ಶಾಲೆಯ ಆ
ದಿನಗಳು …. school days
ಶಾಲೆಯ ಆ ದಿನಗಳು!! ಆಹಾ,
ಈ ಪದಗಳ
ಕೇಳುತ್ತಲೇ ನಮ್ಮ ಹೃದಯ ಏದುಸಿರು ಬಿಡುತ್ತೆ. ಜೂನ್ ಬಂತೆಂದರೆ ಸಾಕು ಮಳೆಯ ಜೊತೆ ಜೊತೆಗೇ
ಶುರುವಾಗೋ ಆ ಶಾಲಾ ದಿನಗಳು, ಎಕ್ಸಾಮು ಮುಗಿದ ದಿನವೇ ತೊಳೆದು ಐರನ್ ಮಾಡಿ ನುಸಿ ಉಂಡೆಯಿಟ್ಟಿದ್ದ
ನೀಲಿ-ಬಿಳಿ ಯುನಿಫಾರ್ಮ್‌ನ್ನು ಟ್ರಂಕ್‌ನಿಂದ ಹೊರತೆಗೆದು ಕೊಡವಿ ಮೈಮೇಲೆ ಹಾಕ್ಕೊಂಡು ಹೋಗೋದೇ
ಒಂದು ಖುಷಿ ಆಗಿರ್ತಿತ್ತು. ಮಳೆಗಾಲವಾದ್ದರಿಂದ ಕೊಡೆಯೂ ಜೊತೆಗಿರ್ತಾ ಇತ್ತು.
ಈಗಿನ ಮಕ್ಕಳಿಗಿರುವಂತೆ
ನಮಗೆ ಓದಿನ ಹೊರೆ ಜಾಸ್ತಿ ಇರಲಿಲ್ಲ, ಬೇಸಿಗೆಗೆಂದು ರಜಾದಿನಗಳಲ್ಲಿ ಅಜ್ಜಿ-ಊರಿಗೆ ಹೋಗಿದ್ದ
ನಮ್ಮ ಸ್ನೇಹಿತರೆಲ್ಲಾ ವಾಪಾಸ್ ಊರಿಗೆ ಬರುತ್ತಿದ್ದರು. ಎಲ್ಲರೂ ಸ್ಕೂಲಲ್ಲಿ ಸೇರಿದ ಮೊದಲ ದಿನ ಶಾಲೆ ಒಳಗೆ ಮತ್ತು ಹೊರಗೆ ಬರೀ ಮಾತು,
ಕಿರುಚಾಟವೇ ತುಂಬಿರ್ತಾ ಇತ್ತು. ಯಾರ್ಯಾರು ಯಾವ್ಯಾವ ಊರಿಗೆ ಹೋಗಿದ್ರು, ಅಲ್ಲಿ ಏನೇನು ಆಟ ಆಡ್ತಿದ್ರು,
ಏನೇನು ಗಾಯ ಮಾಡ್ಕೊಂಡಿದ್ರು, ಅವ್ರ ಅಜ್ಜಿ-ಅಜ್ಜ ಏನೇನು ಕಥೆಗಳನ್ನ ಹೇಳುತಿದ್ರು, ಹೀಗೆ ಬರೀ
ಮಾತುಗಳು. ಜೊತೆಗೆ ಪಟ್ಯಪುಸ್ತಕ, ನೋಟ್‌ಬುಕ್ ಕೊಂಡುಕೊಳ್ಳೋದು, ಇಲ್ಲವೇ ನಮ್ಮ ಸೀನಿಯರ್‌ಗಳ
ಬುಕ್ಸ್‌ನ್ನೇ ಅರ್ಧ ರೇಟ್‌ಗೆ ಕೊಂಡುಕೊಳ್ಳೋದು, ಹರಿದ
ಬುಕ್ಸ್‌ಗೆ ಬೈಂಡ್ ಮಾಡಿಕೊಳ್ಳೋದು. ಕಾಕಿ ಬೈಂಡ್, ನ್ಯೂಸ್ ಪೇಪರ್ ಬೈಂಡ್ ,ಕ್ಯಾಲೆಂಡರ್ ಬೈಂಡ್,
ಹೀರೋ-ಹೀರೋಯಿನ್-ಕವಿಗಳು-ಕ್ರಿಕೆಟರ್ಸ್-ಹೂ-ಪ್ರಾಣಿಗಳ ಚಿತ್ರ ಇರೋ ಒಳ್ಳೊಳ್ಳೆ ಮ್ಯಾಗಜಿನ್
ಬೈಂಡ್, ಹೀಗೇ ಒಬ್ಬೊಬ್ಬರೂ ಒಂದೊಂದು ರೀತಿಯ ಬೈಂಡ್ ಹಾಕೊಕೊಳ್ತಾ ಇದ್ವಿ. ಇದಕ್ಕೆ ನಾವು ಆಗ
“ರೊಟ್ಟು ಹಾಕೊದು” ಅಂತ ಅಚ್ಚಗನ್ನಡದಲ್ಲಿ ಅಂತ ಇದ್ವಿ.
ಇವೆಲ್ಲ ಕೆಲಸಗಳಿಂದ ನಮ್ಮ ಜೂನ್ ತಿಂಗಳಂತೂ ತುಂಬಾ ಬ್ಯುಸಿ ಆಗಿರ್ತ ಇತ್ತು.
ನಮ್ಮ ಶಾಲೆ ಆರಂಭವಾಗುತ್ತಿದ್ದುದು ನೀಲಿ-ಬಿಳಿ ಯುನಿಫಾರ್ಮ್
ಹಾಕೊಂಡು ನಾವು ಹಾಡ್ತಾ ಇದ್ದ ರಾಷ್ಟ್ರ ಗೀತೆ ಮತ್ತು ನಾಡಗೀತೆಯಿಂದ. ಶಾಲೆ ಒಳಗೋದ್ಮೇಲೆ ಹಾಡ್ತಾ
ಇದ್ದ ‘ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೂಸ್ತುತೆ’ ಪ್ರಾರ್ಥನೆ ನಮ್ಮಲ್ಲಿ ಎಷ್ಟು ರಕ್ತ
ಗತವಾಗಿವೆ ಅಂದ್ರೆ ಈಗಲೂ ಆ ಪ್ರೇಯರ್ ಕೇಳಿದಾಗ ನಮ್ಮ ಕಿವಿ ಬೆಚ್ಚಗಾಗುತ್ತವೆ. ಪ್ರೇಯರ್ಗೆ ಲೇಟಾಗಿ ಬಂದು, ಸ್ಕೂಲ್ ಕಾಂಪೌಂಡ್ ಹಾರಿ ಬಂದೋವ್ರು ಒದೆ ತಿಂದು
ಕ್ಲಾಸ್ ರೂಂನೊಳಗೆ ಬರುತ್ತಿದ್ದವರನ್ನ ಹೆಂಗಿದ್ದವು ಬಿಸಿ ಬಿಸಿ ಬೋಂಡ? ಅಂತ ಚುಡಾಯಿಸುತಿದ್ದುದು ನಮಗೆ ಬಲು ಮಜವಾಗಿರುತ್ತಿತ್ತು.
ನಮ್ಮ ಶಾಲೆಯಲ್ಲಿ ಒಂದು ಗಣಪತಿ ವಿಗ್ರಹ ಇತ್ತು ಅದನ್ನ ಪ್ರತಿದಿನ ಪೂಜೆಮಾಡೋದು ಮತ್ತು ಪ್ರಸಾದಕ್ಕೆಂದು ತರುತ್ತಿದ್ದ ಬೆಲ್ಲ, ತೆಂಗಿನಕಾಯಿ, ಹಣ್ಣುಗಳನ್ನ ಹಂಚಿಕೊಂಡು ತಿನ್ನೋದು ನಮ್ಮ ನಿತ್ಯದ ಕೆಲಸವಾಗಿತ್ತು. ಸ್ಕೂಲ್ ಪ್ರೇಯರ್ ಶುರುವಾಗೋಕು ಮುಂಚೆ ಈ ಪೂಜೆ ಮುಗಿಬೇಕು ಎಂದು ನಮ್ಮ PT ಮೇಸ್ಟ್ರು ನಿಯಮ ಜಾರಿಯಲ್ಲಿತ್ತು. ನನ್ನ ಬರವಣಿಗೆ ದುಂಡಗಿದ್ದರಿಂದ ನಮ್ಮ ಸ್ಕೂಲ್ ನೋಟೀಸ್ ಬೋರ್ಡ್ ನಲ್ಲಿ ಸುಭಾಷಿತ, ನುಡಿಮುತ್ತುಗಳು,
ಆ ದಿನದ ವಿಶೇಷ, ಜನರಲ್ ನಾಲೆಜ್‌ಗೆ ಸಂಬಂಧಿಸಿದ ವಿಷಯಗಳನ್ನ ಬರೆಯಲು ನನಗೆ ವಹಿಸ್ತಾ ಇದ್ರು. ಆ
ಟೈಮ್ ನಲ್ಲಿ ಇಡೀ ಸ್ಕೂಲ್ ಜವಾಬ್ದಾರಿಯೀ ನನ್ನ ತಲೆ ಮೇಲೆ ಇದಿಯೇನೋ ಅನ್ನೋ ಹಾಗೆ ಆಡ್ತಿದ್ದೆ. ಈಗೆಲ್ಲ
ಅದನ್ನ ನೆನೆದರೆ ಎಷ್ಟು ಸಿಲ್ಲಿ ಯಾಗಿ ಆಡ್ತಿದ್ವಿ ಅಲ್ವಾ ಅನ್ನಿಸಿಬಿಡುತ್ತೆ.
೭ನೇ ತರಗತಿಯಲ್ಲಿದ್ದಾಗ -
ಖೊ ಖೊ ಆಟದಲ್ಲಿ ಔಟ್ ಮಾಡೋ ಸಮಯದಲ್ಲಿ - ಹುಡುಗಿಯರ ಬೆನ್ನಿಗೆ ಜೋರಾಗಿ ಹುಡುಗರು
ಹೊಡೆಯುತ್ತಿದ್ದರು ಅಂತ ಶುರುವಾದ ಜಗಳ ವಾರಗಟ್ಟಲೆ, ತಿಂಗಳುಗಟ್ಟಲೆ ಮುಂದುವರೆದು ನಮ್ಮ ೭ನೇ
ತರಗತಿ ೩ ಭಾಗಗಳಾಗಿ ಒಡೆದು ಚೂರಾಗಿತ್ತು. ಒಂದು ಹುಡುಗಿಯರ ಗುಂಪು, ಒಂದು ಹುಡುಗರದು, ಇನ್ನೊಂದು
ನ್ಯೂಟ್ರಲ್ ಆಗಿದ್ದೊಂದು ಗುಂಪು. ಇದೇ ಸಮಯದಲ್ಲಿ
ಬಂತು ನೋಡಿ ಸರ್ಕಾರದಿಂದ ಒಂದು ಸುದ್ದಿ! ೭ನೆಯ ತರಗತಿಗೂ
ಕೂಡ ಪಬ್ಲಿಕ್ ಪರೀಕ್ಷೆ ಇರುತ್ತೆ ಅನ್ನೋ
ಆದೇಶ!!. ತೊಗೊಳಿ ಗಲಾಟೆ ಮಾಡಿದ ಹುಡುಗರ ಗುಂಪು ಮತ್ತು ನುಟ್ರಲ್ ಗುಂಪು ಸೇರಿದವು. ನಮ್ಮ ಹುಡುಗೀರ ಗುಂಪೂ ಕೂಡ ಅಲ್ಲಿ ಸೇರತೊಡಗಿತು. ನಮ್ಮ ಗುಂಪಿನಲ್ಲಿ
ನಾನು ಮತ್ತು ನನ್ನ ಮತ್ತೊಬ್ಬಳು ಫ್ರೆಂಡ್ ಮಾತ್ರ
ಉಳಿದುಕೊಂಡ್ವಿ. ಪಬ್ಲಿಕ್ ಪರೀಕ್ಷೆ ಬರಲಿ ಬಿಡಲಿ ನಾವು ಮಾತ್ರ ಹೀಗೆ ಇರೋಣ ಅಂತ, ಯಾಕಂದ್ರೆ ತಪ್ಪು ನಮ್ಮದಿರಲಿಲ್ಲಲ್ವಾ ಅದಕ್ಕೆ. ನಮ್ಮಿಬ್ಬರನ್ನ ಬಿಟ್ಟು ನಮ್ಮ ಇಡೀ ೭ ನೆ ತರಗತಿ ಒಂದು ಗುಂಪು ಆಗಿಹೋಯ್ತು. ಈ
ವಿಷಯ ಸ್ಕೂಲ್ ಹೆಡ್‌ಮಾಸ್ಟರ್‌ವರೆಗೂ ಹೋಯ್ತು, ನಮ್ಮನ್ನೆಲ್ಲ ಆಫೀಸ್
ರೂಂಗೆ ಕರೆದು ಸಮಾಧಾನ ಮಾಡಿ, ಎಲ್ಲಾರಿಗೂ ನಿಂಬೆ
ಹುಳಿ ಪೆಪ್ಪರ್ ಮೆಂಟ್, ಬಿಸ್ಕತ್ತು ಕೊಟ್ಟು, ಶೇಕ್ ಹ್ಯಾಂಡ್ ಮಾಡ್ಸಿ ಇನ್ನು ಮುಂದೆ ಈ ತರ ಜಗಳ
ಆಡಬಾರದು ಅಂತ ಬುಧ್ಧಿ ಹೇಳಿ, ಯಾರ್ಯಾರು ‘ಟೂ’ ಬಿಡ್ತೀರೋ ಅವ್ರುನ್ನ ಫೇಲ್ ಮಾಡ್ತೀವಿ ಅಂತ
ಹೆದರಿಸಿ ನಿಮ್ ಕ್ಲಾಸ್ ರೂಂ ಗೆ ಹೋಗಿ ಅಂದ್ರು. ಅವತ್ತಿಂದ ನಾವ್ಯಾರು ಜಗಳ ಆಡಲಿಲ್ಲ.
ನಮ್ಮ ಗುರುಗಳು ಹೇಳಿದ
ಪುಸ್ತಕದ ಪಾಠ ನೆನಪಿದೆಯೋ ಇಲ್ಲವೋ? ಆದ್ರೆ ಅವರುಗಳು ಹೇಳಿಕೊಟ್ಟ ನಡೆ, ನುಡಿ, ವ್ಯಕ್ತಿತ್ವ, ಸಂಸ್ಕಾರಗಳು,
ಶಿಸ್ತು ಈಗಲೂ ನಮ್ಮ ಜೀವನದಲ್ಲಿ ಇವೆ. ನಮ್ಮನ್ನು ಅವರ ಮಕ್ಕಳ ಸಮಾನವಾಗಿ ನೋಡುತ್ತಿದ್ದಂತಹ ಗುರುಗಳು
ನಮ್ಮ ಗುರುಗಳು. ನಮ್ಮ ಹಿರಿಯರೇ ಹೇಳಿಲ್ಲವೇ ”
ಸದ್ಗುರು ದೊರೆವುದೆ ದುರ್ಲಭವು ದೊರೆತರೆ ಜನ್ಮವು ಪಾವನವು” ಅಂತ. ನಿಮ್ಮಗಳನ್ನು
ಗುರುಗಳಾಗಿ ಪಡೆದ ನಾವುಗಳೇ ಪುಣ್ಯವಂತರು. ಇದು ನಮ್ಮ ಹಿಂದಿನ
ಜನ್ಮದ ಪುಣ್ಯವೇ ಸರಿ. ನಮಗೆ ಶಾಲಾ ದಿನಗಳಲ್ಲಿ ಸಿಕ್ಕ ಎಲ್ಲಾ ಗುರುಗಳಿಗೂ ದೇವರು ಆಯಸ್ಸು,
ಆರೋಗ್ಯ, ಐಶ್ವರ್ಯ ಎಲ್ಲವನ್ನೂ ಆ ದೇವರು ನಿಮಗೆ ಕೊಡಲಿ.
ನಮಗೆ ಶಾಲಾ ದಿನಗಳಲ್ಲಿ ಹೆಚ್ಚು ಖುಷಿ ಕೊಟ್ಟ ದಿನಗಳು ಅಂದ್ರೆ
ಶಾಲಾ ಹಬ್ಬಗಳು. ನಮ್ಮ ಶಿಕ್ಷಕರುಗಳು ನಮ್ಮನ್ನು ಸ್ಟೇಜ್ ಮೇಲೆ ಭಾಷಣ ಮಾಡಲು ಹೇಳುತ್ತಿದ್ದರು.
ಅವರೇ ಭಾಷಣಗಳನ್ನು ಬರೆದೂ ಕೊಡುತ್ತಿದ್ರು. ಬಾಯಿಪಾಠ ಮಾಡಿಕೊಂಡು ಸ್ಟೇಜ್ ಮೇಲೆ ಹೇಳಿ ಅಂತ
ಹೇಳುತಿದ್ರು. ಶಾಲೆಗಳಲ್ಲಿ ನಡೆಯುತಿದ್ದ ಆಶುಭಾಷಣ, ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪದ್ಯ
ಕಂಟಪಾಠ, ಇಂತಹವುಗಳಲ್ಲಿ ನನ್ನ ಹೆಸರು ಯಾವಾಗಲು ಇರುತ್ತಿತ್ತು. ಶಾಲಾ ದಿನಗಳಲ್ಲಿ ನನಗೆ ಬಂದ ಪ್ರೈಸ್ಗಳು
, ಸರ್ಟಿಫಿಕೇಟ್ಗಳು ,ಕಪ್ಗಳು, ನೋಡಿದಾಗ ಮಾರ್ಕ್ಸ್ ಕಾರ್ಡ್ ನೋಡಿದಕ್ಕಿಂತ ಹೆಚ್ಚು
ಖುಷಿ ಯಾಗುತ್ತೆ. ನನಗೆ ಬಹುಮಾನಗಳು ಬಂದಾಗ ನಮ್ಮ
ಗುರುಗಳು ಪಡೋ ಖುಷಿ ನೋಡಿ ನನ್ನ ಬಗ್ಗೆ ನನಗೆ
ಹೆಮ್ಮೆ ಅನ್ನಿಸ್ತಿತ್ತು. ಇದಕ್ಕೆ ಇನ್ನೊಂದು ಉದಾಹರಣೆ ಎಂದರೆ ನಾನು ಡಿಗ್ರಿ ಓದಲು ಬೆಂಗಳೂರಿಗೆ
ಬಂದಿದ್ದೆ, ಹೀಗೆ ಈ ಟಿ ವೀ ಕನ್ನಡ ಚಾನೆಲ್ ತಂಡ ನಮ್ಮ ಮಹಾರಾಣಿ ಕಾಲೇಜ್ಗೆ ಬಂದು ನಮ್ಮ ಕಾಲೇಜ್ ನಲ್ಲಿ
ಚರ್ಚಾ ಸ್ಪರ್ಧೆ ನಡೆಸಿ ೧೦ ಹುಡುಗಿಯರನ್ನ ಯುವಕರ
ಚಾವಡಿ ಕಾರ್ಯಕ್ರಮದಲ್ಲಿ ಚರ್ಚಾಸ್ಪರ್ಧೆ ಮಾಡುವ ಅವಕಾಶ ಮಾಡಿಕೊಟ್ಟಿದ್ದರು. ಅದ್ರಲ್ಲಿ ನಾನು
ಒಬ್ಬಳಾಗಿದ್ದೆ. ಅದು ಟಿ.ವಿ.ಯಲ್ಲೂ ಕೂಡ ಪ್ರಸಾರವಾಗಿತ್ತು.
ನಾನು ರಜಕ್ಕೆಂದು ಊರಿಗೆ ಹೋದಾಗ ನಮ್ಮ ಪ್ರಾಥಮಿಕ ಶಾಲೆಯ ಸರ್‌ಗಳು ನಮ್ಮ ಮನೆಗೆ ಬಂದು ನನ್ನ
ಚರ್ಚ್ಚಾ ಸ್ಪರ್ಧೆಯ ಶೋ ನೋಡಿದ್ವಿ, ನೀನು ಚೆನ್ನಾಗಿ ಮಾತಾಡ್ದೆ ಕಣಮ್ಮ ಅಂತ ಹೇಳಿದ್ರು, ಇನ್ನೊಬ್ರು
ಸರ್ ಬಸ್ಟಾಪ್ ನಲ್ಲಿ ಸಿಕ್ಕಿದ್ರು ಟಿವಿನಲ್ಲಿ ನೀನು ಚರ್ಚೆ ಮಾಡಿದ್ದ ಶೋ
ನೋಡಿದೆ ಅಂತ ಹೇಳಿ, ಪಕ್ಕದಲ್ಲಿದ್ದ ಅವರ ಸಂಬಂಧಿಗಳಿಗೆ ನಮ್ಮ ಸ್ಟೂಡೆಂಟ್ ಕಣ್ರೀ, ಟಿವಿನಲ್ಲಿ ಈ ಮಗೂದು ಚರ್ಚ್ಚಾ ಸ್ಪರ್ಧೆ ಬಂದಿತ್ತು. ಅದೇ ಅಪರ್ಣ
ನಡೆಸಿ ಕೊಡ್ತಾರಲಾ ‘ಯುವಕರ ಚಾವಡಿ’ ಅದ್ರಲ್ಲಿ
ಅಂತ ನನ್ನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು, ಆಗ ನನಗಾದ ಖುಷಿ ಆಸ್ಟಿಸ್ಟಲ್ಲ.
ಇನ್ನೊಂದು ಹೇಳೋದನ್ನ
ಮರೆತಿದ್ದೆ. ಪ್ರತಿ ದಿನ ಮಧ್ಯಾನ್ನ ಸ್ಕೂಲ್ ಊಟದ ಸಮಯದಲ್ಲಿ ಗಾಡಿಗಳಲ್ಲಿ ಬರುತ್ತಿದ್ದ ಉಪ್ಪು
ಖಾರ ಹಚ್ಚಿದ ಕಿತ್ತಲೆಹಣ್ಣು, ಪೇರಲಕಾಯಿ, ಮಾವಿನಕಾಯಿ, ಸೌತೆಕಾಯಿ ಮತ್ತು ಕಲ್ಲOಗಡಿ ಹಣ್ಣು, ನೇರಲೆಹಣ್ಣುಗಳು, ಅಲ್ಲೇ
ಹತ್ತಿರದಲ್ಲಿದ್ದ ಪೆಟ್ಟಿಗೆ ಅಂಗಡಿಯ ಬಟಾಣಿ, ನಿಂಬೆಹುಳಿ,
ಶುಂಟಿ, ಕಡ್ಡಿ ಪೆಪ್ಪರ್ಮೆಂಟ್, ಕೆಂಪು ರಸಗುಲ್ಲ,
ಆಲ್ಕೊವಾ, ಚಕ್ಕಲಿ, ಕೋಡುಬಳೆ, ಶೇಂಗಾ ಅಚ್ಚು, ಸಕ್ಕರೆ ಅಚ್ಚು, ಇನ್ನು ಮುಂತಾದ ತಿನಿಸುಗಳನ್ನ ತಿನ್ನೋ
ಚಾಳಿ. ಪ್ರತಿದಿನ ಅಂಗಡಿ ತಿಂಡಿ ತಿನ್ನಲು ದುಡ್ಡು ಕೊಡುತ್ತಿರಲಿಲ್ಲ ಆದ್ರೆ ಪ್ರತಿ ಶನಿವಾರ
ಮಾತ್ರ 1 ಇಲ್ಲ 2 ರೂಪಾಯಿ ಕೊಟ್ಟೆ ಕೊಡುತ್ತಿದ್ರು. ಯಾಕಂದ್ರೆ ಅವತ್ತು ಬೆಳಿಗ್ಗೆ 8 ಕ್ಕೆ ಸ್ಕೂಲ್
ನಲ್ಲಿರ ಬೇಕಿತ್ತು ಅಸ್ಟರಲ್ಲಿ ಮನೇಲಿ ಅಡುಗೆ ಆಗುತ್ತಿರಲಿಲ್ಲ. ಸೊ ನಮಗೆ ಶನಿವಾರ ಹಬ್ಬವಾಗಿರ್ತಾ
ಇತ್ತು - ಅಂಗಡಿ ತಿಂಡಿ ತಿನ್ನೋಕೆ!.
ಸ್ವಾತಂತ್ರ ದಿನಾಚರಣೆ,
ಗಾಂಧಿ ಜಯಂತಿ , ಗಣರಾಜ್ಯೋತ್ಸವ ಇನ್ನೂ ಹಲವು ನಾಡ ಹಬ್ಬಗಳು, ರಾಷ್ಟ್ರೀಯ ಹಬ್ಬಗಳು ಬಂದ್ವು
ಅಂದ್ರೆ ಸಾಕು, ಸ್ಕೂಲ್ ತುಂಬಾ ನಾವೇ! ಸ್ಕೂಲ್ ಬುಕ್ ಮುಟ್ಟಿದರೆ ಕೇಳಿ?! ಕೆಲವೊಂದು ದೇಶ ಭಕ್ತಿ
ಗೀತೆಗಳನ್ನ ರಾಗವಾಗಿ ಹೇಳೋದನ್ನ ಪ್ರಾಕ್ಟೀಸ್ ಮಾಡೋದು, ಹಿಂದಿನ ದಿನ ಧ್ವಜ ಸ್ತಂಭದ ಸುತ್ತ ಸಗಣಿ ತಂದು ಸಾರಿಸಿ
ಅಂದದ ರಂಗೂಲಿ ಬಿಡಿಸಿ ಅದಕ್ಕೆ ಬಣ್ಣ ತುಂಬೋದು, ಅಕ್ಕಿ, ಬೇಳೆಕಾಳುಗಳಿಂದ ಭಾರತ ಭೂಪಟ ಅಲಂಕಾರ
ಮಾಡುತಿದ್ವಿ. ಬಣ್ಣ ಬಣ್ಣದ ಪೇಪರ್ ಮತ್ತು ಹೂವುಗಳಿಂದ
ಅಲಂಕಾರ ಮಾಡುತಿದ್ವಿ. ಅಲಂಕಾರ ಮುಗಿದು ಮನೆಗೆ ಹೋಗುತ್ತಿವಾಗ ದಾರಿಯಲ್ಲಿ ನಮ್ಮ ಮಾತು, ಛೆ! ನಾವು
ಹೀಗೆ ಅಲಂಕಾರ ಮಾಡಿದ್ದನ್ನ ಗಾಂಧಿ ,ನೆಹರು, ಸುಭಾಶ್ ಚಂದ್ರ ಬೋಸ್, ಲಾಲ್-ಬಾಲ-ಪಾಲ್,
ಕಸ್ತೂರಿ ಬಾ, ಎಲ್ಲ ಸ್ವತOತ್ರ
ಹೋರಾಟ ಗಾರರೆಲ್ಲಾ ನೋಡಿದ್ರೆ ಎಷ್ಟು ಖುಷಿ ಪಡ್ತಿದ್ರಲ್ಲ ಅಂತ ಬೇಜಾರು ಮಾಡ್ಕೊಂಡು,
ಬ್ರಿಟಿಶ್ ನರು ಯಾಕಾದ್ರೂ ಬಂದಿದ್ರಪ್ಪ ನಮ್ ದೇಶಕ್ಕೆ, ಎಸ್ಟೋನ್ದು ದೇಶ ಪ್ರೇಮಿಗಳನ್ನ ಸಾಯಿಸಿದರು, ನಮ್ಮ ದೇಶಾನ ಎಲ್ಲ
ಕೊಳ್ಳೆ ಹೊಡ್ಕೊಂಡ್ ಹೋದ್ರು, ಗೋಡ್ಸೆ ಗೂ ಶಾಪಾ ಹಾಕುತ್ತಿದ್ವಿ. ಮನೆಗೆ ಹೋಗಿ ಊಟ ಮಾಡಿ
ರಾತ್ರಿಯೆಲ್ಲ ಭಾಷಣ ಕಂಠ ಪಾಠ ಮಾಡಿದ್ದೂ ಮಾಡಿದ್ದು. ಅದೂ ಜೋರಾಗಿ ಮನೇಲಿ ಅಮ್ಮ ಅಪ್ಪ ಅಣ್ಣಂದ್ರು
‘ಏನ್ ನಿನ್ನ ಭಾಷಣಾ ಕೇಳೋಕೆ ಎಲ್ಲ ಬರೂದು ಅನ್ನಂಗೆ ಆಡ್ತಾಳೆ’ ಅಂತ ಬೈದದ್ದೂ ಇದೆ. ಓದೋ ಬುಕ್
ಓದು ಅಂದ್ರೆ, ಏನೇನೋ ಮಾಡ್ತದೆ ಈ ಹುಡುಗಿ ಅಂತ ಬೈಸಿಕೊಳ್ಳುತಿದ್ದೆ. ಪ್ರತಿದಿನ ಬೆಳಿಗ್ಗೆ
ಏಳೋದರಲ್ಲಿ ನಾನು ಸೂರ್ಯ ವಂಶಸ್ತೆ ಆದ್ರೆ ಈ ಶಾಲಾ ಹಬ್ಬಗಳ ದಿನ ಮಾತ್ರ ಬೆಳಿಗ್ಗೆ 6 ಗಂಟೆಗೆ
ಅಲಾರಂ ಇಟ್ಟುಕೊಂಡ ಎದ್ದು ರೆಡಿ ಆಗಿ ಹೋಗ್ತಿದ್ದೆ!.
ಈಗಲೂ ಕೂಡ ನಮ್ಮೂರು
ಆರ್.ನುಲೇನೂರಿಗೆ ಬಸ್ಸಲ್ಲಿ ಹೋಗುವಾಗ ಬಸ್ಸಿನ
ಕಿಟಕಿಯಲ್ಲಿ ನಮ್ಮ ಶಾಲೆ ಅದ್ರ ಎದಿರಿರೋ ‘ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ’ ಅನ್ನೋ ಬೋರ್ಡ್ ಕಡೆ ಕಣ್ಣು ಹೊರಳುತ್ತೆ. ಆಗ ಎಷ್ಟು ಖುಷಿ ಆಗುತ್ತೆ ಅಂದ್ರೆ ಎಸ್ಟೋ ಬಾರಿ ಇದು
ನಮ್ಮ ಸ್ಕೂಲ್ ನಾವು ಓದಿದ್ದು ಇಲ್ಲೇ ಅಂತ ನನ್ನ ಪಕ್ಕದಲ್ಲಿ ಕುಳಿತಿರು ಅಪರಿಚಿತರಿಗೆ
ತೋರಿಸಿದ್ದೂ ಉಂಟು. ಈಗಲೂ ನನ್ನ ಆಪ್ತ ಗೆಳತಿಯರು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ
ಜೊತೆಯಲ್ಲಿ ಓದಿದವರು. ಜೀವನ ಮುಂದುವರಿದಂತೆ ನಾವೆಲ್ಲರೂ
ಬೇರೆ ಬೇರೆ ಊರು, ಕೇರಿ, ರಾಜ್ಯ , ದೇಶ, ಹೀಗೆ ಒಂದೊಂದು ದಿಕ್ಕಿನಲ್ಲಿ ಜೀವನ ನಡೆಸುತ್ತಿದ್ದರೂ
ನಮ್ಮೂರ ಜಾತ್ರೆ, ಗೌರಿ ಹಬ್ಬ, ತೇರಹಬ್ಬ, ಇಂತಹ ಸಮಯಗಳಲ್ಲಿ ಕೆಲವರಾದ್ರೂ ಸಿಕ್ಕೆ
ಸಿಕ್ಕುತ್ತಾರೆ. ಆಗಲೂ ನಮ್ಮ ಮಾತುಗಳಲ್ಲಿ ಸ್ಕೂಲ್ ಬಗ್ಗೆ ಒಂದಾದ್ರೂ ವಿಷಯ ಬಂದೆ ಬರುತ್ತೆ.
ಸ್ಕೂಲ್ ನೆನಪಾದಾಗಲೆಲ್ಲ
ನನ್ನ ತಲೆಯಲ್ಲಿ ಬಾರೋ ಯೋಚನೆ!... ಒಂದು ಟೈಮ್ ಮಶಿನ್ ಸಿಗುತ್ತಾ .. ಸಿಕ್ರೆ ‘ಆ ದಿನಗಳಿಗೆ’
ನಮ್ಮನ್ನ ವಾಪಸ್ ಕರ್ಕೊಂಡು ಹೋಗುತ್ತಾ ಅಂತ!