Thursday, 31 March 2016

ನಮ್ಮ ಬೇಸಿಗೆ ರಜೆ / ನಮ್ಮ ಮಕ್ಕಳ ಬೇಸಿಗೆ ರಜೆ ( SUMMER HOLIDAYS )



ಈ ಏಪ್ರಿಲ್ ಮೇ  ತಿಂಗಳುಗಳು ಬಂದ್ರೆ ಸಾಕು ಬೇಸಿಗೆರಜಾ ದಿನಗಳು ಶುರು. ಹೇಗಪ್ಪಾ ಈ ಮಕ್ಕಳ  ಕಾಟ ತಡಕೊಳೋದು? ಅನ್ನೋ ದೊಡ್ಡ ಯೋಚನೆ ಎಲ್ಲರಿಗೂ ಶುರು ಆಗುತ್ತೆ. ಮಕ್ಕಳನ್ನ ಮನೇಲಿ ಕೂಡಿ ಹಾಕಿದ್ರೆ ಟಿವಿ ಕಾರ್ಟೂನ್ ಚಾನೆಲ್ ಗಳಿಗಾಗಿ ಜಗಳ ಶುರುವಾಗೋದು ಖಾಯಂ. ಅವರುಗಳ ಜಗಳ ಬಿಡಿಸೋದ್ರಲ್ಲೆ ಅರ್ಧ ದಿನ ಆಗೋಗುತ್ತೆ. ಯಾಕಾದ್ರೂ ಸ್ಕೂಲ್ಗಳು ರಜ ಕೊಡ್ತಾವೋ ಅಂತ ಅನ್ನಿಸುತ್ತೆ. ಆಮೇಲೆ ನಾವು ಕೂಡ ಹೀಗೆ ತಾನೇ ಚಿಕ್ಕವರಿದ್ದಾಗ  ಬೇಸಿಗೆ ರಜೆ ಇದ್ರೆ  ಎಷ್ಟು ಖುಷಿಯಾಗಿರ್ತಿದ್ವಿ ಅಲ್ವ ಅಂತನಿಸ್ತು.




ಆಗ ನನಗೆ ತಕ್ಷಣ ನೆನಪಾಗಿದ್ದು ನನ್ನ ಬಾಲ್ಯದ ದಿನಗಳು. ನಾವುಗಳು ಆಡುತ್ತಿದ್ದ ಸಾರುಚಂಡು, ಮರಕೋತಿಆಟ, ಕಣ್ಣಾಮುಚ್ಚಾಲೆ, ಅಡುಗೆಆಟ,  ಕುಂಟುತ್ತಾಮುಟ್ಟು, ಕವಡೆಗಳಲ್ಲಿ ಇಲ್ಲಾಂದ್ರೆ, ಹುಣಸೆ ಬೀಜತೇಯ್ದು ಚೌಕಬರ, ಆಣಿಕಲ್ಲು, ಲಗೋರಿ, ಗೋಲಿ, ಕುಂಟಪಿಲ್ಲೇ, ಹಾವು ಏಣಿ ಆಟ, ಅಳಗುಳಿಮನೆ, ಚೀಟಿಯಲ್ಲಿ ಕಳ್ಳ, ಪೋಲಿಸ್, ರಾಜ, ರಾಣಿ, ಮಂತ್ರಿ ಬರೆದು ಆಟ,   ನಮ್ಮನೇಲಿ ಪೇರಳೆ ಹಣ್ಣಿನ  ಮರ, ಮಾವಿನಕಾಯಿ ಮರ ಇದ್ರೂ ಬೇರೇವ್ರ ಹಿತ್ತಲಲ್ಲಿ ಫ್ರೆಂಡ್ಸ್ ಜೊತೆ ಸೇರಿ ಪೇರಳೆ ಕಾಯಿ, ಮಾವಿನಕಾಯಿ  ಕದ್ದು ತಿಂದದ್ದು, ಕೆರೆಯಲ್ಲಿನ ಜೇಡಿ ಮಣ್ಣು ತೊಗೊಂಡ್ ಬಂದು  ಗಾಲಿಗಳನ್ನು ಮಾಡಿ ಜೋಳದ ಸೆಪ್ಪೆ ದಂಟಿನಲ್ಲಿ , ತೆಂಗಿನ ಗರಿ ಜೋಡಿಸಿ, ತೇರು, ಎತ್ತಿನ ಗಾಡಿ, ಟಾಂಗ, ಟ್ರ್ಯಾಕ್ಟರ್ ಮತ್ತು ಗೊಂಬೆಗಳನ್ನ, ಮತ್ತು ಅನೇಕ ರೀತಿಯ ಚಿತ್ರಗಳನ್ನು ಮಾಡುತ್ತಿದ್ದದ್ದು, ಆಟಗಳು ಬೇಜಾರೆನಿಸಿದ್ರೆ  ನಮ್ಮೂರಿನ ಹೊಂಡದಲ್ಲಿ, ಕೆರೆಯಲ್ಲಿ ಮೆಟ್ಟಿಲುಗಳ ಮೇಲೆ ಕಾಲನ್ನು ನೀರಲ್ಲಿ ಮುಳುಗಿಸಿ ಕುಳಿತುಕೊಳ್ಳುತ್ತಿದ್ದದ್ದು, ಅಲ್ಲಿರುವ ಚಿಕ್ಕ ಚಿಕ್ಕ ಮೀನುಗಳು ನಮ್ಮ ಕಾಲುಗಳಿಗೆ ಕಚಗುಳಿಕೊಡುತ್ತಿದ್ದದ್ದು. ನಾವು ಸ್ವಲ್ಪ ಕಾಲು ಅಲುಗಿಸಿದ್ರೆ ಸಾಕು ಅವು ನೀರೊಳಗೆ ಓಡಿ ಹೊಗ್ತಿದ್ವು.


ಬೇಸಿಗೆಯಲ್ಲಿ ಹಳ್ಳಿ ಗಳಲ್ಲಿ ಎಲ್ಲರ ಮನೆಯಲ್ಲಿ ಮಳೆ ಬಂದ ತಕ್ಷಣ ಬೀಜ ಬಿತ್ತುವ ಸಲುವಾಗಿ ಬೀಜಕ್ಕೆಂದು  ಶೇಂಗ ಕಾಯಿ ಕುಟ್ಟುತ್ತಿದ್ದರು. ಪ್ರತಿ ಬೇಸಿಗೆಯಲ್ಲಿ ಈ ಕೆಲಸ ಎಲ್ಲರ ಮನೇಲಿ ಕಾಯಂ ಆಗಿ ನಡೆಯುತ್ತಿತ್ತು, ನಮ್ಮದೊಂದು ನಾಲ್ಕು ಜನರ ಗುಂಪೊಂದು ಇತ್ತು, ನಾವು ನಮ್ಮಕೈಯ್ಲಿ ಎಸ್ಟಾಗುತ್ತೋ ಅಸ್ಟು ಜೋಶ್ ಇರೋವರ್ಗೆ ಎಲ್ಲ ಸೇರಿ ಕಾಯಿ ಒಡೆಯೋದು ನಂತರ ಅಷ್ಟಕ್ಕೆ ಮಾತ್ರ ಹಣ ಇಸ್ಕೊಂದು ಅಂಗಡಿ ಮನೇಲಿ ಏನಾದರೂ ತಿಂಡಿ ತಂದು ಸಮವಾಗಿ ಹಂಚಿಕೊಂಡು ತಿನ್ನೋದು. ಬಟ್ಟೆ ಹೊಲಿಯೋ ಟೈಲರ್ ಮನೆ ಹುಡುಕ್ಕೊಂಡ್ ಹೋಗಿ  ಅವ್ರು ಕಟ್ ಮಾಡಿ ಬಿಸಾಕಿರೋ ಬಟ್ಟೆಗಳನ್ನೆಲ್ಲ ಜೋಡಿಸ್ಕೊಂದು ಹುಡುಗ, ಹುಡುಗಿ ಮಾಡಿಕೊಂಡು ಅವಕ್ಕೆ ಮದ್ವೆ ಮಾಡಿ  ಊಟನು ಹಾಕುತಿದ್ವಿ. ನಾವು ರೋಡ್ ನಲ್ಲಿ ಬಂದ್ರೆ ಇವರ ಕಾಟ ಇನ್ನು ರಜೆ ಮುಗಿಯೂವರ್ಗು ತಡಿಯೋಕಾಗಲ್ಲ ಅಂತ ಬೈದದ್ದು ಇದೆ.  ಕೆಲವರು ಓದುವುದಕ್ಕೆ ಬೇರೆ ಊರುಗಳಿಗೆ ಹೋಗಿದ್ದವರು ಈ ಬೇಸಿಗೆ ರಜೆಯಲ್ಲಿ ಊರಿಗೆ ಬರ್ತಿದ್ರು, ಅವ್ರು ಕೂಡ ನಮ್ಮ ಸಂಘಕ್ಕೆ ಸೇರಿಕೊಂಡ  ನಂತರ ನಮ್ಮ ಸಂಘಕ್ಕೆ ಇನ್ನು ಶಕ್ತಿ ಜಾಸ್ತಿ ಆಗ್ತಿತ್ತು, ಯಾಕೇಳಿ? ಅಪರೂಪಕ್ಕೆ ಅವ್ರು ರಜಕ್ಕೆ ಮಾತ್ರ ಊರಿಗೆ ಬರ್ತಿದ್ರಿಂದ ಅವರುಗಳ ಮನೆಯಲ್ಲಿ ಅವರಿಗೋಸ್ಕರ ಮಾಡುತ್ತಿದ್ದ ತಿಂಡಿಗಳಲ್ಲಿ ( ಚಕ್ಲಿ, ಕೋಡುಬಳೆ, ರವೆ ಉಂಡೆ, ಉರಕ್ಕಿ ಉಂಡೆ, ಇನ್ನು ಇತ್ಯಾದಿ.) ನಮಗೂ ಒಂದು ಪಾಲು ಸಿಗುತ್ತಿದ್ವು. 

ಆಗ ಹೊಸ ಹುಣಸೆಹಣ್ಣನ ಕಾಲ ಬೇರೆ, ನಮ್ಮೆಲ್ಲರ ಅಚ್ಚುಮೆಚ್ಚಿನ ಕುಟುoಡಿ ಕುಟ್ಟಿ ತಿನ್ನುವ ಪ್ರೋಗ್ರಾಮ್, ಇದೊಂದು ಸಾಧನೆಯ ರೀತಿಯ ಆಟ ಎಂದೇ ಹೇಳಬಹುದು. ನಮ್ಮ ಸಂಘದಲ್ಲಿ ಯಾರ್-ಯಾರ ಮನೆಲ್ಲಿ ನಮಗೆ ಬೈಯುವ ದೊಡ್ಡವರಿರುವುದಿಲ್ಲವೋ ಅಂತಹ ಸಮಯ ನೋಡಿ, ಕುಟುoಡಿಗೆ ಬೇಕಾಗುವ ಪದಾರ್ಥಗಳನ್ನು ಜೋಡಿಸೋದು, ಹೆಂಗಂದ್ರೆ, ಒಂದೊಂದು ಪದಾರ್ಥ ಒಬ್ಬಬ್ಬರಿಗೆ ತರುವಂತೆ ಹೇಳೋದು, ಎಲ್ಲರು ತಂದ ಮೇಲೆ ಅದನ್ನು ಸೇರಿ ಕುಟ್ಟೋದು, ಅದು ನುಣ್ಣಗೆ ಒಂದು ಹದಕ್ಕೆ ಬಂದಮೇಲೆ ತೆಂಗಿನ ಗರಿ ಕಡ್ಡಿಗೆ ದುಂಡಗೆ ಈಗಿನ ಲಾಲಿಪಾಪ್ ರೀತಿ ಮಾಡಿಕೊಂಡು ತಿನ್ನುತಿದ್ವಿ. ಆಹಾ!! ಆ ರುಚಿ ಈಗ ಮನೆಯಲ್ಲಿ ನಾನೇ ಸ್ವತಹ ಮಾಡಿಕೊಂಡು ತಿಂದರು ಆ ರುಚಿ ಇನ್ನು ಸಿಕ್ಕಿಲ್ಲ.,.,.,. ಮತ್ತದೆ ಹಳೆ ಫ್ರೆಂಡ್ಸ್ ಗ್ರೂಪ್ ನ ನೆನಪು(ವೀಣಾ, ಲೀಲಾ, ಸವಿತಾ, ಸೌಮ್ಯ, ಸುನಿತಾ),,,,,,..

ಬೇಸಿಗೇಲಿ ಯಾರದ್ರೂ ಮನೆಗೆ ನೆಂಟರು ಬಂದ್ರೆ, ಅವರಿಂದ ಕಡಿಮೆ ಅಂದ್ರು 5  ರಿಂದ 10 ರುಪಾಯಿ ನಾವು ಟಿಪ್ಸ್ ಇಸ್ಕೊಳ್ಳದೆ ಇರ್ತಿರ್ಲಿಲ್ಲ, ಒಬ್ಬರಿಗೆ ಟಿಪ್ಸ್ ಸಿಕ್ಕಿದರೂ ಅವತ್ತು  ನಮ್ಮ ಗ್ರೂಪ್   ಅಂಗಡಿ ತಿಂಡಿ ತಿನ್ನಲು  ನಮ್ಮೂರಲ್ಲಿನ ಯಾವ್ದಾದ್ರೂ ಒಂದು ಅಂಗಡಿ ಮುಂದೆ ಜಮಾಯಿಸ್ತಿದ್ವಿ. ನಮ್ಮದೊಂದು ನಾಟಕ ಸಂಘ ಇತ್ತು ನಮ್ಮ ಪಾಠಗಳಲ್ಲಿ ಇದ್ದ ಕಿತ್ತುರುರಾಣಿ ಚೆನ್ನಮ್ಮ,  ಒನಕೆ ಓಬವ್ವ , ಅಂಬೇಡ್ಕರ್ ಪಾಠ, ಕೋಳೂರ ಕೊಡಗೂಸು, ಬುದ್ಧ, ಆಮೆ ಮತ್ತು ಮೊಲ, ಟೋಪಿವಾಲ ಮಂಗಣ್ಣ, ಮೊಸಳೆ ಮತ್ತು ಕೋತಿ. ಇವೆಲ್ಲ ಪಾಠಗಳು ನಮ್ಮ ರಜೆಯಲ್ಲಿ ನಮ್ಮ ನಾಟಕದ ಕಥೆಗಳಾಗುತಿದ್ವು, ಸ್ಕ್ರಿಪ್ಟ್ ನಾವೆ ಮಾಡಿಕೊಂಡು ಅಭಿನಯಿಸ್ತಿದ್ವಿ. ನಮ್ಮ ಸುತ್ತಮುತ್ತಲಿನ ಅಜ್ಜಿಯಂದಿರೆ ನಮ್ಮ ಪ್ರೇಕ್ಷಕರು. ಕೆಲವೊಂದು ಸಲ ಇಂಗ್ಲಿಷ್ ಪಾಠಗಳನ್ನು ನಾಟಕ ಮಾಡಲು ಪ್ರಯತ್ನಿಸಿ ಅವ್ರ ಮುಂದೆ  ಸ್ಕೋಪ್ ತೊಗೊಂಡಿದ್ದು ಇದೆ. ಅವ್ರು ಇವೆಲ್ಲಾ ನಮಗೆ ಅರ್ಥ ಆಗ್ವೊಲ್ದು ಬೇರೆ ಏನಾದ್ರೂ ಮಾಡಿ ಅಂತ ಹೇಳಿದ್ದು ಇದೆ.



ಈ ಬೇಸಿಗೆ ರಜೆಯಲ್ಲಿ ನಾವು ಇದ್ದ ಹಾಗೆ ನಮ್ಮ ಮಕ್ಕಳು ಇರಲು ಸಾಧ್ಯವಿಲ್ಲ. ಟಿವಿ ಕಾರ್ಟೂನ್ ಪ್ರಪಂಚ ಒಂದಿದ್ರೆ ಸಾಕು ಎನ್ನೋ ಕಾಲ ಇದು. ಹಳ್ಳಿಗಳಲ್ಲೂ ಕೂಡ ಈಗಿನ ಮಕ್ಕಳು ಈ ಆಟಗಳೆಲ್ಲ ಆಡುವದನ್ನು ನಾನು ಕಾಣುವುದಿಲ್ಲ. ಇತ್ತೀಚೆಗೆ ರೋಡ್ ಮೇಲೆ, ಗೇಟ್ ಮೇಲೆ ಎಲ್ಲೆಂದರಲ್ಲಿ ಬರಿ ಸಮ್ಮರ್ ಕ್ಯಾಂಪ್ ಗಳ ಜಾಹಿರಾತಿನಗಳದ್ದೆ ಕಾರುಬಾರು, ಸಂಗೀತ, ಡಾನ್ಸ್, ಅಬಾಕಸ್, ಕ್ಯಾಲಿಗ್ರಫಿ, ಚೆಸ್ ಹೀಗೆ ಎಲ್ಲ ರೀತಿಯ ಕಲಿಕೆಯ ಆಟಗಳು, ಮನೋರಂಜನೆ ಹಳ್ಳಿಗಳಿಗಿಂತ ಹೆಚ್ಚಾಗೆ ಮತ್ತು ಚೆನ್ನಾಗೆ ಆಡಲು ಅವಕಾಶಗಳಿವೆ ಆದ್ರೆ ಅವ್ರು ಹೇಳಿಕೊಟ್ಟದ್ದನ್ನು ಕಲಿಬೇಕು, ಯುನಿಫಾರ್ಮ್ ಇಲ್ಲದೆ ಇರೋ ಸ್ಕೂಲ್ ಅನ್ನೋ ರೀತಿ ಇರುತ್ವೆ, ಅದ್ರೂ ಮಕ್ಕಳು ಖುಷಿಗೆ ಮತ್ತು ಕ್ರಿಯೇಟಿವಿಟಿ ಅವಕಾಶ ಇರುವಂತ ಮತ್ತು ಮಕ್ಕಳ ದೈಹಿಕ, ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು  ಶಿಬಿರಗಳು ನಡೆದರೆ  ಇದ್ದರೆ ಒಳ್ಳೇದು ಅಲ್ವಾ.

ಈಗಿನ ಮಕ್ಕಳಿಗೆ ಇಂಟರ್ ನೆಟ್ ಕನೆಕ್ಷನ್ ಇರೋ  ಒಂದು ಮೊಬೈಲ್ ,ಲ್ಯಾಪ್ಟಾಪ್ ಕೊಟ್ಟು ನೋಡಿ ಮನೆ ಬಿಟ್ಟು ಒಂದು ಹೆಜ್ಜೇನು ಆಚೆ ಇಡೂಲ್ಲ.  ಇದನ್ನ ಗಮನದಲ್ಲಿಟ್ಟು ನೋಡಿಕೊಂಡರೆ ಈ ಬೇಸಿಗೆ ಶಿಬಿರಕ್ಕೆ ಮಕ್ಕಳನ್ನು ಸೇರಿಸುವುದೇ ಒಳ್ಳೆಯ ನಿರ್ಧಾರ ಅನ್ನಿಸಿಬಿಡುತ್ತೆ. ಇಂದಿನ ಮಕ್ಕಳು ಟೆಕ್ನಾಲಜಿಗೆ ಅಪ್ಡೇಟ್ ಆಗ್ತಾ ಆಗ್ತಾ ಅವರ ಬೇಸಿಗೆ ರಜ ನಮ್ಮ ಬೇಸಿಗೆಗಿಂತ ಭಿನ್ನವಾಗಿದೆ. ನನ್ನ ಫ್ರೆಂಡ್ ಒಬ್ಬಳು ಮಗಳಿಗೆ 2 ಸಮ್ಮರ್ ಕ್ಯಾಂಪ್ ಸೇರಿಸಿದ್ದಾಳೆ  ಒಂದು ಬೆಳಿಗ್ಗೆ 9 ಗಂಟೆಗೆ, ಇನ್ನೊಂದು ಮದ್ಯಾನ್ನ 2 ಗಂಟೆಗೆ. ಕಾರಣ ಇಸ್ಟೆ. ಸಿಟಿನಲ್ಲಿ ಮಕ್ಕಳು ಫ್ರೀ ಆಗಿ ಇರೋದೇ ಸಮ್ಮರ್ ನಲ್ಲಿ ಇವಾಗಾದ್ರೂ  ಆಟ ಆಡ್ಕೊಂಡಿರ್ಲಿ ಅಂತ,  ಓದೋದು ಬಿಟ್ಟು ಬೇರೆ ಬೇರೆ ಕ್ರಿಯೇಟಿವಿಟಿ ಮಕ್ಕಳಲ್ಲಿ ಇರಲಿ ಎಂದು. ಈ ಸಿಟಿ ಮಕ್ಳನ್ನ ನೋಡಿದ್ರೆ ನಂಗೆ ಅಯ್ಯೋ ಪಾಪ ಅನ್ನಿಸುತ್ತೆ. ಆದರೂ ಈಗಿನ ಸ್ಪರ್ಧಾತ್ಮಕ  ಜಗದಲ್ಲಿ ಕಲಿಕೆ ತುಂಬಾ ಮುಖ್ಯ. ಈ ವ್ಯವಸ್ಥೆಯನ್ನು ದೂರುವಂತೆಯೂ ಇಲ್ಲ. 

2 comments: