ನಮ್ಮ ಸುತ್ತ ಮುತ್ತಲಿನ ಬೆಟ್ಟ- ಗುಡ್ಡಗಳು, ಗುಡಿ-ಗೋಪುರಗಳು, ಕೋಟೆ, ಕಲ್ಯಾಣಿ, ವೀರಗಲ್ಲು, ಮಾಸ್ತಿಕಲ್ಲು , ಶಾಸನಗಳು, ಸ್ಮಾರಕಗಳು, ಕಟ್ಟಡಗಳು ಇವೆಲ್ಲಾ ಹಲವಾರು ಇತಿಹಾಸದ ವಿಷಯಗಳನ್ನ ಹಿಡಿದು ನಿಂತಿವೆ ಅಂದ್ರೆ ತಪ್ಪಾಗಲಾರದು.ಈ ಎಲ್ಲಾ ಹಳೆಯ ಕಾಲದ ಕಟ್ಟಡಗಳು ಬರೀ ಕಟ್ಟಡಗಳಲ್ಲ. ಅಲ್ಲೊಂದು ಇತಿಹಾಸವಿರುತ್ತದೆ. ಜನ ಜೀವನ, ಒಂದು ಜನಾoಗವೇ ನಡೆದು ಬಂದ ಹಾದಿಯನ್ನು ಅವು ತಿಳಿ ಹೇಳುತ್ತವೆ. ಹಿಂದಿನ ಕಾಲದಲ್ಲಿ ಅವುಗಳನ್ನ ಹೇಗೆ ಕಟ್ಟುತ್ತಿದ್ದರು? ಜನ ಜೀವನ ಹೀಗಿತ್ತು. ಎಂಬುದನ್ನು ನಮಗೆ ತಿಳಿಯಲು ಸಹಾಯವಾಗುತ್ತವೆ. ಒಟ್ಟಾರೆ ನಮ್ಮ ಇತಿಹಾಸವನ್ನು ತಿಳಿಸುತ್ತವೆ ಅನ್ನಬಹುದು ಅಲ್ಲವೇ?.
ಈಗ ನಾನು ಬರೆಯಲು ಹೊರಟಿರುವ ಊರು ಚನ್ನಗಿರಿ ಮತ್ತು ಅಲ್ಲಿರುವ ಕೋಟೆ ಬಗ್ಗೆ. . ಚನ್ನಗಿರಿ ಬಗ್ಗೆ ಈಗಿನ ವಾಸ್ತವ ಸಂಗತಿ ಹೇಳಬೇಕು ಅಂದ್ರೆ,, ಸ್ವತಂತ್ರ ಭಾರತದ ರಾಜ್ಯಗಳ ವಿಭಜನೆಯ ನಂತ್ರ ಆಯಾ ರಾಜ್ಯಗಳಲ್ಲಿ ಜಿಲ್ಲೆಗಳ ವಿಂಗಡಣೆಯಾದ ಸಮಯದಲ್ಲಿ ಈ ಚನ್ನಗಿರಿ ಎಂಬ ಊರು ಮೊದಲು ಶಿವಮೊಗ್ಗ ಜಿಲ್ಲೆಗೆ ಸೇರಿತ್ತು, ಈಗ ದಾವಣಗೆರೆ ಜಿಲ್ಲೆಗೆ ಸೇರಿದ ತಾಲ್ಲೂಕು ಆಗಿದೆ. ಈ ತಾಲ್ಲೂಕು ವ್ಯವಸಾಯಕ್ಕೆ ಪ್ರಾಧಾನ್ಯತೆ ಪಡೆದಿದೆ. ಇಲ್ಲಿ ಅರೆ ಮಲೆನಾಡು ವಾತಾವರಣವಿದೆ. ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳು ಅಡಿಕೆ, ತೆಂಗು, ಮೆಕ್ಕೆಜೋಳ, ರಾಗಿ, ಶೇಂಗಾ, ತೊಗರಿ, ಜೋಳ, ನವಣೆ, ಉದ್ದು, ಹೆಸರು ಇನ್ನು ಅನೇಕ ಬೆಳೆಗಳನ್ನು ಪ್ರಮುಖವಾಗಿ ಬೆಳೆಯುತ್ತಾರೆ.
ಚನ್ನಗಿರಿಯ ಇತಿಹಾಸ :- ಈ ಊರಿಗೆ 16 ಮತ್ತು 17ನೇ ಶತಮಾನದ ಇತಿಹಾಸವಿದೆ. ಈ ಚನ್ನಗಿರಿಯನ್ನು ಗಂಗರು- ಅಸಂಡಿನಾಡು ಎಂಬ ಹೆಸರಿನಿಂದ ಆಳುತ್ತಿದ್ದರು . ನಂತರ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನೋಳಂಬವಾಡಿಯಾಗಿ ಆಳಲ್ಪಟ್ಟಿತ್ತು. ಉಚ್ಚಂಗಿಯ ಪಾಂಡ್ಯರ ಆಳ್ವಿಕೆಯಲ್ಲಿ ಹುಲಿಕೆರೆಯಾಗಿ ಮತ್ತು 17ನೇ ಶತಮಾನದಲಿ ಕೆಳದಿ ಸಂಸ್ಥಾನದಿಂದ ಆಳ್ವಿಕೆ ನಡೆಸಿಕೊಂಡಿತ್ತು. ಈ ಪ್ರದೇಶದ ಬೆಟ್ಟದ ಮೇಲೆ ಕೆಳದಿ ಚೆನ್ನಮ್ಮಳು ಕೋಟೆಯನ್ನು ಕಟ್ಟಿಸಿದ ನಂತರ ಚನ್ನಗಿರಿ ಎಂಬ ಹೆಸರು ಬಂದಿತು . ಚನ್ನಗಿರಿಯ ಮೊದಲ ಹೆಸರು ಹುಲಿಕೆರೆ ಎಂದಿತ್ತು ಎಂದು ಹೇಳಲಾಗುತ್ತದೆ. ಸ್ವಾತಂತ್ರ ಹೋರಾಟಗಾರ ದೊಂಡಿಯವಾಘನ ಹುಟ್ಟಿದ ಊರು ಎಂದು ಹೇಳಲಾಗುತ್ತದೆ. ಚನ್ನಗಿರಿಯ ಐತಿಹಾಸಿಕ ಕೇಂದ್ರ ಬಿಂದು ಚನ್ನಗಿರಿಯ ಕೋಟೆ.
ಚನ್ನಗಿರಿ ಕೋಟೆ ಹೀಗಿದೆ:-
ಬೇರೆ ಕೋಟೆಗಳಿಗೆ ಹೋಲಿಸಿದರೆ ಈ ಕೋಟೆ ಅಂತಹ ದೊಡ್ಡ ಕೋಟೆಯೇನಲ್ಲ. ಚಿಕ್ಕ ಕೋಟೆಯೇ. ಈ ಚನ್ನಗಿರಿ ಕೋಟೆ ಮಣ್ಣು, ಕಲ್ಲು ಮತ್ತು ಗಾರೆಯಿಂದ ಕಟ್ಟಲಾಗಿದೆ. ಇದಕ್ಕೆ ಕೊತ್ತಳವಿದ್ದು ಮುಖ್ಯ ಬಾಗಿಲು ಉತ್ತರ ದಿಕ್ಕಿಗೆ ಇದೆ. ಮೊಟ್ಟೆಯ ಆಕಾರವಿರುವ ಈ ಕೋಟೆಗೆ ಎರೆಡು ಕಾವಲು ಗೋಪುರಗಳಿವೆ. ಮತ್ತು 7 ಬುರುಜುಗಳಿವೆ. ಬೆಟ್ಟದ ಮೇಲೆ ಒಂದು ತಗ್ಗು ಇದೆ ಅಂದಿನ ಕಾಲದಲ್ಲಿ ಬೆಟ್ಟದ ಮೇಲಿನ ಜನರಿಗೆ ನೀರಿನ ವ್ಯವಸ್ಥೆಗೆ ಈ ತಗ್ಗು ಮಾಡಿರ ಬಹುದೇನೋ.ಅನ್ನಿಸುತ್ತೆ. ಮತ್ತೊಂದು ಕಡೆ ಬಂಡೆಗಳನ್ನು ಕೊರೆದು ಮಾಡಿದ ನೀರಿನ ಕೊಳವಿದ್ದು ಅದಕ್ಕೆ ಮೆಟ್ಟಿಲುಗಳಿವೆ. ಇಲ್ಲಿ ಬೇಟೆ ರಂಗನಾಥ ಸ್ವಾಮಿ ಗುಡಿ ಇದ್ದು ಇಲ್ಲಿ ರಂಗನಾಥ ಸ್ವಾಮಿ ವಿಗ್ರಹವಿದೆ. ಬೇಟೆ ಎಂದರೆ ಯುಧ್ಧ ಎಂದು ಕನ್ನಡದ ಸಮಾನ ಪದ. ಈ ರಂಗನಾಥ ಸ್ವಾಮಿ ಆಗಿನ ಕಾಲದಲ್ಲಿ ಶಕ್ತಿಶಾಲಿ ಮತ್ತು ಜನರ ನಂಬಿಕೆಯ ದೇವನಾಗಿದ್ದನು ಅನ್ನಿಸುತ್ತೆ. ಈ ಪ್ರದೆಶದಲ್ಲಿ ಆಳಿದ ರಾಜ ಮಹಾರಾಜರು ಯುಧ್ಧಕ್ಕೆ ಹೊರಡುವ ಮುನ್ನ ಇಲ್ಲಿ ಪೂಜೆ ಸಲ್ಲಿಸಿ ಹೊರಡುತ್ತಿದ್ದರು ಎಂಬ ನಂಬಿಕೆ ಇದೆ. ಇಲ್ಲಿ ಹಳೆಯ ಕಾಲದ ರಥವಿದೆ. ಅದು ಮುರಿದು ಬಿದ್ದಿದೆ.
ಕೆಳದಿ ಚೆನ್ನಮ್ಮ ರಾಣಿ ಮತ್ತು ಈ ಕೋಟೆಗೂ ಇರುವ ನಂಟು :-
ಕೆಳದಿ ರಾಣಿ ಚೆನ್ನಮ್ಮ ಕ್ರಿ.ಶ. 1671 ರಿಂದ 1698 ರವರೆಗೆ ಆಳ್ವಿಕೆಯನ್ನು ನಡೆಸಿದಳು. ಆಗಿನ ಕಾಲದಲ್ಲಿ ಕೆಳದಿ ಸಂಸ್ಥಾನಕ್ಕೂ ಮತ್ತು ಮರಾಠರಿಗೂ ಯುಧ್ಧಗಳು ನಡೆಯುತ್ತಿದ್ದವು. ಆದರೂ ಔರಂಗಜೆಬನಿಂದ ಯುಧ್ಧದಲ್ಲಿ ಸೋಲನ್ನ ಅನುಭವಿಸಿದ ಶಿವಾಜಿಯ ಮಗ ರಾಜಾರಾಮನಿಗೆ ಕೆಳದಿ ಚನ್ನಮ್ಮ ಇಲ್ಲಿ ಆಶ್ರಯ ನೀಡಿದ್ದಳು. ಮತ್ತು ಆ ಕಾರಣದಿಂದ ಔರಂಗ ಜೇಬನು ಕೆಳದಿಯನ್ನು ಆಕ್ರಮಣ ಮಾಡಿದಾಗ ಆತನ ಸೈನ್ಯವನ್ನು ಯುಧ್ಧಮಾಡಿ ಹಿಮ್ಮೆಟ್ಟಿಸುತ್ತಾಳೆ.
ಇಷ್ಟೆಲ್ಲ ಇತಿಹಾಸವಿರುವ ಈ ಚನ್ನಗಿರಿ ಕೋಟೆ ಈಗ ಹಾಳಾದ ಸ್ಥಿತಿಯಲ್ಲಿದೆ. ಇನ್ನು ಕೆಲವು ವರ್ಷಗಳು ಉರುಳಿದಂತೆ ಇದರ ಪರಿಸ್ಥಿತಿ ಏನಾಗಬಹುದು ಅಂದರೆ ಕಾಣೆಯಾಗಬಹುದು ಎಂದು ಉತ್ತರ ಕೊಡಬಹುದಷ್ಟೆ. ಅಲ್ಲಿಯ ಜನರನ್ನ ಅಲ್ಲಿ ಕೋಟೆ ಇದೆ ಅಂತೇ ಅಲ್ವ ಅಂತ ಕೇಳಿ ನೋಡಿ. ಅಯ್ಯೋ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತ ಹೇಳುತ್ತಾರೆ ಹಂಗೆ ಈ ಕೋಟೆ. ಅದೇನ್ ಮಹಾ ದೊಡ್ಡ ಕೋಟೆ ಅಲ್ಲ. ಏನೋ ಸ್ಕೂಲ್- ಕಾಲೇಜು ಮಕ್ಳು ಬಂದು ಹೋಗೋ ಪಿಕ್ನಿಕ್ ಸ್ಪಾಟ್ ಅಷ್ಟೇ ಅಂತ ಹೇಳ್ತಾರೆ. ಇದು ನಮ್ಮ ಇತಿಹಾಸದ ಬಗ್ಗೆ ನಮ್ಮ ಜನ ತೋರಿಸೋ ಕಾಳಜಿ. ಅದಕ್ಕೆ ಈ ಕೋಟೆ ಬರೀಬೇಕನ್ನಿಸ್ತು ಆ ಕಾರಣಕ್ಕಾಗಿ ಈ ಬರಹ .
ಚಿತ್ರಗಳು : ಗೂಗಲ್ಲಿನಿಂದ
ಇಷ್ಟೆಲ್ಲ ಇತಿಹಾಸವಿರುವ ಈ ಚನ್ನಗಿರಿ ಕೋಟೆ ಈಗ ಹಾಳಾದ ಸ್ಥಿತಿಯಲ್ಲಿದೆ. ಇನ್ನು ಕೆಲವು ವರ್ಷಗಳು ಉರುಳಿದಂತೆ ಇದರ ಪರಿಸ್ಥಿತಿ ಏನಾಗಬಹುದು ಅಂದರೆ ಕಾಣೆಯಾಗಬಹುದು ಎಂದು ಉತ್ತರ ಕೊಡಬಹುದಷ್ಟೆ. ಅಲ್ಲಿಯ ಜನರನ್ನ ಅಲ್ಲಿ ಕೋಟೆ ಇದೆ ಅಂತೇ ಅಲ್ವ ಅಂತ ಕೇಳಿ ನೋಡಿ. ಅಯ್ಯೋ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತ ಹೇಳುತ್ತಾರೆ ಹಂಗೆ ಈ ಕೋಟೆ. ಅದೇನ್ ಮಹಾ ದೊಡ್ಡ ಕೋಟೆ ಅಲ್ಲ. ಏನೋ ಸ್ಕೂಲ್- ಕಾಲೇಜು ಮಕ್ಳು ಬಂದು ಹೋಗೋ ಪಿಕ್ನಿಕ್ ಸ್ಪಾಟ್ ಅಷ್ಟೇ ಅಂತ ಹೇಳ್ತಾರೆ. ಇದು ನಮ್ಮ ಇತಿಹಾಸದ ಬಗ್ಗೆ ನಮ್ಮ ಜನ ತೋರಿಸೋ ಕಾಳಜಿ. ಅದಕ್ಕೆ ಈ ಕೋಟೆ ಬರೀಬೇಕನ್ನಿಸ್ತು ಆ ಕಾರಣಕ್ಕಾಗಿ ಈ ಬರಹ .
ಚಿತ್ರಗಳು : ಗೂಗಲ್ಲಿನಿಂದ