Thursday, 8 March 2018

ಸ್ವತಂತ್ರ, ಸಮಾನತೆಯ ಮಹಿಳಾ ದಿನಕ್ಕೆ ಚಿಕ್ಕ ಮಾತುಕತೆ ನೀವೇನಂತೀರಾ?

ಇವತ್ತು ಮಾರ್ಚ್ 8 ವಿಶ್ವ ಮಹಿಳಾ ದಿನ. ಇಂದು ಬೆಳಕರ್ದಾಗಿಂದ ವಾಟ್ಸಪ್, ಫೇಸ್ಬುಕ್ ನಲ್ಲಿ ಹಲವಾರು ರೀತಿಯಲ್ಲಿ ಶುಭಾಶಯಗಳು ಮೊಬೈಲ್ ನಲ್ಲಿ ಕಣ್ಮುಂದೆ ಬರುತ್ತಿವೆ. ನಮಗಾಗಿ ಒಂದು ದಿನದ ಆಚರಣೆ ಬೇಕಾ? ಪ್ರತಿ ದಿನವು ನಮ್ಮದೇ. ಮಹಿಳೆಯರಿಲ್ಲದೆ  ಪ್ರಪಂಚವೇ ಬರಡು. ಆಧುನಿಕ ಯುಗದಲ್ಲಿ ಮಹಿಳೆ ಗಂಡಿಗೆ ಸರಿಸಮನಾಗಿ ಬೆಳೆದು ನಿಂತಿದ್ದಾಳೆ. ಕೆಲವು ಕೆಲಸಗಳು ಬರಿ ಗಂಡಿಗಸ್ಟ  ಸೀಮಿತ.  ಹಿಂದಿನ ಕಾಲದಲ್ಲಿ ಮನೆ ಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದ ಹೆಣ್ಣು ಈಗ ತಾನೂ ಹೊರಗೆ ದುಡಿಯಲು ಗಂಡಿಗೆ ಸಮನಾಗಿ ತಾನೂ ಕೂಡ ಸಮರ್ಥಳು ಎಂದು ತೋರಿಸಿಕೊಟ್ಟಿದ್ದಾಳೆ. ಇದು ಹೆಣ್ಣಿನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.. 

ಚಿತ್ರ ಗೂಗಲ್ನಿಂದ 
ಅನಾದಿ ಕಾಲದಿಂದಲೂ ಹೆಣ್ಣು ಶೋಷಣೆಗೆ ಒಳಗಾಗುತ್ತಿದ್ದಾಳೆ. ಇದು ಲಿಂಗ ತಾರತಮ್ಯತೆಯನ್ನು ಎತ್ತಿ ತೋರಿಸುತ್ತದೆ. ಈ ಆಧುನಿಕ ಯುಗದಲ್ಲೂ ಏನು ಕಮ್ಮಿ ಇಲ್ಲ. ಸಮಾನತೆಯ ಹೆಸರಿನಲ್ಲು ಕೂಡ ಹೆಣ್ಣು ಶೋಷಣೆಗೆ ಒಳಗಾಗುತ್ತಿದ್ದಾಳೆ. ಕೌಟುಂಬಿಕವಾಗಿ ಹೇಳಬೇಕಂದ್ರೆ ಕೆಲವೊಮ್ಮೆ ಮನೆಯಿಂದ ಹೊರಗೆ ದುಡಿಯಲು ಹೊರಗೆ ಹೋದರೆ ಅವಳು ಮನೆಯ ಜವಾಬ್ದಾರಿಯನ್ನು ಅಸಡ್ಡೆ ಮಾಡುವಂತಿಲ್ಲ. ಹೊರಗೆ ಕಚೇರಿಗಳಲ್ಲಿ ತನ್ನ ಸಹೋದ್ಯೋಗಿಗಳಲ್ಲಿ ಮತ್ತು ಉನ್ನತ ಹುದ್ದೆಯಲ್ಲಿದ್ದರೆ ಅಲ್ಲಿಯೂ ಕೂಡ ಪುರುಷ ಕೆಲಸಗಾರರು ತನ್ನ ಬಾಸ್ ಹೆಣ್ಣಾದರೆ ಅಕೆಗೆ ಕೊಡುವ ಮರ್ಯಾದೆ ಅಸ್ಟಕ್ಕಸ್ಟೆ ಇರುತ್ತದೆ. ಆದರೆ ಎಲ್ಲರು ಹಾಗೆ ಅಂತಲ್ಲ ಹೆಣ್ಣು ಎಂದರೆ ಗೌರವಿಸುವ,  ಮರುಗುವ ಪುರುಷರು ಕೂಡ ಇದ್ದಾರೆ.

ಮಹಿಳೆಗೆ ಎಲ್ಲ ರೀತಿಯಲ್ಲೂ ಸಮಾನತೆ ಇದ್ದರು ಆಕೆ ಸ್ವತಂತ್ರವಾಗಿ ಯಾವ ಕೆಲಸಗಳನ್ನು ಕೂಡ ಮಾಡಲಾಗದು. ಉದಾಹರಣೆಗೆ ರಾಜಕೀಯದಲ್ಲಿ ಮೀಸಲಾತಿ ಸೀಟುಗಳಲ್ಲಿ ಎಲೆಕ್ಷನ್ನಲ್ಲಿ   ನಿಂತು ಮಹಿಳೆ ಗೆದ್ದಿರುತ್ತಾಳೆ. ಆದರೆ ಅಲ್ಲಿ ಅಧಿಕಾರ ಮಾಡುವುದು ಆಕೆಯ ಪತಿ, ತಂದೆ, ಅಣ್ಣ,ತಮ್ಮ,ಇಲ್ಲವೇ ಆಕೆಯ ಮಕ್ಕಳು ಇದು ಗ್ರಾಮೀಣ ಪ್ರದೇಶದಲ್ಲೇ ಆಗಲಿ ನಗರ ಪ್ರದೇಶದಲ್ಲೇ ಆಗಲಿ ನಡೆಯುವುದೇ ಹೀಗೆ ಅಲ್ಲಿ ಆಕೆ ಪ್ರದರ್ಶನದ ಅಧಿಕಾರಿಣಿ ಎಂಬ ಗೊಂಬೆ ಅಸ್ಟೆ. ಇದನ್ನೆಲ್ಲಾ ನೋಡಿದಾಗ ಸರ್ಕಾರ ಮಹಿಳೆಗಾಗಿ ಏನೇ ಸಮಾನತೆ ಕೊಟ್ರೂ ಅದನ್ನ ಬಳಸಿಕೊಳ್ಳುವಲ್ಲಿ ಮತ್ತೆ ಮತ್ತೆ ಹೆಣ್ಣು ಸೋಲುತ್ತಿದ್ದಾಳೆ. ಇನ್ನು ಸಿನೆಮಾ ರಂಗದಲ್ಲಿಯೂ ಕೂಡ ಲಿಂಗತಾರತಮ್ಯತೆ ಹೆಚ್ಚು ಇದೆ. ಅನೇಕ  ನಟಿಯರು ತಮಗೂ ನಾಯಕರಂತೆ ಸಮಾನ ಸಂಭಾವನೆ ಬೇಕು ಎಂದು ಅನೇಕ ದೃಶ್ಯ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಆದರೂ ಕೂಡ ಅಲ್ಲಿ ಸಂಭಾವನೆ ವಿಚಾರದಲ್ಲಿ ಸಮಾನತೆ ಬಂದಿಲ್ಲ. ಇನ್ನು  ಕೂಲಿ ಕಾರ್ಮಿಕರಲ್ಲಿ ಹೆಣ್ಣುಮಕ್ಕಳ ಕೂಲಿಹಣದಲ್ಲಿ  ಮತ್ತು ಗಂಡಸರಿಗೆ ಕೊಡುವ ಕೂಲಿಹಣದಲ್ಲೂ ವ್ಯತ್ಯಾಸವಿದೆ. ಅಲ್ಲಿ ಗಂಡುಕೂಲಿ ಹೆಚ್ಚಿನ ಸಂಭಾವನೆ ಪಡೆಯುತ್ತಾನೆ.  

ಅನೇಕ ಅಸಮಾನತೆಗಳ ನಡುವೆಯೂ ಕೂಡ ಮಹಿಳೆಯರು ಮುಂದೆ ನುಗ್ಗಿ ತಮ್ಮ ಸಾಧನೆಗಳನ್ನು ಮಾಡುತ್ತಿದ್ದಾರೆ. ಅವರಿಗೆ ನಮ್ಮ ಧನ್ಯವಾದಗಳು. ಹೊರಗೆ ದುಡಿದುಕೊಂಡು ಬರುವುದು  ಮಹಿಳೆಯ ಒಂದು ರೀತಿಯ ಸಾಧನೆಯಾದರೆ, ಮನೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಹೆಣ್ಣಿನದು ಇನ್ನೊಂದು ರೀತಿಯ ಕರ್ತವ್ಯ ಸಾಧನೆ. ಆಕೆ ತನ್ನ ಸಂಸಾರಕ್ಕಾಗಿ  ಮನೆಯ ನೆಮ್ಮದಿಗಾಗಿ ದುಡಿಯುವ ಸಂಬಳವಿಲ್ಲದ ನೌಕರಿ. ಅದು ಪ್ರೀತಿ, ವಾತ್ಸಲ್ಯ, ಸಹನೆ, ಸಂತಸ, ತ್ಯಾಗ, ಅನುರಾಗ  ತುಂಬಿದ ಕರ್ತವ್ಯ ಅದು. ಅದನ್ನು ಮಾಡು ಎಂದು ಯಾರು ಹೇಳಿಕೊಡಬೇಕಿಲ್ಲ ಅದನ್ನು ಆಕೆ ಗಂಡಿಗಿಂತ ಚೆನ್ನಾಗಿ ನಿಭಾಯಿಸುವಳು. ಹೆಣ್ಣಿನ ಈ ಎಲ್ಲ ಕಾರಣಕ್ಕೆ ಹೆಣ್ಣು ಪ್ರಪಂಚದ ಕಣ್ಣು ಎಂದರೆ ತಪ್ಪಾಗಲಾರದು. ಇವತ್ತು ಮಾರ್ಚ 8 ವಿಶ್ವ ಮಹಿಳೆಯರ ದಿನ, ವಿಶ್ವದ ಮಹಿಳೆಯರಿಗೆಲ್ಲರಿಗೂ ವಿಶ್ವಮಹಿಳಾ ದಿನದ   ಶುಭಾಶಯಗಳು.



No comments:

Post a Comment