Wednesday, 16 November 2016

ಶತಮಾನದ ದೈತ್ಯ ಚಂದ್ರ- Mega Beaver Moon- Super moonಮೊನ್ನೆ ಅಂದರೆ 14 ನವೆಂಬರ್, 2016, ಸೋಮವಾರದಂದು ನಾವು ನೋಡಿದ ಹುಣ್ಣಿಮೆಯ ಚಂದಿರ 70 ವರ್ಷಗಳಲ್ಲಿ ಎಂದೂ ಕಾಣದಂತಹ ದೊಡ್ಡ ಹುಣ್ಣಿಮೆ ಚಂದ್ರ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸಾಮಾನ್ಯವಾಗಿ ಹುಣ್ಣಿಮೆ ಚಂದ್ರ ನಮ್ಮೆಲ್ಲರಿಗೆ ದುಂಡಗೆ, ದಪ್ಪಗೆ ರಾತ್ರಿಯಲ್ಲಿ ಬೆಳಕು ಕೊಡುವ ಚಂದ್ರನನ್ನು ನೋಡಿರುವುದು ಸರ್ವೇ ಸಾಮಾನ್ಯ. ಆದರೆ ಈ ಬಾರಿ ಕಂಡಿರುವ ಹುಣ್ಣಿಮೆ ಚಂದ್ರ   ಭೂಮಿಗೆ  ಅತ್ಯಂತ ಹತ್ತಿರದಲ್ಲಿದ್ದ ಮತ್ತು ದೊಡ್ಡ ಗಾತ್ರದಿಂದ ಹೆಚ್ಚು ಪ್ರಕಾಶಮಾನವಾಗಿ ಕಂಡ  ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. 

ಸಾಮಾನ್ಯವಾಗಿ ಹುಣ್ಣಿಮೆಯ ದಿನ ಕಾಣುವ ಪೂರ್ಣಚಂದ್ರನ ಬೆಳಕಿಗಿಂತ  30% ಹೆಚ್ಚು ಬೆಳಕಿನ ಮತ್ತು ಇದುವರೆಗೂ ಕಂಡಿರುವ  ಹುಣ್ಣಿಮೆ ಚಂದ್ರನ  ಗಾತ್ರಕ್ಕಿಂತ 14% ದೊಡ್ಡ ಆಕಾರದಲ್ಲಿ ಸೋಮವಾರ  ರಾತ್ರಿ ಚಂದ್ರ ವಿಶೇಷವಾಗಿ ಕಂಡಿದ್ದಾನೆ. ಇದನ್ನು ಶತಮಾನದ ವಿಶೇಷ ಹುಣ್ಣಿಮೆ ಎಂದು ಕರೆಯಲಾಗಿದೆ. 

NASA Goddard Space Flight Center Noah Petro ಅವರು, ಸಾಮಾನ್ಯವಾಗಿ ಚಂದ್ರ ಭೂಮಿಗೆ 236,790 ಮೈಲಿ ದೂರದಲ್ಲಿದ್ದಾನೆ. ಆದರೆ ಸೋಮವಾರದಂದು  221,525 ಮೈಲಿ ಗಳಷ್ಟು ಹತ್ತಿರದಲ್ಲಿ ಬಂದಿದ್ದ.. ಸಾಮಾನ್ಯವಾಗಿ ಇರುವ ಅಂತರಕ್ಕಿಂತ 15,265 ಮೈಲಿಗಳಷ್ಟು ಕಡಿಮೆ ಹತ್ತಿರದಲ್ಲಿ ಭೂಮಿಯನ್ನು ಹಾದು ಹೋಗಿದ್ದಾನೆ ಎಂದು ಹೇಳಿಕೆ  ನೀಡಿದ್ದಾರೆ.

 ಚಂದ್ರ ಭೂಮಿಯನ್ನು ತನ್ನದೇ ಆದ ಒಂದು ಪರಿಧಿಯಲ್ಲಿ ಮೊಟ್ಟೆಯಾಕಾರದಲ್ಲಿ ಸುತ್ತುತ್ತಿದ್ದಾನೆ. ಅದು ನಿಖರವಾಗಿ ಇಸ್ಟೇ ದೂರ ಎಂದು ನಿಖರವಾಗಿ ಹೇಳಲಾಗದು. ಚಂದ್ರ ತಾನು ಸುತ್ತುವ ಪಥದಲ್ಲಿ ಅನೇಕ ಬದಲಾವಣೆ ಗಳಾಗುತ್ತಿರುತ್ತವೆ. ಆಗ ಭೂಮಿಯ ಹತ್ತಿರ ಮತ್ತು ದೂರ ಹೀಗೆ ಬದಲಾವಣೆಗಳು ಕಾಣುತ್ತವೆ. ಅದಕ್ಕೆ ಒಂದು ಉತ್ತಮ ಉದಾಹರಣೆ ಸೋಮವಾರದಂದು ಉಂಟಾದ super moon ಸಾಕ್ಷಿ.

Friday, 11 November 2016

ಕಾವೇರಿ ನದಿಯ ಹುಟ್ಟಿಗೂ, ಕೊಡವರ ಸೀರೆ ಉಡುವ ರೀತಿಗೂ, ಇರುವ ನಂಟನ್ನು ಹೇಳುವ ಕಥೆ.

ಕಾವೇರಿ ನಿಸರ್ಗಧಾಮದ ಕಾವೇರಿ ಪ್ರತಿಮೆ 
ಈ ಬಾರಿ ನಾವು ಕೊಡಗಿಗೆ ಪ್ರವಾಸ ಹೋಗಿದ್ವಿ. ಬಯಲು ಸೀಮೆಯಲ್ಲಿ ಹುಟ್ಟಿಬೆಳೆದ ನನಗೆ ಅಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ಕಾಡುಗಳು ಮತ್ತು ಕಾಡಿನಂತೆಯೇ ಇದ್ದ ಕಾಫೀ ತೋಟಗಳು, ಕಾಡುಮರಗಳಿಗೆ ಅಂಟಿಕೊಂಡೇ ಮಿಗಿಲೆತ್ತರಕ್ಕೆ ಬೆಳೆದ ಮೆಣಸಿನ ಬಳ್ಳಿಗಳು, ಕಾಡು ಜಾತಿ ಮರಗಳೊಂದಿಗೆ ಕೊತೆಜೋತೆಗೇ ಬೆಳೆದಿರುವ ಏಲಕ್ಕಿ, ಲವಂಗ, ಕಿತ್ತಳೆ ಇತ್ಯಾದಿ ಮರಗಳನ್ನ ನೋಡ್ತಾ, ಅಲ್ಲಿನ   ತೋಟಗಳಲ್ಲಿ, ಕಾಡಿನಲ್ಲಿ  ಅಡ್ಡಾಡಿ ತುಂಬಾನೇ ಖುಷಿ ಆಯ್ತು. ಮದ್ಯಾನ ಬಿಸಿಲಿದ್ದರೂ ಮಂಜುಮುಸುಕಿದ ವಾತಾವರಣ ಮಜಾ ಕೊಡುತ್ತಿತ್ತು. ಭೂಮಿ  ಮೇಲಿನ ಸ್ವರ್ಗ ಈ ಕೊಡಗು ಅನ್ನೋದು ನನ್ನ ಅನುಭವದ ಮಾತು.ಕೊಡಗಿನ ಕಾಫೀ ತೋಟ 
ಕೊಡಗು  ಕರ್ನಾಟಕದಲ್ಲಿನ ಒಂದು  ಚಿಕ್ಕ ಜಿಲ್ಲೆ. ಕೊಡಗು ಜಿಲ್ಲೆಯ ಸುಮಾರು ಮೂರನೇ ಒಂದರಷ್ಟು ಭಾಗ ಕೊಡವ ಜನಾಂಗದವರಿದ್ದರೆ.  ಕೊಡವರು ನಮಗಿಂತ ಭಿನ್ನ ಅನ್ನೋದು ಮೊದಲ ನೋಟಕ್ಕೇ ತಿಳಿದುಬಿಡುತ್ತೆ. ಅವರ ಅಡುಗೆ-ಉಡುಗೆ-ತೊಡುಗೆ, ನಡೆ-ನುಡಿ ಎಲ್ಲವೂ ನಮಗಿಂತ ಬೇರೆ.

ಕೊಡವರು ಆಡುವ "ಕೊಡುವ ತಕ್ಕ್" ನುಡಿ ಕನ್ನಡ ತಮಿಳು ತೆಲುಗಂತೆ ದ್ರಾವಿಡ ನುಡಿ ಕೂಟಕ್ಕೆ ಸೇರಿದ್ದರೂ, ಇವರು ಮೂಲ ದ್ರಾವಿಡ ಜನರಲ್ಲ ಅನ್ನುವ ಒಂದು ವಾದ ಇದೆ. ಅಲೆಕ್ಸಾಂಡರನ ಕಾಲದಲ್ಲಿ ಅವನ ಹಲ ಸೈನಿಕರು ವಾಪಸು ಹೋಗದೆ ಇಲ್ಲೇ ಉಳಿದರು ಆ ಜನರೇ ಈ ಕೊಡವರು ಅನ್ನುವ ಒಂದು ವಾದವಿದೆ. ಇವೆಲ್ಲಕ್ಕಿಂತ ನನಗೆ ಹೆಚ್ಚು ಗಮ ಸೆಳೆದಿದ್ದು ಕೊಡವತಿ ಉಡುವ ಸೀರೆ.  

ಕೊಡವ ಹೆಣ್ಣುಮಕ್ಕಳು ನಾವು ಸೀರೆ ಉಡುವುದಕ್ಕೆ ವಿರುಧ್ಧ ದಿಕ್ಕಿನಲ್ಲಿ ಸೀರೆ ಉಡುತ್ತಾರೆ. ಅವರುಗಳು ಮನೆಯಲ್ಲಿ ಮಾತನಾಡುವ ಭಾಷೆ ಕೊಡವ. ವ್ಯವಹಾರಿಕ ಭಾಷೆ ಕನ್ನಡ ಮತ್ತು ಬರವಣಿಗೆಗೆ ಕನ್ನಡವನ್ನು ಬಳಸುತ್ತಾರೆ. ಮಧ್ಯವನ್ನು ತಾವೇ ತಯಾರಿಸುತ್ತಾರೆ. ನಾನು ಅಲ್ಲಿ ನೋಡಿದಷ್ಟು ಮದ್ಯದಂಗಡಿ ಎಲ್ಲೂ ನೋಡಿಲ್ಲ. ಎಲ್ಲೆಂದರಲ್ಲಿ ಎಲ್ಲರ ಮನೆಮುಂದೆ, ಕಿರಾಣಿ ಅಂಗಡಿಗಳಲ್ಲೂ ಮಧ್ಯ ಮಾರಾಟ. ಅಲ್ಲಿ ಹೆಣ್ಣು-ಗಂಡು ಭೇದವಿಲ್ಲದೆ ಸಮಾರಂಭಗಳಲ್ಲಿ ಮಧ್ಯ ಕುಡಿಯುತ್ತಾರೆ. ಹಬ್ಬ, ಸಮಾರಂಭಗಳಲ್ಲಿ ಹಾಡು ಕುಣಿತ. ಆಧುನಿಕ ಜೀವನ ಶೈಲಿ ಇವೆಲ್ಲವುಗಳಿಂದ  ಅವರು ನಮಗಿಂತ ಭಿನ್ನ ಎಂದು ಸಾರಿ ಹೇಳುತ್ತವೆ.ತಲಕಾವೇರಿ ಪೂಜೆ ತುಲಾಸಂಕ್ರಮಣದ ದಿನ 
ನಾವು ತಲಕಾವೇರಿಗೆ ಹೋದ ದಿನ ತುಲಾ ಸಂಕ್ರಮಣ ಜಾತ್ರೆ ಆದ್ದರಿಂದ ಅಲ್ಲಿ ಬಂದಿದ್ದ ಎಲ್ಲ ಕೊಡವ ನೀರೆಯರು ಅವರ ಸಾಂಪ್ರದಾಯಿಕ ಶೈಲಿಯಲ್ಲಿಯೇ ಸೀರೆ ಉಟ್ಟಿದ್ದರು. ಹಾಗೇ ಕುತೂಹಲಕ್ಕೆ ನೀವು ಹೆಂಗೆ ಈ ರೀತಿ ಸೀರೆ ಉಡುತ್ತೀರ?  ಯಾಕೆ ನೀವು  ನಾವು ಸೀರೆ ಉಡುವದಕ್ಕೆ  ವಿರುದ್ಧವಾಗಿ  ಉಡುತ್ತೀರ? ಎಂದು ಅಲ್ಲಿನ ಕೊಡವರೊಬ್ಬರನ್ನು  ನಾನು  ಕೇಳಿದೆ. ಅದಕ್ಕೆ ಅವರು ಒಂದು ಪೌರಾಣಿಕ ಕಥೆಯನ್ನ ನಮಗೆ ಹೇಳಿದರು. ಕಾವೇರಿ ಹುಟ್ಟಿಗೂ ಮತ್ತು ಅಲ್ಲಿನ ಹೆಣ್ಣುಮಕ್ಕಳ ಸೀರೆ ಉಡುವ ರೀತಿಗೂ ಸಂಬಂಧ ಇರುವುದನ್ನು ಈ ಕಥೆ ವಿವರಿಸುತ್ತದೆ.

ಕೊಡವರ ಸಾಂಪ್ರದಾಯಿಕ ಬಟ್ಟೆಗಳು 

ಕನ್ನಡ ನಾಡಿನ ಜೀವನದಿ ಕಾವೇರಿ ಹುಟ್ಟಿದ ಬಗ್ಗೆ ಪುರಾಣಗಳಲ್ಲಿ ಅನೇಕ ಕಥೆಗಳಿವೆ. ಅದರಲ್ಲಿ ಇದು ಒಂದು. ಮಕ್ಕಳಿಲ್ಲದ ಕವೇರ ರಾಜ ತನಗೆ ಮಕ್ಕಳಾಗಬೇಕೆಂದು ಬ್ರಹ್ಮನನ್ನು ಕುರಿತು ತಪಸ್ಸನ್ನು ಆಚರಿಸುತ್ತಾನೆ. ಬ್ರಹ್ಮ ಅವನ ತಪಸ್ಸಿಗೆ ಮೆಚ್ಚಿ ತನ್ನ ಸಾಕುಮಗಳಾದ ಲೋಪಮುದ್ರೆಯನ್ನು ಕವೇರ ರಾಜನಿಗೆ ಮಗಳಾಗಿ ನೀಡುತ್ತಾನೆ. ಅವಳು ನಿನ್ನ ಮಗಳು ಮಾತ್ರವಲ್ಲದೆ ಲೋಕೋಧ್ಧಾರದ ಸಲುವಾಗಿ ಆಕೆಯು ಭೂಮಿಗೆ ಬರಲಿದ್ದಾಳೆ ಎಂದು ಕವೇರನಿಗೆ ಹೇಳುತ್ತಾನೆ. ಅಂದಿನಿಂದ
ಲೋಪಮುದ್ರಳು ಕವೇರರಾಜನ ಮಗಳಾಗಿ ಕಾವೇರಿ  ಎಂಬ ಹೆಸರನ್ನು ಪಡೆಯುತ್ತಾಳೆ. ಕವೇರ ರಾಜ ಆಕೆಗೆ ಕಾವೇರಿ ಎಂದು ಹೆಸರಿದುತ್ತಾನೆ.

ಕಾವೇರಿಯು ಚಿಕ್ಕ ವಯಸ್ಸಿನಿಂದಲೀ ಕ್ಷತ್ರಿಯ ಪುತ್ರಿಯಾಗಿ ಬೆಳೆಯುತ್ತಾಳೆ. ಮುಂದೆ ರಾಣಿಯಾಗಿ ರಾಜ್ಯಕ್ಕೆ ಮತ್ತು ಪ್ರಜೆಗಳಿಗೆ ಒಳ್ಳೆಯ ರಾಣಿಯಾಗಿ ಉತ್ತಮ ಆಡಳಿತ ನಡೆಸುತ್ತಿರುತ್ತಾಳೆ. ಒಮ್ಮೆ ಅಗಸ್ತ್ಯ ಮುನಿಯು ಕಾವೇರಿಯನ್ನು ನೋಡಿ ತಾನು ಆಕೆಯನ್ನು ಮದುವೆಯಾಗುವ ಬಯಕೆಯನ್ನು ರಾಜನ ಮುಂದೆ ಇಡುತ್ತಾನೆ. ಕಾವೇರಿಯು ಮೊದಲು ನಿರಾಕರಿಸಿದಳಾದಳು, ನಂತರ ತಂದೆಯ ಒತ್ತಡಕ್ಕೆ ಮಣಿದು ಅಗಸ್ತ್ಯರನ್ನ ಕೆಲವು ನಿಬಂದನೆಗಳ ಮೇರೆಗೆ ಮದುವೆಯಾಗುವುದಾಗಿ ಹೇಳಿ ಅಗಸ್ತ್ಯರನ್ನು ವರಿಸುತ್ತಾಳೆ.

ಮದುವೆಯ ನಂತರ  ಕಾವೇರಿಗೆ ಸಂಸಾರಿಕ ಜೀವನದಿಂದ ತನಗೆ ಮುಕ್ತಿ ಬೇಕು ಮತ್ತು ತಾನು ಲೋಕೋದ್ಧಾರಕ್ಕಾಗಿ  ಈ ಭೂಮಿಗೆ ಬಂದವಳು. ತಾನು ಇನ್ನು ಮುಂದೆ ಜನರ ಸೇವೆಗೆ ನನ್ನ ಜೀವನವನ್ನು ಮುಡಿಪಾಗಿಡಲು ಇಚ್ಚಿಸುತ್ತೇನೆ ಎಂದೂ ಆದ್ದರಿಂದ ತನಗೆ  ಈ ಸಂಸಾರದ ಬಂಧನದಿಂದ ಮುಕ್ತಿ ಕೊಡಿ ಎಂದು ಅಗಸ್ತ್ಯರಲ್ಲಿ  ಮನವಿ ಮಾಡಿಕೊಳ್ಳುತ್ತಾಳೆ. ತನ್ನ ಪ್ರೀತಿಯ ಹೆಂಡತಿಯ ಈ ಮಾತುಗಳನ್ನು ಕೇಳಿ ಅಗಸ್ತ್ಯರಿಗೆ ದಿಗ್ಬ್ರಮೆಯಾಗುತ್ತದೆ. ಕಾವೇರಿಯ ಮೇಲೆ ಕೋಪಗೊಂಡು ಅಗಸ್ತ್ಯರು ಕಾವೇರಿಯನ್ನು ನೀರನ್ನಾಗಿ ಮಾಡಿ ತಮ್ಮ ಕಮಂಡಲದೊಳಗೆ ಬಂಧಿಸಿಡುತ್ತಾರೆ. ಹಾಗೇ ತನ್ನ ಸಂಸಾರಿಕ ಜೀವನವನ್ನ ಸರಿಪಡಿಸಿಕೊಳ್ಳಲು ಬ್ರಹ್ಮ, ವಿಷ್ಣು, ಮಹೇಶ್ವರ ರನ್ನು ಕುರಿತು ಬ್ರಹ್ಮಗಿರಿ ಬೆಟ್ಟದ ಮೇಲೆ ತಪಸ್ಸನ್ನಾಚರಿಸಲು ಮುಂದಾಗುತ್ತಾನೆ.

ಅಗಸ್ತ್ಯರ ಈ ನಡೆ ಅಲ್ಲಿಯ ಜನರಿಗೆ ನುಂಗಲಾರದ ತುತ್ತಾಗುತ್ತದೆ. ತಮ್ಮ ನೆಚ್ಚಿನ ರಾಣಿ ಮತ್ತು ರಾಜ್ಯದ ಜನತೆಯನ್ನು ತನ್ನ ಮಕ್ಕಳಂತೆ ರಕ್ಷಿಸುತ್ತಿದ್ದ ಕಾವೇರಿಯ ಬಂಧನ ಪ್ರಜೆಗಳನ್ನು ಸಂಕಷ್ಟಕ್ಕೆ ಸಿಲುಕಿಸಿತು. ಮೊದಲೇ ಅಗಸ್ತ್ಯ ಮುನಿ ಕೋಪಕ್ಕೆ ತಾವು ಬಲಿಯಾಗುವುದು ಬೇಡ, ಅದರಿಂದ ಇನ್ನೊಂದು ಅನಾಹುತ ಆಗಲು ಬಿಡಬಾರದು  ಎಂದು ಆತನನ್ನು ಪ್ರಶ್ನಿಸಲು ಹೋಗಲಿಲ್ಲ.  ಇದನ್ನೆಲ್ಲಾ ನೋಡುತ್ತಿದ್ದ ದೇವತೆಗಳು ಹೇಗಾದರು ಮಾಡಿ ಅಗಸ್ತ ರಿಂದ ಕಾವೇರಿಯನ್ನು ಬಿಡುಗಡೆ ಗೊಳಿಸಬೇಕೆಂದು  ಗಣಪತಿಯ ಮೊರೆ ಹೋಗುತ್ತಾರೆ.

ಆಗ ಗಣಪತಿಯು ಬ್ರಹ್ಮಗಿರಿ ಬೆಟ್ಟಕ್ಕೆ ಕಾಗೆಯ ರೂಪದಲ್ಲಿ ಬಂದು ಅಗಸ್ತ್ಯ ರ ಕಮಂಡಲವನ್ನು  ಅಗಸ್ತ್ಯರು ನೋಡ ನೋಡುತ್ತಿದ್ದಂತೆ  ಎತ್ತಿಕೊಂಡು ಹೋಗಿ ಸ್ವಲ್ಪ ದೂರದಲ್ಲಿ ಬೀಳಿಸುತ್ತಾನೆ. ನೀರಿನ ರೂಪದಲ್ಲಿದ್ದ ಕಾವೇರಿ ಅಲ್ಲಿ ಚಿಮ್ಮಿ  ಹೊರ ಬರುತ್ತಾಳೆ.  ಅದನ್ನು ತಡೆಯಲು ಮತ್ತೆ ಅಗಸ್ತ್ಯರು ಪ್ರಯತ್ನ ಮಾಡುತ್ತಾರೆ. ಮತ್ತೆ ಗಣಪತಿ ಅದನ್ನು ಹೊತ್ತು ಹೋಗಿ ಸ್ವಲ್ಪದೂರ ಮಡಿಕೇರಿಯಲ್ಲಿ ಎಸೆಯುತ್ತಾನೆ. ಅಲ್ಲಿಂದ ಮುಂದೆ ಕಾವೇರಿ ನೀರಿನ ರೂಪದಲ್ಲಿದ್ದ ಕಾವೇರಿ ರಭಸವಾಗಿ ಹರಿಯುತ್ತಾಳೆ. ಹೀಗೆ ರಭಸವಾಗಿ  ಹರಿಯುತ್ತಿರುವ ಸಮಯದಲ್ಲಿ ಆಕೆಯ ಸೀರೆ ನೀರಿನ ಹೊಡೆತಕ್ಕೆ ಹಿಂದುಮುಂದಾಗುತ್ತದೆ. ಕಾವೇರಿಗೆ ಅಗಸ್ತ್ಯ ರಿಂದ ಸ್ವತಂತ್ರ ಸಿಕ್ಕು, ಕಾವೇರಿಯು ನದಿಯಾಗಿ ಹರಿದ  ನೆನಪಿನಲ್ಲಿ ಅಲ್ಲಿನ ಮಹಿಳೆಯರು ಸೀರೆಯನ್ನು ಉಲ್ಟಾ ಉಡಲು ಆರಂಭೀಸುತ್ತಾರೆ. ಅದನ್ನು  ಅವರ  ಸಂಸ್ಕೃತಿಯ ಗುರುತಾಗಿ ಉಳಿಸಿಕೊಳ್ಳುತ್ತಾರೆ. ಕೊಡಗಿನ ಜನತೆಗೆ ಇಂದಿಗೂ ಕಾವೇರಿಯೇ ಕುಲದೇವತೆ.

ಕೊಡವರು ಸೀರೆ ಉಡುವ ರೀತಿಯನ್ನ ಈ ವೀಡಿಯೋದಲ್ಲಿ ನೋಡಬಹುದು. ಹಿಂದೆ ನಿರಿಗೆ ಬರುವುದನ್ನ, ಹಿಂದಿನಿಂದ ಮುಂದಕ್ಕೆ ಬರುವ ಸೆರಗನ್ನ ಗಮನಿಸಿ.

https://youtu.be/WmGNDzKL8iYತಲಕಾವೇರಿಯ ತೀರ್ಥ ಉದ್ಭವ ಆಗುವ ಕುಂಡಿಗೆ ಹಿಂಭಾಗದಲ್ಲಿ ಒಂದು ಅಶ್ವತ್ಥ ಮರವಿದೆ. ಈ ಅಶ್ವತ್ಥ ವೃಕ್ಷವು (ಅರಳೀಮರ) ಹಿಂದೆ ಅಗಸ್ತ್ಯ ಮುನಿಗಳು ತಪಸ್ಸನ್ನಾಚರಿಸಿದ ಅಶ್ವಥ ವೃಕ್ಷದ ಕುಡಿ ಎಂದು ನಂಬಲಾಗಿದೆ.ಇದರ ಮೇಲಿನ ಹಂತದಲ್ಲಿ ಶ್ರೀ ಅಗಸ್ತೇಶ್ವರ ಹಾಗೂ ಗಣಪತಿ ದೇವಾಲಯಗಳಿವೆ. ಸ್ಥಳೀಯರ ಪುರಾಣಗಳಿಂದ ಅಗಸ್ತ್ಯ ಮುನಿಗಳು ಇಲ್ಲಿ ಮರಳಿನಿಂದ ಇಲ್ಲಿ ಲಿಂಗವನ್ನು ನಿರ್ಮಿಸಿ ಪೂಜಿಸಿದರೆಂದು ತಿಳಿಯಲಾಗುತ್ತದೆ.
ಅಶ್ವತ್ಥ ಮರದ ವಿವರಣೆ ಇರುವ ಬೋರ್ಡ್( centre for environment education )


ಅಶ್ವತ್ಥ ಮರ