Monday, 30 March 2020

ಗಿಣ್ಣ



ಗಿಣ್ಣ ಇದೊಂದು ಸಿಹಿ ತಿನಿಸು. ನೋಡಲು ಎಷ್ಟು ನಾಜುಕೋ ಅಸ್ಟೇ ಚೆನ್ನಾಗಿ ಹೊಟ್ಟೆಯಲ್ಲಿ ಸುಲಭವಾಗಿ ಕರಗುವ ಸಿಹಿ ಇದು. ಪೇಟೆ ಮಂದಿಗೆ ಅಸ್ಟು ಪರಿಚಿತವಲ್ಲದ್ದು, ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹಸು ಇಲ್ಲವೆ ಎಮ್ಮೆ ಕರು ಹಾಕಿದಾಗ ಮೊದಲ ಕೆಚ್ಚಲ ಹಾಲನ್ನು ಗಿಣ್ಣು ಹಾಲು ಎಂದು ಕರೆಯುವರು ಅದು ಸ್ವಲ್ಪ ಹಳದಿ ಹುಳಿ ಮಿಶ್ರಿತ ಬಿಳಿ ಹಾಲು ಕರುವಿಗೆ ಸ್ವಲ್ಪ ಕುಡಿಸಿ ನಂತರ ಕರೆದ ಹಾಲು ಅದು ಕಾಫೀ ಟೀ ಇಲ್ಲವೇ ಸಕ್ಕರೆ ಬೆರೆಸಿ ಬೂಸ್ಟ್ ಗಳನ್ನೂ ಹಾಕಿ ಕುಡಿಯಲು ಬರುವುದಿಲ್ಲ. ಕಾಯಿಸಿದರೆ ಒಡೆದುಹೋಗುವುದು. ಇದನ್ನ ಎಳಗಂಜಿ ಹಾಲು, ಗೀಬು ಹಾಲು ಅಂತನು ಕರೆಯುತ್ತಾರೆ.  ಈ ಹಾಲಿನಿಂದ ಮಾಡುವ ಸಿಹಿಯೇ ಗಿಣ್ಣ. ಪ್ರಪಂಚದೆಲ್ಲೆಡೆ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಗಿನ್ನವನ್ನು ತಯಾರಿಸುತ್ತಾರೆ. ನಾನು ನಮ್ಮೂರಿನಲ್ಲಿ ನಮ್ಮನೆಯಲ್ಲಿ  ಹೇಗೆ ಗಿಣ್ಣ ಮಾಡುತ್ತಾರೆ ಅನ್ನೋದನ್ನ ಇಲ್ಲಿ ಬರೆದಿದೀನಿ. ನನಗೆ ತಿಳಿದಿರುವ ಪ್ರಕಾರ ಉತ್ತರ ಕರ್ನಾಟಕ ಭಾಗಗಳಲ್ಲಿ ಈ ರೀತಿಯೇ ಗಿಣ್ಣ ಮಾಡುವುದು.  ಚಿತ್ರದುರ್ಗ ದ ಸುತ್ತ ಮುತ್ತ ಚಿಕ್ಕಮಗಳೂರು ದಾವಣಗೆರೆ ಶಿವಮೊಗ್ಗ ತುಮಕೂರು ಈ ಕಡೆಗಳಲ್ಲೆಲ್ಲ ಗಿಣ್ಣ ಮಾಡೋದು ಈ ರೀತಿಯೇ.  ಬೆಂಗಳೂರಿನ ಕಡೆ ನಮಗಿಂತ ಭಿನ್ನವಾಗಿ ಮಾಡುವರು.

ಬೇಕಾಗಿರುವ ಸಾಮಗ್ರಿಗಳು:
1.       ಗೀಬು (ಗಿಣ್ಣು ಹಾಲು 1 ಲೋಟ )
2.       ಗಟ್ಟಿ ಹಾಲು ( 1 ಲೀಟರ್ )
3.       ಏಲಕ್ಕಿ ಶುಂಟಿ ಪುಡಿ ½ ಚಮಚ
4.       ಬೆಲ್ಲ 1 kg
5.       ಬೇಕೆಂದರೆ ಬದಾಮ್ ಪುಡಿ

ಮಾಡುವ ವಿಧಾನ :
ಗಟ್ಟಿ ಹಾಲಿಗೆ ಬೆಲ್ಲವನ್ನು ಎರೆದು ಪುಡಿ ಮಾಡಿ ಹಾಕಿ, ಜೊತೆಗೆ  ಗೀಬು ಹಾಲು, ಏಲಕ್ಕಿ ಮತ್ತು ಶುಂಟಿ ಪುಡಿ [ಬಾದಾಮಿ ಪುಡಿ]ಗಳನ್ನು ಹಾಕಿ ಗುರದುತ್ತಾ ಕರಗಿಸಬೇಕು. ಅದು ಕರಗಿದ ನಂತರ  ಜಾಲರಿ ಅಥವಾ ಬಿಳಿ ಬಟ್ಟೆಯಿಂದ  ಒಂದು ಪಾತ್ರೆಗೆ ಸೋಸಿಕೊಳ್ಳಬೇಕು. ಸೋಸಿದ ಹಾಲನ್ನು ಚಿಕ್ಕ ಚಿಕ್ಕ ಪಾತ್ರೆಗಳಲ್ಲಿ ಹಾಕಿಟ್ಟುಕೊಳ್ಳಬೇಕು.  ನಂತರ ದಪ್ಪ ತಳ ಇರುವ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಕೆಳಗೊಂದು ಸಿಕ್ಕ ತಟ್ಟೆ ಇಟ್ಟು  ಆ ತಟ್ಟೆಯ ಮೇಲೆ ಗಿಣ್ಣು ಹಾಲು ತುಂಬಿಸಿರುವ  ಪಾತ್ರೆಯನ್ನು  ಇಟ್ಟು ಅದಕ್ಕೆ ತಟ್ಟೆ ಮುಚ್ಚಿ ಬೇಯಿಸಬೇಕು. ಒಂದು ಹತ್ತು ನಿಮಿಷಗಳ ನಂತತ ತಟ್ಟೆ ತೆರೆದರೆ ಗೀಬು ಹಾಲಿನ ಮಿಶ್ರಣ ಗಟ್ಟಿಯಾಗಿ ಸಿಹಿ ತಯಾರಾಗಿರುತ್ತದೆ. ಅದು ಸರಿಯಾಗಿ ಬೆಂದಿದೆಯೇ ಎಂದು ಗುರುತಿಸುವುದು ಸುಲಭ.  ಒಂದು ಚಾಕನ್ನೋ ಚಮಚವನ್ನೋ ಗಿಣ್ಣದೊಳಗೆ ಹಾಕಿ ಮೇಲೆ ಎತ್ತಿದಾಗ  ಅದಕ್ಕೆ ಹಾಲು ಅಂಟಿಕೊಂಡರೆ ಅದು ಬೆಂದಿಲ್ಲ ವೆಂದು ಅರ್ಥ. ಅಂಟಿಕೊಳ್ಳದಿದ್ದರೆ ಬೆಂದಿದೆ ಎಂದು ಅರ್ಥ. ಅದನ್ನು ಕೆಳಗಿಳಿಸಿ ತಣ್ಣಗಾದ ಮೇಲೆ ತಿನ್ನಲು ಬಲು ಸಿಹಿಯಾಗಿರುತ್ತದೆ. ಇದನ್ನು ರೊಟ್ಟಿ ಚಪಾತಿ ಜೊತೆ ಕೂಡ ತಿನ್ನಲು ಚೆನ್ನಾಗಿರುತ್ತದೆ.