Saturday, 29 July 2017

ಅಗಸೆ ಬೀಜವೆಂಬ ಸಂಜೀವಿನಿ

ಊಟ ಬರಿ ಹೊಟ್ಟೆಯ ಹಸಿವನ್ನು ಹೋಗಿಸುವ ಪದಾರ್ಥವಲ್ಲ. ಜೀವಿಗಳ ಬದುಕಿನ ಸಂಜೀವಿನಿ ಅದು. ಊಟದಲ್ಲಿ ಎಲ್ಲ ರೀತಿಯ ಪೋಷಕಾಂಶಗಳು ಸಮನಾಗಿ,   ಸಮಯಕ್ಕೆ ಸರಿಯಾಗಿ ದೇಹದಲ್ಲಿ ಬೆರೆತಲ್ಲಿ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ಈಗಿನ ಒತ್ತಡದ ಬದುಕಿನಲ್ಲಿ ಒಂದೇ ಆಹಾರದಲ್ಲಿ ಎಲ್ಲಾ ರೀತಿಯ ಅಂಶಗಳು ಸಿಕ್ಕರೆ ಇನ್ನು ಒಳ್ಳೆಯದು ಅಲ್ಲವೇ. ನಮ್ಮ ಅಜ್ಜ ಅಜ್ಜಿಯರ ಪ್ರಕಾರ ಮೆಂತ್ಯ ತಿಂತಿದ್ರೆ ರೋಗಕ್ಕೆ ಅಂತ್ಯ ಅಂತ ಹೇಳುತ್ತಿದ್ದುದು ನೆನಪಾಯ್ತು. ಮೆಂತ್ಯದಂತೆ ಅನೇಕ ರೀತಿಯ ಕಾಳುಗಳು ನಮ್ಮ ಸುತ್ತ ಮುತ್ತ ಇರುತ್ತವೆ. ನಾವುಗಳು ಅವನ್ನು ಬಳಸಲು ಗೊತ್ತಿರಬೇಕು ಅಷ್ಟೇ,, ಈಗ ನಾ ಹೇಳ ಹೊರಟಿರುವುದು ಅಗಸೆ ಕಾಳಿನ ಬಗ್ಗೆ. ಆಧುನಿಕ ಆಹಾರ ಹಾವಳಿಯಲ್ಲಿ ಮೂಲೆ ಗುಂಪಾಗಿರುವ ಅಗಸೆ ಕಾಳಿನ ಬಗ್ಗೆ.

ಅಗಸೆ ಬೀಜಗಳು 
ಭೂಮಿ ಮೇಲೆ ಇರುವ ತೃಣಧಾನ್ಯಗಳಲ್ಲಿ ಮೊದಲ ಸ್ಥಾನ ಮೆಂತ್ಯಕ್ಕೆ. ಮೆಂತ್ಯ ವನ್ನು ಬಿಟ್ಟರೆ ಪೋಷಕಾಂಶಗಳನ್ನು ಹೊಂದಿರುವ 2 ನೇ ಸ್ಥಾನ ಸಿಗುವುದು ಈ  ಅಗಸೆ ಬೀಜಕ್ಕೆ.   ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಮಧುಮೇಹದ ಅಪಾಯ ಕಡಿಮೆ ಮಾಡಲು ಇದು ನೆರವಾಗುತ್ತದೆ. ಈ ಅಗಸೆ ಬೀಜಕ್ಕೆ ಸುಮಾರು 6೦೦೦ ವರ್ಷಗಳ ಇತಿಹಾಸವಿದೆ ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ.   ಶತಮಾನಗಳಿಂದಲೂ ಈ ಅಗಸೆ ಬೀಜಗಳು ಆಹಾರದ ಮೂಲಕ ಅನೇಕ  ಲಾಭಗಳನ್ನು ಒದಗಿಸುತ್ತಿದೆ.  ಕ್ರಿ.ಪೂ. 3೦೦೦ ನೇ ಶತಮಾನದಲ್ಲಿ  ಬ್ಯಾಬಿಲೋನಿಯಾದ ಇತಿಹಾಸದಲ್ಲಿ ಜನರ ದೈನಂದಿನ ಆಹಾರದಲ್ಲಿ ಅಗಸೆಗೆ ಪ್ರಮುಖ ಸ್ಥಾನ ಇತ್ತು ಎಂದು ವರ್ಣಿತವಾಗಿದೆ.  ಅಗಸೆ ಬೀಜಗಳಲ್ಲಿ ಅನೇಕ  ರೀತಿಯ ಆರೋಗ್ಯ ಗುಣಗಳಿವೆ.

ಅಗಸೆ ಬೀಜಗಳಲ್ಲಿನ ಅಂಶಗಳು :-
ಒಮೆಗಾ-3 ಕೊಬ್ಬಿನಾಮ್ಲವು ಒಳ್ಳೆಯ ಕೊಬ್ಬನ್ನು ಹೊಂದಿದ್ದು, ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದು ಚಮಚ ಅಗಸೆ ಬೀಜದಲ್ಲಿ 1.8 ಗ್ರಾಂನಷ್ಟು ಒಮೆಗಾ-3 ಕೊಬ್ಬಿನಾಮ್ಲವಿದೆ. ಅಗಸೆ ಬೀಜಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿರುತ್ತೆ. ಎಸ್ಟೋಜನ್ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳಿವೆ. ಅಗಸೆ ಬೀಜದಲ್ಲಿ ಕರಗುವ ಮತ್ತು ಕರಗದ ನಾರಿನಾಂಶವಿರುತ್ತದೆ. 


ಅಗಸೆ ಬೀಜದ ಆರೋಗ್ಯಕಾರಿ ಲಾಭಗಳು :-


 ಕ್ಯಾನ್ಸರ್ ಗೆ ಮದ್ದು:-
ಕ್ಯಾನ್ಸರ್ನ  ಇತ್ತೀಚಿನ ಅಧ್ಯಯನಗಳ ಪ್ರಕಾರ ಅಗಸೆ ಬೀಜವು ಸ್ತನ ಕ್ಯಾನ್ಸರ್, ಜನನಾಂಗ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಅಗಸೆ ಬೀಜದಲ್ಲಿರುವ ಲಿಗ್ನನಸ್ ಸ್ತನ ಕ್ಯಾನ್ಸರ್ ನ ಟ್ಯಾಮ್ಕ್ಷಿಫೆನ್ ನೊಂದಿಗೆ ಯಾವುದೇ ಹಸ್ತಕ್ಷೇಪ ಮಾಡದೆ ಹಾರ್ಮೋನುಗಳಿಗೆ ಸೂಕ್ಷ್ಮವಾಗಿರುವ ಕ್ಯಾನ್ಸರ್ ನಿಂದ ರಕ್ಷಣೆ ನೀಡಬಹುದು.


ಸ್ವಚ್ಛ ಹೃದಯಕ್ಕೆ:-
ಹೃದಯರೋಗ ಅಧ್ಯಯನಗಳ ಪ್ರಕಾರ ಒಮೆಗಾ-3 ಉರಿಯೂತ ವಿರೋಧಿ ಕ್ರಮ ಮತ್ತು ಹೃದಯಬಡಿತ ಸಾಮಾನ್ಯ ಮಾಡುವ ಮೂಲಕ ವಿವಿಧ ಕಾರ್ಯವಿಧಾನದೊಂದಿಗೆ ಹೃದಯರಕ್ತನಾಳ ವ್ಯವಸ್ಥೆಗೆ ನೆರವಾಗುತ್ತದೆ. ಹಲವಾರು ಅಧ್ಯಯನಗಳ ಪ್ರಕಾರ ಒಮೆಗಾ-3 ಭರಿತ ಆಹಾರಗಳು ಅಪಧಮನಿ ಗಟ್ಟಿಯಾಗುವುದನ್ನು ತಡೆಯಲು ನೆರವಾಗುತ್ತದೆ ಮತ್ತು ಬಿಳಿ ರಕ್ತಕಣಗಳು ರಕ್ತನಾಳಗಳ ಒಳಗೋಡೆಗೆ ಅಂಟಿಕೊಳ್ಳದಂತೆ ಇಟ್ಟುಕೊಂಡು ಲೋಳೆಯು ಅಪಧಮನಿಗಳಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳುತ್ತದೆ.


ಸಕ್ಕರೆ ಕಾಯಿಲೆ (ಮಧುಮೇಹ):-
ಸಕ್ಕರೆ ಕಾಯಿಲೆ ಇರುವವರು ದಿನಾಲೂ ಅಗಸೆ ಬೀಜ ತಿನ್ನುವುದರಿಂದ  ಅದರಲ್ಲಿನ ಲಿಗ್ನನಸ್ ಅಂಶಗಳು ರಕ್ತದ ಸಕ್ಕರೆಮಟ್ಟವನ್ನು  ಸುಧಾರಿಸುತ್ತದೆ.  ಎಂದು ವೈದ್ಯಕೀಯ  ಅಧ್ಯಯನಗಳು ಹೇಳಿವೆ.


ಉರಿಯೂತ:-
ಉರಿಯೂತ ಅಗಸೆ ಬೀಜದಲ್ಲಿರುವ ಅಲಾ ಮತ್ತು ಲಿಗ್ನೆನಸ್ ಕೆಲವೊಂದು ಉರಿಯೂತಕಾರಿ ಅಂಶಗಳು ದೇಹದಲ್ಲಿ ಬಿಡುಗಡೆಯಾಗದಂತೆ ತಡೆಯಲು ನೆರವಾಗಿ ಕೆಲವೊಂದು ರೋಗ(ಪರ್ಕಿಸನ್ ಮತ್ತು ಅಸ್ತಮಾ)ಗಳಿಗೆ ಕಾರಣವಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ. 


ಹೃದಯಾಘಾತ ಮತ್ತು ಪಾರ್ಶ್ವವಾಯು:-
ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಲಿಗ್ನೆನಸ್ ಉರಿಯೂತಕಾರಿ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಅಪಧಮನಿಗಳಲ್ಲಿ ಲೋಳೆಯು ಹೆಚ್ಚಾಗುವ ಮೂಲಕ ಉಂಟಾಗುವ ಉರಿಯೂತ ಕಡಿಮೆ ಮಾಡುವ ಮೂಲಕ ಅಗಸೆ ಬೀಜಗಳು ಹೃದಯಾಘಾತ ಮತ್ತು ಪಾರ್ಶ್ವವಾಯುವನ್ನು ಕಡಿಮೆ ಮಾಡಲು ನೆರವಾಗುತ್ತದೆ.


ಮಹಿಳೆಯ ಮುಟ್ಟಿನ ಹಾಟ್ ಫ್ಲಾಷಸ್:-
ದಿನಕ್ಕೆ ಎರಡು ಚಮಚ ಅಗಸೆಬೀಜವನ್ನು  ಜ್ಯೂಸ್ ಅಥವಾ ಮೊಸರಿನೊಂದಿಗೆ ಸೇವನೆ ಮಾಡುವುದರಿಂದ ಹಾಟ್ ಫ್ಲಾಷಸ್ ಅರ್ಧದಷ್ಟು ಕಡಿಮೆಯಾಗುತ್ತದೆ. ಹಾಟ್ ಫ್ಲಾಷಸ್ ನ ತೀವ್ರತೆ ಶೇ.50% ರಷ್ಟು ಕಡಿಮೆಯಾಗುತ್ತದೆ. ನಿಯಮಿತವಾಗಿ ಅಗಸೆ ಈ ರೀತಿಯಾಗಿ ಮಹಿಳೆಯರು ಸೇವಿಸುತ್ತಿದ್ದರೆ ಗರ್ಭಕೋಶದ ಹಲವಾರು ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು.

ಜೀರ್ಣ ಕ್ರಿಯೆ ಹೆಚ್ಚಿಸುತ್ತೆ:-
ಅಗಸೆಬೀಜದಲ್ಲಿರುವ ನಾರಿನ ಅಂಶ ಜೀರ್ಣ ಕ್ರಿಯೆಯನ್ನು ಸುಲಭಗೊಳಿಸುವುದಲ್ಲದೆ ಪೌಷ್ಟಿಕಾಂಶಗಳು ದೇಹಕ್ಕೆ ಸೇರೋ ಹಾಗೆ ಮಾಡುತ್ತದೆ. ಮಲಬಧ್ದತೆ ಸರಿಯಾಗಿ ಆಗುತ್ತದೆ. ಮೊಳಕೆ ರೋಗ ( ಪೈಲ್ಸ್ ) ಇರುವವರಿಗೆ ಈ ಅಗಸೆ ಹಸಿ ಬೀಜದ ಪುಡಿಯನ್ನ ಖಾಲಿ ಹೊಟ್ಟೆಗೆ ಕುಡಿದರೆ ರಕ್ತ ಸ್ರಾವ ಕಮ್ಮಿ ಆಗಿ, ನೋವು ಕಮ್ಮಿ ಆಗಿ, ಮೋಶನ್ ಸರಾಗವಾಗಿ ಆಗುತ್ತದೆ. ಎಂದು ಮನೆ ಮದ್ದು  ಪುಸ್ತಕಗಳಲ್ಲಿ ಬರೆದಿರುತ್ತಾರೆ.

ಚರ್ಮದ ಆರೋಗ್ಯಕ್ಕೆ:-
ಅಗಸೆ ಬೀಜದಲ್ಲಿನ ಎಣ್ಣೆ ಅಂಶ ಮೈ ಚರ್ಮ ಕೆಂಪಾಗೋದು, ಉರಿ- ತುರಿಕೆ ಯಾಗುವುದನ್ನು ತಪ್ಪಿಸುತ್ತದೆ.  ಮತ್ತು  ಮೈ ಚರ್ಮ ಮೃದುವಾಗಿ ಆರೋಗ್ಯಕರವಾಗಿರುವಂತೆ ಮಾಡುತ್ತದೆ. ಚರ್ಮಕ್ಕೆ ಸೂರ್ಯನ ತಾಪದಿಂದ ಆಗುವ ತೊಂದರೆಯನ್ನು ತಪ್ಪಿಸುತ್ತದೆ. ದಿನಾ ಒಂದೆರೆಡು ಚಮಚ ಅಗಸೆ ಬೀಜ ಹಸಿಯಾಗಿ ತಿನ್ನೋದ್ರಿಂದ ಮುಖದ ಮೇಲೆ ಮೊಡವೆಗಳು ಆಗುವುದಿಲ್ಲ.


ಕೂದಲುಗಳ ಸಮಸ್ಯೆಗೆ ಪರಿಹಾರ:-
ದಿನಾ ಅಗಸೆ ತಿನ್ನೋದ್ರಿಂದ ಕೂದಲುದುರುವುದು ನಿಲ್ಲುತ್ತದೆ. ಅಗಸೆ ಎಣ್ಣೆ ತಲೆಗೆ ಹಚ್ಚೊದ್ರಿಂದ ತಲೆ ಹೊತ್ತು ಕಮ್ಮಿ ಆಗುತ್ತದೆ. ಬೊಕ್ಕ ತಲೆ ಆಗಲು ನಮ್ಮ ದೇಹದಲ್ಲಿನ ಟೆಸ್ಟೋಸ್ಟೀರಾನ್  ಹಾರ್ಮೂನ್ ಕಾರಣ. ಈ ಹಾರ್ಮೋನ್ ಮಟ್ಟವನ್ನ ಸುಧಾರಿಸಿ ಬೊಕ್ಕ ತಲೆಯಲ್ಲಿ ಕೂದಲು ಉದುರುವುದು ನಿಲ್ಲುತ್ತದೆ.

 
ಈ ಅಗಸೆ ಬೀಜ ತನ್ನಲ್ಲಿರುವ ಪೌಷ್ಠಿಕಾಂಶಗಳಿಂದ ಇತ್ತೀಚಿಗೆ ಎಲ್ಲರ ಗಮನ ಸೆಳೆಯುತ್ತಿದೆ.  ದೇಹಕ್ಕೆ ಬೇಕಾಗುವಷ್ಟು ಫೈಬರ್, ಅಂಟಿ  ಆಕ್ಸಿಡೆಂಟ್ಸ್ , ಕಬ್ಬಿಣ, ಉತ್ತಮ ಕೊಬ್ಬಿನ ಅಂಶ ಹೊಂದಿದೆ. ಅಗಸೆನಾ ಸೊಪ್ಪು, ಬೀಜ ಮತ್ತು ಎಣ್ಣೆ ರೂಪದಲ್ಲಿ ಬಳಸಬಹುದು. ಮೀನು ತಿಂದಾಗ ಸಿಗುವ ಒಮೇಗಾ- ೩ ಅಗಸೆಯಲ್ಲಿ ಸಿಗುತ್ತೆ.  ಚರ್ಮ ಕೂದಲು ಅಲ್ಲದೆ ದೇಹದ ಹಲವು ಅಂಗಾಂಶಗಳಿಗೆ ಇದರ ಉಪಯೋಗಗಳಿವೆ.   ಆರೋಗ್ಯದ ಅವಶ್ಯಕತೆಗಾಗಿ ಮತ್ತೆ ಜನರು ನಮ್ಮ ಪೂರ್ವಿಕರ ಆಹಾರ ಪಧ್ದತಿಯ ಮೊರೆ ಹೋಗುತ್ತಿದ್ದಾರೆ. ಆಧುನಿಕ ವಿದೇಶೀ ಆಹಾರದ ಮಧ್ಯೆ ಕತ್ತಲಿಗೆ ಸರಿದಿದ್ದ ಅಗಸೆ ಬೀಜ ಮತ್ತೆ  ಬೆಳಕಿಗೆ ಬರುತ್ತಿದೆ.

ಅಗಸೆ ಕಾಳಿನ ಚಟ್ನಿ ಪುಡಿ, ಅಗಸೆ ಸೊಪ್ಪಿನ ಪಲ್ಯ, ಅಗಸೆ ಕಾಲಿನ ಎಣ್ಣೆ , ರೂಪದಲ್ಲಿ ಉಪಯೋಗಿಸಬಹುದು. ಅಗಸೆ ಕಾಲಿನ ಎಣ್ಣೆ ತೆಗೆದ ಮೇಲೆ ಬರುವ ಹೊತ್ತು ದನಕರುಗಳಿಗೆ ಹಿಂಡಿ  ರೂಪದಲ್ಲಿ ತಿನ್ನಿಸುತ್ತಾರಂತೆ.   


ಸಂಗ್ರಹ : ( ಅಂತರ್ಜಾಲ ತಡಕಾಡಿ ಹೆಕ್ಕಿ ಬರೆದದ್ದು )


Friday, 28 July 2017

ನಾನು ಮಾಡಿದ ಅಗಸೆ ಬೀಜದ ಚಟ್ನಿ ಪುಡಿ


 ಅಗಸೆ ಬೀಜಗಳು
ಹೀಗೆ ಒಂದಿನ ಅಂಗಡಿಗೆ ಹೋದಾಗ,  ಅಗಸೆ ಬೀಜ ಅಂತ ಹೆಸರು ಇರೋ ಬೀಜಗಳ ಪೊಟ್ಟಣ ನನ್ನ  ಕಣ್ಣಿಗೆ ಬಿತ್ತು. ಟ್ರೈ ಮಾಡಿ ನೋಡೋಣ ಅಂತ ತೊಗೊಂಡು ಬಂದೆ.  ನಮ್ಮ ಮನೆಯಲ್ಲಿ ಅಗಸೆ ಬೀಜವನ್ನ ತಂದೆ. ಅದನ್ನ ಹೇಗೆ ಅಡುಗೆಯಲ್ಲಿ ಬಳಸೋದು ಅಂತ ನಂಗೆ ಗೊತ್ತಿರಲಿಲ್ಲ.  ಯಾಕಂದ್ರೆ ನಾನು ಇದುವರೆಗೂ ಅದರ ಹೆಸರು ಕೇಳಿದ್ದೆ, ಚಟ್ನಿ ಪುಡಿ ತಿಂದಿದ್ದೆ. ಅಷ್ಟೇ.  ಅದೂ ನಾನು ಹಾಸ್ಟೆಲ್ ನಲ್ಲಿ ಇದ್ದಾಗ ಉತ್ತರ ಕರ್ನಾಟಕದಿಂದ ಬಂದಿದ್ದ ನನ್ನ ಕೆಲವು ಗೆಳತಿಯರು ಅದರ ಚಟ್ನಿ ಪುಡಿಯನ್ನ ತೊಗೊಂಡು ಬರ್ತಿದ್ರು.  ಆಗ ರುಚಿ ನೋಡಿದ ನೆನಪು ನನ್ನ ನಾಲಿಗೆಗೆ ಸ್ವಲ್ಪ ಗೊತ್ತಿತ್ತು ಅಷ್ಟೇ.   ಪ್ರತಿ ದಿನ ಅದನ್ನ ಏನು ಮಾಡೋದು ಅಂತ ಯೋಚನೆ ಮಾಡೋದು ಇನ್ನೊಂದು ದಿನ ಮಾಡಿದರಾಯ್ತು ಅಂತ ವಾಪಾಸ್ ಇಡೋದು .ಇದೇ ಆಗಿತ್ತು . ಒಂದು ದಿನ ನನ್ನ ವಾಟ್ಸ್ ಅಪ್ ಗ್ರೂಪ್ ಗಳಲ್ಲಿ ಅಗಸೆ ಬೀಜದ ಫೋಟೋ ಹಾಕಿ, ಇದರ ಚಟ್ನಿ ರೆಸೆಪಿ ಹೇಳಿ ಅಂತ ಹಾಕಿದೆ. ಅದರಲ್ಲಿ ಅಂಬಿಕಾ ಅನ್ನೋ ನನ್ನ ಗೆಳತಿ  ಮಾಡೋ ರೀತಿಯನ್ನ ಕಳಿಸಿದಳು. ಹಾಗೇ ನಾನು ಅದರ ಪ್ರಕಾರ ಚಟ್ನಿ ಪುಡಿ ಮಾಡಿದೆ. ಮೊದಲ ಬಾರಿಯೇ ಅತಿ ರುಚಿಕಟ್ಟಾದ ಚಟ್ನಿ ಪುಡಿ ರೆಡಿ ಆಗಿತ್ತು. ನನ್ನ ಮಕ್ಕಳಿಗೂ ತುಂಬಾ ಇಷ್ಟ ಆಯ್ತು.  ಈ ಅಗಸೆ ಬೀಜ ಗೊತ್ತಿರದವರಿಗೆ ತಿಳಿಸಲೆಂದು ಈ ಲೇಖನ ಬರೀತಾಯಿದೀನಿ. ಹಾಗೆ ಅದನ್ನ ಇತರರು ರುಚಿ ನೋಡ್ಲಿ ಅಂತ ಅದನ್ನ ಮಾಡುವ ರೀತಿಯನ್ನ ಇಲ್ಲಿ ಬರೀತಾಯಿದೀನಿ.

ಅಗಸೆ ಬೀಜದ ಚಟ್ನಿ ಪುಡಿ

ಅಗಸೆ ಬೀಜದ ಚಟ್ನಿ ಮಾಡುವ ವಿಧಾನ :-



ಬೇಕಾಗಿರುವ ಸಾಮಗ್ರಿಗಳು 

ಮೊದಲು ಅಗಸೆ ಬೀಜಗಳನ್ನ ಕಡಿಮೆ ಉರಿಯಲ್ಲಿ  ಕಾಳುಗಳು ದುಂಡಗೆ, ಸ್ವಲ್ಪ ಕಂದು ಬಣ್ಣ ಬರುವಂತೆ, ಹಸಿವಾಸನೆ ಹೋಗುವಂತೆ ಹುರಿದುಕೊಳ್ಳಬೇಕು. ಜೊತೆಗೆ ಶೇಂಗಾ ಬೀಜಗಳನ್ನು ಸ್ವಲ್ಪ ಹುರಿದುಕೊಳ್ಳಬೇಕು. ಅದಕ್ಕೆ ಒಂದು ಚಿಕ್ಕ ಚಮಚ ಜೀರಿಗೆ , ಒಂದು ಚಿಕ್ಕ ಚಮಚ ಖಾರದ ಪುಡಿ, ರುಚಿಗೆ ಎಷ್ಟು ಬೇಕೋ ಅಷ್ಟು ಉಪ್ಪು, ಒಂದೆರೆಡು ಎಸಳು ಹುಣಸೇಹಣ್ಣು, ಒಂದು ದೊಡ್ಡ ಗಾತ್ರದ ಬೆಳ್ಳುಳ್ಳಿ, ಒಂದು ನಿಂಬೆಹಣ್ಣು ಗಾತ್ರದ ಬೆಲ್ಲ   ಎಲ್ಲವನ್ನು ಸೇರಿಸಿ ಮಿಕ್ಸಿಗೆ ಹಾಕಿ ಪುಡಿ ಮಾಡಬೇಕು. ನೀರು ತಾಕಿಸಬಾರದು.


ಮಿಕ್ಸರ್ ನಲ್ಲಿ  ತಯಾರಾಗಿರುವ ಅಗಸೆ ಚಟ್ನಿ ಪುಡಿ 


Monday, 24 July 2017

ಶ್ರಾವಣ ಮಾಸ ಬಂದಾಗ - ಹಬ್ಬಗಳು ಬಂದಾಗ

ಶ್ರಾವಣ ಬಂತೆಂದರೆ ನಮ್ಮ ಹೆಣ್ಣುಮಕ್ಕಳ ಕಣ್ಣುಗಳಲ್ಲಿ ಸಂತಸದ ಛಾಯೆ ಎದ್ದು ಕಾಣುತ್ತಿರುತ್ತದೆ. ಎಲ್ಲ ಹೆಣ್ಣುಮಕ್ಕಳ ಸಮೂಹ ಒಟ್ಟುಗೂಡಿ ಹಬ್ಬಗಳ ಆಚರಣೆಗೆ ಮುಂದಾಗುತ್ತಾರೆ. ಭೀಮನ ಅಮಾವಾಸ್ಯೆಯಿಂದ ಶುರುವಾಗೋ ನಮ್ಮ ಹೆಣ್ಣುಮಕ್ಕಳ ವ್ರತಗಳು, ಹಬ್ಬಗಳು,  ಮನೆ- ಮಂದಿ,  ಊರು- ಕೇರಿ, ಕಣ್ಣು ಹೊರಳಿದ ಕಡೆಯಲ್ಲೆಲ್ಲಾ ಹೊಸತನದ ರಂಗು ಚಿಮ್ಮುತ್ತಿರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಮನೆಯ ಸುಖ ಸಮೃದ್ಧಿಗಾಗಿ ಹೆಣ್ಣುಮಕ್ಕಳು ಪೂಜೆ ವ್ರತಾಚಾರಣೆಗಳನ್ನ  ಮಾಡುವುದು  ಸಾಮಾನ್ಯ.

ಮಂಗಳ ಗೌರೀ ವ್ರತ  
 ಶ್ರಾವಣ ಮಾಸ ಎಂದರೆ ಶಿವನ ಮಾಸ ಎಂದು ಹೇಳಲಾಗುತ್ತದೆ. ನಮ್ಮೂರಿನ ಕಡೆ ಶ್ರಾವಣ ಮಾಸದಲ್ಲಿ ಅವರವರ ಮನೆಯ ರೂಢಿಯಂತೆ ಕುಲ ದೇವರ  ವಾರಗಳ  ದಿನಗಳಂದು  ವಿಶೇಷವಾಗಿ ಪೂಜೆ ಮಾಡುತ್ತಾರೆ.  ಅಂದು ಮನೆಯಲ್ಲಿ ಸಿಹಿ ಮಾಡಿ ಉಣ್ಣುತ್ತಾರೆ. ನಾವು ಚಿಕ್ಕವರಿದ್ದಾಗ ನಮ್ಗೆಲ್ಲಾ  ಶ್ರಾವಣ  ಅಂದ್ರೆ  ವಿವಿಧ ಬಗೆಯ ಊಟ ಮತ್ತು ವಿಶೇಷ ತಿಂಡಿಗಳನ್ನ ಚಪ್ಪರಿಸಿ ತಿನ್ನುವ  ಖುಷಿ. 

ನಾವು ಚಿಕ್ಕವರಿದ್ದಾಗ ಶ್ರಾವಣ ಮಾಸದಲ್ಲಿ ನಮ್ಮ ಮನೆಗಳಲ್ಲಿ ನಮಗೆ ವಹಿಸುತ್ತಿದ್ದ ಸಾಮಾನ್ಯ ಕೆಲಸ ಹೀಗಿತ್ತು ಸೋಮವಾರ ಬಸವಣ್ಣ ಮತ್ತು ಶಿವನ ಗುಡಿಗೆ,  ಮಂಗಳವಾರ, ಶುಕ್ರವಾರ , ಕುಕ್ಕಡದಮ್ಮ, ಕಾಳಮ್ಮ, ಕರಿಯಮ್ಮ ಗುಡಿಗಳಿಗೆ, ಗುರುವಾರ ದತ್ತಾತ್ರೇಯ ಆಶ್ರಮಕ್ಕೆ, ಶನಿವಾರ ಆಂಜನೇಯ ಗುಡಿಗಳಿಗೆ  ಎಣ್ಣೆ ಬತ್ತಿ , ಕಾಯಿ , ಬಾಳೆಹಣ್ಣು ,  ಊದುಬತ್ತಿ, ಎಡೆ  ಎಲ್ಲ ತೊಗೊಂಡ್ ಹೋಗಿ ಪೂಜೆ ಮಾಡಿ ಎಡೆ ಕೊಟ್ಟು ಬರೂ ಕೆಲಸ ವಹಿಸುತ್ತಿದ್ರು. ನಾವು ಗುಡಿಗಳಿಗೆ ಹೋದಾಗ ಅಲ್ಲಿ  ಗುಡಿಗಳಲ್ಲಿ ಎಷ್ಟೊಂದು ರೀತಿಯ ಎಡೆ ಇರ್ತಿದ್ವು  ಅಂದ್ರೆ!!! ನಮ ಬಾಯಲ್ಲಿ ನೀರು ಬರ್ತಿತ್ತು. ಕೆಲವೊಮ್ಮೆ ನಮ್ಮ ಇಷ್ಟದ ತಿಂಡಿಗಳು ಇದ್ರೆ ಅದು ನಮ್ಮ ಹೊಟ್ಟೆ ಸೇರೋದು ಖಾಯಂ ಆಗಿತ್ತು. ಗಿಣ್ಣವನ್ನ ಎಡೆಯಾಗಿ ಯಾರಾದ್ರೂ ಕೊಟ್ಟಿದ್ರಂತೂ ಅದು ನಮ್ಮೊಟ್ಟೆ ಸೇರೇಸೇರ್ತೀತ್ತು.  ಅಲ್ಲಿ ಯಾರಾದ್ರೂ ದೊಡ್ಡೋರು ನೋಡಿದ್ರೆ ದೇವ್ರಿಗೆ ಅಂತ ಎಡೆ  ಇಟ್ಟಿದ್ದನ್ನ ತಿನ್ನಬಾರದು ಅಂತ ಬೈಯ್ಯೋವ್ರು. ನಾವು ಅವ್ರಿಗೆ ತಿರುಗಿಸಿ 'ನಿಮ್ಮನೆ ಎಡೆ ನಾವೇನು ಮುಟ್ಟಿಲ್ಲ ಬಿಡಿ' ಅಂತ ತಿರುಗಿಸಿ ಉತ್ರ ಕೊಡುತಿದ್ವಿ.  ಇನ್ನು ಕೆಲವರು ಚಿಕ್ಕಮಕ್ಳು ತಿಂದ್ರೆ ಏನು ಆಗಲ್ಲ ತಿನ್ನಿ ತಿನ್ನಿ ಅಂತ ಪ್ರೋತ್ಸಾಹಿಸುತ್ತಿದ್ರು. ಇದು ನಮ್ಮ ಚಿಕ್ಕಂದಿನ ಶ್ರಾವಣ.

ವರಮಹಾಲಕ್ಷ್ಮಿ ವ್ರತ 
ಆಗೆಲ್ಲ ನಮಗೆ ಶ್ರಾವಣ ಅಂದ್ರೆ ಏನು? ಅದರ ವಿಶೇಷತೆ ಏನು ? ಏನೂ  ಗೊತ್ತಿರ್ಲಿಲ್ಲ, ಶ್ರಾವಣದ  ಬಗ್ಗೆ ಮೇಲೆ ಹೇಳಿದ ಸಂಗತಿಗಳು ಮಾತ್ರ ಈಗ ನಮಗೆ ನೆನಪಿರುವುದು.  ಆಮೇಲೆ  ನಾವು ಬೆಳೆದಂತೆ ತವರು ಮನೆ - ಗಂಡನ ಮನೆ ಅಂತ ನಾವು ಕೂಡ ಕೆಲವೊಂದು ಆಚರಣೆಗಳನ್ನ ಪಾಲಿಸಿಕೊಂಡು ಹೋಗುವ ಜವಾಬ್ದಾರಿಗಳು ಬಂದವು. ಅದರ ಜೊತೆ . ಕೆಲವೊಂದು ರೂಢಿಗಳನ್ನ  ಮನೆಯಲ್ಲಿ ಹೇಳಿಕೊಟ್ಟರೆ,  ಇನ್ನು ಕೆಲವು ನ್ಯೂಸ್ ಪೇಪರ್ ಓದಿ , ಟಿವಿ ಕಾರ್ಯಕ್ರಮಗಳನ್ನು ನೋಡಿ, ಅಥವಾ ಸುತ್ತ ಮುತ್ತ ಕೆಲವರು ಮಾಡುವದನ್ನು ನೋಡಿ.  ಒಹೋ ಇದನ್ನ ಮಾಡಿದರೆ ನಮಗೆ ಒಳ್ಳೆಯದಾಗುತ್ತೆ ಅನ್ನೋ ಆಸೆಯಲ್ಲಿ , ಈ ರೀತಿಯಾಗಿ ಹಲವಾರು ವ್ರತ ಪೂಜೆಗಳನ್ನ ರೂಢಿಸಿಕೊಂಡು ಶ್ರಾವಣದಲ್ಲಿ ಪ್ರತಿ ದಿನ ಹಬ್ಬ ಎನ್ನುವಂತೆ ವ್ರತಾಚರಣೆಗಳನ್ನ ಮಾಡುತ್ತಿದ್ದೇವೆ.

ಋತುಗಳ ರಾಜ ವಸಂತ ಋತುವಾದರೆ, ಮಾಸಗಳ ರಾಜ ಶ್ರಾವಣ ಮಾಸ ಎನ್ನಬಹುದೇನೋ. ಈ ಶ್ರಾವಣ ಮಾಸದಲ್ಲಿ ಬರುವಷ್ಟು ಹಬ್ಬ ಮತ್ತು ವ್ರತಾಚರಣೆಗಳು ಇನ್ನಾವ ಮಾಸದಲ್ಲೂ ಬರುವುದಿಲ್ಲ ಎಂದೇ ಹೇಳಬಹುದು.

ಪಂಚಾಂಗದ ಪ್ರಕಾರ ಶ್ರಾವಣ ಮಾಸದಲ್ಲಿ ಒಂದೇ ರೇಖೆಯಲ್ಲಿ ೧೭ ನಕ್ಷತ್ರಗಳು ಮಳೆಯನ್ನೂ ತರುತ್ತವೆ.

ನಮ್ಮಲ್ಲಿ ಆಷಾಢ ಮಾಸದಲ್ಲಿ ಅತ್ತೆ-ಸೊಸೆ, ಮಾವ-ಅಳಿಯ, ಗಂಡ-ಹೆಂಡತಿ ಒಂದೇ ಮನೆಯಲ್ಲಿ ಇರುವಂತಿಲ್ಲ.  ಮತ್ತು ಒಬ್ಬರ ಮುಖ ಒಬ್ಬರು ನೋಡುವಂತಿಲ್ಲ.  ಎಂಬ ವಾಡಿಕೆ ಇದೆ. ಆಷಾಢ ಮಾಸ ಕಳೆದ ನಂತ್ರ ಬರುವುದೇ ಈ ಶ್ರಾವಣ ಮಾಸ.  ಈ ಮಾಸದಲ್ಲಿ ದೂರಾಗಿದ್ದ ಗಂಡ - ಹೆಂಡತಿ , ಅತ್ತೆ - ಸೊಸೆ, ಮಾವ - ಅಳಿಯ, ಮುಖಾ ಮುಖಿಯಾಗಿ ಭೇಟಿಯಾಗುತ್ತಾರೆ. ಅದೂ ಹಲವು ಹಬ್ಬಗಳನ್ನ ಆಚರಿಸುವ ಮೂಲಕ!!.

ಮೊದಲು ಬರುವುದು ಭೀಮನ ಅಮಾವಾಸ್ಯೆ ಹೆಂಡತಿ ತನ್ನ ತಾಳಿ ಭಾಗ್ಯ ಗಟ್ಟಿ ಇರಲೆಂದು ಗಂಡನ ಆಯಸ್ಸು ಆರೋಗ್ಯ ಮತ್ತು ಸಮೃದ್ಧಿಗೆ ಶಿವನನ್ನು ಕುರಿತು ಮಾಡುವ ವ್ರತವಾಗಿದೆ. ಹೀಗೆ ಮಂಗಳ ಗೌರಿ, ನಾಡಹಬ್ಬ ನಾಗ ಚತುರ್ಥಿ (ಪಂಚಮಿ), ಬಸವ ಪಂಚಮಿ,  ಮಂಗಳ ಗೌರೀ ವ್ರತ, ವರಮಹಾಲಕ್ಷ್ಮೀ ವ್ರತ, ಗಾಯತ್ರೀ ಆರಾಧನೆ, ಶ್ರೀ ಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ, ಹೀಗೆ ಒಂದೊಂದಾಗಿ ಹಬ್ಬಗಳು ಆಚರಿಸಲ್ಪಡುತ್ತವೆ.

ನಾಗಪಂಚಮಿ 

Friday, 21 July 2017

ಡಾಕ್ಟರ್ ಫಿಶ್- ಕೆಲವು ಚರ್ಮದ ತೊಂದರೆಗಳಿಗಾಗಿ

ಡಾಕ್ಟರ್ ಫಿಶ್ ಏನಪ್ಪಾ ಇದು ಮೀನುಗಳು ಯಾವಾಗ ಡಾಕ್ಟರ್ ಸರ್ಟಿಫಿಕೇಟ್ ತೊಗೊಂದ್ವು  ಅಂತ ಅನ್ನಿಸ್ತಿದ್ಯಾ?  ಮೊದಲು ನಂಗು ಕೂಡ ಹಾಗೆ ಅನ್ನಿಸ್ತು. ಹೋದ ಶನಿವಾರ ಮೈಸೂರ್ಗೆ ಹೋದಾಗ,  ಅಲ್ಲಿ  ಕ್ಲೇ ಮ್ಯೂಸಿಯಂ ಹತ್ರ ಒಂದು ಫಿಶ್ ಟ್ಯಾಂಕ್ ನಲ್ಲಿ  ಚಿಕ್ಕ ಮೀನುಗಳು ಇದ್ವು ಕೆಲವರು ಅದರೊಳಗೆ  ಕಾಲು ಇಳಿಸಿಕೊಂಡು ಕೂತಿದ್ರು. ಡಾಕ್ಟರ್ ಫಿಶ್ ಸ್ಪಾ.  ಪರ್ ೧೦೦ ಫಾರ್ ೧೦ ಮಿನಿಟ್ಸ್ ಅಂತ ಬರೆದಿತ್ತು.  ನೋಡೋಣ ಒಂದು ಟ್ರೈ ನಾನು ಮಾಡೋಣ ಅಂತ ೧೦೦ ರೂಪಾಯಿ  ಕೊಟ್ಟು ನಾನು ಆ ಡಾಕ್ಟರ್ ಫಿಶ್ ಟ್ಯಾಂಕ್ ಒಳಗೆ ಕಾಲಿಟ್ಟು ಕುಳಿತೆ. ನಾನು ಕಾಲ್ನ ನೀರಿಗೆ ಇಳಿಸಿದ್ದೀ ತಡ ಆ ಟ್ಯಾಂಕ್ ನಲ್ಲಿದ್ದ  ಫಿಶ್ ಗಳೆಲ್ಲ ನನ್ನ ಕಾಲಿಗೆ ಮುತ್ತಾಕೊಂಡುಬಿಟ್ಟವು. ತಕ್ಷಣ ಭಯ ಆಯ್ತು, ನಂತ್ರ ಅವು ನನ್ನ ಪಾದಗಳಿಗೆ ಕಚಗುಳಿ ಕೊಡ್ತಾಯಿದ್ವು. ನಂತ್ರ ಭಯ ಹೋಗಿ ಮೀನುಗಳ  ಕಚಗುಳಿ ತಡ್ಕೊಳ್ಳೊಗಾಗ್ದೇ ನಗು ಬರ್ತಿತ್ತು.




ಹಾಗೆ ಮೀನುಗಳ  ಮಾಲೀಕಳನ್ನ ಕೇಳಿದೆ ಏನಿದರ ವಿಶೇಷ?  ಎಲ್ಲಿಂದ ನೀವು ಇದನ್ನ ತೊಗೊಂಡ್ ಬರ್ತೀರಾ ಅಂತ. ಅದಕ್ಕೆ ಆಕೆ ಕೊಟ್ಟ ಉತ್ತರ ಇವುಗಳ ಹೆಸರು ಡಾಕ್ಟರ್ ಫಿಶ್ ಅಥವಾ  ಸರ್ಜನ್ ಫಿಶ್ ಅಂತ.  ಈ ಮೀನುಗಳು  ನಮ್ಮ ದೇಹದ ಡೆಡ್ ಸ್ಕಿನ್, ಇನ್ಫೆಕ್ಷನ್, ಕೊಳೆಯ ಭಾಗವನ್ನ ತಿಂದು ಸ್ಕಿನ್ ನನ್ನ ಕ್ಲೀನ್ ಮಾಡುತ್ತವೆ. ಹಾಗೆ ನರಗಳ ರಕ್ತ ಪರಿಚಲನೆಗೆ ಹೆಲ್ಪ್ ಮಾಡುತ್ತವೆ.  ವಿದೇಶಗಳಲ್ಲಿ ಸ್ಕಿನ್ ಪ್ರಾಬ್ಲೆಮ್ಸ್ ಗೆ ಈ ಫಿಶ್ ನ ಉಪಯೋಗಿಸುತ್ತಾರೆ. ನಮ್ಮ ಆಯುರ್ವೇದದಲ್ಲಿ ಗಿಜಣೆ ಗಳನ್ನು ಬಳಸುವುದಿಲ್ವ ಹಾಗೆ ಇದು ಒಂದು ರೀತಿಯ ಟ್ರೀಟ್ಮೆಂಟ್ ಅಂತ ಹೇಳಿದ್ಲು. ಇತ್ತೀಚಿನ ದಿನಗಳಲ್ಲಿ ಸ್ಪಾ ಗಳಲ್ಲಿ ಈ ಫಿಶ್ ಗಳ  ಹೆಚ್ಚು ಬೇಡಿಕೆ ಇದೆ ಅಂತ ಹೇಳಿದ್ಲು. 

ವಾಪಸ್ ಬೆಮನೆಗೆ ಬಂದ್ರೂ ಆ ಡಾಕ್ಟರ್ ಫಿಶ್ ವಿಷಯ ನನ್ನ ತಲೇಲಿ  ಗಿರಾಕಿ ಹೊಡಿತಾಯಿತ್ತು. ನೋಡೋಣ ಅಂತ ಕುತೂಹಲಕ್ಕೆ ಗೂಗಲ್ ಸರ್ಚ್ ಮಾಡಿದಾಗ ನಂಗೆ ಸಿಕ್ಕ ಡಾಕ್ಟರ್ ಫಿಶ್ ನ ಕೆಲವು  ಮಾಹಿತಿಗಳನ್ನ ಇಲ್ಲಿ ಬರೀತಾಯಿದೀನಿ. 

ಈ ಡಾಕ್ಟರ್ ಫಿಶ್ ನ ನಿಜವಾದ ಹೆಸರುಗಳು  ಗರ್ರ ರುಫಾ , ನಿಬ್ಬಲ್ ಫಿಶ್ ,ಕಂಗಾಲ್ ಫಿಶ್ , ಬೋನೇಫಿಶ್  ಈ ಮೀನು ಸಿಪ್ರಿನಿಡ್ ಅನ್ನೋ ತಳಿಯ ಮೀನುಗಳ ಗುಂಪಿನಲ್ಲಿ ಬರುತ್ತವೆ.  ಇದು ಸಾಮಾನ್ಯವಾಗಿ ಸಿಹಿನೀರಿನ ಕೊಳಗಳು , ಸರೋವರ,  ಹೊಂಡ,  ನದಿಗಳಲ್ಲಿ ಕಂಡುಬರುತ್ತವೆ. ನೀರಿನಲ್ಲಿನ ಪಾಚಿ, ಮತ್ತು ಸಣ್ಣ ಪುಟ್ಟ ಗಿಡಗಳು, ನೀರಿನಲ್ಲಿರುವ ಪ್ರಾಣಿಗಳ ಮೇಲಿನ ಡೆಡ್ ಸ್ಕಿನ್  ಇವು ಇವುಗಳ ಊಟ. ಈ ಡಾಕ್ಟರ್ ಮೀನುಗಳು ಚರ್ಮದಲ್ಲಿನ ಡೆಡ್ ಸ್ಕಿನ್,  ಕ್ರಿಮಿ, ಕೊಳೆ  ತಿನ್ನುವುದರಿಂದ ಈ ಫಿಷ ನನ್ನ ಆಹಾರವಾಗಿ ತಿನ್ನಲು ಯೋಗ್ಯವಲ್ಲ ಎನ್ನುವರು. 

ಇವು ಸಾಮಾನ್ಯವಾಗಿ ಕಂಡುಬರುವುದು, ಟರ್ಕಿ, ಸಿರಿಯಾ,ಓಮನ್, ಇರಾಕ್, ಇರಾನ್,ದೇಶಗಳಲ್ಲಿ ಹೆಚ್ಚು ಪ್ರಮಾಣಗಳಲ್ಲಿ ಕಂಡುಬರುತ್ತವೆ. ಟರ್ಕಿ ದೇಶದಲ್ಲಿ ಸರ್ಕಾರವೇ ಕಾನೂನು ಬಧ್ದಹವಾಗಿ ರಫ್ತು  ಮಾಡುವ ಉದ್ದೇಶದಿಂದ ರಕ್ಷಣೆ ಮಾಡುತ್ತದೆ. 

೨೦ ನೇ  ಶತಮಾನದಿಂದ ಈ ಮೀನುಗಳನ್ನು ಕೆಲವೇ ದೇಶಗಳಲ್ಲಿ ಸೋರಿಯಾಸಿಸ್ ನಂತಹ ಚರ್ಮ ರೋಗಕ್ಕೆ ಟ್ರೀಟ್ಮೆಂಟ್ ರೀತಿ ಬಳಸುತ್ತಿದ್ದರು. ಇತ್ತೀಚಿಗೆ ಸ್ಪಾ ಗಳಲ್ಲಿ ಪೆಡಿಕ್ಯೂರ್ ಮತ್ತು ಬಾಡಿ ಮಸಾಜ್ ಮಾಡಲು ಈ ಡಾಕ್ಟರ್ ಫಿಶ್ ಗಳ  ಮೊರೆ ಹೋಗುತ್ತಿದ್ದಾರೆ. ಇತ್ತೀಚಿಗೆ ಚೀನಾ, ಜಪಾನ್, ಇಂಡಿಯಾ ಮುಂತಾದ ದೇಶಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ.   

Thursday, 20 July 2017

ಸಾಮಾನ್ಯ ವ್ಯಕ್ತಿ ನಾಯಕನಾದಾಗ - ಒಂದು ಮೊಟ್ಟೆಯ ಕಥೆ

ಇತ್ತೀಚಿನ ಸಿನೆಮಾಗಳನ್ನ ನೋಡಿದಾಗ ಫೇಮಸ್ ನಾಯಕ , ಫೇಮಸ್ ನಾಯಕ ನಟಿ, ಅದ್ದೂರಿ ಸೆಟ್, ಅವಾಚ್ಯ ಮಾತುಗಳು ,ಹೊಡೆದಾಟ ಬಡಿದಾಟಗಳು , ಚಾಕು, ಚೂರಿ, ಮಚ್ಚು, ಕತ್ತಿ, ರಕ್ತ, ಇವುಗಳು ಇದ್ರೆ  ಒಳ್ಳೆ ಸಿನಿಮಾ ಮಾಡಬಹುದು.  ಜನರ ಮನಸ್ಸನ್ನ ಗೆಲ್ಲಬಹುದು  ಅನ್ನೋ  ಜನ ಒಂದು ಕಡೆಯಾದ್ರೆ. ಇನ್ನು ಕೆಲವರು ಇತ್ತೀಚಿನ ದಿನಗಳಲ್ಲಿ ಹಣ ಗಳಿಸುವ ಭರ ಮತ್ತು ಜನರ ಮನಸ್ನಲ್ಲಿ ನಾವು ಸದಾ ಇರಬೇಕು ಅನ್ನೋ ಆಸೆ. ಒಳ್ಳೆ ರೀತಿಯಲೋ  ಅಥವಾ ಕೆಟ್ಟ ರೀತಿಯಲೋ ಒಟ್ಟು ಪ್ರಚಾರದಲ್ಲಿ ಇರಬೇಕು ಅನ್ನೋ ಮನೋಭಾವನೆ ಈಗ ಚಿತ್ರರಂಗದಲ್ಲಿ ಇದೆ. ಒಟ್ಟಿನಲ್ಲಿ ಜನ ಅವರುಗಳ ಬಗ್ಗೆ ಮಾತಾಡಿಕೊಳ್ಳುತ್ತಾನೆಯೇ ಇರಬೇಕು ಅದಕ್ಕೋಸ್ಕರ ಎಂಥಾ ಚೀಪ್ ಗಿಮಿಕ್ ಮಾಡೋಕು ರೆಡಿ ಇರ್ತಾರೆ ಕೆಲವರು. ಅಂತಹುದರಲ್ಲಿ  ಯಾವುದೇ ಅತಿರೇಕಗಳನ್ನ ಮಾಡದೇ ಸರಳ ಸುಂದರ ಸಿನೆಮಾ ಮಾಡಿ ಗೆದ್ದಿದೆ.  ರಾಜ್ ಕುಮಾರ್ ರವರನ್ನು ಆದರ್ಶವಾಗಿಟ್ಟು ಕೊಂಡು ಬದುಕುವ ಮೊಟ್ಟೆ ತಲೆಯ ವ್ಯಕ್ತಿ ಜೀವನ ಸುಂದರವಾಗಿ ಮೂಡಿಬಂದಿದೆ.  



ಈ ಭಾನುವಾರ ನಾ ನೋಡಿದ ಸಿನೆಮಾ ಒಂದು ಮೊಟ್ಟೆಯ ಕಥೆ . ಸಾಮಾನ್ಯವಾಗಿ ಎಲ್ಲಾ ಚಿತ್ರಗಳಲ್ಲಿರುವಂತ ಅತಿರೇಕಗಳು ಈ ಚಿತ್ರದಲ್ಲಿ ಇಲ್ಲ. ಅಂದ್ರೆ  ನಾಯಕ - ಖಳ ನಾಯಕರ ಹೊಡೆದಾಟ ಬಡಿದಾಟವಿಲ್ಲದ, ನಾಯಕಿಯರ ದೇಹಪ್ರದರ್ಶನವಿಲ್ಲ, ನಿಜವಾದ ಸೌಂದರ್ಯ ಅಂದ್ರೆ ಏನು ಎಂದು ತಿಳಿಸಿದ ಚಿತ್ರ, ಸಹ ನಟ - ನಟಿಯರನ್ನು ಹೊಡೆದು, ಬಡಿದು , ತಳ್ಳಿ  ತಮಾಷೆ ಮಾಡದೇ ನಗು ತರಿಸಿದ ಚಿತ್ರ . ಅತಿರೇಕ ಎನ್ನೋ ಸೆಂಟಿಮೆಂಟ್ ಡೈಲಾಗ್ ಇಲ್ಲದೆ ಕಣ್ಣಂಚಲ್ಲಿ ನೀರು ಜಿನುಗಿಸುತ್ತೆ. ಇದು ಅಂತ ನನಗೆ ಅನ್ನಿಸ್ತು.

ಇದು ಸಾಮಾನ್ಯ ಜನ ಜೀವನದಲ್ಲಿ ನಡೆಯುವ ಸತ್ಯ ಸಂಗತಿಗಳನ್ನ ತೆರೆ ಮೇಲೆ ಆಡಂಬರವಿಲ್ಲದೆ ಸರಳವಾಗಿ ನೈಜತೆಯಿಂದ ಚಿತ್ರಿಸಿರುವ ಸಿನೆಮಾ ಇದಾಗಿದೆ. ಜನಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಈ ಮೊಟ್ಟೆಯ ಕಥೆಯ ನಾಯಕ.  ಅವರವರ ಜೀವನಕ್ಕೆ ಅವರೇ ನಾಯಕ ನಾಯಕಿಯರು ಅಲ್ವ? ಹಾಗೆ ಒಬ್ಬ ಮೊಟ್ಟೆ ತಲೆಯ ವ್ಯಕ್ತಿ ಯೊಬ್ಬನ ಜೀವನವನ್ನ ಕೇಂದ್ರವಾಗಿಟ್ಟು ಮೂಡಿಬಂದಿರುವ ಸಿನೆಮಾ ಇದು. ಆತನಿಗೆ ತನ್ನ ಬೋಳು ತಲೆಯಿಂದ ಪ್ರತಿದಿನ ಆಗುವ ಅವಮಾನಗಳು.  ಮದುವೆಯಾಗುವ ಹುಡುಗಿಯರು ಆತನನ್ನು ರಿಜೆಕ್ಟ್ ಮಾಡಿದರೂ,,, ಈ ಬಾರಿ ಮದುವೆ  ಸಂಬಂಧ ಏನಾಯ್ತು? ಅಂತ ಯಾರಾದ್ರೂ ಕೇಳಿದ್ರೆ.  ಆತ ತಾನೇ ರಿಜೆಕ್ಟ್ ಮಾಡಿದೆ ಅನ್ನೋ ಸುಳ್ಳು ಸ್ವಾಭಿಮಾನದ ಮಾತು. ಸಮಯ ಸಂದರ್ಭಕ್ಕೆ ಸರಿಯಾಗಿ ಬರುವ ಅಣ್ಣಾವ್ರ ಹಾಡುಗಳು ಪ್ರತಿಬಾರಿ ನಗು ಬರಿಸುತ್ತವೆ . 


ತನ್ನ ಎದುರಿರುವ ಎಕನಾಮಿಕ್ಸ್ ಲೇಡಿ ಲೆಕ್ಚರ್ಳನ್ನು  ಇಷ್ಟ ಪಡುತ್ತಾನೆ. ನಂತ್ರ ಅವಳು ಕಾಲೇಜಗೆ ಹೊಸದಾಗಿ ಬರೋ ಸುಂದರ ಇಂಗ್ಲಿಷ್ ಲೆಕ್ಚರ್ ಮೇಲೆ ಮನಸಾಗುತ್ತೆ. ನಂತ್ರ ಅವರಿಗೆ ಮದುವೆ   ಆಗಿದೆ  ಅಂತ ಗೊತ್ತಾದ ಮೇಲೆ ಈ ಮೊಟ್ಟೆ ಹುಡುಗನ ಗುಣವೇ ಮೇಲು ಎನಿಸುತ್ತೆ ಆಕೆಗೆ. ಇನ್ನೊಂದು ಕಡೆ  ಬೋಳುತಲೆಗಳನ್ನೇ ಬಂಡವಾಳವಾಗಿಟ್ಟು  ಕೊಂಡು ತನ್ನ ಕೆಲಸ ಸಾಧಿಸಿಕೊಳ್ಳಲು ಜನರ ಹಾದಿತಪ್ಪಿಸುವ ಹುಡುಗಿ.  ಅಮಾಯಕರನ್ನ ಹಾದಿತಪ್ಪಿಸುವ ಸಮಾಜದ ಕೆಲವು ಕಪಟಿ ಜನರಿಗೆ ಒಳ್ಳೆ ಉದಾಹರಣೆ ಯಾಗುತ್ತಾಳೆ.

 ಈ ಮೊಟ್ಟೆ ಹುಡುಗನಿಗೂ ಅಷ್ಟೇ,,ನನ್ನನ್ನು ಮೊದಲು ಎಸ್ಟೋ  ಜನ ಹುಡುಗಿಯರು ರಿಜೆಕ್ಟ್ ಮಾಡಿದ್ರು ಅನ್ನೋದನ್ನು ಮರೆತು, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬ ಮಾತಿನಂತೆ ,,ಈತನನ್ನ ಇಷ್ಟಪಟ್ಟು, ಮನಸಾರೆ ಮದುವೆಯಾಗಲು ಒಪ್ಪಿಗೆ ಕೊಟ್ಟು, ತನ್ನ ಜೊತೆ ಎಂಗೇಜ್ ಮೆಂಟ್ ಆದ ಹುಡುಗಿ ದಪ್ಪ ಎಂದು, ಆಕೆಯನ್ನ ಮದುವೆಯಾದ್ರೆ  ಜೀವನವೇ ಜಿಗುಪ್ಸೆಯಾಗುತ್ತೆ ಅಂತ ಒಳಗೊಳಗೇ ಹಿಂಸೆ  ಪಡುತ್ತಿರುತ್ತಾನೆ. ಕೊನೆಗೊಂದು ದಿನ ಆಕೆಯೊಂದಿಗೆ ಮದುವೆಯನ್ನ ಮುರಿದುಕೊಳ್ಳುತ್ತಾನೆ. ಆಮೇಲೆ ತಾನು ಮಾಡಿದ್ದು  ತಪ್ಪು ಎಂದು ತಿಳಿದು  ಮತ್ತೆ ಆಕೆಯನ್ನೇ ಮದುವೆಯಾಗಲು ಚಡಪಡಿಸುವ ಪರಿ  ನೈಜತೆಯಿಂದ ಚಿತ್ರಿಸಿದ್ದಾರೆ.


ಮೊಟ್ಟೆ ನಾಯಕನ ಮನಸ್ಸು ಬದಲಾಯಿಸುವಲ್ಲಿ ಮುಖ್ಯ ಅನ್ನಿಸುವ ಪ್ರಸಂಗ ಎಂದರೆ ಕಾಲೇಜಿನಲ್ಲಿ ಈ ಮೊಟ್ಟೆಯ ಆಪ್ತ ಶ್ರೀನಿವಾಸ ಒಮ್ಮೆ ಆತನ ಮನೆಗೆ ಊಟಕ್ಕೆ ಕರೆಯುತ್ತಾನೆ. ಅವರ ಮನೆಗೆ ಹೋದಾಗ ಗೊತ್ತಾಗುತ್ತೆ ಆತನ ಹೆಂಡತಿ ಮೂಕಿ ಅಂತ.  ಆತನದು ಕೂಡ ಲವ್ ಮ್ಯಾರೇಜ್ ಅಂತ ನಾಯಕನಿಗೆ ಗೊತ್ತಿರುತ್ತೆ. ಆತ ಶ್ರೀನಿವಾಸನನ್ನು ಕೇಳುತ್ತಾನೆ ತಿಳಿದು ತಿಳಿದು ಮೂಕಿಯನ್ನ ಹೇಗೆ ಲವ್ ಮಾಡಿ ಮದುವೆ ಆದಿರಾ ಅಂತ. ಆಗ ಶ್ರೀನಿವಾಸ ಕೊಡುವ ಉತ್ತರ   ಜೀವನ ನಡೆಸಲು ಸೌಂದರ್ಯ ಮುಖ್ಯವಲ್ಲ, ಪ್ರೀತಿ ಮುಖ್ಯ, ಹೊಂದಿಕೊಂಡು ಹೋಗುವ ಮನಸ್ಸು ಇನ್ನು ಮುಖ್ಯ ಎಂದು. ಆ ಸಂದರ್ಭ ಪ್ರತಿಯೊಬ್ಬರ ಕಣ್ಣಿನ ಅಂಚಲ್ಲಿ ನೀರು ತರಿಸದೆ ಇರಲಾರದು. 

ಇದು ನಾನು ನೋಡಿದ ಒಂದು ಮೊಟ್ಟೆಯ ಕಥೆ ಸಿನೆಮಾದ ಬಗೆಗಿನ ನನ್ನ ಮಾತುಗಳು.