Saturday, 24 September 2016

ಮಕ್ಕಳು - ಮಾನಸಿಕ ಒತ್ತಡಗಳು - ಕಾರಣಗಳು - ಸಲಹೆಗಳು


ಈಗಿನ ಓಟದ ಜಗತ್ತಿನಲ್ಲಿ, 'ಸ್ಪರ್ಧೆ'ಗೆ ಮೊದಲನೆಯ ಆಧ್ಯತೆ. ಒಬ್ಬರಿಗಿಂತ ಒಬ್ಬರು ಓದಿನಲ್ಲಿ, ದುಡ್ಡಿನಲ್ಲಿ, ಆಸ್ತಿಯಲ್ಲಿ, ಸಾಮಾಜಿಕ ಗೌರವ ಹೊಂದುವಲ್ಲಿ.. ಹೀಗೆ ಒಂದಲ್ಲ ಒಂದರಲ್ಲಿ ಅಕ್ಕಪಕ್ಕದವರೊಡನೆ ತಮ್ಮನ್ನು ಹೋಲಿಸಿಕೊಳ್ಳುತ್ತಾ.. ಅವರಿಗಿಂತ ನಾವು ಒಂದು ಕೈ ಮೇಲೇ ಇರಬೇಕು ಅನ್ನೋದನ್ನ ತಲೇಲಿ ಇರಿಸಿಕೊಂಡೇ ಜೀವನ ನಡೆಸುತ್ತಿರುತ್ತಾರೆ. ಜೀವನದಲ್ಲಿ ಖುಷಿಯಾಗಿರುವುದನ್ನೇ ಮರೆತಿದ್ದಾನೆ ಅನ್ಸುತ್ತೆ ಈ ಮನುಷ್ಯ. ಪ್ರಾಣಿಯಾಗಿದ್ದಾಗಲೇ ಆತನಿಗೆ ಹೆಚ್ಚು ಖುಷಿಯಿತ್ತೇನೋ ;) ಅನ್ನಿಸುತ್ತಿದೆ. ಮನುಶ್ಯತ್ವ ಗುಣದಿಂದಲೇ ಮಾನವನಾದ ಈ ಪ್ರಾಣಿ, ತನ್ನ ಸ್ಪರ್ಧಾ ಮನಸ್ಥಿತಿಯಿಂದ ಪ್ರಾಣಿಗಿಂತ ಕಡೆಯಾದ ನೀಚ ಪ್ರಾಣಿಯಾಗುತ್ತಿದ್ದಾನೆ. ಹಾಗೆ ಒತ್ತಡದ ಬದುಕನ್ನು ತನ್ನದಾಗಿಸಿಕೊಂಡಿದ್ದಾನೆ ಜೊತೆಗೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದಾನೆ. ಹಾಗೆಯೇ ಅದೇ ಬದುಕನ್ನು ತನ್ನ ಮಕ್ಕಳಿಗೆ ಬಳುವಳಿಯಾಗಿ ಕೊಡುತ್ತಿದ್ದಾನೇನೋ ಅನ್ನುವ ಅನುಮಾನ ಬರದೆ ಇರಲ್ಲ.  




ಮಗುವಿನ ಅಸಹಜ ವರ್ತನೆಗಳಿಗೆ ಹಲವು ಕಾರಣಗಳಿರಬಹುದು.  ಲಂಡನ್ ನ ಮಾನಸಿಕ ತಜ್ಞರ ತಂಡವೊಂದು, ಈ ಬಗ್ಗೆ ಒಂದು ಸಂಶೋದನೆ ನಡೆಸಿತು. ಈ ಭಾಗವಾಗಿ ಅದು ಅಸಹಜ ವರ್ತನೆಯ ಮಕ್ಕಳ ಜೊತೆ ಅವರ ಹೆತ್ತವರನ್ನೂ ಪರೀಕ್ಷೆಗೆ ಒಳಪಡಿಸಿತು. ಇದರಿಂದ ಅಂದು ಕುತೂಹಲಕಾರಿಯಾದ ಅಂಶ ಹೊರ ಬಂತು. 

ಯಾವ್ಯಾವ ಮಕ್ಕಳು ಅಸಹಜವಾಗಿ, ಹಿಂಸಾತ್ಮಕವಾಗಿ ವರ್ತನೆ ಮಾಡುತ್ತಾರೋ ಅಂತಹ ಮಕ್ಕಳ ಹೆತ್ತವರು ಮಾನಸಿಕ ಒತ್ತಡಕ್ಕೆ ಮತ್ತು ಖಿನ್ನತೆಗೆ ಒಳಗಾಗಿದ್ದವರು ಮತ್ತು ಅಸಹಜ, ಹಿಂಸಾತ್ಮಕ ಪ್ರಕೃತಿಯವರೇ ಆಗಿದ್ದರು ಅನ್ನುವದನ್ನ ಈ ತಂಡ ಸ್ಪಷ್ಟವಾಗಿ ಗುರ್ತಿಸಿತು. ತಂದೆ-ತಾಯಿಯರಲ್ಲಿ ಮಾನಸಿಕ ಒತ್ತಡಗಳು ಮತ್ತು ಖಿನ್ನತೆಗಳು ಇದ್ದಾಗ ಅವರ ಮಕ್ಕಳು ಬೇರೆ ಮಕ್ಕಳಿಗಿಂತ ಎರಡು ಪಟ್ಟು ಬೇಗನೆ ಮಾನಸಿಕ ತೊಂದರೆಗಳಿಗೆ ಒಳಗಾಗುತ್ತಾರೆ ಎಂದು ಈ ವರದಿ ಹೇಳುತ್ತೆ. 





ತಂದೆ-ತಾಯಂದಿರಲ್ಲಿ ಕಂಡುಬಂದ ಮಾನಸಿಕ ಸಮಸ್ಯೆಗಳು--
ಕೆಲವು ತಂದೆತಾಯಂದಿರು ಸಿಟ್ಟಾದಾಗ ಕಿರುಚುವುದು, ಇಬ್ಬಗೆಯ / ಗೊಂದಲದ ಮನಸ್ಥಿತಿ, ತುಮುಲಗಳು, ಮಾನಸಿಕ ಒತ್ತಡ, ಕೆಟ್ಟ ಶಬ್ಧಗಳನ್ನು ಬಯ್ಯುವಾಗ ಬಳಸುವುದು ಮತ್ತು ಆತ್ಮಹತ್ಯೆಯಂತಹ ಅಪರಾಧಗಳು ಇಂತಹ ಮಾನಸಿಕ ಸಮಸ್ಯೆಗಳನ್ನು ಹೊಂದಿದ್ದರು. 


ಈ ಎಲ್ಲ ಸಮಸ್ಯೆಗಳು ಅವರ ಮಕ್ಕಳುಗಳಲ್ಲಿ, ಬೇರೆ ಮಕ್ಕಳಿಗಿಂತ ಎರೆಡುಪಟ್ಟು ಹೆಚ್ಚಾಗಿ ಮಾನಸಿಕ ಸಮಸ್ಯೆಗಳು ಇವರ ಮಕ್ಕಳುಗಳಲ್ಲಿ ಕಂಡುಬಂದಿವೆ. ಮಾನಸಿಕವಾಗಿ ಆರೋಗ್ಯದಿಂದಿರುವ ಮಕ್ಕಳ ತಂದೆ-ತಾಯಿಯರು ಈ ಮೇಲೆ ಸೂಚಿಸಿದ ಯಾವುದೇ ರೀತಿಯ ಮಾನಸಿಕ ತೊಂದರೆಗಳು ಕಂಡುಬಂದಿಲ್ಲ.


ತಂದೆ-ತಾಯಿಯರ ಮಾನಸಿಕ ಖಿನ್ನತೆಯ ಪರಿಣಾಮವಾಗಿ ಮಕ್ಕಳ ವ್ಯಕ್ತಿತ್ವ--
ಯಾವ ಮಕ್ಕಳ ತಂದೆತಾಯಿಯರ ಇತಿಹಾಸದಲ್ಲಿ ಮಾನಸಿಕ ಖಿನ್ನತೆಗಳು ಇರುತ್ತವೂ ಅಂಥಹ ಮಕ್ಕಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮನೋಭಾವ ಮತ್ತು ತಮ್ಮನ್ನು ತಾವು ಹಿಂಸಿಸಿಕೊಳ್ಳುವ ಮನಸ್ಥಿತಿ  ಹೆಚ್ಚಾಗಿ ಕಂಡುಬಂದಿದೆ ಮತ್ತು ಸಮಾಜ ಘಾತುಕ ಕೆಲಸಗಳಲ್ಲಿ ಪಾಲ್ಗೊಳ್ಳುವವರು ಇವರೇ. ಉದಾಹರಣೆಗೆ ಕಳ್ಳತನ, ಕೊಲೆಗಾರ, ವ್ಯವಸ್ಥೆಯ ವಿರುಧ್ಧ ತಿರುಗಿಬೀಳುವ ಹೀಗೇ ಇನ್ನು ಹಲವು ವಿಕೃತ ಸಮಾಜ ವಿರೋಧಿ ಕೆಲಸಗಳಿಗೆ ಬೇಗ ಒಳಗಾಗುತ್ತಾರೆ. ಕೆಲವೊಮ್ಮೆ ಅವರ ಕೌಟುಂಬಿಕ ಕಲಹಗಳು, ಮಕ್ಕಳಿಗೆ ಕಿರಿಕಿರಿ ಎನಿಸುವ ಸಂಪ್ರದಾಯಗಳು, ಆರ್ಥಿಕ ಪರಿಸ್ಥಿತಿ ಇವೂ ಕೂಡ ಒಮ್ಮೊಮ್ಮೆ ಮಕ್ಕಳ ಮಾನಸಿಕ ಆರೋಗ್ಯ ಹಾಳಾಗಲು ಕಾರಣವಾಗಿರುತ್ತವೆ.

ಈ ಮಾನಸಿಕ ರೋಗಗಳಿಂದ ಮಕ್ಕಳನ್ನು ಹೇಗೆ ಕಾಪಾಡೋದು?
ಈ ರೀತಿಯ ಮಾನಸಿಕ ತೊಂದರೆಗೆ ಒಳಗಾದ ಮಕ್ಕಳ ಜೊತೆ ಕೂತು ಮಾತಾಡಿ. ಅವರ ಸಮಸ್ಯೆ ಏನೆಂದು ಗುರುತಿಸಿಕೊಳ್ಳಿ. ಕೆಲವೊಮ್ಮೆ ನಿಮ್ಮ ಬೆಚ್ಚಗಿನ ಪ್ರೀತಿಯ ಮಾತುಗಳು ಅವರಿಗೆ ಮಾನಸಿಕ ಗೊಂದಲಗಳಿಂದ ಆಚೆ ಬರಲು ಸಹಾಯಕವಾಗಬಹುದು. ಸಮಸ್ಯೆ ನಿಮ್ಮ ಕೈ ಮೀರಿ ಹೋಗಿದ್ದಲ್ಲಿ ಮಾನಸಿಕ ತಜ್ಞರೊಡನೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ಒಳ್ಳೆಯ ನಿರ್ಧಾರ.



ಮಕ್ಕಳನ್ನು ಮಾನಸಿಕ ಖಿನ್ನತೆಯಿಂದ ಹೊರತರಲು 8 ಸಲಹೆಗಳು--
  1. ಮಕ್ಕಳಲಾಗುವ ಬದಲಾವಣೆಗಳನ್ನು ಗಮನಿಸುತ್ತಿರಿ.
  2. ಮಕ್ಕಳ ನಡವಳಿಕೆಗಳನ್ನು ಎಲ್ಲ ದೃಷ್ಟಿಕೋನಗಳಿಂದ ಅಳೆದು ತೂಗಿ.
  3. ಹೊರಗಿನ ಪ್ರಪಂಚದಲ್ಲಿ ನಿಮ್ಮ ಮಕ್ಕಳ ನಡವಳಿಕೆಯ ಬಗ್ಗೆ ವಿಷಯ ಸಂಗ್ರಹಿಸಿ.
  4. ಮಕ್ಕಳೊಂದಿಗೆ ಗೆಳೆಯರಂತೆ ಇರಿ.
  5. ಮಕ್ಕಳು ನಿಮ್ಮೊಡನೆ ಮುಕ್ತವಾಗಿ ಮಾತಾಡಲು ಅವಕಾಶ ಕೊಡಿ. ಮಕ್ಕಳೊಡನೆ ನೀವು ಮಕ್ಕಳಾಗಿ.
  6. ಸಮಸ್ಯೆ ಗಂಭೀರ ವಾಗಿದ್ದರೆ ಮಾನಸಿಕ ತಜ್ಞರ ಜೊತೆ ಚರ್ಚಿಸಿ ಸಹಾಯ ಪಡೆಯಿರಿ.
  7. ಆತ್ಮಹತ್ಯೆಯ ವಿಶ್ಹಯವನ್ನು ಸಹ ನಿಮ್ಮ ಮಕ್ಕಳೊಡನೆ ಚರ್ಚಿಸಿ.
  8. ಮಕ್ಕಳ ನಡವಳಿಕೆಯ ಬಗ್ಗೆ ಒಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ಮಕ್ಕಳ ನಿಲುವುಗಳನ್ನು ಗೌರವಿಸಿ. 


Thursday, 8 September 2016

ರೈತ ಸ್ನೇಹಿ ಮತ್ತು ಬಾಂಧವ್ಯಗಳನ್ನ ಉಳಿಸಿಕೊಡುವ ಆಚರಣೆಯಾಗಿ ಗೌರಿ-ಗಣೇಶ ಹಬ್ಬ

ಗೌರಿ-ಗಣೇಶ ಹಬ್ಬ ಜನರಲ್ಲಿ ಸಂಬಂಧಗಳನ್ನ ಉಳಿಸಿಕೊಡುವ ಮತ್ತು ಗಟ್ಟಿಗೊಳಿಸುವ ಹಬ್ಬ ಎಂದೇ ಹೇಳಬಹುದು. ಏಕೆಂದರೆ ಈ ಹಬ್ಬವನ್ನು ಮಾಡುವ ಸಲುವಾಗಿ ಅಣ್ಣತಮ್ಮಂದಿರಿಗೆ ತನ್ನ ಅಕ್ಕತಂಗಿಯರ ನೆನಪು ಆಗುತ್ತದೆ. ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದ ನಂತರ ಅಣ್ಣ ತಮ್ಮಂದಿರು ಅವರುಗಳ ಮನೆಗೆ ಹೋಗಿ ಬಾಗಿನ ಅಥವಾ ಕಾಯಿಕಣ ಕೊಡುವ ರೂಢಿ ಈ ಹಬ್ಬದಲ್ಲಿದೆ. ಈ ಹಬ್ಬ ಬಂದಾಗ ಅಕ್ಕ ತಂಗಿಯರು ತಮ್ಮ ಅಣ್ಣ ತಮ್ಮಂದಿರು ತವರಿನಿಂದ ಯಾರು ಬರಲಿಲ್ಲವೆಂದು ಮತ್ತು ಬಾಗಿನ ಕಾಯಿಕಣ ಕೊಡಲು ಅಣ್ಣ ತಮ್ಮಂದಿರು ಅಕ್ಕತಂಗಿಯರ ಮನೆಗೆ ಹೋಗುವ ಪ್ರಸಂಗಗಳು, ಚಿಕ್ಕ ಮಕ್ಕಳುಗಳು ತಮ್ಮ ಸೋದರಮಾವನ ಬರುವಿಕೆಗೆ ಕಾಯುವ ಪ್ರಸಂಗಗಳು, ನಮ್ಮ ಜಾನಪದ ಹಾಡುಗಳಲ್ಲಿ ವರ್ಣಿತವಾಗಿವೆ.

ನನ್ನ ತವರೂರಿನ ಕಡೆ ಗೌರೀ ಪೂಜೆಯ ನಂತ್ರ ಹುತ್ತಕ್ಕೆ ಪೂಜೆ ಮಾಡಿ,  ಹಾಲನ್ನು ತನೆ  ಎರೆದು ಅಲ್ಲಿಯೇ ಊಟ ಮಾಡಿ ಬರುವ ವಾಡಿಕೆ ಇದೆ. ಆಗ ನಮಗೆ ಈ ಸಾಲುಗಳನ್ನ ಹೇಳಿಕೊಡುತ್ತಿದ್ದರು, ಅದು ಯಾಕೆ? ಏನು? ಅಂತ ನಂಗು ಆಗ ಗೊತ್ತಿರ್ಲಿಲ್ಲ. ಅದನ್ನ ನೆನಪಿಸಿಕೊಂಡು ಇಲ್ಲಿ ಬರೆದಿದೀನಿ.

ತನ್ನಿರೆ ಹಾಲ ತನಿ ಎರೆಯೋಣ 
ತಾಯ ಹಾಲ ಋಣ ತೀರಿಪ ಇಂದೇ ಪುಣ್ಯ ದಿನ 
ತಣ್ಣಗಿರಲಿ ಬೆನ್ನು ಉದರ ಅಣ್ಣ ತಮ್ಮ0ದಿರ 
ಕಾಯ ನೀಡಿದ ತಾಯಿ ಕರುಳು ನೋಯದಿರಲೆಂದು
ತವರಿನ ಕೀರ್ತಿ ಘನತೆ ಬೆಳಗಲೆಂದೆಂದು ।। 
ಒಂದೆ ಬಸಿರು ಒಂದೆ ಉಸಿರು ಅಂಟಿಕೊಂಡಂಥ
ನನ್ನ ಅಣ್ಣನ ಬಾಳ ಬಳ್ಳಿ ಬಾಡದಿರಲೆಂದು 
ನಲಿವಿನ ತುಂಬು ಜೀವನ ಆಗಲೆಂದೆಂದು ।। 
ತಂದೆ ಯಾರೋ ತಾಯಿ ಯಾರೋ ಯಾವುದೂ ಅರಿಯೇ 
ದೇವರಂಥ ಅಣ್ಣನಿರಲು ಸಂತಸಕೆ ಕೊರೆಯೇ 
ಆತನ ಪ್ರೀತಿ ಆದರ ಎಂದಿಗೂ ಮರೆಯೇ ।।






ಬಾಗಿನದಲ್ಲಿ ಇರಿಸುವ ವಸ್ತುಗಳು.---
ಮೊರ, ಹರಿಶಿನ, ಕುಂಕುಮ. ಎಲೆ ಅಡಿಕೆ, ಜೋಡಿ ತೆಂಗಿನಕಾಯಿ, ಗಾಜಿನ ಬಳೆಗಳು, ಹೂವು ಹಣ್ಣುಗಳು, ತರಕಾರಿಗಳು  ಅಕ್ಕಿ, ಬೇಳೆ,  ಅಂಗುನೂಲು, ಅಕ್ಷತೆ,  ಬಟ್ಟೆ, ಸೀರೆ ಕುಪ್ಪಸ, ಕನ್ನಡಿ,  ಬಾಚಣಿಕೆ, ಕರ್ಜೀಕಾಯಿ, ಚಕ್ಕುಲಿ ಇನ್ನು ಮುಂತಾದುವು.

ಕಾಯಿಕಣದಲ್ಲಿ ಇರಿಸುವ ವಸ್ತುಗಳು.-------
ಬಟ್ಟೆ, ಹರಿಶಿನ, ಕುಂಕುಮ, ಅಕ್ಕಿ, ಬೇಳೆ, ಕಾಳು, ತೆಂಗಿನಕಾಯಿ, ಹೂ- ಹಣ್ಣು, ತರಕಾರಿಗಳು, ಕನ್ನಡಿ, ಬಾಚಣಿಕೆ, ಬಳೆಗಳು, ಉಂಡೆಗಳು, ಸಿಹಿ ಮತ್ತು ಖಾರದ ತಿನಿಸುಗಳು, ಆ ಸಮಯದಲ್ಲಿ ತಮ್ಮ ಹೊಲಗಳಲ್ಲಿ ಮತ್ತು ತೋಟಗಳಲ್ಲಿ ಬೆಳೆದಿರುವ ವಸ್ತುಗಳು  ಇತ್ಯಾದಿ.

ಗೌರಿ-ಗಣೇಶಹಬ್ಬದ ಪೌರಾಣಿಕ ಕಥೆ------
ಗೌರಿ-ಗಣೇಶ ಹಬ್ಬವೆಂದರೆ ವಿಷಯವಾಗಿ ಒಂದು  ಪೌರಾಣಿಕ ಕಥೆ ಇದೆ. ಗೌರಿ ಶಿವನ  ಹೆಂಡತಿ, ಪರ್ವತ ರಾಜನ ಮಗಳು ಭೂಮಿಯು ಆಕೆಯ ತವರು, ಕೈಲಾಸದಿಂದ ವರ್ಷಕ್ಕೊಮೆ ಗೌರಿ ತವರಿಗೆ ಬರುವ ದಿನವನ್ನ ಗೌರಿಹಬ್ಬ ಎಂತಲೂ ತನ್ನ ತಾಯಿಯನ್ನು ತವರಿನಿಂದ ಕೈಲಾಸಕ್ಕೆ ಹಿಂತಿರುಗಿ ಕರೆದುಕೊಂಡು ಹೋಗಲು ಮಾರನೇ ದಿನ ಗಣೇಶ ಬರುವ ದಿನವನ್ನು ಗಣೇಶ ಹಬ್ಬ ಎಂತಲೂ ಆಚರಿಸಲಾಗುತ್ತದೆ. ಈ ಎರೆಡು ಹಬ್ಬಗಳು ಜೊತೆಯಲ್ಲೇ ಬರುವುದರಿಂದ ಈ ಹಬ್ಬಗಳನ್ನು ಜೊತೆಯಾಗಿ ಗೌರಿ-ಗಣೀಶ ಹಬ್ಬ ಎಂದು ಕರೆಯುತ್ತಾರೆ.


ಕೃಷಿಗೂ ಈ ಹಬ್ಬಕ್ಕೂ ಇರುವ ನಂಟು ------
ನಮ್ಮದು ಕೃಷಿ ಪ್ರಧಾನ  ದೇಶ ಹಾಗಾಗಿ ಈ ಹಬ್ಬವನ್ನು ರೈತಾಪಿ ಜನರ ದೃಷ್ಟಿಯಿಂದ ನೋಡಿದಾಗ ಸಾಮಾನ್ಯವಾಗಿ ಈ ಹಬ್ಬ ಬರುವುದು ಬಿತ್ತನೆ ಮುಗಿದು ಪೈರು ಬಂದಿರುವ  ಕಾಲದಲ್ಲಿ.  ಈ ಸಮಯದಲ್ಲಿ ಪರಸ್ಪರ ಬಾಗಿಣ ಕಾಯಿಕಣ ಕೊಡುವ ರೂಪದಲ್ಲಿ ಸಂಬಂಧಿಕರ ಮನೆಗೆ ಹೋಗಿ ಬೆಳೆಗಳು ಹೇಗೆ ಬಂದಿವೆ ಎಂಬ ವಿಷಯಗಳ ಬಗ್ಗೆ ಮಾತಾಡಲು ಅವಕಾಶ ದೊರೆತಂತೆ ಆಗುತಿತ್ತು. ಹಿಂದಿನ ಕಾಲದಲ್ಲಿ ಆರ್ಥಿಕ ವಿನಿಮಯ ದುಡ್ಡಿನ ಮೂಲಕ ಆಗುತ್ತಿರಲಿಲ್ಲ ಪರಸ್ಪರ ವಸ್ತುಗಳ ವಿನಿಮಯ ಪದ್ಧತಿ ಇತ್ತು (ಕಡ ಕೊಟ್ಟು ಕಡ ತೆಗೆದುಕೊಳ್ಳುವುದು ) ತಾವು ಬೆಳೆದ ಬೆಳೆ ಚೆನ್ನಾಗಿ ಆದ್ರೆ ಯಾವ ಯಾವ ವಸ್ತುಗಳನ್ನು ಎಸ್ಟೆಸ್ಟು ಕಡ ಕೊಟ್ಟು ಕಡ ತೆಗೆದುಕೊಳ್ಳಬಹುದು ಎಂಬ ಮಾತುಕತೆಗಳು ಹಿಂದಿನ ಕಾಲದಲ್ಲಿ ನಡೆಯುತಿದ್ದವು ಎಂದೆನಿಸುತ್ತಿದೆ. ಆಗ ಅಕ್ಕತಂಗಿಯರು ತನ್ನ ತವರಿಂದ ಬಂದ ಬಾಗಿನ ಅಥವಾ ಕಾಯಿಕಣದಲ್ಲಿನ ವಸ್ತುಗಳನ್ನು ನೋಡಿ ತನ್ನ ತವರಿನ ಆರ್ಥಿಕತೆಯನ್ನು   ಅರ್ಥ ಮಾಡಿಕೊಳ್ಳುತಿದ್ದಳು ಎಂದು ಕೆಲವೊಂದು ಜಾನಪದ ಹಾಡುಗಳಲ್ಲಿ ನಾವು ಕೇಳಿದ್ದೇವೆ.

ಕುಟುಂಬ ಸಮಾನತೆ ಸಾರುವಲ್ಲಿ-- 
ಇನ್ನು ಕೆಲವು ಊರುಗಳಲ್ಲಿ ಮನೆಯಲ್ಲಿ ಗೌರಿಯನ್ನು ತಂದಿರಿಸಿ ಹೆಣ್ಣುಮಕ್ಕಳಿಗೆ ಬಾಗಿನ ಕೊಡಿಸಿದ ನಂತರ ನಾಗಪ್ಪನಿಗೆ ತನೆಯರೆಯುವುದು ರೂಢಿಯಲ್ಲಿದೆ. ತಮ್ಮ ತಮ್ಮ ತೋಟ, ಹೊಲ ಜಮೀನುಗಳಲ್ಲಿ  ಇರುವ ನಾಗಪ್ಪನ ಹುತ್ತ ಅಥವಾ ನಾಗಪ್ಪನ ಕಲ್ಲುಗಳು ಇರುವ ಜಾಗಕ್ಕೆ ತಮ್ಮ ಮನೆಯಲ್ಲಿ ಗೌರಿ ಹಬ್ಬದ ಅಡುಗೆಯನ್ನೆಲ್ಲ ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ಮಾಡಿ, ಎಡಿ ಮಾಡಿ, ಅಲ್ಲೇ ಊಟ ಮಾಡುವ ರೂಢಿ ಇದೆ. ಅಲ್ಲಿನ ಪೂಜೆ ಯಲ್ಲೂ ವಿಶೇಷತೆ ಇದೆ. ಅಲ್ಲಿ ಬೆರಣಿಯಿಂದ ಮಾಡಿದ ಗಣೇಶನನ್ನು ಇಡುತ್ತಾರೆ, ಹತ್ತಿಯನ್ನು ದುಂಡಗೆ ಮಾಡಿ ಮದ್ಯಕ್ಕೆ ಮಸಿ ಹಚ್ಚಿ ಮೂರೂ ಕಣ್ಣುಗಳನ್ನು ಹುತ್ತಕ್ಕೆ ಇಡುತ್ತಾರೆ, ನಾಗರ ಹಾವು ಸುಬ್ರಮಣ್ಯ, ಹತ್ತಿಯ ಮೂರೂ ಕಣ್ಣುಗಳು ಶಿವನ ಗುರುತು, ಬೆರಣಿಯ ಗಣೇಶ ಆ ಮೂವರನ್ನು ಪೂಜಿಸಿದಂತೆ ಆಗುತ್ತದೆ. ಮನೆಯಲ್ಲಿ ಗೌರಿ ಪೂಜೆ ಒಟ್ಟಿನಲ್ಲಿ ಶಿವನ ಕುಟುಂಬಕ್ಕೆ  ಆದರದ ಸತ್ಕಾರ ಈ ಹಬ್ಬದಲ್ಲಿ ಸಿಗುತ್ತದೆ.

ಪೈರಿನ ರಕ್ಷಣೆಯ ಪಾಠ ----
ಹುತ್ತಕ್ಕೆ ಹುರಿದ ಜೋಳದ ಕಾಳನ್ನು ಹಾಕುವ ರೂಢಿಯಿದೆ. ನೆನೆಸಿದ ಶೇಂಗ, ಕಡಲೆಕಾಳು, ಹೆಸರುಕಾಳು ಅಲ್ಲಿ ಚೆಲ್ಲಿ ಬರುತ್ತಾರೆ. ನಾವು ಚಿಕ್ಕವರಿದ್ದಾಗ ಇವನ್ನೆಲ್ಲ ತಿನ್ನೋದು ಬಿಟ್ಟು ಯಾಕೆ ಹೀಗೆ ಚೆಲ್ಲ್ತಾರೆ ಅಂತ ಗೊತ್ತಾಗ್ತಾ ಇರ್ಲಿಲ್ಲ. ಈಗ ಸ್ವಲ್ಪ ಆಲೋಚನೆ ಮಾಡಿದಾಗ ಅನ್ನಿಸಿದ್ದು, ಇದು ಒಳ್ಳೆಯ ಬೆಲೆಯ ಕಾಲವಾದ್ದರಿಂದ ಇಲಿಗಳು ಮತ್ತು ಪಕ್ಷಿಗಳು ತಮ್ಮ ಬೆಲೆಯನ್ನು ತಿಂದು ಹಾಳುಮಾಡಿಯಾವು ಎಂದು  ಮಳೆಗಾಲವಾದ್ದರಿಂದ ಇಲಿ ಮತ್ತು ಪಕ್ಷಿಗಳನ್ನು ತಿನ್ನುವ ಹಾವುಗಳಿಗೆ ಸುಲಭವಾಗಲಿ ಬೇಟೆ ಸಿಗಲಿ ಎಂಬ ಉದ್ದೇಶದಿಂದ ಈ ಆಚರಣೆ ಬೆಳಕಿಗೆ ಬಂದಿರಬಹುದು ಎನಿಸಿತು.

ಅವೇನೆ ಕಾರಣಗಳು ಇರಲಿ ಅಣ್ಣ-ತಂಗಿಯರು ತಾವು  ಸಾಯುವವರೆಗೂ  ಪರಸ್ಪರ ತಮ್ಮ ಕಷ್ಟ ಸುಖಗಳಲ್ಲಿ  ಒಬ್ಬರಿಗೊಬ್ಬರು ಆಗಿಬರುತ್ತಾರೆ. ಈಗಿನ ಓಟದ ಜೀವನದಲ್ಲಿ ಪ್ರತಿದಿನ ಭೇಟಿಮಾಡಲು ಆಗದಿದ್ದರು ಈ ಗೌರಿ-ಗಣೇಶ ಹಬ್ಬಗಳಲ್ಲಿ ಮಾತ್ರ ಅಣ್ಣ ತಮ್ಮಂದಿರು ತನ್ನ ಅಕ್ಕ ತಂಗಿಯರ ಮನೆಗೆ ಹೋಗಿ ಯೋಗಕ್ಷೇಮ ವಿಚಾರಿಸುತ್ತಾರೆ. ಇಲ್ಲಿ ಬಾಗಿನ ಮತ್ತು ಕಾಯಿಕಣ ಸಂಬಂಧವನ್ನು ಉಳಿಸಿಕೊಳ್ಳಲು ಅಥವಾ  ಗಟ್ಟಿಗೊಳಿಸಲು ಇರುವ ಒಂದು ಆಚರಣೆಯ ಕೊಂಡಿ.




ಇನ್ನು ಕೆಲವು ಕಡೆಗಳಲ್ಲಿ ಹಿಂದೂ, ಮುಸ್ಲಿಂ ,ಕ್ರಿಸ್ತ ,ಜೈನ, ಸಿಕ್ಖ್ ಎಲ್ಲರು ಈ ಗಣೇಶ ಹಬ್ಬದಲ್ಲಿ ತಮ್ಮಲ್ಲಿಯ ಭೇದವನ್ನು ಮರೆತು ಈ ಹಬ್ಬದ ಆಚರಣೆಯಲ್ಲಿ  ಭಾಗಿಯಾಗುತ್ತಾರೆ.