ಬಣ್ಣ ಹಚ್ಚಿ ಅಲಂಕಾರ ಮಾಡಿ ಅವುಗಳಿಗೆ ಪೂಜೆ ಮಾಡೋರು. ಅವತ್ತು ಎತ್ತು ಮತ್ತು ಹಸುಗಳು ದನಿನ ಮನೆ(ಕೊಟ್ಟಿಗೆ)ಯಿಂದ ನಡುಮನೆವರೆಗೆ ಕರೆದುಕೊಂಡು ಬಂದು ಪೂಜೆ ಮಾಡಿ ಎಡೆ ತಿನ್ನಿಸುತ್ತಿದ್ದರು. ಅವುಗಳ ಕೊರಳಿಗೆ, ಕಾಲಿಗೆ ದಾರ ಕಟ್ಟೋದು. ಗೆಜ್ಜೆ ಕಟ್ಟೋದು ಇವೆಲ್ಲ ನಡೀತಿದ್ವು. ಊರ ಮುಂದಿನ ಬಸವಣ್ಣನ ಗುಡಿಗೆ ಎಣ್ಣೆ-ಬತ್ತಿ-ಹೂ-ಊದುಬತ್ತಿ-ಕರ್ಪೂರದ ಜೊತೆ ಎಡೆಯನ್ನ ಮನೆಯಿಂದ ತೊಗೊಂಡೋಗಿ ಪೂಜೆ ಮಾಡಿಕೊಂಡು ಬರೋರು. ಅವತ್ತಿನ ದಿನ ದನಕರುಗಳಿಗೆ ಹೊಡೆಯುವಂತಿರಲಿಲ್ಲ, ನೇಗಿಲು ಹೂಡುವಂತಿರ್ಲಿಲ್ಲ, ಮುಸುರೆ ಕುಡಿಸುತ್ತಿರಲಿಲ್ಲ. ಇದು ಬಸವನ ಹಬ್ಬದಲ್ಲಿ ಕಟ್ಟು ಬಧ್ಧ ನಿಯಮವಾಗಿತ್ತು.  ನಾನು ಚಿಕ್ಕವಳಿಂದ ನೋಡಿಕೊಂಡು ಬಂದ ಬಸವನ ಹಬ್ಬ ಹಿಂಗಿತ್ತು . ಈಗಲೂ ಊರುಗಳಲ್ಲಿ ಬಸವನಹಬ್ಬ ಆಚರಣೆ ಹೀಗೇ ಇದೆ.




ಒಂದ್ಸಲ, ಈ ಹಬ್ಬ ಯಾಕೆ ಮಾಡ್ತಾರೆ?  ಈ ಹಬ್ಬದ ದಿವ್ಸ ಎತ್ತು, ಹಸುಗಳಿಗೆ ಮಾತ್ರ ಯಾಕೆ ಪೂಜೆ? ಎಮ್ಮೆಗೆ ಯಾಕೆ ಪೂಜೆ ಮಾಡಲ್ಲ? ಅಂತ  ನಮ್ಮ ಅಜ್ಜಿಯನ್ನ ಕೇಳಿದ್ದೆ!. ಆಗ ನಂಗೆ ಸಿಕ್ಕ ಉತ್ತರ ಏನಪಾಂದ್ರೆ, "ಈ ದಿನ ಶಿವನ ವಾಹನ ನಂದಿ ಹುಟ್ಟಿದ್ದಿನ. ನಾವೆಲ್ಲಾ ರೈತರು ಬೇಸಾಯಕ್ಕೆ ಅಂತ ಎತ್ತಿಗೆ ಎಷ್ಟು ಕಷ್ಟ ಕೊಡುತ್ತೀವಿ ತಾನೇ? ಅದಕ್ಕೇ, ಅವನು ಹುಟ್ಟಿದ ದಿನನಾದ್ರೂ ನಾವು ಅವನ ಸೇವೆ ಮಾಡೋಕೋಸ್ಕರ ಈ ಹಬ್ಬ ಮಾಡುತ್ತಾರೆ" ಅಂತ ಅವರ ಅಜ್ಜಿ  ಹೇಳಿದ್ದನ್ನ ನನ್ನಜ್ಜಿ ಗೌರಜ್ಜಿ ನಂಗೆ ಹೇಳಿದಳು. ನಂತರ ನನ್ನ ತಲೇಲಿ ಇನ್ನೊಂದ್ ಪ್ರಶ್ನೆ ಬಂತು. ಮತ್ತೆ ಅಜ್ಜಿ ಕೇಳ್ದೆ. ಇವತ್ತು ಎತ್ತಿನ ಪೂಜೆ, ಎಮ್ಮೆಗೆ ಯಾವತ್ತು  ಪೂಜೆ ಅಂತ? ನನ್ನಜ್ಜಿಗೆ ಕೋಪ ಬಂತು ನೋಡಿ. 'ಮಾರಿ ಹಬ್ಬ ಮಾಡ್ತಾರಲ್ಲ ಅವರನ್ನ ಹೋಗಿ ಕೇಳು'. ಅಂತ ಕೋಪ ಮಾಡ್ಕೊಂಡ್ ಹೇಳಿದ್ರು. ನಾನು ಯಾಕೋ ಇನ್ನು ಮಾತು ಮುಂದುವರೆಸಿದರೆ ಏಟು ಗ್ಯಾರಂಟಿ ಅಂತ ಅಲ್ಲಿಂದ ಕಾಲ್ಕಿತ್ತಿದ್ದೆ!.



ನಾನು ಡಿಗ್ರಿ ಓದೋಕೆ ಅಂತ  ಬೆಂಗಳೂರಿಗೆ ಬಂದಾಗ, ಇಲ್ಲಿ ಆಚರಿಸುವ ಬಸವನಹಬ್ಬ ಬೇರೆಯದೇ ರೀತಿಯಾಗಿತ್ತು. ಸರ್ಕಾರಿ ರಜೆ, ಜಗಜ್ಯೋತಿ ಬಸವಣ್ಣನವರ  ಫೋಟೋ ಅತ್ವ ವಿಗ್ರಹಕ್ಕೆ ಹಾರ ಹಾಕಿ, ಅವರು ಹುಟ್ಟಿದ ದಿನ ಎಂದು "ಬಸವ ಜಯಂತಿ" ಅನ್ನೋ ಹೆಸರಲ್ಲಿ ಆಚರಿಸುವ ಪಧ್ಧತಿ!. ಬಸವಣ್ಣನವರ ಹುಟ್ಟು, ಜೀವನ ಸಾಧನೆ, ಆದರ್ಶಗಳ ನೆನಪು!. ವಚನಗಳ ಸಾರ ಇವುಗಳನ್ನು ಸ್ಮರಿಸಿಕೊಳ್ಳುವ ದಿನ!

ಈ ಬಗ್ಗೆ ವಿಚಾರಿಸೀ ನೋಡಿದಾಗ ತಿಳಿದದ್ದು... ಈ ಎರಡೂ ಆಚರಣಾ ವಿಧಾನಗಳು ಒಂದೇ ದಿನ ಮಾಡ್ತಾರೆ ಅಂತ.  ನಾವು ಹಳ್ಳಿಗಳಲ್ಲಿ ಮಾಡುವ ಬಸವನಹಬ್ಬ ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬಂದದ್ದು. ಆದರೆ ಕ್ಯಾಲೆಂಡರ್ನಲ್ಲಿ ನೋಡುವ ಸರಕಾರೀ ಬಸವಜಯಂತಿಯು ಇತ್ತೀಚಿಗೆ ಶುರುವಾದದ್ದು. ಮುರುಘಾ ಮಠದ ಮೃತ್ಯುಂಜಯ ಸ್ವಾಮೀಜಿ ಮತ್ತು 'ಕರ್ನಾಟಕದ ಗಾಂಧಿ' ಎಂದೇ ಹೆಸರಾಗಿರುವ ಹರ್ಡೇಕರ ಮಂಜಪ್ಪ ಬಸವ ಜಯಂತಿ ಆಚರಣೆಯನ್ನು ಶುರುಮಾಡಿದರು. ಹರ್ಡೇಕರ್ ಮಂಜಪ್ಪನವರು ಅಂದಿನ ಅನೇಕ ವಿದ್ವಾಂಸರಿಗೆ ಮತ್ತು ಜ್ಯೋತಿಷ್ಯಶಾಸ್ತ್ರಜ್ಞರಿಗೆ ಪತ್ರಗಳನ್ನು ಬರೆದು ಬಸವಣ್ಣನವರ ಹುಟ್ಟಿದ ದಿನವನ್ನ ಕಂಡು ಹಿಡಿಯಲು / ಗುರ್ತಿಸಲು ಕೇಳಿಕೊಂಡರು. ಭೀಮಕವಿಯ "ಬಸವ ಪುರಾಣ" ದ ಷಟ್ಪದಿಯಾ ಆಧಾರದ ಮೇಲೆ  ಬಸವಣ್ಣನವರು, ಆನಂದನಾಮ ಸಂವತ್ಸರದಲ್ಲಿ,  ಚಾಂದ್ರಮಾನ ಲೆಕ್ಕದ, ವೈಶಾಖ ಮಾಸ - ರೋಹಿಣಿ ನಕ್ಷತ್ರ (ವೃಷಭ ರಾಶಿ) ದಲ್ಲಿ ಹುಟ್ಟಿದರು ಮತ್ತು ಅಂದು "ಅಕ್ಷಯ ತೃತೀಯ" ಹಬ್ಬವಾಗಿತ್ತು ಎಂದು ಕಂಡು ಕೊಂಡರು. ಇದು ಆದುನಿಕ ಕ್ಯಾಲೆಂಡರ್ ಪ್ರಕಾರ ದಿನಾಂಕ 30 ಮಾರ್ಚ್ 1134 ಎಂದೂ ಲೆಕ್ಕ ಹಾಕಲಾಯಿತು. ಬಸವಣ್ಣನವರು ಹುಟ್ಟಿದ ವರ್ಷ 1105 ಎಂದೂ ಹಲವು ಪ್ರಮುಖ ಗ್ರಂಥಗಳಲ್ಲಿ ನಮೂದಾಗಿದೆ. ಬಸವಣ್ಣ ಹುಟ್ಟಿದಂದಿನಿಂದ ಶುರುವಾದ ಬಸವ ಶಕೆ ಇಂದಿಗೂ ಬಳಕೆಯಲ್ಲಿದೆ ಮತ್ತು  ಪಂಚಾಂಗಗಳಲ್ಲಿ ಅನೂಚಾನವಾಗಿ ಈ ಬಸವಶಕೆಯ ವರ್ಷಗಳು ಬಳಕೆಯಾಗುತ್ತ ಬಂತು. ಇದು (ಆಧುನಿಕ ವರ್ಷ 2017) ಬಸವ ಶಕೆ 884.

ದಾವಣಗೆರೆಯಲ್ಲಿ ಬಸವಜಯಂತಿಯನ್ನ ಮೊದಲ ಬಾರಿಗೆ - 1913ರಲ್ಲಿ ಆಚರಿಸಲಾಯಿತು. ನಂತರ ಇದು ಕರ್ನಾಟಕದ ತುಂಬಾ ಪ್ರಸಿದ್ದಿಯಾಯಿತು ಮತ್ತು ಮೂಲೆ ಮೂಲೆಗಳಲ್ಲಿ ಆಚರಣೆಯಾಗ್ತಾ ಬಂತು. ಮುಂದೆ ಕರ್ನಾಟಕ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ಈ ದಿನವನ್ನು ಸರ್ಕಾರಿ ದಿನಗಳಾಗಿ ಘೋಷಣೆ ಮಾಡಿದವು ಮತ್ತು ಸರ್ಕಾರದ ಮೂಲಕವೂ ಆಚರಣೆ ಮಾಡುತ್ತಾ ಬಂದವು.




ಪಾಲ್ಗುರಿಕೆ ಸೋಮನಾಥ ತೆಲುಗಿನಲ್ಲಿ, ನಂತರ ಭೀಮ ಕವಿ ಕನ್ನಡದಲ್ಲಿ "ಬಸವಪುರಾಣ" ಬರೆದವರು. ಹರಿಹರನೂ ಸೇರಿಕೊಂಡು ಬಸವಣ್ಣನವರ ಬಗ್ಗೆ ಅಗಣಿತ ಜನರು ವಚನ, ಪುರಾಣ, ಮಹಾಕಾವ್ಯ, ರಗಳೆ ಷಟ್ಪದಿ, ಕತೆ ಕಾದಂಬರಿ ಇತ್ಯಾದಿ ಸಾಹಿತ್ಯಗಳನ್ನ ಹುಟ್ಟು ಹಾಕಿ ಕನ್ನಡ, ತೆಲುಗು, ತಮಿಳು ಸಂಸ್ಕೃತ ಸಾಹಿತ್ಯವನ್ನ ಸಮೃದ್ದಗೊಳಿಸಿದ್ದಾರೆ.         

ಇತರರಿಗೆ ಬಸವಣ್ಣನವರು ಹೇಗೆ ಕಂಡಿದ್ದಾರೆ ಎಂದು ಅವರ ಮಾತುಗಳಲ್ಲೇ ಇಲ್ಲಿ ಕೊಟ್ಟಿದ್ದೇನೆ. 

ಜನಪದರಲ್ಲಿ ಬಸವಣ್ಣ 
ಎಲ್ಲಾ ಬಲ್ಲಿದನಯ್ಯಾ ಕಲ್ಯಾಣ ಬಸವಯ್ಯ
ಚೆಲ್ಲಿದನು ತಂದು ಶಿವಬೆಳಕ| 
ನಾಡೊಳಗೆ ಸೊಲ್ಲೆತ್ತಿ ಜನವು ಹಾಡುವುದು||

ಪುರಾಣಗಳಲ್ಲಿ ಬಸವಣ್ಣ
ಭೀಮ ಕವಿ, ಪಾಲ್ಗುರಿಕೆ ಸೋಮನಾಥರಂತವರು ಪುರಾಣಗಳನ್ನು ರಚಿಸಿದ್ದಾರೆ.  ವೇದ ವ್ಯಾಸ ರಚಿತ ಬಸವ ಪುರಾಣ" ವೂ ಸಿಕ್ಕಿದೆ!.   

ವಚನಗಳಲ್ಲಿ ಬಸವಣ್ಣ 
ಆಯತದಲ್ಲಿ ಪೂರ್ವಾಚಾರಿಯ ಕಂಡೆ.
ಸ್ವಾಯತದಲ್ಲಿ ಪೂರ್ವಾಚಾರಿಯ ಕಂಡೆ.
ಸನ್ನಹಿತದಲ್ಲಿ ಪೂರ್ವಾಚಾರಿಯ ಕಂಡೆ.
ಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನಬಸವಣ್ಣನ,
ಶ್ರೀಪಾದಕ್ಕೆ ನಮೋ ನಮೋ ಎಂಬೆನು.

ಶಿವ ತಾನೀತ ಮತ್ರ್ಯಲೋಕವ ಪಾವನವ ಮಾಡಲು,
ಗುರು ತಾನೀತ ಎನ್ನ ಭವರೋಗವ ವೇಧಿಸಲು,
ಭಕ್ತ ತಾನೀತ ಎನಗೆ ವಿಸ್ತಾರವಾಗಿ.
ಎನಗೆ ಜಂಗಮ ತಾನೀತ ಅನಾದಿ ಸಂಸಿದ್ಧ ಘನಮಹಿಮನಾಗಿ.
ಲಿಂಗ ತಾನೀತ ಎನಗೆ ಪ್ರಾಣಲಿಂಗ ತಾನಾಗಿ.
ಎನ್ನ ವಿಸ್ತಾರ ತಾನೀತ ಎನ್ನ ನಿಲುಕಡೆಯ ತಾನಾಗಿ.
ಎನ್ನ ಸರ್ವಸ್ವಾಯತವ ಮಾಡಿದ ಮಹಿಮ ತಾನೀತ ಕಾಣಾ,ಕಲಿಗೆದೇವರದೇವ, ನಿಮ್ಮ ಶರಣ ಬಸವಣ್ಣ.

ಬಸವ ಎಂದೊಮ್ಮೆ ಮನವೊಸೆದು ನೆನೆದಡೆ
ಬಸವ ಅಸುವಿಂಗೆ ಅಸುವಾಗಿ ತೋರ್ಪನೈಸೆ
ಬಸವ ನಾಮವ ಬಿಡದೆ ರಸನೆಯೊಳಾವಾಗ
ಬಸವ ಬಸವ ಎಂಬೆ ಯೋಗಿನಾಥ
ಶಾಸನಗಳಲ್ಲಿ ಬಸವಣ್ಣ 
ಅನೇಕ ಶಾಸನಗಳು "ಓಂ ಬಸವ ಲಿಂಗಾಯ ನಮ:" ಅನ್ನೋ ಪೀಟಿಕೆಯಿಂದ ಶುರುವಾಗುತ್ತವೆ.  ಉದಾಹರಣೆ ಶಾಲಿವಾಹನ ಶಕೆ 1530ರ ಕೊಟ್ಟೂರು ಶಾಸನ. ಬಸವಣ್ಣನವರ ಜೀವನದ ಬಗ್ಗೆ ತಿಳಿಸಿಕೊಡುವ ಶಾಸನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.  

ಸರ್ವಜ್ಞನ ತ್ರಿಪದಿಗಳಲ್ಲಿ ಬಸವಣ್ಣ 
ಬಸವ ಗುರುವಿನ ಹೆಸರ | ಬಲ್ಲವರಾರಿಲ್ಲ
ಪುಸಿಮಾತನಾಡಿ ಕೆಡದಿರಿ - ಲೋಕಕ್ಕೆ
ಬಸವನೇ ಕರ್ತ ಸರ್ವಜ್ಞ

ಹಸಿದೊಡಂಬಲಿ ಮುದ್ದು | ಬಿಸಿಲಿಗೆ ಕೊಡೆ ಮುದ್ದು
ಬಸುರಲ್ಲಿ ಬಂದ ಶಿಶು ಮುದ್ದು – ಲೋಕಕ್ಕೆ
ಬಸವಣ್ಣನೇ ಮುದ್ದು ಸರ್ವಜ್ಞ

ಕಂತುಹರ ಬಸವಣ್ಣ ಚಿಂತಾಯಕ ಬಸವಣ್ಣ
ಮಂತ್ರಸಿದ್ಧನು ಬಸವಣ್ಣನ| ಪಾದಕ್ಕೆ
ಶರಣೆನ್ನಿರೆಲ್ಲ ಸರ್ವಜ್ಞ||

ಆಧುನಿಕ (ಕುವೆಂಪು) ರಲ್ಲಿ ಬಸವಣ್ಣ 
ಕಾರ್ತಿಕದ ಕತ್ತಲಲ್ಲಿ
ಆಕಾಶ ದೀಪವಾಗಿ ನೀ ಬಂದೆ,
ಬಟ್ಟೆಗೆಟ್ಟವರಿಗೊಂದು ದೊಂದು ದಿಕ್ಕಾಗಿ,
ಎಂಟು ಶತಮಾನಗಳ ಹಿಂದೆ
ಅಗ್ನಿ ಖಡ್ಗವನಾಂತು,
ಓ ಆಧ್ಯಾತ್ಮ ಕ್ರಾಂತಿ ವೀರ,
ದೇವ ದಯೆಯೊಂದು ಹೇ
ಧೀರಾವತಾರ ಶ್ರೀ ಗುರು
ಬಸವೇಶ್ವರ, ಶ್ರೀ ಬಸವೇಶ್ವರ, ಶ್ರೀ ಬಸವೇಶ್ವರ

ಆಧುನಿಕ (ಮಹಾತ್ಮ ಗಾಂಧಿಜಿ) ರಲ್ಲಿ ಬಸವಣ್ಣ 
“It has not been possible for me to practice principles of Basaveshwara   which he taught 800 years ago and which he also practiced. I have adopted few of them; I am yet to a seeker in this aspect and not an accomplished one. Eradication of untouchability & dignity of labour were among his core concepts one does not find even shade of castism in him.  Had he lived during our times, he would have been a saint worthy of worship. If his followers practice his precepts you could uplift not just Bharat but the world.”


ನನಗಿಷ್ಟವಾದ ಕೆಲವು ಬಸವಣ್ಣನವರ ವಚನಗಳೊಂದಿಗೆ ಈ ಬರಹವನ್ನ ಮುಗಿಸ್ತಾ ಇದ್ದೀನಿ.
ಅರಿವುವಿಡಿದು, ಅರಿವನರಿದು,
ಅರಿವೆ ನೀವೆಂಬ ಭ್ರಾಂತು ಎನಗಿಲ್ಲವಯ್ಯಾ,
ಮರಹುವಿಡಿದು, ಮರಹ ಮರೆದು,
ಮರಹು ನೀವೆಂಬ ಮರಹಿನವ ನಾನಲ್ಲವಯ್ಯಾ.
ದೇಹ ಪ್ರಾಣಂಗಳ ಹಿಂಗಿ, ದೇಹವಿಡಿದು,
ದೇಹ ನಿಮ್ಮದೆಂಬ ಭ್ರಾಂತುಸೂತಕಿ ನಾನಲ್ಲವಯ್ಯಾ.
ನಿಮ್ಮ ಅರಿದ ಅರಿವ ಭಿನ್ನವಿಟ್ಟ ಕಂಡೆನಾದಡೆ
ನಿಮ್ಮಾಣೆ ಕಾಣಾ, ಕೂಡಲಸಂಗಮದೇವಾ.

ಆತ್ಮನ ನಿಜವನರಿಯದು
ಪರಮಾತ್ಮನ ಲಿಂಗವು ತಾನೆಂದರಿದ ಶರಣಂಗೆ
ಎಂತಿರ್ದಂತೆ ಪೂಜೆ ನೋಡಾ !
ಭೋಗಿಸಿದುದೆಲ್ಲವು ಶಿವಾರ್ಪಿತ
ಶರಣ ರುಚಿಸಿದುದೆಲ್ಲವು ಪ್ರಸಾದ
ಶರಣನರಿದುದೆಲ್ಲವು ಪರಬ್ರಹ್ಮ
ಶರಣ ನುಡಿದುದೆಲ್ಲವು ಪರತತ್ವ
ಶರಣ ತಾನೆ ಕೂಡಲಸಂಗಮದೇವ.

ದೇವಲೋಕ ಮತ್ರ್ಯಲೋಕವೆಂಬ ಸೀಮೆಯುಳ್ಳನ್ನಕ್ಕ
ಕೇವಲ ಶರಣನಾಗಲರಿಯ.
ಸತ್ತು ಬೆರಸಿಹೆನೆಂದಡೆ ಕಬ್ಬಿನ ತುದಿಯ ಮೆಲಿದಂತೆ
ಕೂಡಲಸಂಗಮದೇವಾ.

ಅರಿವು ಮರವೆಯೊಳಡಗಿ, ಮರವೆ ಅರಿವಿನೊಳಡಗಿ,
ತೆರಹಿಲ್ಲದಿರ್ದೆನೆಂಬ ಹಮ್ಮಿದೇನೋ, ಹಮ್ಮಿದೇನೋ
ಬ್ರಹ್ಮಾದ್ ಬ್ರಹ್ಮವ ನುಂಗಿ, ಮತ್ತಾ ಪರಬ್ರಹ್ಮನು ತಾನೆಂದೆಂಬ
ಹಮ್ಮಿದೇನೊ, ಹಮ್ಮಿದೇನೊ
ಆದಿ ಶೂನ್ಯವು ಶೂನ್ಯ, ಮಧ್ಯ ಶೂನ್ಯವು ಶೂನ್ಯ,
ಅಂತ್ಯ ಶೂನ್ಯವು ಶೂನ್ಯ,
ಶೂನ್ಯವಾದ ಬಳಿಕ ಅಲ್ಲಿಂದತ್ತ ನಿಂದ ನಿಲವನಾರು ಬಲ್ಲರು ಹೇಳಾ
ಬಯಲು ಚಿತ್ರಿಸಿದ ಚಿತ್ರವನಾ ಬಯಲರಿಯದಂತೆ
ಕೂಡಲಸಂಗಮದೇವಾ, ನಿಮ್ಮ ಶರಣರ ನಿಲವು.

2 comments: