Monday, 29 August 2016

ಇದು ಕಣ್ಣೆಂಬ ಕ್ಯಾಮೆರಾ ವಿಷಯ. ಯಾಕೆ ಹೀಗೆ ?

ನಿಮಗೆ ಎಂದಾದರೂ ಆಶ್ಚರ್ಯ  ಆಗಿದ್ಯ ಬೆಕ್ಕಿನ ಕಣ್ಣಿನ ಪಾಪೆ ಏಕೆ ಸೀಳು ರೀತಿಯಲ್ಲಿದೆ ಅಂತ. ಮತ್ತೆ ಕುರಿಯ ಕಣ್ಣಿನ ಪಾಪೆ ಯಾಕೆ  ಅಡ್ಡ ಮಲಗಿದಂತೆ ಇದೆ ಅಂತ. ಕಟಲ್ ಫಿಶ್ನ ಕಣ್ಣ ಪಾಪೆ ಯಾಕೆ W ಆಕಾರದಲ್ಲಿದೆ. ಮಾನವನ ಕಣ್ಣಿನ ಪಾಪೆ ಯಾಕೆ ದುಂಡಗೆ ಇದೆ ಅಂತ?

  ಅಮೆರಿಕಾದ Berkeley ಯ,  ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ Martin Banks ಮತ್ತು ಅವರ ಸಹಪಾಠಿಗಳು ಸುಮಾರು ಭೂಮಿಯ ಮೇಲಿನ  200 ಪ್ರಾಣಿಗಳ ಮೇಲೆ ತಮ್ಮ ರಿಸರ್ಚ್ ನಡೆಸಿ ಹಲವು ರೀತಿಯ ಕಣ್ಣಿನ ಪಾಪೆಯ ರಚನೆಯ ಚಲನ ವಲನ ಮತ್ತು ಅವುಗಳ ಕಾರ್ಯ ವೈಖರಿಯ ಬಗ್ಗೆ ವಿವರವಾಗಿ ಅದ್ಯಯನ ಮಾಡಿ ಹೇಳಿಕೆಯನ್ನು ನೀಡಿದ್ದಾರೆ.

ಬೆಕ್ಕಿನ ಕಣ್ಣಿನ ಪಾಪೆ :-


ಬೆಳಕಿನ ಆಧಾರದ ಮೇಲೆ ಬೆಕ್ಕಿನ ಕಣ್ಣಿನ ಮಸೂರವು ಸೀಳಿದ ರೀತಿಯಲ್ಲಿ ಬಾದಾಮಿರೀತಿ ಇರುತ್ತೆ. ಅಡ್ಡ ದುಂಡಗೆ ಹೀಗೆ ಬದಲಾಗುತ್ತಿರುತ್ತದೆ. ಮೇಲೆ ಕೆಳಗೆ ಅಗಲ ಹೀಗೆ ಪರದೆಯ ರೀತಿ ಅದು ಕಣ್ಣಿನ ಮಾಂಸ ಖಂಡಗಳಲ್ಲಿ ಚಿಕ್ಕದು ಮತ್ತು ದೊಡ್ಡದು ಹೀಗೆ ಬದಲಾಗುತ್ತಾ ಇರುತ್ತದೆ. ಒಟ್ಟಾಗಿ ಹೇಳಬೇಕೆಂದ್ರೆ ಬೆಕ್ಕಿನ ಕಣ್ಣಿನ ಮಸುರವು 135 ರೀತಿಯಲ್ಲಿ ಸರಿದಾಡುವ  ಸಾಮರ್ಥ್ಯ ಹೊಂದಿದೆ.  ಮಾನವನ ಕಣ್ಣಿನ ಮಸೂರ 15 ರೀತಿಯಲ್ಲಿ  ಮಾತ್ರ ತಿರುಗಾಡುವ ಸಾಮರ್ಥ್ಯ ಹೊಂದಿದೆ.

ಈ ಸೀಳಿದ ಆಕಾರದ ಕಣ್ಣಿನ ಪಾಪೆಯು ಬೆಳಕನ್ನು ಕಂಟ್ರೋಲ್ ಮಾಡುವ ಗುಣ ಹೊಂದಿದೆ. ಇದು ಬೆಕ್ಕು ರಾತ್ರಿ ಮತ್ತ್ತು ಹಗಲು ಎರೆಡು ಬೆಳಕಿನಲ್ಲಿ ಬೇಟೆಯಾಡಲು ಸಹಾಯಕವಾಗಿದೆ ಎಂದು ಲಂಡನ್ ನ  city ಯೂನಿವರ್ಸಿಟಿಯ  Ron Douglas ಎಂಬ ಜೀವಶಾಸ್ತ್ರಜ್ಞರು  ಹೇಳಿದ್ದಾರೆ.

ಮಾರ್ಟಿನ್ ಬ್ಯಾಂಕ್ಸ್ ರ ವರದಿ  ಪ್ರಕಾರ, ಸೀಳು ಆಕಾರದ ಪಾಪೆ ಹೊಂದಿರುವ ಪ್ರಾಣಿಗಳಾದ ಹಾವು ಮತ್ತು ಬೆಕ್ಕುಗಳು ರಾತ್ರಿ- ಹಗಲು ಎಂಬ ಭೇದವಿಲ್ಲದೆ  ಬೇಟೆ ಆಡಲು ಈ ಸೀಳು ಕಣ್ಣಿನ ಚಲನೆಯ ವೈಖರಿಯು ಒಂದು ಕಾರಣ  ಎಂದು ಹೇಳಿದ್ದಾರೆ. ಈ ಸೀಳು ಕಣ್ಣಿನ ಮಸೂರ ಅವುಗಳಿಗೆ ವರ ಅಂತಾನೆ ಹೇಳಬಹುದು. ಈ ರೀತಿಯ ರಚನೆ ಹೊಂದಿದ ಪ್ರಾಣಿಗಳು ಎಷ್ಟು  ದೂರದಲ್ಲಿ ತನ್ನ ಬೇಟೆ ಇದೆ ಮತ್ತು ಬೇಟೆ ತಲುಪಲು ಎಷ್ಟು  ಶಕ್ತಿ ಸಾಮರ್ಥ್ಯ ಬೇಕು ಎಂದು ಮೆದುಳಿಗೆ ಗುರಿ ನಿರ್ಧರಿಸಲು ಸಹಾಯಮಾಡುತ್ತವೆ ಎಂದು ಹೇಳುತ್ತಾರೆ.

ಕುರಿಗಳ ಕಣ್ಣಿನ ಅಡ್ಡಪಾಪೆ :-





ಕುರಿಗಳ ಕಣ್ಣಿನ ಪಾಪೆಯ ಸಾಮರ್ಥ್ಯಕ್ಕೂ ಮತ್ತು ಬೆಕ್ಕಿನ ಕಣ್ಣಿನ ಪಾಪೆಗೂ ಅಂಥಾ  ವ್ಯತ್ಯಾಸ ಕಂಡುಬರುವುದಿಲ್ಲ. ಆಕಾರದಲ್ಲಿ ಬದಲಾವಣೆಯಿದೆ. ಇದು ಸಾಮಾನ್ಯವಾಗಿ ಅಡ್ಡ ವಾಗಿ ಮಲಗಿದಂತೆ ಕಾಣುತ್ತದೆ. ನೆಲದ ಮೇಲೆ ನಡೆಯುವ ಸಸ್ಯಾಹಾರಿ ಪ್ರಾಣಿಗಳು ಸಾಮಾನ್ಯವಾಗಿ ಈ ರೀತಿಯ ಕಣ್ಣುಗಳನ್ನು ಹೊಂದಿವೆ. ಕಣ್ಣುಗಳು ಮುಖದ ಮುಂದಿನ ಭಾಗದಲ್ಲಿರದೆ ಅಕ್ಕ ಪಕ್ಕ ಇರುತ್ತವೆ. ಆದರು ಇವು ಸುತ್ತಮುತ್ತಲಿನ ವಸ್ತುಗಳನ್ನು ನೋಡಲು ಸಹಾಯಕವಾಗಿವೆ ಎಂದು Ron Douglas ಅಭಿಪ್ರಾಯ

ಪಟ್ಟಿದ್ದಾರೆ. ಕುರಿಗಳು ಯಾವಾಗಲು ನೆಲದ ಮೇಲಿರುವ ಹುಲ್ಲನ್ನು ಮೇಯಲು ತಲೆ ಭಾಗ ಯಾವಾಗಲು ಕೆಳಗೆ ಇರುತ್ತದೆ. ಆದರೆ ಕಣ್ಣುಗಳು ಮಾತ್ರ ತಿರುಗುತಾ ಸುತ್ತ ಮುತ್ತ ನಡೆಯುವುದನ್ನು ನೋಡುತ್ತಿರುತ್ತವೆ. ಈ ರೀತಿಯ ಕಣ್ಣುಗಳ ಉಪಯೋಗ ಏನೆಂದರೆ ಸೂರ್ಯನ ಅತಿ ಪ್ರಖರ ಕಿರಣಗಳಿಂದ ಕಣ್ಣಿನ ರಕ್ಷಣೆ ಯಾಗುತ್ತೆ. ಅಡ್ಡ ಕಣ್ಣಿನ ಪಾಪೆ ಹೊಂದಿರುವ ಪ್ರಮುಖ ಪ್ರಾಣಿಗಳು ಕುರಿ ಮೇಕೆ, ಕುದುರೆ.

ಕಟಲ್ ಮೀನಿನ w ಆಕಾರದ  ಕಣ್ಣಿನ ಪಾಪೆ:-



ಎಲ್ಲ ಆಕಾರದ ಕಣ್ಣಿನ ಪಾಪೆಗಿಂತ ಆಶ್ಚರ್ಯ ತರಿಸುವುದು ಈ ಕಟಲ್ ಮೀನಿನ ಪಾಪೆ. ಇದು  w ಆಕಾರದಲ್ಲಿದ್ದು ಮಾನವನ  ಕಣ್ಣಿಗಿಂತ ಎರಡರಸ್ಟು ನಿಖರವಾಗಿ ಮತ್ತು ಎರಡರಸ್ಟು ಫಾಸ್ಟ್ ಆಗಿ ಕೆಲಸ ನಿರ್ವಹಿಸುತ್ತದೆ. ಇದು ಕೂಡ ಅಡ್ಡ, ಉದ್ದ ಮತ್ತು ದುಂಡಗೆ, ಮೇಲೆ- ಕೆಳಗೆ,  ಚಿಕ್ಕದು- ದೊಡ್ಡದು ಹೀಗೆ ಚಲಿಸುವ ಗುಣ ಹೊಂದಿದೆ.

ಮಾನವನ ಕಣ್ಣಿನ ದುಂಡಗಿನಪಾಪೆ :- 

ಮನುಸ್ಯನಿಗೆ ಕಣ್ಣಿನ ಪಾಪೆ ದುಂಡಗೆ ಇದ್ದು  ಪ್ರಕೃತಿಯ ಚಿತ್ರಣವನ್ನು ಮೆದುಳಿಗೆ ರವಾನಿಸುವ ಕೆಲಸ ಮಾಡುತ್ತದೆ. ಅಲ್ಲದೆ ಅಳು- ನಗು, ಸುಖ- ದುಃಖ, ಇನ್ನು ಅನೇಕ ಭಾವನೆಗಳನ್ನು ಈ ಕಣ್ಣಿನ ಮೂಲಕವೇ ಮಾನವ ತೋರಿಸುತ್ತಾನೆ. ಸೂರ್ಯನ ಬೆಳಕಿನಲ್ಲಿ ಇದು ತುಂಬಾ ಚೆನ್ನಾಗಿ ಕೆಲಸ ನಿರ್ವಹಿಸುತ್ತದೆ. ರಾತ್ರಿ ಸಮಯದಲ್ಲಿ ಇದು ಕಡಿಮೆ. ಬೆಳಕಿನ ಕಿರಣ ವಸ್ತುವಿನ ಮೇಲೆ ಬಿದ್ದಾಗ ಮಾತ್ರ ಇದು ವಸ್ತುವಿನ ಬಗ್ಗೆ ನಿಖರ ಚಿತ್ರಣವನ್ನು  ಮೆದುಳಿಗೆ ಕಳುಹಿಸಲು ಸಾದ್ಯ.

ಸಾಮಾನ್ಯವಾಗಿ ಕಣ್ಣುಗಳು ಎರೆಡು ಇದ್ದರು ನೋಡುವ ನೋಟ ಒಂದೇ. ಎರೆಡು ಕಣ್ಣುಗಳು ಒಂದೇ ಚಿತ್ರ ಪಟವನ್ನು ಮೆದುಳಿಗೆ ಕಳಿಸುತ್ತವೆ. ಇದನ್ನು stereopsis ಎಂದು ಕರೆಯುತ್ತಾರೆ.ಒಂದು ಚಿಕ್ಕ ಪ್ರಯೋಗ ಮಾಡಿ ನೋಡಿ ಒಂದು ಕಣ್ಣು ಮುಚ್ಚಿಕೊಂಡು ಮೆಟ್ಟಿಲಿ ಇಳಿದು ಮತ್ತು ಎರೆಡು ಕಣ್ಣು ತೆರೆದು ಮೆಟ್ಟಿಲುಗಳನ್ನು ಇಳಿಯಲು ಪ್ರಯತ್ನಿಸಿ ನೋಡಿ ಯಾವುದು ನಿರಾಯಾಸವಾಗಿ ಮಾಡಬಹುದು. ನಮ್ಮ ಕಣ್ಣಿನ ನೋಟದ ದಿ ಬೆಸ್ಟ್ ಪಿಕ್ಚರ್ ಕಣ್ಣಿನ ಪಾಪೆಯ ಮೂಲಕ ನಮ್ಮ ಮೆದುಳಿಗೆ ರವಾನೆಯಾಗುತ್ತದೆ.

ಕಣ್ಣಿನ ಪಾಪೆಗಳು ದಿ ಬೆಸ್ಟ್ ಫೋಟೋಗ್ರಫೆರ್ ಅಂತ ಹೇಳಬಹುದು. ಏಕೆಂದರೆ ವಸ್ತುಗಳ ದೂರ ಹತ್ತಿರ ,ಮಂದ, ಪ್ರಖರ , ಬಣ್ಣದ ಚಿಕ್ಕ-ದೊಡ್ಡ ಹೀಗೆ ವಸ್ತುಗಳ ಎಲ್ಲ ಮಾಹಿತಿಯನ್ನು ಮೆದುಳಿಗೆ ಕಳಿಸುತ್ತದೆ. ಯಾವುದರ ಮೇಲೆ ಫೋಕಸ್ ಮಾಡಬೇಕು ಎಂಬ ಮೆದುಳಿನ ಆಜ್ಞೆಯನ್ನು ಪಾಲಿಸುತ್ತಾ ಮೆದುಳಿಗೆ ಬೇಕಾದ ಚಿತ್ರವನ್ನು ತೋರಿಸುತ್ತದೆ. ಸೂರ್ಯನ ಬೆಳಕಿನಲ್ಲಿ ಅದು ನಿಖರವಾಗಿ ಕೆಲಸ ಮಾಡುತ್ತದೆ. ರಾತ್ರಿಯಲ್ಲಿ ಹತ್ತಿರದ ವಸ್ತುಗಳ ನೋಟ ಮಾತ್ರ ನಿಖರವಾಗಿರುತ್ತವೆ.



Sunday, 21 August 2016

ಚಿತ್ರದುರ್ಗದ R.ನುಲೇನೂರಿನಲ್ಲಿ ನೆಲೆಸಿರುವ, ಹಠಯೋಗಿ -ಕಾಯಕಯೋಗಿ - ವಚನಕಾರ ನುಲಿಯ ಚಂದಯ್ಯ

 ಶರಣರಲ್ಲಿ "ಕಾಯವೇ ಕೈಲಾಸ" ಅಂತ ಪ್ರತಿಪಾದಿಸಿ, ನಂಬಿ ಬದುಕಿದ ಜನರಿಗೆ ಎಷ್ಟು ಮಹತ್ವವಿದೆಯೋ, ಅಸ್ಟೇ ಮಹತ್ವ "ಕಾಯಕವೇ ಕೈಲಾಸ" ಅಂತ ನಂಬಿ ಬದುಕಿದವರಿಗಿದೆ. "ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದರರೂ ಕಾಯಕದೊಳಗೆ ಅ೦ದು ನಂಬಿ ಬದುಕಿದ ಆಯ್ದಕ್ಕಿ ಮಾರಯ್ಯನವರದ್ದು ಒಂದು ಎತ್ತರವಾದರೆ,  "ಕಾಡಿನ ಸೋಪ್ಪಾಯಿತ್ತಾದಡೂ ಕಾಯಕದಿಂದ ಬಂದುದು ಲಿಂಗಾರ್ಪಿತ" ಎಂದು ಬಾಳಿ ಬದುಕಿ ದಾರಿ ತೋರಿದ ನುಲಿಯಚಂದಯ್ಯನವರದ್ದು ಇನ್ನೊಂದು ಎತ್ತರ. ಇವರ ಬಗ್ಗೆ ಒಂದು ಸಣ್ಣ ವಿವರ ಹೀಗಿದೆ.


ವಚನಕಾರ - ನುಲಿಯ ಚಂದಯ್ಯ
ಜನ್ಮಸ್ಥಳ- ಶಿವಣಗಿ ಬಿಜಾಪುರ ಜಿಲ್ಲೆ
ಕಾಲ- 1160
ಅಂಕಿತನಾಮ- ಚಂದೇಶ್ವರಲಿಂಗ
ಲಭ್ಯ ವಚನಗಳ ಸಂಖ್ಯೆ- 48
ಕಾಯಕ- ಹಗ್ಗ ಹೊಸೆದು ಮಾರುವುದು
ಸಮಾಧಿ ಇರುವ ಸ್ಥಳ- ಆರ್.ನುಲೇನೂರು, ಚಿತ್ರದುರ್ಗ ಜಿಲ್ಲೆ.
ಕೃತಿಯ ವೈಶಿಸ್ಟ್ಯ- ಕಾಯಕ ನಿಸ್ಟೆ ಮತ್ತು ಜಂಗಮ ದಾಸೋಹ, ಇವರ ವಚನಗಳಲ್ಲಿ ಗಮನಾರ್ಹವಾದವು.


ನುಲಿಯ ಚಂದಯ್ಯರ ಸಮಾಧಿ ಮೇಲೆ ಈಗ ಇಟ್ಟಿರುವ ಮೂರ್ತಿ. 

ನುಲಿಯ ಚಂದಯ್ಯ ಬಸವಣ್ಣನವರ ಸಮಾಕಾಲೀನರು ಮತ್ತು ಅವರ ಜೊತೆ ಕೈಜೋಡಿಸಿದ ಪ್ರಮುಖ ಶರಣರಲ್ಲಿ ಒಬ್ಬರು .
ನುಲಿಯ ಚಂದಯ್ಯನವರ, ಇಡೀ ವಚನಗಳನ್ನು ಓದಿದಾಗ  ಗುರು -ಲಿಂಗ-ಜಂಗಮ ಮತ್ತು ಕಾಯಕ - ದಾಸೋಹ ಎನ್ನುವ ಅಂಶಗಳ  ಬಗ್ಗೆ ಆಳವಾದ  ಒಳಹುಗಳು ತಿಳಿಯುತ್ತದೆ. ತಾನು ಕಾಯಕ ನಿರತನಾಗಿ ಪ್ರತಿನಿತ್ಯದ ಅನ್ನವನ್ನು ತಾನೇ ದುಡಿದು ತಿನ್ನಬೇಕು ಎನ್ನುವ ಕಾಯಕ ಸಿದ್ದಾಂತ ಅವರದಾಗಿತ್ತು. ಅದು ಆತನ ಇಷ್ಟದೈವ ಚಂದೇಶ್ವರ ಲಿಂಗಕ್ಕೆ ಒಪ್ಪುವುದು ಎಂದು ನಂಬಿದ್ದರು.


ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದವರಲ್ಲಿ ನುಲಿಯ ಚಂದಯ್ಯರೂ ಒಬ್ಬರು. ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಶಿವಣಗಿ. ಮುಂದೆ ಕಲ್ಯಾಣಕ್ಕೆ ಬಂದು, ಕಾಯಕ ದಾಸೋಹಗಳಲ್ಲಿ ತನ್ನನ್ನು  ತೊಡಗಿಸಿಕೊಂಡು ಇಷ್ಟಲಿಂಗದಲ್ಲಿ ಅತ್ಮೋನ್ನತಿ ಕಂಡುಕೊಂಡರು. ಮೆದೆ ಹುಲ್ಲಿನ ಹಗ್ಗ ಹೊಸೆಯುವ ಕಾಯಕ ಮಾಡಿ ಅದನ್ನ ಮಾರಿ ಬಂದ ಆದಾಯದಿಂದ ಗುರು ಲಿಂಗ ಜಂಗಮ ಸೇವೆಗೆ ಬಳಸುತ್ತಿದ್ದರು. ಚಂದೇಶ್ವರಲಿಂಗ  ಎಂಬ ಅಂಕಿತನಾಮದಲ್ಲಿ ಅವರು ರಚಿಸಿದ 48 ವಚನಗಳು ಲಭ್ಯವಾಗಿವೆ.

ಕಲ್ಯಾಣ ಕ್ರಾಂತಿಯ ನಂತರ ಚೆನ್ನಬಸವಣ್ಣರೊಡನೆ ನುಲಿಯ ಚಂದಯ್ಯ ಉಳಿವಿಗೆ ಬರುತ್ತಾರೆ. ಚೆನ್ನಬಸವಣ್ಣ ಶಿವೈಕ್ಯರಾದ ನಂತರ ಅನೇಕ ಶಿವಶರಣರು ವಿವಿಧೆಡೆಗೆ ಹಂಚಿಹೋಗುತ್ತಾರೆ. ಆಗ ಬಸವಣ್ಣನವರ ಸಹೋದರಿ ಅಕ್ಕ ನಾಗಮ್ಮರೊಂದಿಗೆ ಚಂದಯ್ಯನವರು ಕಾಯಕ ಧರ್ಮ ಪ್ರಚಾರ ಮಾಡುತ್ತಾ ಉಳವಿ, ಶಿವಮೊಗ್ಗ, ಎಣ್ಣೆಹೊಳೆ, ನಂದಿಗ್ರಾಮ, ಶಾಂತಿಸಾಗರ, ಬೆಂಕಿಕೆರೆ, ಇತರೆಡೆಗಳಲ್ಲಿ ಸಂಚರಿಸಿ ಹೊಳಲ್ಕೆರೆ ತಾಲ್ಲೂಕು ದುಮ್ಮಿ ಗ್ರಾಮಕ್ಕೆ ಬರುತ್ತಾರೆ. ಈ ಮದ್ಯದಲ್ಲಿ ಎತ್ತಿನ ಹೊಳೆತೀರದಲ್ಲಿ  ಅಕ್ಕ ನಾಗಮ್ಮ ಲಿಂಗೈಕ್ಯಳಾಗುತ್ತಾರೆ. ದುಮ್ಮಿ ಗ್ರಾಮದ  ದುಮ್ಮಣ್ಣ ನಾಯಕನ ಪತ್ನಿ ಪದ್ಮಾವತಿಯು ಚಂದಯ್ಯನವರ ವಿಚಾರಧಾರೆಯನ್ನು ಮೆಚ್ಚಿ ಲಿಂಗದೀಕ್ಷೆ ಪಡೆಯುತ್ತಾಳೆ. ಅರಮನೆಯಲ್ಲಿ ಆಶ್ರಯ ನೀಡುತ್ತಾಳೆ.  ಆದರೆ ನುಲಿಯ ಚಂದಯ್ಯ ಅರಮನೆ ವಾತಾವರಣ ತನ್ನ ಕಾಯಕ ಧರ್ಮಕ್ಕೆ ಒಗ್ಗದ ಕಾರಣ ಆ ಆಶ್ರಯವನ್ನು ನಿರಾಕರಿಸುತ್ತಾರೆ. ನಂತರ ಆಕೆ ತನ್ನ ತವರೂರು ಪದ್ಮಾವತಿ ಪಟ್ಟಣದ ಕೆರೆಯ ದಡದಲ್ಲಿ  (ಈಗಿನ ಆರ್. ನುಲೇನೂರು ಗ್ರಾಮ ) ಶಿಲಾ ಮಂಟಪ ನಿರ್ಮಿಸಿ ನಿತ್ಯ ಕಾಯಕ  ಮತ್ತು ದಾಸೋಹ ಮಾಡಲು ಕೇಳಿಕೊಳ್ಳುತ್ತಾಳೆ.  ಕೆರೆಯ ನೀರಿನ ಬಳಕೆಯ ವಿಷಯದಲ್ಲಿ ಕೆಲವರು ವಿರೋಧವನ್ನು ಮಾಡುತ್ತಾರೆ. ಆಗ ನುಲಿಯ ಚಂದಯ್ಯ ತನ್ನ ಊರುಗೋಲಿನಿಂದ ನೆಲವನ್ನು ಕುಕ್ಕುತ್ತಾರೆ. ಅಲ್ಲಿ ನೀರಿನ ಚಿಲುಮೆ ಏಳುತ್ತದೆ. ಅಲ್ಲಿ ಒಂದು ಬಾವಿಯನ್ನು ನಿರ್ಮಿಸಿ ಅದನ್ನು ತನ್ನ ಕಾಯಕಕ್ಕೆ ಬಳಸಿಕೊಳ್ಳುತ್ತಾರೆ. ಇದನ್ನು "ಚಂದಯ್ಯನ ಬಾವಿ" ಎಂದು ಕರೆಯುತ್ತಾರೆ. ಈ ಬಾವಿ ಈಗಲೂ ಆ ಗ್ರಾಮದಲ್ಲಿದೆ.

ನುಲೆನೂರಿನ ಕಲ್ಯಾಣಿ / ಹೊಂಡ
ನುಲಿಯ ಚಂದಯ್ಯ ತನ್ನ ಜೀವನದ ಕೊನೆಯ ದಿನಗಳವರೆಗೂ ಈ ಊರಲ್ಲೇ ನೆಲೆಸುತ್ತಾರೆ. ನುಲಿಯ ಚಂದಯ್ಯ ಬಾಳಿ ಬದುಕಿ ಲಿಂಗೈಕ್ಯರಾದ್ದರಿಂದ ಪದ್ಮಾವತಿ ಪಟ್ಟಣವಾಗಿದ್ದ ಊರು ಜನರ ಬಾಯಲ್ಲಿ "ನುಲಿಯಯ್ಯನೂರು" ಆಗಿ ಬಾಯಿಂದ ಬಾಯಿಗೆ ಬದಲಾಗುತ್ತಾ ಈಗ "ನುಲೇನೂರು" ಎಂದು ಕರೆಯಲಾಗುತ್ತಿದೆ.   ರಾಮಗಿರಿ ಹತ್ತಿರವಿರುವ ಕಾರಣ ಆರ್. ನುಲೇನೂರು ಎಂದು ಕರೆಯಲಾಗುತ್ತಿದೆ. (ಹೊಳೆಲ್ಕೆರೆ ತಾಲೂಕಿನಲ್ಲೇ ಟಿ. ನುಲೆನೂರು ಎಂಬ ಇನ್ನೊಂದು ಹಳ್ಳಿಇದೆ)  ಆರ್.ನುಲೇನೂರಿನಲ್ಲಿ ನುಲಿಯ ಚಂದಯ್ಯನವರ  ಸಮಾಧಿಯಿದೆ. ಈ ಸಮಾಧಿಗೆ ಒಂದು ಗುಡಿ ಕಟ್ಟಲಾಗಿದೆ.

ನುಲಿಯ ಚಂದಯ್ಯನ ಗುಡಿ / ಸಮಾಧಿ - ಆರ್ ನುಲೇನೂರು 
ಚಂದಯ್ಯನವರದ್ದು ಬಹುಮುಖ ವ್ಯಕ್ತಿತ್ವ. ಇವರ ನಡೆ ನುಡಿ ಕಾಯಕನಿಷ್ಟೆ ಪುರಾಣ ಕಥೆಗಳಲ್ಲಿ ವರ್ಣಿತವಾಗಿವೆ. ಹನ್ನೆರಡನೆಯ ಶತಮಾನದ ಶಿವಶರಣರಲ್ಲಿ ಇವರನ್ನು ಹಟಯೋಗಿ ಎಂದೂ ಕರೆಯುತ್ತಾರೆ. ಈ ಬಗ್ಗೆ ಒಂದು ಕತೆ ಪ್ರಚಲಿತದಲ್ಲಿದೆ. ಹುಲ್ಲನ್ನು ಕೊಯ್ದು, ಅದರಿಂದ ನಾರು ತೆಗೆದು,  ನಾರನ್ನು ನುಲಿದು,  ಹಗ್ಗಮಾಡಿ,  ಅದನ್ನು ಮಾರಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದ ಇವರು ಮೊದಲು ಜಂಗಮಕ್ಕೆ ಪ್ರಸಾದ ಅರ್ಪಿಸಿ ನಂತರವೇ ತಾನು ಪ್ರಸಾದ ಸ್ವೀಕರಿಸುತ್ತಿದ್ದರು. ಹೀಗೆಯೇ ಒಮ್ಮೆ ಹುಲ್ಲು ಕೊಯ್ಯುವಾಗ ಅವರ ಕೊರಳಲ್ಲಿದ್ದ ಲಿಂಗವು ಕಳಚಿ ಬೀಳುತ್ತದೆ. ತಾನು ಕಾಯಕ ಮಾಡುವಾಗ ತಾನಾಗಿ ಕಳಚಿಬಿದ್ದ ಲಿಂಗವನ್ನು  ಲೆಕ್ಕಿಸದೇ ತನ್ನ ಕಾಯಕದಲ್ಲಿ ಮಗ್ನನಾಗುತ್ತಾರೆ. ಆ ಲಿಂಗವನ್ನು ಎತ್ತಿಕೊಳ್ಳುವುದಿಲ್ಲ. ಕೊನೆಗೆ ಲಿಂಗವೇ ಅವರ ಬೆನ್ನು ಹತ್ತಿ ಹೋಯಿತು ಎಂಬಂಥಹ ಕಥೆ ಸ್ವಾರಸ್ಯಕರವಾಗಿದೆ.  ಕಾಯಕದಲ್ಲಿ ಕೈಲಾಸ ಕಂಡಂಥಹ ಶರಣ ಈ ನುಲಿಯ ಚಂದಯ್ಯ.

ನುಲಿಯ ಚಂದಯ್ಯರ ಸಮಾಧಿ ಮೇಲೆ ಈಗ ಇಟ್ಟಿರುವ ಮೂರ್ತಿ. 



ತನ್ನ ಇಷ್ಟಲಿಂಗದ ಕೈಯಲ್ಲೇ  ಹಗ್ಗ ಮಾರುವ ಕಾಯಕ ಮಾಡಿಸಿದವರೀತ ಎಂದು ಹೆಂಡದ ಮಾರಯ್ಯ ತನ್ನೊಂದು ವಚನದಲ್ಲಿ ಈತನ ಘನ ವ್ಯಕ್ತಿತ್ವವನ್ನು ನಾಟಕೀಯವಾಗಿ ನಿರೂಪಿಸಿದ್ದಾರೆ. ಈ  ಎಲ್ಲಾ ಕಾರಣಗಳಿಂದ ಈತನನ್ನು ಹಠಯೋಗಿ ಎಂದು ಕರೆಯಲ್ಪಟ್ಟಿದ್ದಾನೆ.



ನುಲಿಯ ಚಂದಯ್ಯನವರ ಕೆಲ ವಚನಗಳು!
ಕಂದಿಸಿ ಕುಂದಿಸಿ ಬಂಧಿಸಿ ಕಂಡವರ ಬೇಡಿತಂದು
ಜಂಗಮಕ್ಕೆ ಮಾಡಿದೆನೆಂಬ ದಂದುಗದೋಗರ ಲಿಂಗಕ್ಕೆ ನೈವೇದ್ಯ ಸಲ್ಲ.
ತನು ಕರಗಿ ಮನ ಬಳಲಿ ಬಂದ ಚರದ ಅನುವರಿತು
ಸಂದಿಲ್ಲದೆ ಸಂಶಯವಿಲ್ಲದೆ ಜಂಗಮಲಿಂಗಕ್ಕೆ
ದಾಸೋಹವ ಮಾಡುವುದೆ ಮಾಟ.
ಕಾಶಿಯಕಾಯಿ ಕಾಡಿನ ಸೊಪ್ಪಾಯಿತ್ತಾದಡೂ
ಕಾಯಕದಿಂದ ಬಂದುದು ಲಿಂಗಾರ್ಪಿತ.
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ನೈವೇದ್ಯ ಸಂದಿತ್ತು.
(ಸಮಗ್ರ ವಚನ ಸಂಪುಟ 7, ವಚನದ ಸಂಖ್ಯೆ 1291)

ಗುರು ಇಷ್ಟವ ಕೊಟ್ಟು ಕೂಲಿಗೆ ಕಟ್ಟಿದ ಲಿಂಗ
ವೃಷ್ಟವ ತೋರಿ ತನ್ನ ರಜತದ ಬೆಟ್ಟದ ಮೇಲಿರಿಸಿದ.
ಇಂತು ಗುರುಲಿಂಗಕ್ಕೆ ಮಾಡಿ
ಹಿಂದಣ ಮುಂದಣ ಸಂದೇಹಕ್ಕೀಡಾದೆ.
ಪ್ರಸಿದ್ಧವಪ್ಪ ಜಂಗಮಲಿಂಗಕ್ಕೆ ಸಂದೇಹವಿಲ್ಲದೆ
ಮನಸಂದು ಮಾಡಲಾಗಿ
ಚಂದೇಶ್ವರಲಿಂಗಕ್ಕೆ ಹಿಂದುಮುಂದೆಂಬುದಿಲ್ಲ.
(ಸಮಗ್ರ ವಚನ ಸಂಪುಟ 7, ವಚನದ ಸಂಖ್ಯೆ 1295)

ಶ್ರೀಗುರುವ ತಾನರಿದು ವರಗುರು ತಾನಾಗಬೇಕು.
ಲಿಂಗನೈಷಿ*ಕೆಯಾಗಿ ಪೂಜಿಸಿಕೊಳಬೇಕು.
ಜಂಗಮ ತಾ ತ್ರಿವಿಧವ ಮರೆದು
ಜಂಘ ನಾಸ್ತಿಯಾಗಿ ಜಂಗಮವಾಗಬೇಕು.
ಜಂಗಮಕ್ಕೆ ಮಾಡಿ ನೀಡಿ ಸಂದು ಸಂಶಯವನಳಿದು
ನಮ್ಮ ಚಂದೇಶ್ವರಲಿಂಗವನರಿಯಬೇಕು ಕಾಣಾ,
ಎಲೆ ಅಲ್ಲಮಪ್ರಭುವೆ.
(ಸಮಗ್ರ ವಚನ ಸಂಪುಟ 7, ವಚನದ ಸಂಖ್ಯೆ 1295)

ಇದಿರ ಭೂತಹಿತಕ್ಕಾಗಿ ಗುರುಭಕ್ತಿಯ ಮಾಡಲಿಲ್ಲ.
ಅರ್ತಿಗಾರಿಕೆಗಾಗಿ ಲಿಂಗವ ಬಿಟ್ಟು ಪೂಜಿಸಲಿಲ್ಲ.
ರಾಜ ಚೋರರ ಭಯಕ್ಕಂಜಿ ಜಂಗಮ ದಾಸೋಹವಮಾಡಲಿಲ್ಲ.
ಆವ ಕೃಪೆಯಾದಡೂ ಭಾವ ಶುದ್ಧವಾಗಿರಬೇಕು,
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿಯ ಬಲ್ಲಡೆ. 
(ಸಮಗ್ರ ವಚನ ಸಂಪುಟ 7, ವಚನದ ಸಂಖ್ಯೆ 1285)



ಆರ್ ನುಲೆನೂರಿನಲ್ಲಿರುವ ನುಲಿಯ ಚಂದಯ್ಯನ ಗುಡಿಯ ಪಕ್ಕದ ಮತ್ತು ಮುಂದಿನ ನೋಟ!  




ಇಲ್ಲಿ ಸಿಕ್ಕಿರುವ ಶಾಸನಗಳು ಮತ್ತು  ಮೂರ್ತಿಗಳು




ಗೂಗಲ್ ಮ್ಯಾಪ್ ನಲ್ಲಿ ದಾರಿ





Photo credits to : Sandesh TJ Tavane



Wednesday, 10 August 2016

ಆಸ್ಟ್ರೇಲಿಯಾದಲ್ಲಿರುವ ಭಾರತೀಯ ವಲಸಿಗರೇ ಅತಿ ಹೆಚ್ಚು ವಿದ್ಯಾವಂತರು - Indian community the most educated in australia

ಆಸ್ಟ್ರೇಲಿಯಾ ಎಂಬುದು ಒಂದು  ವಲಸಿಗರ ದೇಶ ಅಲ್ಲಿಗೆ ಪ್ರಪಂಚದ ನಾನಾ ಕಡೆಗಳಿಂದ ಜನರು ಹೋಗಿ ನೆಲೆಸಿದ್ದಾರೆ. ಇಲ್ಲಿಗೆ ಹೋದವರ ಪಟ್ಟಿಯಲ್ಲಿ ಭಾರತೀಯರು ಇದ್ದಾರೆ. ಅಲ್ಲಿ ನಮ್ಮವರು ಮಾಡಿದ ಸಾಧನೆಗಳು ಆ ದೇಶಕ್ಕೆ ಸೀಮಿತವಾದರೂ ಅವರು ಭಾರತೀಯರು ಎಂಬುದು ನಮಗೆ ಹೆಮ್ಮೆಯ ವಿಷಯ. ಇತ್ತೀಚೆಗೆ ತಾನೇ ಪ್ರಪಂಚಕ್ಕೆ ತಿಳಿದ ಇನ್ನೊಂದು  ವಿಷಯ ನಮ್ಮ ಭಾರತೀಯರ ಹೆಮ್ಮೆ ಎಂದು ಎನ್ನಬಹುದು. ಅದು ಶಿಕ್ಷಣ ವಿಚಾರವಾಗಿ, ಅಲ್ಲಿ ಇರುವ ವಲಸಿಗರಲ್ಲಿ ಭಾರತದ ವಲಸಿಗರೆ ಅತಿ ಹೆಚ್ಚು ವಿದ್ಯಾವಂತರು ಎಂಬುದು.


ಆಸ್ಟ್ರೇಲಿಯಾದಲ್ಲಿರುವ ಭಾರತೀಯರು ಅತಿ ಹೆಚ್ಚು ವಿದ್ಯಾವಂತ ವಲಸಿಗರ ಗುಂಪು ಎಂದು ಧೃಡಪಡಿಸಲಾಗಿದೆ. the department of immigration and border protection's documents ನ ಆಧಾರದ ಮೇಲೆ ಈ ವಿಷಯವನ್ನು ಖಚಿತ ಪಡಿಸಿಕೊಳ್ಳಲಾಗಿದೆ. ನಿಜಾಂಶ ಏನೆಂದರೆ 54.6% ಆಸ್ಟ್ರೇಲಿಯಾದಲ್ಲಿರುವ  ಭಾರತದ ವಲಸಿಗರು (Indian migrants) ಪದವಿ ಮತ್ತು ಅದಕ್ಕೂ ಹೆಚ್ಚಿನ ವಿದ್ಯಾಭ್ಯಾಸವನ್ನು ಹೊಂದಿದವರಾಗಿದ್ದಾರೆ.

ಮೇಲ್ಬೌರ್ನ್ನ  ಉರ್ದು ನ್ಯೂಸ್ ಪೇಪರ್ "ಪೆಹಚಾನ್" (pehchan) ನಲ್ಲಿ ಈ ವರದಿ ಪ್ರಕಟಣೆ ಯಾಗಿದೆ. ಅದರ ಪ್ರಕಾರ, ಆಸ್ಟ್ರೇಲಿಯಾದಲ್ಲಿರುವ 20 ಕ್ಕಿಂತ ಹೆಚ್ಚು ವಲಸಿಗರ ಗುಂಪು ಇದೆ. ಅವುಗಳಲ್ಲಿ ಭಾರತೀಯ ಮೂಲದ 54.1%,  ಜನರು ವಿದ್ಯಾವಂತರು . ಅಮೇರಿಕಾದಿಂದ ಬಂದ ವಲಸಿಗರು ಶಿಕ್ಷಣದಲ್ಲಿ  52.1% ನಿಂದ ಎರೆಡನೆ ಸ್ಥಾನದಲ್ಲಿದ್ದಾರೆ.  ಈ ಅಂಕಿ ಅಂಶದ ಪ್ರಕಾರ 2011 ರ ಸರ್ವೇಗಿಂತ ಮೂರು ಪಟ್ಟು ಹೆಚ್ಚಿನ ಪ್ರಮಾಣ ಈಗಿನ  ಸರ್ವೇ ತಿಳಿಸುತ್ತದೆ. 2011 ರಲ್ಲಿ 17.2%,  ಈಗಿನ ಸರ್ವೇ 54.6%.

ಭಾರತದಿಂದ ಬಂದಂಥಹ ವಲಸಿಗರು ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ವಿದ್ಯಾಭ್ಯಾಸ ಹೊಂದಿದವರಾಗಿದ್ದಾರೆ ಎಂದು ಪೆಹೆಚಾನ್ (pehchan) ಪತ್ರಿಕೆಯ ಎಡಿಟರ್ ಉಮರ್ ಅಮಿನ್ (umar amin) ರವರು ಹೇಳಿಕೆ ನೀಡಿದ್ದಾರೆ. the department of immigration and border protection's documents ನ ಅಂಕಿ ಅಂಶಗಳ ಆಧಾರದ ಮೇಲೆ ಭಾರತೀಯ ವಲಸಿಗರ ವಿದ್ಯಾವಂತರ ಸಂಖ್ಯೆ 54.6%,ಎಂಬ ವರದಿಯನ್ನು ನೀಡಿದ್ದಾರೆ. ಅದೇನೆಂದರೆ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ವಲಸಿಗರು ಪದವಿ ಮತ್ತು ಅದಕ್ಕೂ ಹೆಚ್ಚಿನ ಪದವಿಗಳನ್ನು ಹೊಂದಿರುವವರಾಗಿದ್ದಾರೆ.

ಇನ್ನು ಹೆಚ್ಚಿನ ಅಂಶಗಳನ್ನು ಉಮರ್ ಅಮಿನ್ ರವರು ಎರೆಡು ರೀತಿಯ ಮುಖ್ಯ ಆಧಾರಗಳಮೇಲೆ ಪ್ರಯೋಗ ನಡೆಸಿದ್ದಾರೆ. ಅದೇನೆಂದರೆ, ಅವರ ಸಮೀಕ್ಷೆಯಪ್ರಕಾರ ಹಿಂದೂಗಳು 88.1% ಜನರು 12 +  ತರಗತಿಗಳನ್ನು ಪಡೆದವರಾಗಿದ್ದಾರೆ. ಸಿಕ್ಕಿಂ ಇಲ್ಲಿ ಎರೆಡನೆ ಸ್ಥಾನ ಪಡೆದಿದೆ. ಇವರ ಪದವಿಗಳ ಪ್ರಮಾಣ 85.1%, ಆಗಿದೆ ಅಲ್ಲದೆ ಇವರುಗಳು ತಮ್ಮವರೊಡನೆ  ಅವರ ಮಾತೃ ಭಾಷೆಯಲ್ಲಿ ಮಾತನಾಡುತ್ತಾರೆ. ಹಿಂದಿ ಮಾತನಾಡುವ ಗುಂಪಿನ ಜನರು 49.5% ಜನರು ಪದವಿ ಮತ್ತು ಅದಕ್ಕೂ ಹೆಚ್ಚಿನ ಶಿಕ್ಷಣ ಪಡೆದವರಾಗಿದ್ದಾರೆ. ಇವರು ಫಿಲಿಪಿನೋ  ( philipino )  ಭಾಷೆ ಮಾತನಾಡುವವರಿಗಿಂತ ಹೆಚ್ಚು ವಿದ್ಯಾವಂತರಾಗಿದ್ದಾರೆ. ಫಿಲಿಪಿನೋದವರ ಅಂಕಿ ಅಂಶ - 47.5%.

ಈ ಎಲ್ಲಾ ಅಂಕಿ ಅಂಶಗಳು ಹೇಳುವ ಪ್ರಕಾರ ಭಾರತದಿಂದ ಆಸ್ಟೇಲಿಯಾಗೆ ವಲಸೆ ಹೋಗಿರುವ  ಭಾರತೀಯರು ಶಿಕ್ಷಣದಲ್ಲಿ ಮೊದಲ ಸ್ಥಾನ ಪಡೆದಿರುವುದು. ಇದು ಹೆಮ್ಮೆಯ ವಿಚಾರ ಅಲ್ಲವೇ!!. 

Wednesday, 3 August 2016

Fossils tree at Mysore zoo (wood like stone)

One of the wood look,like stone at the Mysore zoo. When we see in long distance it is a piece of wood, of a tree. But it is not a stem of a tree. it is a stone. In that stone we can see micro structure of wood. If anybody went there don't miss to see this miracle stone.





This is an exhibit of fossil tree trunk which is over 150 million years old. This has been brought from Yamanapalli village in Adilabad district of Andhra Pradesh from Kota rocks of Jurassic age .the tree trunk which is now seen here as a fossil has preserved the minute internal structure of the wood excellently. The age of the rocks, the evolution of plant life through the geologic ages and climatic conditions during the past history of the earth are all interpreted from a study of these fossil remains.

Geological survey of India
Karnataka south circle, 
Bangalore.


I clicked some pics of the rock they are here 












Monday, 1 August 2016

ವಿಶಿಸ್ಟ ವ್ಯಕ್ತಿತ್ವದ ಅಕ್ಕಮಹಾದೇವಿ - the genuine mystic

ಹನ್ನೆರಡನೆಯ ಶತಮಾನದಲ್ಲಿ ಹೊಸ ಸಮಾಜವನ್ನು ಕಟ್ಟಲು ಚಿಂತಿಸಿದ ಮತ್ತು ಕ್ರಾಂತಿಕಾರಕ  ಶಿವಶರಣರು ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ನಡೆಯುತಿದ್ದ ಅನ್ಯಾಯ ಶೋಷಣೆಗಳನ್ನ ಕಣ್ಣಾರೆ ಕಂಡು ಅವುಗಳ ವಿರುದ್ದ ತಪ್ಪು-ಸರಿ ವಿಚಾರಗಳನ್ನು ಆಡುಭಾಷೆಯಲ್ಲಿ ತಮ್ಮ ವಚನಗಳ ಮೂಲಕ ಜನರಿಗೆ ಅರ್ಥವಾಗುವಂತೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು. ಹನ್ನೆರಡನೆಯ ಶತಮಾನದಲ್ಲಿ ಅಸ್ಪೃಶ್ಯತೆ ಮತ್ತು ಸ್ತ್ರೀ ತಾರತಮ್ಯ  ತಾಂಡವವಾಡುತಿತ್ತು. ಸ್ತ್ರೀಯರು ಮತ್ತು ಶೂದ್ರರು ವೇದ ಶಾಸ್ತ್ರಗಳನ್ನು ಓದಲು ಅನರ್ಹರು, ದೇವಸ್ಥಾನಗಳಿಗೆ ಇವರ ಪ್ರವೇಶವಿಲ್ಲ ಎನ್ನುವ ವೇದಶಾಸ್ತ್ರಗಳನ್ನ ಇವರು ವಿರೋಧಿಸಿದರು. ಮಹಿಳೆಯರು ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳಲ್ಲಿ ಪುರುಷರಸ್ಟೇ ಸಮಾನರು ಎಂಬುದನ್ನು ತಿಳಿಸಿಕೊಟ್ಟರು.

ಅಕ್ಕಮಹಾದೇವಿಯವರ ಕಾಲ್ಪನಿಕ ಚಿತ್ರಪಟ 

ಇಂತಹ ಸಮಯದಲ್ಲಿ ಮಹಿಳೆಯರಿಗೆ ಸಿಕ್ಕ ಲಿಂಗದೀಕ್ಷೆಯಿಂದಾದಗಿ ಶಿವಶರಣೆಯರಾದರು.  ಅವರಿಗೆ ಸಿಕ್ಕ  ವಿದ್ಯಾಭ್ಯಾಸ ಸಮಾಜದಲ್ಲಿ ಸಮಾನತೆ ಮತ್ತು  ಅವರು ಚಿಂತನಶೀಲರಾಗಿ ತಮ್ಮಲ್ಲಿ ವಿಶಿಸ್ಟ ವ್ಯಕ್ತಿತ್ವ ರೂಪಿಸಿಕೊಳ್ಳಲು ಅನುವು ಮಾಡಿಕೊಟ್ಟಿತು. ಇಂತಹ ಶಿವಶರಣೆಯರಲ್ಲಿ  ಅಕ್ಕಮಹಾದೇವಿಯ ವ್ಯಕ್ತಿತ್ವ, ಯೋಚನಾಲಹರಿ, ಅವಳ ಬದುಕು ಮತ್ತು ಆಕೆಯ ಅನುಭವಗಳು ಮಹಿಳಾ ಪ್ರಾಧಾನ್ಯತೆಗೆ ಕನ್ನಡಿ ಹಿಡಿದಂತೆ ಭಾಸವಾಗುತ್ತದೆ.  

ಹೀಗೆ  ಸಾಮಾಜಿಕ ಬದಲಾವಣೆಗಳು ನಡೆಯುತಿದ್ದ ಸಮಯದಲ್ಲಿ ಶಿವಭಕ್ತರ ಮನೆಯಲ್ಲಿ ಮಗಳಾಗಿ ಹುಟ್ಟಿದ ಅಕ್ಕಮಹಾದೇವಿ ಗುರುವಾದ ಗುರುಲಿಂಗ ದೇವರಿಂದ ಲಿಂಗದೀಕ್ಷೆಯನ್ನು  ಪಡೆಯುತ್ತಾಳೆ. ಅಕ್ಕ ಕನ್ನಡ ಸಾಹಿತ್ಯ ಲೋಕದ ಮೊದಲ ಕವಯಿತ್ರಿ ಮತ್ತು ವಚನಗಾರ್ತಿ. ಇವಳ ವಚನಗಳ ಅಂಕಿತನಾಮ 'ಚೆನ್ನಮಲ್ಲಿಕಾರ್ಜುನ'. ಪುರುಷ ಪ್ರಧಾನ ಸಮಾಜವನ್ನು ಧಿಕ್ಕರಿಸಿ ನಿಂತು ಯಶಸ್ವಿಯಾದ ಸಾಧನೆ ಅಕ್ಕಮಹಾದೇವಿಯದ್ದು. ಹನ್ನೆರಡನೆಯ ಶತಮಾನದಲ್ಲಿ ಮಹಿಳೆಯರ ಸ್ಥಾನಮಾನ ಅಸ್ಟಕ್ಕಸ್ಟೇ ಇತ್ತು  ಇಂಥಹ  ಸಮಯದಲ್ಲಿ ಶ್ರೇಷ್ಠ ಅನುಭಾವಿಯಾಗಿ ಹೊಮ್ಮಿ ಹಾಗೂ ವಚನಕಾರ್ತಿಯಾಗಿ ಮೆರೆದು ಎಲ್ಲರ ಗೌರವಕ್ಕೆ ಪಾತ್ರಳಾದ ಅಕ್ಕಮಹಾದೇವಿ ಸಾಧಿಸಿದ ಆಧ್ಯಾತ್ಮಿಕ ಔನ್ನತ್ಯ ಮತ್ತು ಸಾಹಿತ್ಯ ಮಟ್ಟ ಶರಣೆಯರ ಗುಂಪಿನಲ್ಲಿ ಅತಿ ವಿರಳ ಎಂದೇ ಹೇಳಬಹುದು.     

ಹದಿನಾರರ ಹರೆಯದಲ್ಲಿ ತನ್ನ ಊರಿನ ರಾಜ ಕೌಶಿಕ ನೊಡನೆ ಮದುವೆಯಾಗಿ ನಾನಾ ರೀತಿಯ ಮಾನಸಿಕ ಯಾತನೆಗಳನ್ನು ಅನುಭವಿಸಿ, ವಿಘಟನೆಯನ್ನು ಹೊಂದಿ, ಭೋಗ-ಭಾಗ್ಯಗಳನ್ನೆಲ್ಲಾ ಧಿಕ್ಕರಿಸಿ, ವಿರಕ್ತ ದಿಗಂಬರೆಯಾಗಿ, ಆಗಿನ ಸಮಾಜದ ಕಟ್ಟು ಕಟ್ಟಳೆಗಳನ್ನು ವಿರೋಧಿಸಿ ನಿರಾಕಾರ ಮೂರ್ತಿ  ಚನ್ನಮಲ್ಲಿಕಾರ್ಜುನ   ನನ್ನ ಗಂಡ ಎಂದು ಹೇಳುತ್ತ ಹೊರಟ ಧೀಮಂತ ವೀರ ಮಹಿಳೆ ಈ ಅಕ್ಕಮಹಾದೇವಿ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ  ಇದ್ದ ಕೀಳು ಸ್ಥಾನಮಾನ, ಕಿರುಕುಳ, ಹಿಂಸೆ, ಕಟ್ಟುನಿಟ್ಟುಗಳ, ವಿರುಧ್ಧ ತಿರುಗಿಬಿದ್ದ ದಿಟ್ಟ ಮಹಿಳೆ ಇವಳು. ರಾಜಪ್ರಭುತ್ವವನ್ನು ಧಿಕ್ಕರಿಸಿದ ಮತ್ತು ಆಗಿನ ಸಮಾಜದಲ್ಲಿ  ವಿವಾಹಿಕ ಜೀವನವನ್ನು ಮುರಿದುಕೊಂಡ  ಹೆಣ್ಣು ಕೂಡ ಇವಳು ಮೊದಲಿನವಳೆಂದೇ ಹೇಳಬಹುದು. ಅಕ್ಕ ತನ್ನ  ವಚನಗಳಲ್ಲಿ ಸಮಾಜವನ್ನು ನೇರವಾಗಿ ವಿಮರ್ಶಿಸಿಲ್ಲ  ಬದಲಾಗಿ ಅವಳ ಸ್ವವಿಮರ್ಶೆಯಲ್ಲಿ  ಅಂದಿನ  ಸಮಾಜದಲ್ಲಿನ ಹೆಣ್ಣಿನ  ಚಿತ್ರಣವನ್ನು ನಾವು ಕಾಣಬಹುದಾಗಿದೆ.

ಕನ್ನಡ ಸಾಹಿತ್ಯಕ್ಕೆ ಮತ್ತು ವಚನ ಸಾಹಿತ್ಯಕ್ಕೆ ತನ್ನದೇ ಆದ ವಿಶಿಸ್ಟ ಕೊಡುಗೆಯನ್ನು ನೀಡಿರುವ ಅಕ್ಕನ ವಚನಗಳು ಕನ್ನಡ ಹೆಣ್ಣಿನ ಸಂವೇದನೆಯ ಅಭಿವ್ಯಕ್ತಿಯ ಮೊದಲ ಕುರುಹುಗಳಾಗಿ ಅಚ್ಚರಿಯನ್ನುಂಟುಮಾಡುತ್ತವೆ. ವಚನ ಸಾಹಿತ್ಯದ ಉಜ್ವಲ ನಕ್ಷತ್ರ ಮತ್ತು ಆದರ್ಶ ಮಹಿಳೆ ಈ ಅಕ್ಕಮಹಾದೇವಿ ಎಂದು ಹೇಳಬಹುದು.
ತೀ.ನಂ.ಶ್ರೀ. ಅವರು ಹೀಗೆ ಹೇಳಿದ್ದಾರೆ. "ಅಕ್ಕನ ವಚನಗಳ ಬಹುಭಾಗ ನಿಜವಾಗಿಯೂ ರಸಾರ್ಥವಾದದ್ದು ಉಪಮಾನಗಳಿಂದ ಚಿತ್ರಕಲ್ಪನೆಗಳಿಂದ ಮನೋಹರವಾಗಿರತಕ್ಕದ್ದು, ಅವಳದು ಕವಿಯ ಹೃದಯ, ಕವಿಯ ಕಣ್ಣು ಎಂಬುದನ್ನು ಸರತಕ್ಕದ್ದು" ಎಂದಿದ್ದಾರೆ.
ಡಾ. ರಂ.ಶ್ರೀ ಮುಗಳಿಯವರು ಅಕ್ಕನನ್ನು ಕುರಿತು ಹೀಗೆ ಹೇಳಿದ್ದಾರೆ. "ಮಹಾದೇವಿ ಅಕ್ಕನು ವ್ಯಕ್ತಿ ವಿಶಿಷ್ಟದಿಂದಲೂ, ವಚನ ಮಹಿಮೆಯಿಂದಲೂ ಮೇಲಾದ ಶಿವಶರಣೆ, ನಮಗೆ ತಿಳಿದ ಮಟ್ಟಿಗೆ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಅವಳೇ ಮೊದಲನೆಯ ಕವಯಿತ್ರಿ ಆಧ್ಯಾತ್ಮ ಮತ್ತು ಗದ್ಯ ಕವಿತ್ವ ಇವುಗಳ ಸಂಮಿಳನಕ್ಕಾದರೂ ಅಕ್ಕ ಮೊದಲಗಿತ್ತಿ."
ಎಲ್.ಬಸವರಾಜುರವರು "ಉಡುತಡಿಯಲ್ಲಿ ಉದ್ಭವಿಸಿ ಕಲ್ಯಾಣದಲ್ಲಿ ಕವಲೊಡೆದು ಕನ್ನಡ ನಾಡಿನ ಹೊಲ ಮೇದೆಯನ್ನೆಲ್ಲ ಕ್ಷಣಾರ್ಧದಲ್ಲಿ ಪಳಚ್ಚನೆ ಪ್ರಜ್ವಲಿಸುವಂತೆ ಮಾಡಿ ಶ್ರೀಶೈಲದ ಕದಳಿಯಲ್ಲಿ ಕಣ್ಮರೆಯಾದಳು ಅಕ್ಕಮಹಾದೇವಿ."ಎಂದಿದ್ದಾರೆ.

ಅಕ್ಕಮಹಾದೇವಿಯ ವಚನಗಳ ಒಳಗಿನ  ಅರ್ಥ ;-


೧.ಹರನೇ ನೀನೆನಗೆ ಗಂಡನಾಗಬೇಕೆಂದು
ಅನಂತಕಾಲ ತಪಸಿದ್ದೆ ನೋಡಾ
ಚಿಕ್ಕಂದಿನಿಂದಲೂ ಶರಣಸತಿ ಲಿಂಗಪತಿ ಭಾವನೆಯನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡ ಅಕ್ಕಮಹಾದೇವಿ ಶಿವಭಕ್ತ ಸಂಪನ್ನೆಯಾಗಿದ್ದಳು. ಇಸ್ಟದೈವ ಚೆನ್ನಮಲ್ಲಿಕಾರ್ಜುನನಿಗೆ ತನ್ನ ಬದುಕನ್ನು ಮುಡಿಪಾಗಿಟ್ಟಿದ್ದಳು.ತನ್ನ ತನು ಮನವನ್ನು ಆಕೆಯ ಮನದೈವ ಪತಿ ಚನ್ನಮಲ್ಲಿಕಾರ್ಜುನನನ್ನು ನೋಡುವ ಕಾತರದಿಂದ ಹಂಬಲಿಸುತ್ತ, ಹುಡುಕಾಡುತ್ತಾ ಅವನಲ್ಲಿ ಐಕ್ಯವಾಗುವ ಬಯಕೆ ತನ್ನ ಆತ್ಮ ಸಾಧನೆಯಲ್ಲಿ ಮುನ್ನಡೆದು ಅನುಭಾವಿಯಾಗಿ ಮೆರೆದಳು.

೨.ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ
ಎಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ ಚೆಲುವಂಗೆ ನಾನೊಲಿದೆ
ಎಲೆ ಅಪ್ಪಗಳಿರಾ ಮಲ್ಲಿಕಾರ್ಜುನನೆಂಬ ಗಂಡಂಗೆ 
ಮಿಗೆ ಮಿಗೆ ಒಲಿದೆ ಅಪ್ಪಗಳಿರಾ 
ಅಕ್ಕಮಹಾದೇವಿ ಪರವಸ್ತುವಿನಲ್ಲಿ ಇತ್ತ ಪ್ರೇಮ ಅಚಲವಾದದ್ದು,ಅಲೌಕಿಕ ವಾದದ್ದು. ಪ್ರೇಮ ಮತ್ತು ಭಕ್ತಿ -ಶ್ರದ್ಧೆ ಜೊತೆಗೆ ಪರಮಾತ್ಮನ ಸ್ವರೂಪ, ಮಹಿಮೆ, ಆತನ ಸಾಕ್ಷಾತ್ಕಾರಕ್ಕಾಗಿ ಹಂಬಲ, ವಿರಹ, ವ್ಯಾಕುಲತೆ,ಆತನ ನೆನಪು, ಜಾಗೃತ ಸ್ವಪ್ನಾವಸ್ಥೆಯಲ್ಲಿ ಪ್ರೇಮ ಪರಾಕಾಸ್ಟೆಯಿಂದ ಸತಿ ಪತಿ ಭಾವದಲ್ಲಿ ಬಾಳುತಿದ್ದ ಅಕ್ಕ ಪರಮಾತ್ಮನ ಸ್ವರೂಪವನ್ನು ಬಹಳ ಮಾರ್ಮಿಕವಾಗಿ ಹೀಗೆ ವರ್ಣಿಸಿದ್ದಾಳೆ. 

೩. ಬೆಟ್ಟದ ಮೇಲೊಂದು ಮನೆಯಮಾಡಿ ಮೃಗಗಳಿಗಂಜಿದೊಡೆನಯ್ಯ   ...........
ಈ ಜಗತ್ತಿನಲ್ಲಿ ಹುಟ್ಟಿದಮೇಲೆ ಇಲ್ಲಿ ಜೀವನ ನಡೆಸಬೇಕಾದ್ದು ಅನಿವಾರ್ಯ. ನಮಗೆ ಸಿಕ್ಕ ಈ  ಬದುಕಿನಲ್ಲಿ ಸ್ತುತಿ, ನಿಂದನೆಗಳು ಬಂದರೂ, ಎಂಥ ಕಷ್ಟ, ಕಾರ್ಪಣ್ಯ ಬಂದರೂ  ಸಮಾಧಾನದಿಂದ ಇರಬೇಕು, ಅವುಗಳನ್ನು ಧೈರ್ಯದಿಂದ ಸ್ವೀಕರಿಸಬೇಕು ಇವು ಅಕ್ಕನ ದಿಟ್ಟ ಮಾತುಗಳಿವು. 

೪.ಗುಣ ದೋಷ ಸಂಪಾದನೆಯ ಮಾದುವನ್ನಕ್ಕ 
ಕಾಮದ ಒಡಲು, ಕ್ರೋಧನ ಗೊತ್ತು, ಲೋಭದ ಇಕ್ಕೆ,
ಮೋಹದ ಮಂದಿರ, ಮದದಾವರಣ, ಮತ್ಸರದ ಹೊದಿಕೆ 
ಆ ಭಾವವರತಲ್ಲದೆ ಚೆನ್ನಮಲ್ಲಿಕಾರ್ಜುನನ ಅರಿವುದಕ್ಕೆ ಇಂಬಿಲ್ಲ ಕಾಣಿರಣ್ಣಾ, 
ಮನಸ್ಸಿನ ಅನಿಮಿತ್ತ ವೈರಿಗಳೆನಿಸಿದ ಕಾಮಾದಿ ಗುಣಗಳು ಜೀವನಕ್ಕೆ ದೋಷವನ್ನುಂಟು ಮಾಡುತ್ತವೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಕಾರಣವಿಲ್ಲದೆ ಮಾನವನನ್ನು ನಾಶಗೊಳಿಸುತ್ತವೆ. ಅವುಗಳನ್ನು ಸುಜ್ಞಾನದಿಂದ ಪಳಗಿಸಬೇಕು ಎಂದು ಅಕ್ಕ ನುಡಿದಿದ್ದಾಳೆ.

ವಚನ ಸಾಹಿತ್ಯದ ಆದರ್ಶ ಮಹಿಳೆಯಾಗಿ ಎದ್ದು ನಿಂತ ಅಕ್ಕಮಹಾದೇವಿಯ ವಚನಗಳನ್ನು ಇಡಿಯಾಗಿ ನೋಡಿದಾಗ ಅವುಗಳಲ್ಲಿ ಎದ್ದು ಕಾಣುವ ಅಂಶಗಳೆಂದರೆ ಅವಳ ವೈಯುಕ್ತಿಕ ಹೋರಾಟ, ಅವಳ ವಚನಗಳಲ್ಲಿ ಸಮಾಜವನ್ನು ಕುರಿತಂತೆ ವಿಮರ್ಶೆ, ಟೀಕೆಗಳು ಬಹು ಅಪರೂಪವಾಗಿ ಕಾಣಿಸಿಕೊಳ್ಳುತ್ತವೆ. ಸಾಮಾಜಿಕ ಬದುಕನ್ನು ಗಮನಿಸದಿದ್ದರು ಅವಳು ಅವುಗಳಿಗೆ ಪ್ರತಿಕ್ರಿಯಿಸಿದ ರೀತಿಯೇ ಭಿನ್ನವಾಗಿವೆ. ಸಮಾಜದ ವ್ಯವಸ್ಥೆಯನ್ನು ತಿರಸ್ಕರಿಸಿ, ಗಂಡ ಕೌಶಿಕ ರಾಜನನ್ನು ಬಿಟ್ಟು ತನ್ನ ಪತಿ ಚೆನ್ನಮಲ್ಲಿಕಾರ್ಜುನ ಎಂದು ಹುಡುಕಿಕೊಂಡು ಹೋದ ಅಕ್ಕಮಹಾದೇವಿ ತನ್ನ ವಚನಗಳಲ್ಲಿ "ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ " ಎಂದು ಸಾಂಸಾರಿಕ ಜೀವನದ ಬಗ್ಗೆ ತನ್ನ ಗೌರವವನ್ನು ತಿಳಿಸಿದ್ದಾಳೆ. ಆ ಕಾಲದಲ್ಲಿ ಆತ್ಮ ಸಾಧನೆಯು ಎಲ್ಲರಿಗೂ ತೆರೆದ ಬಾಗಿಲು ಹಾಗಾಗಿ ಸನ್ಯಾಸ ಸ್ವೀಕರಿಸಬೇಕೆಂದು ಯಾವ ವಚನಕಾರರು ಭೋದಿಸಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ಅಕ್ಕಳ ವಿಶಿಸ್ಟ ವರ್ತನೆಯು ಅಂದಿನ ಸಮಾಜಕ್ಕೆ ಅರ್ಥವಾಗದೆ ಟೀಕೆಗೆ ಗುರಿಯಾಗಬೇಕಾಯಿತು.