Monday 30 March 2020

ಗಿಣ್ಣ



ಗಿಣ್ಣ ಇದೊಂದು ಸಿಹಿ ತಿನಿಸು. ನೋಡಲು ಎಷ್ಟು ನಾಜುಕೋ ಅಸ್ಟೇ ಚೆನ್ನಾಗಿ ಹೊಟ್ಟೆಯಲ್ಲಿ ಸುಲಭವಾಗಿ ಕರಗುವ ಸಿಹಿ ಇದು. ಪೇಟೆ ಮಂದಿಗೆ ಅಸ್ಟು ಪರಿಚಿತವಲ್ಲದ್ದು, ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹಸು ಇಲ್ಲವೆ ಎಮ್ಮೆ ಕರು ಹಾಕಿದಾಗ ಮೊದಲ ಕೆಚ್ಚಲ ಹಾಲನ್ನು ಗಿಣ್ಣು ಹಾಲು ಎಂದು ಕರೆಯುವರು ಅದು ಸ್ವಲ್ಪ ಹಳದಿ ಹುಳಿ ಮಿಶ್ರಿತ ಬಿಳಿ ಹಾಲು ಕರುವಿಗೆ ಸ್ವಲ್ಪ ಕುಡಿಸಿ ನಂತರ ಕರೆದ ಹಾಲು ಅದು ಕಾಫೀ ಟೀ ಇಲ್ಲವೇ ಸಕ್ಕರೆ ಬೆರೆಸಿ ಬೂಸ್ಟ್ ಗಳನ್ನೂ ಹಾಕಿ ಕುಡಿಯಲು ಬರುವುದಿಲ್ಲ. ಕಾಯಿಸಿದರೆ ಒಡೆದುಹೋಗುವುದು. ಇದನ್ನ ಎಳಗಂಜಿ ಹಾಲು, ಗೀಬು ಹಾಲು ಅಂತನು ಕರೆಯುತ್ತಾರೆ.  ಈ ಹಾಲಿನಿಂದ ಮಾಡುವ ಸಿಹಿಯೇ ಗಿಣ್ಣ. ಪ್ರಪಂಚದೆಲ್ಲೆಡೆ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಗಿನ್ನವನ್ನು ತಯಾರಿಸುತ್ತಾರೆ. ನಾನು ನಮ್ಮೂರಿನಲ್ಲಿ ನಮ್ಮನೆಯಲ್ಲಿ  ಹೇಗೆ ಗಿಣ್ಣ ಮಾಡುತ್ತಾರೆ ಅನ್ನೋದನ್ನ ಇಲ್ಲಿ ಬರೆದಿದೀನಿ. ನನಗೆ ತಿಳಿದಿರುವ ಪ್ರಕಾರ ಉತ್ತರ ಕರ್ನಾಟಕ ಭಾಗಗಳಲ್ಲಿ ಈ ರೀತಿಯೇ ಗಿಣ್ಣ ಮಾಡುವುದು.  ಚಿತ್ರದುರ್ಗ ದ ಸುತ್ತ ಮುತ್ತ ಚಿಕ್ಕಮಗಳೂರು ದಾವಣಗೆರೆ ಶಿವಮೊಗ್ಗ ತುಮಕೂರು ಈ ಕಡೆಗಳಲ್ಲೆಲ್ಲ ಗಿಣ್ಣ ಮಾಡೋದು ಈ ರೀತಿಯೇ.  ಬೆಂಗಳೂರಿನ ಕಡೆ ನಮಗಿಂತ ಭಿನ್ನವಾಗಿ ಮಾಡುವರು.

ಬೇಕಾಗಿರುವ ಸಾಮಗ್ರಿಗಳು:
1.       ಗೀಬು (ಗಿಣ್ಣು ಹಾಲು 1 ಲೋಟ )
2.       ಗಟ್ಟಿ ಹಾಲು ( 1 ಲೀಟರ್ )
3.       ಏಲಕ್ಕಿ ಶುಂಟಿ ಪುಡಿ ½ ಚಮಚ
4.       ಬೆಲ್ಲ 1 kg
5.       ಬೇಕೆಂದರೆ ಬದಾಮ್ ಪುಡಿ

ಮಾಡುವ ವಿಧಾನ :
ಗಟ್ಟಿ ಹಾಲಿಗೆ ಬೆಲ್ಲವನ್ನು ಎರೆದು ಪುಡಿ ಮಾಡಿ ಹಾಕಿ, ಜೊತೆಗೆ  ಗೀಬು ಹಾಲು, ಏಲಕ್ಕಿ ಮತ್ತು ಶುಂಟಿ ಪುಡಿ [ಬಾದಾಮಿ ಪುಡಿ]ಗಳನ್ನು ಹಾಕಿ ಗುರದುತ್ತಾ ಕರಗಿಸಬೇಕು. ಅದು ಕರಗಿದ ನಂತರ  ಜಾಲರಿ ಅಥವಾ ಬಿಳಿ ಬಟ್ಟೆಯಿಂದ  ಒಂದು ಪಾತ್ರೆಗೆ ಸೋಸಿಕೊಳ್ಳಬೇಕು. ಸೋಸಿದ ಹಾಲನ್ನು ಚಿಕ್ಕ ಚಿಕ್ಕ ಪಾತ್ರೆಗಳಲ್ಲಿ ಹಾಕಿಟ್ಟುಕೊಳ್ಳಬೇಕು.  ನಂತರ ದಪ್ಪ ತಳ ಇರುವ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಕೆಳಗೊಂದು ಸಿಕ್ಕ ತಟ್ಟೆ ಇಟ್ಟು  ಆ ತಟ್ಟೆಯ ಮೇಲೆ ಗಿಣ್ಣು ಹಾಲು ತುಂಬಿಸಿರುವ  ಪಾತ್ರೆಯನ್ನು  ಇಟ್ಟು ಅದಕ್ಕೆ ತಟ್ಟೆ ಮುಚ್ಚಿ ಬೇಯಿಸಬೇಕು. ಒಂದು ಹತ್ತು ನಿಮಿಷಗಳ ನಂತತ ತಟ್ಟೆ ತೆರೆದರೆ ಗೀಬು ಹಾಲಿನ ಮಿಶ್ರಣ ಗಟ್ಟಿಯಾಗಿ ಸಿಹಿ ತಯಾರಾಗಿರುತ್ತದೆ. ಅದು ಸರಿಯಾಗಿ ಬೆಂದಿದೆಯೇ ಎಂದು ಗುರುತಿಸುವುದು ಸುಲಭ.  ಒಂದು ಚಾಕನ್ನೋ ಚಮಚವನ್ನೋ ಗಿಣ್ಣದೊಳಗೆ ಹಾಕಿ ಮೇಲೆ ಎತ್ತಿದಾಗ  ಅದಕ್ಕೆ ಹಾಲು ಅಂಟಿಕೊಂಡರೆ ಅದು ಬೆಂದಿಲ್ಲ ವೆಂದು ಅರ್ಥ. ಅಂಟಿಕೊಳ್ಳದಿದ್ದರೆ ಬೆಂದಿದೆ ಎಂದು ಅರ್ಥ. ಅದನ್ನು ಕೆಳಗಿಳಿಸಿ ತಣ್ಣಗಾದ ಮೇಲೆ ತಿನ್ನಲು ಬಲು ಸಿಹಿಯಾಗಿರುತ್ತದೆ. ಇದನ್ನು ರೊಟ್ಟಿ ಚಪಾತಿ ಜೊತೆ ಕೂಡ ತಿನ್ನಲು ಚೆನ್ನಾಗಿರುತ್ತದೆ.



Friday 20 March 2020

ಯುಗಾದಿ 2020

ಡಿಸೆಂಬರ್ ಇಂದ ಹಿಡಿದು ಶಿವರಾತ್ರಿ (ಫೆಬ್ರವರಿ ಕೊನೆ) ವರೆಗೆ ಕಾಡುವ ಚಳಿಗಾಲ ಮುಗಿದು ವಸಂತಕಾಲದ (ಮಾರ್ಚ್ & ಏಪ್ರಿಲ್) ಆರಂಭದ ದಿನವೇ ಯುಗಾದಿ ಹಬ್ಬ. ಚಳಿಗಾಲದಲ್ಲಿ ಮರಗಿಡಗಳು ಎಲೆಯುದುರಿಸಿ ಎಲ್ಲವೂ ಬರಡಾಗಿರುತ್ತವೆ. ಯುಗಾದಿ ಹಬ್ಪದ ಸಮಯದಲ್ಲಿ ಹೊಸದಾಗಿ ಚಿಗುರೊಡೆದಿರುವ ಗಿಡಮರಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಮತ್ತು ಇದು ಈ ಕಾಲದ ಸೊಗಸು. ಹಾಗಾಗಿಯೇ ಯುಗಾದಿ ಎಂದರೆ ಅದು “ಉಂಡದ್ದೇ ಉಗಾದಿ ; ಮಿಂದದ್ದೇ ದೀವಳಿಗೆ” ಅನ್ನೋ ಗಾದೆಯನ್ನೂ ಮೀರಿದ –ಪ್ರಕೃತಿಯ ಹಬ್ಬ. ಚಳಿಗಾಲದಲ್ಲಿ ಕಳೆ ಕಳೆದುಕೊಂಡ ಪ್ರಕೃತಿಯು ಮತ್ತೆ ಶೃಂಗಾರಕ್ಕೆ ಅಣಿಯಾಗುವ ಕಾಲ ಇದು.  ಚೈತ್ರಮಾಸದಲ್ಲಿ ಗಿಡ ಮರಗಳೆಲ್ಲ  ಹೊಸ ಚಿಗುರೊಡೆಯಲು ಪ್ರಾರಂಭಿಸುತ್ತವೆ. ಹೊಸ ಮೊಗ್ಗು, ಹೂವುಗಳಿಂದ ಕಂಗೊಳಿಸುತ್ತಿರುತ್ತವೆ. ಇದು  ಪ್ರಕೃತಿಯ ಹೊಸ ಚೈತನ್ಯವನ್ನು ಸೂಚಿಸುತ್ತದೆ ಎಂದರೆ ತಪ್ಪಾಗಲಾರದು. 


ಯುಗಾದಿ ಪದದ ಅರ್ಥ ಏನು?

ಯುಗಾದಿ ಎನ್ನುವ ಪದದ ಅರ್ಥ ಹುಡುಕ್ತ ಹೋದಂತೆ ಹಲವು ಹೊಳಹುಗಳು ನಮಗೆ ಸಿಗುತ್ತವೆ.  ಯುಗಾದಿ ಪದವು ಸಂಸ್ಕೃತ ಪದಗಳಾದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದಾಗಿದೆ (ಯುಗ + ಆದಿ > ಯುಗಾದಿ , ಸವರ್ಣದೀರ್ಘ ಸಂಧಿ) ಮತ್ತು ಯುಗಗಳ ಆದಿ ಯುಗಾದಿ ಅನ್ನೋ ಒಂದು ಮಾತೊಂದಿದೆ. ಸಂಸ್ಕೃತದ ಪದನೆರಕೆಯನ್ನುಕನ್ನಡಿಸಿದರೆ ಎಲ್ಲೆಲ್ಲೂ ಈ ವಾದಕ್ಕೆ ಪುಷ್ಟಿ ಸಿಗುವುದಿಲ್ಲ. ಸಂಸ್ಕೃತದಲ್ಲಿ ಯುಗ,  ಯೋಗ, ಯುಗ್ಮ ಮುಂತಾದ ಪದಗಳೆಲ್ಲ “ಯುಜ್” ಎಂಬ ಬೇರಿನಿಂದ ಬಂದಿವೆ.  ಈ ಬೇರಿನ ಅರ್ಥ 'ಸೇರಿಸು', 'ಹೊಂದಿಸು” ಎನ್ನಬಹುದು. ಈ ಅರ್ಥದಲ್ಲಿ ಯುಗ , ಯುಗ್ಮ  ಎಂದರೆ pair, couple, ಜೋಡಿ, ಅವಳಿ ಎಂದಾಗುತ್ತದ್ದೆ.  

ಯುಗ ಎಂದರೆ ಕೃತ / ಸತ್ಯ (1728 ವರ್ಷಗಳ ಅವಧಿ), ತ್ರೇತ (1296 ವರ್ಷಗಳು), ದ್ವಾಪರ (864 ವರ್ಷಗಳು), ಮತ್ತು ಕಲಿ (432 ವರ್ಷಗಳು) ಯುಗಗಳು ಎನ್ನುವ ಅರ್ಥದಲ್ಲಿ ದೊಡ್ದ ಮೊತ್ತದ ‘ಅವಧಿ’ ಎಂದು ಬಳಕೆಯಲ್ಲಿದೆ. ಈ ನಾಲ್ಕೂ ಸೇರಿ ಆಗುವ 432೦ ವರ್ಷಗಳ ಅವಧಿಯನ್ನು  ಮಹಾಯುಗ (cosmic age) ವೆಂದೂ ಕರೆಯುತ್ತಾರೆ. ಈ ಯುಗಗಳ ನಡುವೆ ಪ್ರಳಯಗಳನ್ನು ಕಲ್ಪನೆ ಮಾಡಿಕೊಳ್ಳಲಾಗಿದೆ. ಜನಾಂಗ (race of men) ಮತ್ತು ಪದ್ಯಗಳ ಶೈಲಿ ( ಆರು ಸಾಲಿನ ಷಟ್ಪದಿ, ನಾಲ್ಕು ಸಾಲಿನ  ಚೌಪದಿ ಯಂತೆ ಎರಡು ಪ್ಯಾರದ ಯುಗ) ಎನ್ನುವ ಅರ್ಥಗಳೂ ಯುಗ ಪದಕ್ಕಿವೆ. ಆದರೆ ಈ ಮೇಲಿನ ಅರ್ಥಕ್ಕಿಂತ ಹೆಚ್ಚು ನಮಗೆ ಮುಖ್ಯವಾದದ್ದು  ಲಾಗಧನ “ವೇದಾಂಗ ಜ್ಯೋತಿಷ” ದ ಮೊದಲ ಶ್ಲೋಕದಲ್ಲಿ ಬರುವ ಯುಗದ ಅರ್ಥ! ಇಲ್ಲಿ ಯುಗ ಎಂದರೆ 5 ವರ್ಷಗಳ (= 5 ಸಂವತ್ಸರಗಳ) ಅವಧಿ!!.
ಪಂಚ ಸಂವತ್ಸರಮಯಂ ಯುಗಾಧ್ಯಕ್ಷಂ ಪ್ರಜಾಪತಿಂ ||
ದಿನರ್ತ್ವಯನ ಮಾಸಾಂಗಂ ಪ್ರಣಮ್ಯ ಶಿರಸಾ ಶುಚಿಃ ||
ಮೇಲಿನ ಸಂಸ್ಕೃತದ ಯಾವ ಅರ್ಥಗಳನ್ನು ತೆಗೆದುಕೊಂಡರೂ ಯುಗದ ಆದಿ ಯುಗಾದಿ ಎನ್ನುವ ಅರ್ಥ ಯುಗಾದಿ ಹಬ್ಬಗಿ ಅಷ್ಟು ಚೆಂದವಾಗಿ ಹೊಂದಲ್ಲ. ನಮ್ಮ ಅಜ್ಜಅಜ್ಜಿಯರ ಮಾತನ್ನು ಗಮನಿಸಿದರೆ ಈ ಹಬ್ಬದ ಹೆಸರು ಉಗಾದಿಯೇ ಹೊರತು ಯುಗಾದಿಯಲ್ಲ ಎನ್ನುವದು ತಿಳಿಯುತ್ತದೆ. ಆಂಧ್ರದಲ್ಲಿ ಇಂದಿಗೂ ಉಗಾದಿ ಎನ್ನುವ ಪದವೇ ಬಳಕೆಯಲ್ಲಿದೆ. ಯುಗಾದಿ ಎನ್ನುವ ಸಂಸ್ಕೃತ ಪದದ ಮೂಲ ಉಗಾದಿ ಎಂಬ ಅಚ್ಚಗನ್ನಡದ ಬೇರಿನ ಪದವೆಂದೇ ಹಲವರ ಎಣಿಕೆ.  ಕನ್ನಡದ ಕಣ್ಣಿಂದ ನೋಡಿದರೆ ಈ ಹಬ್ಬ ನೀರಿಗೆ ನಂಟುಳ್ಳ ಹಬ್ಬ. ಹಲವಾರು ಜನಾಂಗಗಳಲ್ಲಿ ನೀರಿಗೆ ನಂಟುಳ್ಳ ಹಲವಾರು ಆಚರಣೆಗಳು ಉಳಿದು ಬಂದಿವೆ. ನಮ್ಮಲ್ಲಿ ಈ ಹಬ್ಬದಲ್ಲಿ ನೀರು  (ದೀಪಾವಳಿಯಲ್ಲೂ) ತುಂಬಿಸುತ್ತಾರೆ. ಹಲವರು ದೇವರ ಗುಡಿಯಿಂದ ಒಂದು ಗೊತ್ತು ಮಾಡಿದ ಕೆರೆ ಬಾವಿ ಇಲ್ಲವೇ ಹಳ್ಳಗಳಿಗೆ ಈ ಹಬ್ಬದಂದು ನೀರಿಗೆ  ಗಂಗಮ್ಮನ ಪೂಜೆಗೆ ಹೊರಡುತ್ತಾರೆ. "ಉ"ಎನ್ನುವದು ನೀರು ಎನ್ನುವ ಅರ್ಥ ಕೊಡುವ ಮೂಲ ದ್ರಾವಿಡ ಪದ. ಉಕ್ಕು (ನೀರು ಮೇಲೆ ಬರುವ ಪ್ರಕ್ರಿಯೆ), ಉಪ್ಪು (ನೀರಿನಿಂದ ಬಂದದ್ದು), ಉಸುಕು (ನೀರಿನಿಂದ ಆದ ಕೆಸರು), ಉಗಿ, ಉಗ್ಗು, ಉದಕ, ಉಕ್ಕಡ (ಬಾವಿಯುಂದ ನೀರು ಸೇದಲು ಬಳಸುವ ಸಣ್ಣ ಹಗ್ಗ) ಹೀಗೆ ಎಲ್ಲವೂ ನೀರನ್ನೇ ಬೊಟ್ಟು ಮಾಡುವ ಪದಗಳು. ಉಗಾದಿಯೂ ನೀರನ್ನೇ ಬೊಟ್ಟು ಮಾಡುವ ಪದ.       



ಯಾವತ್ತು ಆಚರಣೆ ಮಾಡುತ್ತಾರೆ?
ಇನ್ನ ಹಬ್ಬದ ಆಚರಣೆಯ ದಿನದ ನಿರ್ಧಾರಕ್ಕೆ ಬಂದರೆ ಎರಡು ಬೇರೆ ಬೇರೆ ತರದ ಲೆಕ್ಕಗಳಿವೆ. ಕರ್ನಾಟಕ ಮತ್ತು ಆಂಧ್ರದ ತುಂಬಾ ನಾವೆಲ್ಲ ಚಂದ್ರಮಾನ ಪಂಚಾಂಗವನ್ನು ಬಳಸುತ್ತೇವೆ. ತಮಿಳುನಾಡಲ್ಲಿ (ಮತ್ತು ಕೇರಳದಲ್ಲಿ) ಸೌರಮಾನ ಪಧ್ಧತಿ ಬಳಸುತ್ತಾರೆ. ನಾವುಗಳು ಚೈತ್ರಮಾಸದ ಮೊದಲ ದಿನದಂದು ( ಚಂದ್ರ ಮೀನರಾಶಿಯಿಂದ ಮೇಷ ರಾಶಿಗೆ - ಎಂದರೆ ರೇವತಿ ನಕ್ಷತ್ರದಿಂದ ಅಶ್ವಿನಿ ನಕ್ಷತ್ರಕ್ಕೆ ಕಾಲಿಡುವ ಕಾಲಿಡುವ ದಿನ) ಉಗಾದಿ ಹಬ್ಬ ಮಾಡಿದರೆ,ತಮಿಳರು ಸೂರ್ಯ ಮೇಷ ರಾಶಿಗೆ ಕಾಲಿಡುವ ದಿನದಂತು ಈ ಹಬ್ಬಮಾಡುತ್ತಾರೆ.   

ಹಿಂದೂಗಳಿಗೆ ಇದು ಹೊಸ ವರ್ಷದ ದಿನ.  ಈ ಬಾರಿ ಮಾರ್ಚ್‌ 25ರಂದು ಯುಗಾದಿ ಬಂದಿದೆ. ಉಗಾದಿ ಹಿಂದೂಗಳ  ಐತಿಹಾಸಿಕ ಹಬ್ಬ. ಮಧ್ಯಕಾಲೀನ ಗ್ರಂಥಗಳು ಮತ್ತು ಶಾಸನಗಳಲ್ಲಿ  ಈ ಯುಗಾದಿ ದಿನದಂದು ಹಿಂದೂ ದೇವಾಲಯಗಳಿಗೆ ಪ್ರಮುಖ ದತ್ತಿ ದೇಣಿಗೆಗಳು ಬಂದಿರುವ  ದಾಖಲೆಗಳಿವೆ.  ಯುಗಾದಿ ಹಬ್ಬವು  ದಕ್ಷಿಣಭಾರತದಲ್ಲಿ ಅದರಲ್ಲೂ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಅತ್ಯಂತ ಸಡಗರ ಸಂಭ್ರಮಗಳಿಂದ ಆಚರಿಸುವರು. ಇದನ್ನು ಮಹಾರಾಷ್ಟ್ರದಲ್ಲಿ  ಗುಡಿ ಪಾಡ್ವಾ ಎಂದು ಕರೆಯುವರು. 

ಯುಗಾದಿಯ ಸಂಭ್ರಮಾಚರಣೆ
ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಯುಗಾದಿ ದಿನದಂದು ಪ್ರತಿ ಮನೆಮನೆಯ ಹೊಸ್ತಿಲಿನ ಮುಂದೆ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರ, ಜೊತೆಗೆ ಮನೆಯ ಬಾಗಿಲುಗಳು ಮಾವಿನ, ಬೇವಿನ, ಹೊಂಗೆಯ ಚಿಗುರು ಎಲೆಗಳ  ಮತ್ತು ಹೂವಿನ ಮಾಲೆಗಳಿಂದ   ಅಲಂಕಾರಗೊಂಡು ಕಂಗೊಳಿಸುತ್ತಿರುತ್ತವೆ.  ಮನೆಯ ಮಂದಿಗೆಲ್ಲ  ಹೊಸ ಬಟ್ಟೆಗಳನ್ನು ಒಬ್ಬರಿಗೊಬ್ಬರು ಖರೀದಿಸುವುದು ಮತ್ತು ಕೊಡುವರು.  ಬಡಬಗ್ಗರಿಗೆ  ದಾನಗಳನ್ನೂ ಕೂಡ ನೀಡುವ ಪರಿಪಾಠವಿದೆ.

ಮನೆಮಂದಿಯೆಲ್ಲ ಯುಗಾದಿಯಂದು ಎಣ್ಣೆ ಹಚ್ಚಿ ಸ್ನಾನ ಮಾಡುವರು. ಯುಗಾದಿ ಹಬ್ಬದಲ್ಲಿ ಎಣ್ಣೆ ಸ್ನಾನ ಮತ್ತೊಂದು ವಿಶೇಷ, ಮನೆ ಮಂದಿಯೆಲ್ಲ ಎಣ್ಣೆ ಸ್ನಾನ ಮಾಡಿ. ಬೇವಿನ ಎಲೆ ಹಾಕಿ ಕಾಯಿಸಿದ ನೀರಿನಲ್ಲಿ  ಸ್ನಾನದ ಮಾಡುವರು. ನಂತರ ಇಡೀ ಕುಟುಂಬವು ಒಟ್ಟಾಗಿ ದೇವರಿಗೆ  ಪ್ರಾರ್ಥನೆ ಸಲ್ಲಿಸಿ,  ಬೇವು -ಬೆಲ್ಲವನ್ನು ದೇವರಿಗೆ ನೈವೇದ್ಯ ಮಾಡಿ ತಿನ್ನುವ ವಾಡಿಕೆ ಇದೆ.  ನಂತರ  ಮನೆಗೆ ಬರುವ ಅತಿಥಿಗಳಿಗೂ  ಬೇವು-ಬೆಲ್ಲ ಕೊಟ್ಟೆ ಹಬ್ಬದೂಟ ಉಣ್ಣಿಸುವುದು ಬೆಳಗಿನ ಸಂಭ್ರಮ. ಸಂಜೆಯ ಮೇಲೆ ಚಂದ್ರನನ್ನು ನೋಡಿ ಮನೆಯ ಹಿರಿಯರಿಗೆ ಕಿರಿಯರು ಕಾಲಿಗೆ ಬಿದ್ದು ನಮಸ್ಕರಿಸುವುದು. ಅವರುಗಳ ಆಶೀರ್ವಾದ ಪಡೆಯುವ ವಾಡಿಕೆ ನಮ್ಮೂರ ಕಡೆ  ಇದೆ. ಸಂಬoಧಿಕರ ಮನೆಗಳಿಗೆ ಹೋಗಿ ಬೇವುಬೆಲ್ಲ ತಿನ್ನುವುದು. ಇದು ಜೀವನದಲ್ಲಿ ಏಳು ಬೀಳುಗಳನ್ನು, ಕಷ್ಟ ಮತ್ತು ಸುಖವನ್ನು ಎಲ್ಲಾರು ಸೇರಿ ಸಮನಾಗಿ ಸ್ವೀಕರಿಸಿ ಬದುಕು ನಡೆಸಬೇಕೆಂಬುದು ಸಬೇಕೇಂಬುದು ಈ ಬೇವುಬೆಲ್ಲದ ಹೇಳಿಕೊಡುವ ಜೀವನದ ಪಾಠವಾಗಿದೆ. 

ಪೌರಾಣಿಕ ಕಥೆ:-
ನಮ್ಮ ಕಡ ವಿಶೇಷವಾಗಿ ಈ ದಿನದಂದು ರಾತ್ರಿ ಚಂದ್ರನ ದರ್ಶನ ಮಾಡಿ, ಅವನಿಗೊಂದು ಪೂಜೆ ಹಾಕಿ, ನಂತರ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸುವ ಪದ್ಧತಿಗೆ ಅದರದ್ದೇ ಆದ ಒಂದು ಪೌರಾಣಿಕ ಕಥೆಯಿದೆ. ಗಣೇಶ ಹಬ್ಬದ ನಂತರ ಚೌತಿ ಚಂದ್ರನನ್ನು ನೋಡಿದರೆ ಅವರಿಗೆ ವಿಘ್ನಗಳು ಬರಲೆಂದು ಗಣೇಶ ಶಾಪ ಹಾಕುತ್ತಾನೆ. ಆಗ ಚಂದ್ರನು ತನ್ನ ತಪ್ಪಿನ ಅರಿವಾಗಿ ತನ್ನ ತಪ್ಪಿಂದ ಜನರಿಗೆ ತಗಲುವ ಶಾಪ ವಿಮೋಚನೆಗಾಗಿ ಏನಾದರೂ ಪರಿಹಾರ ನೀಡಬೇಕೆಂದು ಬೇಡಿಕೊಳ್ಳುತ್ತಾನೆ. ಆಗ ಗಣೇಶ,   ಯುಗಾದಿ ಹಬ್ಬದಂದು ನಿನ್ನನ್ನು ನೋಡುವ ಮೂಲಕ ಜನರು ನಮ್ಮ ಹಿಂದಿನ ಶಾಪಗಳಿಂದ ವಿಮೊಚನೆಗೊಳ್ಳುವರು, ನನ್ನ ಕೃಪೆಗೆ ಪಾತ್ರರಾಗುತ್ತಾರೆ  ಎಂದು ಆಶೀರ್ವದಿಸುವನು. ಆಗಿನಿಂದ ಈ ಪದ್ಧತಿ ಜಾರಿಗೆ ಬಂದಿದೆ ಎಂಬುದು ವಾಡಿಕೆ. ಅಂದು ಚಂದ್ರ ಕಡಿಮೆ ಸಮಯ ಇರುವನು. ಅಂದು ಚಂದ್ರನ ದರ್ಶನ ಪಡೆಯಲು ಜನ ಕಾತುರರಾಗಿರುತ್ತಾರೆ.

ತಿನಿಸುಗಳ ಸಂಭ್ರಮ :-
ಯುಗಾದಿಯಂದು ಮನೆಮನೆಗಳಲ್ಲಿ ವಿವಿಧ ರೀತಿಯ ಆಡುಗೆ ಮಾಡಿ ಉಣ್ಣುವ ಪರಿಪಾಠವಿದೆ. ಹೋಳಿಗೆ (ಒಬ್ಬಟ್ಟು), ತುಪ್ಪ, ಸೀಕರಣೆ, ಕಾಯಿಹಾಲು, ಕೋಸಂಬರಿ, ಪಚಡಿ, ಹಾಲುಪಾಯಸ, ಉಪ್ಪಿನಕಾಯಿ, ತರಕಾರಿ ಪಲ್ಯ, ಕಾಳುಪಲ್ಯ, ಕೋಸಂಬರಿ, ಹಪ್ಪಳ, ಸಂಡಿಗೆ, ಚಕ್ಕುಲಿ, ಕೋಡುಬಳೆ, ಹೀಗೆ ವಿವಿಧ ರೀತಿಯ ಭೂರಿ ಭೋಜನ ಅಂದು ಎಲ್ಲರ ಮನೆಯಲ್ಲೂ ಸಡಗರ ಸಂಭ್ರಮ ವಿರುತ್ತದೆ.


ಯುಗಾದಿ ದಿನದ ವಿಶೇಷತೆ :-
  • ಬ್ರಹ್ಮ ಈ ದಿನ ಜಗತ್ತನ್ನು  ಸೃಷ್ಟಿಯನ್ನು ಪ್ರಾರಂಭಿಸಿ ದಿನ, ವಾರ, ತಿಥಿ, ನಕ್ಷತ್ರ, ಮಾಸ, ಋತುಗಳನ್ನು ಮಾಡಿದ ಎಂದು ಪುರಾಣಗಳಲ್ಲಿ ಹೇಳಿದೆ.
  • ಬ್ರಹ್ಮದೇವನು ತನ್ನ ಸೃಷ್ಟಿ ಕಾರ್ಯವನ್ನು ಚೈತ್ರ ಶುಕ್ಲ ಪಾಡ್ಯದಿಂದ ಪ್ರಾರಂಭಿಸಿದ.
  • ಯುಗಾದಿ ದಿನದಿಂದಲೇ ಕಾಲಗಣನೆ ಆರಂಭವಾಯಿತು.
  • ಈ ದಿನ ವಿಷ್ಣು ವಿನೊಂದಿಗೆ ಬ್ರಹ್ಮ ದೇವರನ್ನು ಪೂಜಿಸಲಾಗುತ್ತದೆ.
  • ಈ ದಿನ ಹೊಸ ಉದ್ಯಮವನ್ನು ಪ್ರಾರಂಭಿಸಲು ಮತ್ತು ಹೊಸ ಹೂಡಿಕೆಗಳನ್ನು ಮಾಡಲು ಶುಭ.
  • ಈ ದಿನ ಹೊಸ ವರ್ಷದ ಆಚರಣೆಯನ್ನ ಹಿಂದೂಗಳು ಮಾತ್ರವಲ್ಲ ಇರಾನಿಗರು  ಕೂಡ ನೌರೋಜ್ ಎಂಬ ಹೆಸರಿನಲ್ಲಿ ಹೊಸ ವರ್ಷ ಆಚರಿಸುತ್ತಾರೆ. 
  • ಈ ದಿನ ಶಾಲಿವಾಹನನು ವಿಕ್ರಮಾದಿತ್ಯನ ವಿರುದ್ಧ  ಜಯಿಸಿ ಶಾಲಿವಾಹನ ಶಕ ಪ್ರಾರಂಭವಾದ ದಿನ ಎಂದು ಹೇಳಲಾಗುತ್ತದೆ.
  • ವಾಲ್ಮೀಕಿ ರಾಮಾಯಣದ ಪ್ರಕಾರ ಶ್ರೀರಾಮ ವನವಾಸ ಮುಗಿಸಿ ಅಯೋದ್ಯೆಗೆ ಹಿಂತಿರುಗಿ ಬಂದ ದಿನ.

ಯುಗಾದಿ ಹಬ್ಬಕ್ಕೆ ಸಂವತ್ಸರದ ಮಾಹಿತಿ:
ಈ ವರ್ಷ ಅಂದರೆ 2020 ರ ಯುಗಾದಿಯು ಹಿಂದೂ ಪಂಚಾಂಗದ ಪ್ರಕಾರ ೩೩ನೇ ವಿಕಾರಿ ನಾಮ ಸಂವತ್ಸರದಿಂದ 34ನೇ ಶಾರ್ವರೀ ನಾಮ  ಸಂವತ್ಸರಕ್ಕೆ ಹೆಜ್ಜೆ ಇಡುವ ದಿನ. ನನಗೆ ಯುಗಾದಿ ಹಬ್ಬದ ಸಂವತ್ಸರದ ಬಗ್ಗೆ  ಸಿಕ್ಕ ಕೆಲವು ಮಾಹಿತಿಗಳು ಕೆಳಗಿನಂತಿವೆ.
  • 60 ವರ್ಷ ತುಂಬಿದ ನಂತರ ಕೆಲವು ಮನೆತನಗಳಲ್ಲಿ 60 ವರ್ಷ ತುಂಬಿದ್ದಕ್ಕೆ ಆಚರಣೆ ಮಾಡುವುದು ಕೂಡ ರೂಢಿಯಲ್ಲಿದೆ. ಅದಕ್ಕೆ ಕಾರಣ ಈ 60 ಸಂವತ್ಸರಗಳನ್ನ ಆ ವ್ಯಕ್ತಿ ಕಂಡಿದ್ದಾನೆ ಅನ್ನುವುದು ಕೂಡ ಆಗಿದೆ.
  • 60 ಸಂವತ್ಸರಗಳು ಶಾಪಗ್ರಸ್ತ ನಾರದನ ಮಕ್ಕಳು ಎಂದು ಹೇಳಲಾಗುತ್ತದೆ. 
  • ಚಂದ್ರನ ಆಕಾರಗಳನ್ನು ಅನುಸರಿಸಿ ತಿಂಗಳುಗಳು ಉಂಟಾಗುತ್ತವೆ. ಸೂರ್ಯನ ಚಲನೆಯನ್ನು ಅನುಸರಿಸಿ ಸಂವತ್ಸರಗಳಾಗುತ್ತವೆ. ಈ ರೀತಿ ಭಾಸ್ಕರಾಚಾರ್ಯರು ತಮ್ಮ ಸಿಧ್ಧಾಂತ ಶಿರೋಮಣಿಯಲ್ಲಿ ಚಂದ್ರ ಮತ್ತು ಸೂರ್ಯನ ಚಲನೆಯ ಸಂಬಂಧದ ಬಗ್ಗೆ ವಿವರಿಸಿದ್ದಾರೆ.

ಹಿಂದೂ ಧರ್ಮದ ಪ್ರಕಾರ ಸಂವತ್ಸರಗಳು 60 ಇದ್ದು ಒಂದಾದ ಮೇಲೊಂದರಂತೆ  ಬರುತ್ತಿರುತ್ತವೆ. ಅವುಗಳ ಹೆಸರು ಈ ಕೆಳಗಿನಂತಿವೆ.
  1. ಪ್ರಭವ
  2. ವಿಭವ
  3. ಶುಕ್ಲ
  4. ಪ್ರಮೋದೂತ
  5. ಪ್ರಜೋತ್ಪತ್ತಿ
  6. ಆಂಗೀರಸ
  7. ಶ್ರೀಮುಖ
  8. ಭಾವ
  9. ಯುವ
  10. ಧಾತ್ರಿ (ಧಾತು)
  11. ಈಶ್ವರ
  12. ಬಹುಧಾನ್ಯ
  13. ಪ್ರಮಾಧಿ
  14. ವಿಕ್ರಮ
  15. ವೃಷ/ ವಿಷು
  16. ಚಿತ್ರಭಾನು
  17. ಸ್ವಭಾನು
  18. ತಾರಣ
  19. ಪಾರ್ಥಿವ
  20. ವ್ಯಯ       
  21. ಸರ್ವಜಿತ್
  22. ಸರ್ವಧಾರಿ
  23. ವಿರೋಧಿ
  24. ವಿಕೃತ
  25. ಖರ
  26. ನಂದನ
  27. ವಿಜಯ
  28. ಜಯ
  29. ಮನ್ಮಥ
  30. ದುರ್ಮುಖಿ
  31. ಹೇವಿಳಂಬಿ
  32. ವಿಳಂಬಿ
  33. ವಿಕಾರಿ
  34. ಶಾರ್ವರಿ (2020 -2021)
  35. ಪ್ಲವ
  36. ಶುಭಕೃತ್
  37. ಶೋಭಾಕೃತ್
  38. ಕ್ರೋಧಿ
  39. ವಿಶ್ವಾವಸು
  40. ಪರಾಭವ   
  41. ಪ್ಲವಂಗ
  42. ಕೀಲಕ
  43. ಸೌಮ್ಯ
  44. ಸಾಧಾರಣ
  45. ವಿರೋಧಿಕೃತ್
  46. ಪರಿಧಾವಿ
  47. ಪ್ರಮಾಧಿ
  48. ಆನಂದ
  49. ರಾಕ್ಷಸ
  50. ನಳ
  51. ಪಿಂಗಳ
  52. ಕಾಳಯುಕ್ತಿ
  53. ಸಿದ್ಧಾರ್ಥಿ
  54. ರುದ್ರ / ರೌದ್ರಿ
  55. ದುರ್ಮತಿ
  56. ದುಂದುಭಿ
  57. ರುಧಿರೋದ್ಗಾರಿ
  58. ರಕ್ತಾಕ್ಷಿ
  59. ಕ್ರೋಧನ
  60. ಅಕ್ಷಯ/ಕ್ಷಯ


Friday 13 March 2020

ಮೊಬೈಲ್ ಫೋನ್ ಜೊತೆಗಿನ ಸಿಹಿ ಕಹಿ ಅನುಭವಗಳು


  ಮೊಬೈಲ್   ಜೀವನದ ಶತ್ರು ಅನ್ನಬೇಕು ಮಿತ್ರ  ಅನ್ನಬೇಕೋ ತಿಳಿತಿಲ್ಲ. ಆದರೆ ಇಂದಿನ ಜೀವನ ಶೈಲಿಗೆ  ಇದು ಬೇಕೇ ಬೇಕು.  ನಮ್ಮಮ್ಮನಿಗೆ ವಿದೇಶದಲ್ಲಿರೋ ತನ್ನ ಮಕ್ಕಳು ಮತ್ತು ಮೊಮ್ಮೊಕ್ಕಳ ಜೊತೆ ಪ್ರತಿ ದಿನ ವೀಡಿಯೊ ಕಾಲ್ ಮೂಲಕ ಅವರ ಜೊತೆಯಲ್ಲಿರುವ  ಅನುಭವ ಕೊಡೊ ಈ  ಮೊಬೈಲ್ ಕಾರ್ಯಕ್ಕೆ  ಖುಷಿ ಜೊತೆ ಹೆಮ್ಮೆನು ಅನ್ನಿಸುತ್ತೆ. ಆದ್ರೆ  ನನ್ನ ಪತಿ ಮತ್ತು ಮಕ್ಕಳು ಬೆಳಿಗ್ಗೆ ಎದ್ದಾಗಿಂದ ರಾತ್ರಿ ಮಲಗೋವರೆಗೂ ಅವರ ಕಣ್ಣು ಮೊಬೈಲ್ ಗೆ ಅಂಟಿಕೊಂಡಿರೋದನ್ನ  ನೋಡಿ ಮೈಯೆಲ್ಲಾ ಪರಚಿಕೊಳ್ಳೋ ಹಾಗೆ ಆಗುತ್ತೆ.

ಇದು ನನ್ನ ಮೊದಲ ಸ್ಮಾರ್ಟ್ ಫೋನ್ ಅನುಭವ. ಮೊದಲ ಬಾರಿ  ನನಗೆ ನನ್ನ ಮನೆಯವರು ಸ್ಮಾರ್ಟ್ ಫೋನ್ ಕೊಡಿಸಿದ್ದರು. ನನಗು face book ಅಕೌಂಟ್ ಓಪನ್ ಮಾಡಿ ಕೊಟ್ಟು ಆಫೀಸ್ ಗೆ ಹೋದರು. ಅದರ ಬಳಕೆ ನನಗೆ ಅಸ್ಟು ಗೊತ್ತಿರಲಿಲ್ಲ. ನಾನು ಮನೆ ಕೆಲಸ  ಮುಗಿಸಿ ಫೋನ್ ಹಿಡಿದು ಕೂತೆ. face book ಓಪನ್ ಮಾಡಿದೆ. ಅದ್ರಲ್ಲಿ people you may know ಆಪ್ಷನ್ ನಲ್ಲಿ  ತೋರ್ಸೋ  ಫ್ರೆಂಡ್ಸ್ ನೆಲ್ಲ   ಆಡ್ ಮಾಡ್ತಾ ಹೋದೆ. ಆ list ನಲ್ಲಿರೋರೆಲ್ಲ  ನನಗೆ ಫ್ರೆಂಡ್ಸ್ ಆಗೋಕೆ ನೋಡ್ತಿದಾರೆ ಯಾರಿಗೂ ಬೇಜಾರು ಮಾಡಬಾರದು ಅಂದುಕೊಂಡು ಎಲ್ಲರ್ನೂ ಆಡ್ ಮಾಡ್ತಾ ಹೋದೆ. ಸಂಜೆ ಆಗಿದ್ದೆ ಗೊತ್ತಾಗ್ಲಿಲ್ಲ. ರಾತ್ರಿ ಅಡುಗೆ ಮಾಡಲು ಮೊಬೈಲ್ ಆಫ್ ಮಾಡಿ ಅಡುಗೆ ಮನೆಗೆ ಹೋದೆ. ರಾತ್ರಿ ನಮ್ಮನೆವ್ರು ಬಂದ್ರು ಊಟ ಬಡಿಸಿ, ಎಲ್ಲ  ಕೆಲಸನು ಮುಗಿಸಿ ಮತ್ತೆ ಮೊಬೈಲ್ ಹಿಡಿದೆ. ನಂಗೆ  ಖುಷಿಯೋ ಖುಷಿ. ನಾನು ನಮ್ಮನೆವ್ರನ್ನ ಕೇಳಿದೆ ನಿಮಗೆ face book ಫ್ರೆಂಡ್ಸ್ ಎಷ್ಟು? ಅವ್ರಂದ್ರು ೭೦ ಇರಬಹುದು. ನಾನು ಖುಷಿಯಿಂದ ಹೇಳಿದೆ ನಂಗೆ ನೋಡ್ರಿ ಒಂದೇ ದಿನಕ್ಕೆ 175 ಅನ್ನುತ್ತಾ ನನ್ನ ಮೊಬೈಲ್ ಅವ್ರಿಗೆ ಕೊಟ್ಟೆ. ಅವ್ರು ನಗುತ್ತ ನನ್ನ ಫ್ರೆಂಡ್ಸ್ list ತೆಗೆದು ನೋಡಿದರು ಅಲ್ಲಿ ಫಾರಿನ್ ವ್ಯಕ್ತಿಗಳೆಲ್ಲ ನಂಗೆ ಫ್ರೆಂಡ್ಸ್ ಆಗಿದ್ರು. ಇವರೆಲ್ಲ ನಿಮ್ಮೂರ್ನೋರ ಅಂತ ಕಿಚಾಯಿಸಿದ್ರು.  ಗೊತ್ತಿಲ್ಲದವರನ್ನ ಫ್ರೆಂಡ್ಸ್ ಮಾಡಿಕೊಂಡರೆ  ಉಪಯೋಗಕ್ಕಿಂತ ತೊಂದರೆಯೇ ಹೆಚ್ಚು  ಅಂದ್ರು. ನಂಗೆ ನನ್ನ ಪೆದ್ದುತನದ ಅರಿವಾಯ್ತು  ಗೊತ್ತಿಲ್ಲದವರನ್ನ un friend ಮಾಡ್ತಾ ಕೂತೆ. ಆ ರಾತ್ರಿ ಜಾಗರಣೆ ಮಾಡಿದಂತಾಯ್ತು.  
ಆಗಿನಿಂದ ಇದುವರೆಗೂ ಮೊಬೈಲ್ ನಿಂದ ಸಿಹಿ ಕಹಿ  ಅನುಭವಗಳು ಪ್ರತಿದಿನ ಇದ್ದದ್ದೇ. ಕನ್ನಡ ಮೀಡಿಯಂ ನಲ್ಲಿ ಓದಿದ ನನಗೆ ಮಕ್ಕಳಿಗೆ  ಓದಿಸುವಾಗ, ಹೋಂ ವರ್ಕ್ ಮಾಡಿಸುವಾಗ ಮೊಬೈಲ್ ನಲ್ಲಿ  google ಗುರುವಿನ ಪಾದವೇ ಗತಿ. ಹಳೆಯ ಸ್ನೇಹಿತೆಯರನ್ನು ಹುಡುಕಲು ನನಗೆ face book ಫ್ರೆಂಡ್  ಸಹಾಯಕ. ಕೆಲಸ ಮುಗಿಸಿ ಸಮಯ ಸಿಕ್ಕಾಗಲೆಲ್ಲ whatsup ಫ್ರೆಂಡ್ಸ್ ಜೊತೆ ಹರಟೆ. ಶಾಪಿಂಗ್ ಹೋದಾಗ ಗೂಗಲ್ ಪೆ , ಫೋನ್ ಪೆ ಹೀಗೆ ಮೊಬೈಲ್ ಜೀವನದ ಅವಿಭಾಜ್ಯ ಅಂಗವೇ ಸರಿ. ಈ ಮೊಬೈಲ್ ಮತ್ತು ಅದೊರಳಗಿನ ಸಾಮಾಜಿಕ ಜಾಲತಾಣಗಳ ಆಪ್ ಗಳು  ಇಂದಿನ ಜೀವನವನ್ನು  ಸರಳವಗಿಸುವಲ್ಲಿ ಮಹತ್ವದ ಪಾತ್ರವಹಿಸಿವೆ ಎಂಬ ಮಾತು ಅಲಿಖಿತ ಸತ್ಯ.