Friday 20 March 2020

ಯುಗಾದಿ 2020

ಡಿಸೆಂಬರ್ ಇಂದ ಹಿಡಿದು ಶಿವರಾತ್ರಿ (ಫೆಬ್ರವರಿ ಕೊನೆ) ವರೆಗೆ ಕಾಡುವ ಚಳಿಗಾಲ ಮುಗಿದು ವಸಂತಕಾಲದ (ಮಾರ್ಚ್ & ಏಪ್ರಿಲ್) ಆರಂಭದ ದಿನವೇ ಯುಗಾದಿ ಹಬ್ಬ. ಚಳಿಗಾಲದಲ್ಲಿ ಮರಗಿಡಗಳು ಎಲೆಯುದುರಿಸಿ ಎಲ್ಲವೂ ಬರಡಾಗಿರುತ್ತವೆ. ಯುಗಾದಿ ಹಬ್ಪದ ಸಮಯದಲ್ಲಿ ಹೊಸದಾಗಿ ಚಿಗುರೊಡೆದಿರುವ ಗಿಡಮರಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಮತ್ತು ಇದು ಈ ಕಾಲದ ಸೊಗಸು. ಹಾಗಾಗಿಯೇ ಯುಗಾದಿ ಎಂದರೆ ಅದು “ಉಂಡದ್ದೇ ಉಗಾದಿ ; ಮಿಂದದ್ದೇ ದೀವಳಿಗೆ” ಅನ್ನೋ ಗಾದೆಯನ್ನೂ ಮೀರಿದ –ಪ್ರಕೃತಿಯ ಹಬ್ಬ. ಚಳಿಗಾಲದಲ್ಲಿ ಕಳೆ ಕಳೆದುಕೊಂಡ ಪ್ರಕೃತಿಯು ಮತ್ತೆ ಶೃಂಗಾರಕ್ಕೆ ಅಣಿಯಾಗುವ ಕಾಲ ಇದು.  ಚೈತ್ರಮಾಸದಲ್ಲಿ ಗಿಡ ಮರಗಳೆಲ್ಲ  ಹೊಸ ಚಿಗುರೊಡೆಯಲು ಪ್ರಾರಂಭಿಸುತ್ತವೆ. ಹೊಸ ಮೊಗ್ಗು, ಹೂವುಗಳಿಂದ ಕಂಗೊಳಿಸುತ್ತಿರುತ್ತವೆ. ಇದು  ಪ್ರಕೃತಿಯ ಹೊಸ ಚೈತನ್ಯವನ್ನು ಸೂಚಿಸುತ್ತದೆ ಎಂದರೆ ತಪ್ಪಾಗಲಾರದು. 


ಯುಗಾದಿ ಪದದ ಅರ್ಥ ಏನು?

ಯುಗಾದಿ ಎನ್ನುವ ಪದದ ಅರ್ಥ ಹುಡುಕ್ತ ಹೋದಂತೆ ಹಲವು ಹೊಳಹುಗಳು ನಮಗೆ ಸಿಗುತ್ತವೆ.  ಯುಗಾದಿ ಪದವು ಸಂಸ್ಕೃತ ಪದಗಳಾದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದಾಗಿದೆ (ಯುಗ + ಆದಿ > ಯುಗಾದಿ , ಸವರ್ಣದೀರ್ಘ ಸಂಧಿ) ಮತ್ತು ಯುಗಗಳ ಆದಿ ಯುಗಾದಿ ಅನ್ನೋ ಒಂದು ಮಾತೊಂದಿದೆ. ಸಂಸ್ಕೃತದ ಪದನೆರಕೆಯನ್ನುಕನ್ನಡಿಸಿದರೆ ಎಲ್ಲೆಲ್ಲೂ ಈ ವಾದಕ್ಕೆ ಪುಷ್ಟಿ ಸಿಗುವುದಿಲ್ಲ. ಸಂಸ್ಕೃತದಲ್ಲಿ ಯುಗ,  ಯೋಗ, ಯುಗ್ಮ ಮುಂತಾದ ಪದಗಳೆಲ್ಲ “ಯುಜ್” ಎಂಬ ಬೇರಿನಿಂದ ಬಂದಿವೆ.  ಈ ಬೇರಿನ ಅರ್ಥ 'ಸೇರಿಸು', 'ಹೊಂದಿಸು” ಎನ್ನಬಹುದು. ಈ ಅರ್ಥದಲ್ಲಿ ಯುಗ , ಯುಗ್ಮ  ಎಂದರೆ pair, couple, ಜೋಡಿ, ಅವಳಿ ಎಂದಾಗುತ್ತದ್ದೆ.  

ಯುಗ ಎಂದರೆ ಕೃತ / ಸತ್ಯ (1728 ವರ್ಷಗಳ ಅವಧಿ), ತ್ರೇತ (1296 ವರ್ಷಗಳು), ದ್ವಾಪರ (864 ವರ್ಷಗಳು), ಮತ್ತು ಕಲಿ (432 ವರ್ಷಗಳು) ಯುಗಗಳು ಎನ್ನುವ ಅರ್ಥದಲ್ಲಿ ದೊಡ್ದ ಮೊತ್ತದ ‘ಅವಧಿ’ ಎಂದು ಬಳಕೆಯಲ್ಲಿದೆ. ಈ ನಾಲ್ಕೂ ಸೇರಿ ಆಗುವ 432೦ ವರ್ಷಗಳ ಅವಧಿಯನ್ನು  ಮಹಾಯುಗ (cosmic age) ವೆಂದೂ ಕರೆಯುತ್ತಾರೆ. ಈ ಯುಗಗಳ ನಡುವೆ ಪ್ರಳಯಗಳನ್ನು ಕಲ್ಪನೆ ಮಾಡಿಕೊಳ್ಳಲಾಗಿದೆ. ಜನಾಂಗ (race of men) ಮತ್ತು ಪದ್ಯಗಳ ಶೈಲಿ ( ಆರು ಸಾಲಿನ ಷಟ್ಪದಿ, ನಾಲ್ಕು ಸಾಲಿನ  ಚೌಪದಿ ಯಂತೆ ಎರಡು ಪ್ಯಾರದ ಯುಗ) ಎನ್ನುವ ಅರ್ಥಗಳೂ ಯುಗ ಪದಕ್ಕಿವೆ. ಆದರೆ ಈ ಮೇಲಿನ ಅರ್ಥಕ್ಕಿಂತ ಹೆಚ್ಚು ನಮಗೆ ಮುಖ್ಯವಾದದ್ದು  ಲಾಗಧನ “ವೇದಾಂಗ ಜ್ಯೋತಿಷ” ದ ಮೊದಲ ಶ್ಲೋಕದಲ್ಲಿ ಬರುವ ಯುಗದ ಅರ್ಥ! ಇಲ್ಲಿ ಯುಗ ಎಂದರೆ 5 ವರ್ಷಗಳ (= 5 ಸಂವತ್ಸರಗಳ) ಅವಧಿ!!.
ಪಂಚ ಸಂವತ್ಸರಮಯಂ ಯುಗಾಧ್ಯಕ್ಷಂ ಪ್ರಜಾಪತಿಂ ||
ದಿನರ್ತ್ವಯನ ಮಾಸಾಂಗಂ ಪ್ರಣಮ್ಯ ಶಿರಸಾ ಶುಚಿಃ ||
ಮೇಲಿನ ಸಂಸ್ಕೃತದ ಯಾವ ಅರ್ಥಗಳನ್ನು ತೆಗೆದುಕೊಂಡರೂ ಯುಗದ ಆದಿ ಯುಗಾದಿ ಎನ್ನುವ ಅರ್ಥ ಯುಗಾದಿ ಹಬ್ಬಗಿ ಅಷ್ಟು ಚೆಂದವಾಗಿ ಹೊಂದಲ್ಲ. ನಮ್ಮ ಅಜ್ಜಅಜ್ಜಿಯರ ಮಾತನ್ನು ಗಮನಿಸಿದರೆ ಈ ಹಬ್ಬದ ಹೆಸರು ಉಗಾದಿಯೇ ಹೊರತು ಯುಗಾದಿಯಲ್ಲ ಎನ್ನುವದು ತಿಳಿಯುತ್ತದೆ. ಆಂಧ್ರದಲ್ಲಿ ಇಂದಿಗೂ ಉಗಾದಿ ಎನ್ನುವ ಪದವೇ ಬಳಕೆಯಲ್ಲಿದೆ. ಯುಗಾದಿ ಎನ್ನುವ ಸಂಸ್ಕೃತ ಪದದ ಮೂಲ ಉಗಾದಿ ಎಂಬ ಅಚ್ಚಗನ್ನಡದ ಬೇರಿನ ಪದವೆಂದೇ ಹಲವರ ಎಣಿಕೆ.  ಕನ್ನಡದ ಕಣ್ಣಿಂದ ನೋಡಿದರೆ ಈ ಹಬ್ಬ ನೀರಿಗೆ ನಂಟುಳ್ಳ ಹಬ್ಬ. ಹಲವಾರು ಜನಾಂಗಗಳಲ್ಲಿ ನೀರಿಗೆ ನಂಟುಳ್ಳ ಹಲವಾರು ಆಚರಣೆಗಳು ಉಳಿದು ಬಂದಿವೆ. ನಮ್ಮಲ್ಲಿ ಈ ಹಬ್ಬದಲ್ಲಿ ನೀರು  (ದೀಪಾವಳಿಯಲ್ಲೂ) ತುಂಬಿಸುತ್ತಾರೆ. ಹಲವರು ದೇವರ ಗುಡಿಯಿಂದ ಒಂದು ಗೊತ್ತು ಮಾಡಿದ ಕೆರೆ ಬಾವಿ ಇಲ್ಲವೇ ಹಳ್ಳಗಳಿಗೆ ಈ ಹಬ್ಬದಂದು ನೀರಿಗೆ  ಗಂಗಮ್ಮನ ಪೂಜೆಗೆ ಹೊರಡುತ್ತಾರೆ. "ಉ"ಎನ್ನುವದು ನೀರು ಎನ್ನುವ ಅರ್ಥ ಕೊಡುವ ಮೂಲ ದ್ರಾವಿಡ ಪದ. ಉಕ್ಕು (ನೀರು ಮೇಲೆ ಬರುವ ಪ್ರಕ್ರಿಯೆ), ಉಪ್ಪು (ನೀರಿನಿಂದ ಬಂದದ್ದು), ಉಸುಕು (ನೀರಿನಿಂದ ಆದ ಕೆಸರು), ಉಗಿ, ಉಗ್ಗು, ಉದಕ, ಉಕ್ಕಡ (ಬಾವಿಯುಂದ ನೀರು ಸೇದಲು ಬಳಸುವ ಸಣ್ಣ ಹಗ್ಗ) ಹೀಗೆ ಎಲ್ಲವೂ ನೀರನ್ನೇ ಬೊಟ್ಟು ಮಾಡುವ ಪದಗಳು. ಉಗಾದಿಯೂ ನೀರನ್ನೇ ಬೊಟ್ಟು ಮಾಡುವ ಪದ.       



ಯಾವತ್ತು ಆಚರಣೆ ಮಾಡುತ್ತಾರೆ?
ಇನ್ನ ಹಬ್ಬದ ಆಚರಣೆಯ ದಿನದ ನಿರ್ಧಾರಕ್ಕೆ ಬಂದರೆ ಎರಡು ಬೇರೆ ಬೇರೆ ತರದ ಲೆಕ್ಕಗಳಿವೆ. ಕರ್ನಾಟಕ ಮತ್ತು ಆಂಧ್ರದ ತುಂಬಾ ನಾವೆಲ್ಲ ಚಂದ್ರಮಾನ ಪಂಚಾಂಗವನ್ನು ಬಳಸುತ್ತೇವೆ. ತಮಿಳುನಾಡಲ್ಲಿ (ಮತ್ತು ಕೇರಳದಲ್ಲಿ) ಸೌರಮಾನ ಪಧ್ಧತಿ ಬಳಸುತ್ತಾರೆ. ನಾವುಗಳು ಚೈತ್ರಮಾಸದ ಮೊದಲ ದಿನದಂದು ( ಚಂದ್ರ ಮೀನರಾಶಿಯಿಂದ ಮೇಷ ರಾಶಿಗೆ - ಎಂದರೆ ರೇವತಿ ನಕ್ಷತ್ರದಿಂದ ಅಶ್ವಿನಿ ನಕ್ಷತ್ರಕ್ಕೆ ಕಾಲಿಡುವ ಕಾಲಿಡುವ ದಿನ) ಉಗಾದಿ ಹಬ್ಬ ಮಾಡಿದರೆ,ತಮಿಳರು ಸೂರ್ಯ ಮೇಷ ರಾಶಿಗೆ ಕಾಲಿಡುವ ದಿನದಂತು ಈ ಹಬ್ಬಮಾಡುತ್ತಾರೆ.   

ಹಿಂದೂಗಳಿಗೆ ಇದು ಹೊಸ ವರ್ಷದ ದಿನ.  ಈ ಬಾರಿ ಮಾರ್ಚ್‌ 25ರಂದು ಯುಗಾದಿ ಬಂದಿದೆ. ಉಗಾದಿ ಹಿಂದೂಗಳ  ಐತಿಹಾಸಿಕ ಹಬ್ಬ. ಮಧ್ಯಕಾಲೀನ ಗ್ರಂಥಗಳು ಮತ್ತು ಶಾಸನಗಳಲ್ಲಿ  ಈ ಯುಗಾದಿ ದಿನದಂದು ಹಿಂದೂ ದೇವಾಲಯಗಳಿಗೆ ಪ್ರಮುಖ ದತ್ತಿ ದೇಣಿಗೆಗಳು ಬಂದಿರುವ  ದಾಖಲೆಗಳಿವೆ.  ಯುಗಾದಿ ಹಬ್ಬವು  ದಕ್ಷಿಣಭಾರತದಲ್ಲಿ ಅದರಲ್ಲೂ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಅತ್ಯಂತ ಸಡಗರ ಸಂಭ್ರಮಗಳಿಂದ ಆಚರಿಸುವರು. ಇದನ್ನು ಮಹಾರಾಷ್ಟ್ರದಲ್ಲಿ  ಗುಡಿ ಪಾಡ್ವಾ ಎಂದು ಕರೆಯುವರು. 

ಯುಗಾದಿಯ ಸಂಭ್ರಮಾಚರಣೆ
ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಯುಗಾದಿ ದಿನದಂದು ಪ್ರತಿ ಮನೆಮನೆಯ ಹೊಸ್ತಿಲಿನ ಮುಂದೆ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರ, ಜೊತೆಗೆ ಮನೆಯ ಬಾಗಿಲುಗಳು ಮಾವಿನ, ಬೇವಿನ, ಹೊಂಗೆಯ ಚಿಗುರು ಎಲೆಗಳ  ಮತ್ತು ಹೂವಿನ ಮಾಲೆಗಳಿಂದ   ಅಲಂಕಾರಗೊಂಡು ಕಂಗೊಳಿಸುತ್ತಿರುತ್ತವೆ.  ಮನೆಯ ಮಂದಿಗೆಲ್ಲ  ಹೊಸ ಬಟ್ಟೆಗಳನ್ನು ಒಬ್ಬರಿಗೊಬ್ಬರು ಖರೀದಿಸುವುದು ಮತ್ತು ಕೊಡುವರು.  ಬಡಬಗ್ಗರಿಗೆ  ದಾನಗಳನ್ನೂ ಕೂಡ ನೀಡುವ ಪರಿಪಾಠವಿದೆ.

ಮನೆಮಂದಿಯೆಲ್ಲ ಯುಗಾದಿಯಂದು ಎಣ್ಣೆ ಹಚ್ಚಿ ಸ್ನಾನ ಮಾಡುವರು. ಯುಗಾದಿ ಹಬ್ಬದಲ್ಲಿ ಎಣ್ಣೆ ಸ್ನಾನ ಮತ್ತೊಂದು ವಿಶೇಷ, ಮನೆ ಮಂದಿಯೆಲ್ಲ ಎಣ್ಣೆ ಸ್ನಾನ ಮಾಡಿ. ಬೇವಿನ ಎಲೆ ಹಾಕಿ ಕಾಯಿಸಿದ ನೀರಿನಲ್ಲಿ  ಸ್ನಾನದ ಮಾಡುವರು. ನಂತರ ಇಡೀ ಕುಟುಂಬವು ಒಟ್ಟಾಗಿ ದೇವರಿಗೆ  ಪ್ರಾರ್ಥನೆ ಸಲ್ಲಿಸಿ,  ಬೇವು -ಬೆಲ್ಲವನ್ನು ದೇವರಿಗೆ ನೈವೇದ್ಯ ಮಾಡಿ ತಿನ್ನುವ ವಾಡಿಕೆ ಇದೆ.  ನಂತರ  ಮನೆಗೆ ಬರುವ ಅತಿಥಿಗಳಿಗೂ  ಬೇವು-ಬೆಲ್ಲ ಕೊಟ್ಟೆ ಹಬ್ಬದೂಟ ಉಣ್ಣಿಸುವುದು ಬೆಳಗಿನ ಸಂಭ್ರಮ. ಸಂಜೆಯ ಮೇಲೆ ಚಂದ್ರನನ್ನು ನೋಡಿ ಮನೆಯ ಹಿರಿಯರಿಗೆ ಕಿರಿಯರು ಕಾಲಿಗೆ ಬಿದ್ದು ನಮಸ್ಕರಿಸುವುದು. ಅವರುಗಳ ಆಶೀರ್ವಾದ ಪಡೆಯುವ ವಾಡಿಕೆ ನಮ್ಮೂರ ಕಡೆ  ಇದೆ. ಸಂಬoಧಿಕರ ಮನೆಗಳಿಗೆ ಹೋಗಿ ಬೇವುಬೆಲ್ಲ ತಿನ್ನುವುದು. ಇದು ಜೀವನದಲ್ಲಿ ಏಳು ಬೀಳುಗಳನ್ನು, ಕಷ್ಟ ಮತ್ತು ಸುಖವನ್ನು ಎಲ್ಲಾರು ಸೇರಿ ಸಮನಾಗಿ ಸ್ವೀಕರಿಸಿ ಬದುಕು ನಡೆಸಬೇಕೆಂಬುದು ಸಬೇಕೇಂಬುದು ಈ ಬೇವುಬೆಲ್ಲದ ಹೇಳಿಕೊಡುವ ಜೀವನದ ಪಾಠವಾಗಿದೆ. 

ಪೌರಾಣಿಕ ಕಥೆ:-
ನಮ್ಮ ಕಡ ವಿಶೇಷವಾಗಿ ಈ ದಿನದಂದು ರಾತ್ರಿ ಚಂದ್ರನ ದರ್ಶನ ಮಾಡಿ, ಅವನಿಗೊಂದು ಪೂಜೆ ಹಾಕಿ, ನಂತರ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸುವ ಪದ್ಧತಿಗೆ ಅದರದ್ದೇ ಆದ ಒಂದು ಪೌರಾಣಿಕ ಕಥೆಯಿದೆ. ಗಣೇಶ ಹಬ್ಬದ ನಂತರ ಚೌತಿ ಚಂದ್ರನನ್ನು ನೋಡಿದರೆ ಅವರಿಗೆ ವಿಘ್ನಗಳು ಬರಲೆಂದು ಗಣೇಶ ಶಾಪ ಹಾಕುತ್ತಾನೆ. ಆಗ ಚಂದ್ರನು ತನ್ನ ತಪ್ಪಿನ ಅರಿವಾಗಿ ತನ್ನ ತಪ್ಪಿಂದ ಜನರಿಗೆ ತಗಲುವ ಶಾಪ ವಿಮೋಚನೆಗಾಗಿ ಏನಾದರೂ ಪರಿಹಾರ ನೀಡಬೇಕೆಂದು ಬೇಡಿಕೊಳ್ಳುತ್ತಾನೆ. ಆಗ ಗಣೇಶ,   ಯುಗಾದಿ ಹಬ್ಬದಂದು ನಿನ್ನನ್ನು ನೋಡುವ ಮೂಲಕ ಜನರು ನಮ್ಮ ಹಿಂದಿನ ಶಾಪಗಳಿಂದ ವಿಮೊಚನೆಗೊಳ್ಳುವರು, ನನ್ನ ಕೃಪೆಗೆ ಪಾತ್ರರಾಗುತ್ತಾರೆ  ಎಂದು ಆಶೀರ್ವದಿಸುವನು. ಆಗಿನಿಂದ ಈ ಪದ್ಧತಿ ಜಾರಿಗೆ ಬಂದಿದೆ ಎಂಬುದು ವಾಡಿಕೆ. ಅಂದು ಚಂದ್ರ ಕಡಿಮೆ ಸಮಯ ಇರುವನು. ಅಂದು ಚಂದ್ರನ ದರ್ಶನ ಪಡೆಯಲು ಜನ ಕಾತುರರಾಗಿರುತ್ತಾರೆ.

ತಿನಿಸುಗಳ ಸಂಭ್ರಮ :-
ಯುಗಾದಿಯಂದು ಮನೆಮನೆಗಳಲ್ಲಿ ವಿವಿಧ ರೀತಿಯ ಆಡುಗೆ ಮಾಡಿ ಉಣ್ಣುವ ಪರಿಪಾಠವಿದೆ. ಹೋಳಿಗೆ (ಒಬ್ಬಟ್ಟು), ತುಪ್ಪ, ಸೀಕರಣೆ, ಕಾಯಿಹಾಲು, ಕೋಸಂಬರಿ, ಪಚಡಿ, ಹಾಲುಪಾಯಸ, ಉಪ್ಪಿನಕಾಯಿ, ತರಕಾರಿ ಪಲ್ಯ, ಕಾಳುಪಲ್ಯ, ಕೋಸಂಬರಿ, ಹಪ್ಪಳ, ಸಂಡಿಗೆ, ಚಕ್ಕುಲಿ, ಕೋಡುಬಳೆ, ಹೀಗೆ ವಿವಿಧ ರೀತಿಯ ಭೂರಿ ಭೋಜನ ಅಂದು ಎಲ್ಲರ ಮನೆಯಲ್ಲೂ ಸಡಗರ ಸಂಭ್ರಮ ವಿರುತ್ತದೆ.


ಯುಗಾದಿ ದಿನದ ವಿಶೇಷತೆ :-
  • ಬ್ರಹ್ಮ ಈ ದಿನ ಜಗತ್ತನ್ನು  ಸೃಷ್ಟಿಯನ್ನು ಪ್ರಾರಂಭಿಸಿ ದಿನ, ವಾರ, ತಿಥಿ, ನಕ್ಷತ್ರ, ಮಾಸ, ಋತುಗಳನ್ನು ಮಾಡಿದ ಎಂದು ಪುರಾಣಗಳಲ್ಲಿ ಹೇಳಿದೆ.
  • ಬ್ರಹ್ಮದೇವನು ತನ್ನ ಸೃಷ್ಟಿ ಕಾರ್ಯವನ್ನು ಚೈತ್ರ ಶುಕ್ಲ ಪಾಡ್ಯದಿಂದ ಪ್ರಾರಂಭಿಸಿದ.
  • ಯುಗಾದಿ ದಿನದಿಂದಲೇ ಕಾಲಗಣನೆ ಆರಂಭವಾಯಿತು.
  • ಈ ದಿನ ವಿಷ್ಣು ವಿನೊಂದಿಗೆ ಬ್ರಹ್ಮ ದೇವರನ್ನು ಪೂಜಿಸಲಾಗುತ್ತದೆ.
  • ಈ ದಿನ ಹೊಸ ಉದ್ಯಮವನ್ನು ಪ್ರಾರಂಭಿಸಲು ಮತ್ತು ಹೊಸ ಹೂಡಿಕೆಗಳನ್ನು ಮಾಡಲು ಶುಭ.
  • ಈ ದಿನ ಹೊಸ ವರ್ಷದ ಆಚರಣೆಯನ್ನ ಹಿಂದೂಗಳು ಮಾತ್ರವಲ್ಲ ಇರಾನಿಗರು  ಕೂಡ ನೌರೋಜ್ ಎಂಬ ಹೆಸರಿನಲ್ಲಿ ಹೊಸ ವರ್ಷ ಆಚರಿಸುತ್ತಾರೆ. 
  • ಈ ದಿನ ಶಾಲಿವಾಹನನು ವಿಕ್ರಮಾದಿತ್ಯನ ವಿರುದ್ಧ  ಜಯಿಸಿ ಶಾಲಿವಾಹನ ಶಕ ಪ್ರಾರಂಭವಾದ ದಿನ ಎಂದು ಹೇಳಲಾಗುತ್ತದೆ.
  • ವಾಲ್ಮೀಕಿ ರಾಮಾಯಣದ ಪ್ರಕಾರ ಶ್ರೀರಾಮ ವನವಾಸ ಮುಗಿಸಿ ಅಯೋದ್ಯೆಗೆ ಹಿಂತಿರುಗಿ ಬಂದ ದಿನ.

ಯುಗಾದಿ ಹಬ್ಬಕ್ಕೆ ಸಂವತ್ಸರದ ಮಾಹಿತಿ:
ಈ ವರ್ಷ ಅಂದರೆ 2020 ರ ಯುಗಾದಿಯು ಹಿಂದೂ ಪಂಚಾಂಗದ ಪ್ರಕಾರ ೩೩ನೇ ವಿಕಾರಿ ನಾಮ ಸಂವತ್ಸರದಿಂದ 34ನೇ ಶಾರ್ವರೀ ನಾಮ  ಸಂವತ್ಸರಕ್ಕೆ ಹೆಜ್ಜೆ ಇಡುವ ದಿನ. ನನಗೆ ಯುಗಾದಿ ಹಬ್ಬದ ಸಂವತ್ಸರದ ಬಗ್ಗೆ  ಸಿಕ್ಕ ಕೆಲವು ಮಾಹಿತಿಗಳು ಕೆಳಗಿನಂತಿವೆ.
  • 60 ವರ್ಷ ತುಂಬಿದ ನಂತರ ಕೆಲವು ಮನೆತನಗಳಲ್ಲಿ 60 ವರ್ಷ ತುಂಬಿದ್ದಕ್ಕೆ ಆಚರಣೆ ಮಾಡುವುದು ಕೂಡ ರೂಢಿಯಲ್ಲಿದೆ. ಅದಕ್ಕೆ ಕಾರಣ ಈ 60 ಸಂವತ್ಸರಗಳನ್ನ ಆ ವ್ಯಕ್ತಿ ಕಂಡಿದ್ದಾನೆ ಅನ್ನುವುದು ಕೂಡ ಆಗಿದೆ.
  • 60 ಸಂವತ್ಸರಗಳು ಶಾಪಗ್ರಸ್ತ ನಾರದನ ಮಕ್ಕಳು ಎಂದು ಹೇಳಲಾಗುತ್ತದೆ. 
  • ಚಂದ್ರನ ಆಕಾರಗಳನ್ನು ಅನುಸರಿಸಿ ತಿಂಗಳುಗಳು ಉಂಟಾಗುತ್ತವೆ. ಸೂರ್ಯನ ಚಲನೆಯನ್ನು ಅನುಸರಿಸಿ ಸಂವತ್ಸರಗಳಾಗುತ್ತವೆ. ಈ ರೀತಿ ಭಾಸ್ಕರಾಚಾರ್ಯರು ತಮ್ಮ ಸಿಧ್ಧಾಂತ ಶಿರೋಮಣಿಯಲ್ಲಿ ಚಂದ್ರ ಮತ್ತು ಸೂರ್ಯನ ಚಲನೆಯ ಸಂಬಂಧದ ಬಗ್ಗೆ ವಿವರಿಸಿದ್ದಾರೆ.

ಹಿಂದೂ ಧರ್ಮದ ಪ್ರಕಾರ ಸಂವತ್ಸರಗಳು 60 ಇದ್ದು ಒಂದಾದ ಮೇಲೊಂದರಂತೆ  ಬರುತ್ತಿರುತ್ತವೆ. ಅವುಗಳ ಹೆಸರು ಈ ಕೆಳಗಿನಂತಿವೆ.
  1. ಪ್ರಭವ
  2. ವಿಭವ
  3. ಶುಕ್ಲ
  4. ಪ್ರಮೋದೂತ
  5. ಪ್ರಜೋತ್ಪತ್ತಿ
  6. ಆಂಗೀರಸ
  7. ಶ್ರೀಮುಖ
  8. ಭಾವ
  9. ಯುವ
  10. ಧಾತ್ರಿ (ಧಾತು)
  11. ಈಶ್ವರ
  12. ಬಹುಧಾನ್ಯ
  13. ಪ್ರಮಾಧಿ
  14. ವಿಕ್ರಮ
  15. ವೃಷ/ ವಿಷು
  16. ಚಿತ್ರಭಾನು
  17. ಸ್ವಭಾನು
  18. ತಾರಣ
  19. ಪಾರ್ಥಿವ
  20. ವ್ಯಯ       
  21. ಸರ್ವಜಿತ್
  22. ಸರ್ವಧಾರಿ
  23. ವಿರೋಧಿ
  24. ವಿಕೃತ
  25. ಖರ
  26. ನಂದನ
  27. ವಿಜಯ
  28. ಜಯ
  29. ಮನ್ಮಥ
  30. ದುರ್ಮುಖಿ
  31. ಹೇವಿಳಂಬಿ
  32. ವಿಳಂಬಿ
  33. ವಿಕಾರಿ
  34. ಶಾರ್ವರಿ (2020 -2021)
  35. ಪ್ಲವ
  36. ಶುಭಕೃತ್
  37. ಶೋಭಾಕೃತ್
  38. ಕ್ರೋಧಿ
  39. ವಿಶ್ವಾವಸು
  40. ಪರಾಭವ   
  41. ಪ್ಲವಂಗ
  42. ಕೀಲಕ
  43. ಸೌಮ್ಯ
  44. ಸಾಧಾರಣ
  45. ವಿರೋಧಿಕೃತ್
  46. ಪರಿಧಾವಿ
  47. ಪ್ರಮಾಧಿ
  48. ಆನಂದ
  49. ರಾಕ್ಷಸ
  50. ನಳ
  51. ಪಿಂಗಳ
  52. ಕಾಳಯುಕ್ತಿ
  53. ಸಿದ್ಧಾರ್ಥಿ
  54. ರುದ್ರ / ರೌದ್ರಿ
  55. ದುರ್ಮತಿ
  56. ದುಂದುಭಿ
  57. ರುಧಿರೋದ್ಗಾರಿ
  58. ರಕ್ತಾಕ್ಷಿ
  59. ಕ್ರೋಧನ
  60. ಅಕ್ಷಯ/ಕ್ಷಯ


No comments:

Post a Comment