Showing posts with label ಹಬ್ಬ. Show all posts
Showing posts with label ಹಬ್ಬ. Show all posts

Wednesday, 29 March 2017

ಯುಗಾದಿ ಹಬ್ಬ ಮತ್ತು 60 ಸಂವತ್ಸರಗಳು

ಯುಗಾದಿ ಹಬ್ಬ ಅಂದ್ರೆ ಹೊಸ ವರ್ಷದ ಚೈತ್ರ ಮಾಸದ ಆರಂಭದ ಮೊದಲ ದಿನ. ಎಲ್ಲರಿಗೂ ಗೊತ್ತಿರುವ ಹಾಗೆ 2 ರೀತಿಯ ಉಗಾದಿ ಹಬ್ಬಗಳಿವೆ. ಒಂದು ಚಾಂದ್ರಮಾನ ಯುಗಾದಿ ಅದು ಈಗ ನಾವು ಆಚರಿಸುತ್ತಿರುವುದು. ಇಲ್ಲಿ ಚಂದ್ರನ ಚಲನೆಯನ್ನು ಲೆಖ್ಖ ಹಾಕಿ ಮಾಸ ಮತ್ತು ಪಕ್ಷಗಳನ್ನು ಗುರುತಿಸಲಾಗುತ್ತದೆ. ಎರಡನೇದು ಸೌರಮಾನ ಯುಗಾದಿ. ಸೂರ್ಯನ ಚಲನೆಯನ್ನು ಅನುಸರಿಸಿ  ಮೇಷ ರಾಶಿಯ ಮೊದಲ ಸೂರ್ಯನ ದಿನವನ್ನು ಹೊಸ ವರ್ಷದ ದಿನ ಎಂದು ಹೇಳಲಾಗುತ್ತದೆ.





ಈ ಯುಗಾದಿ ದಿನದಂದು ಬೆಳಗೆದ್ದು ಎಣ್ಣೆ ಸ್ನಾನ ಮಾಡಿ, ದೇವರಿಗ ಪೂಜೆ ಮಾಡಿ, ಬೇವು-ಬೆಲ್ಲ ತಿಂದು, ಮನೆಗೆ ಬಂದವರಿಗೆ ಬೇವು-ಬೆಲ್ಲ ಕೊಟ್ಟು , ಹಬ್ಬದೂಟ ಉಣ್ಣಿಸುವುದು ಬೆಳಗಿನ ಸಂಭ್ರಮ. ಸಂಜೆಯ ಮೇಲೆ ಚಂದ್ರನನ್ನು ನೋಡಿ ಮನೆಯ ಹಿರಿಯರಿಗೆ ಕಿರಿಯರು ಕಾಲಿಗೆ ಬಿದ್ದು ನಮಸ್ಕರಿಸುವುದು. ಸಂಬoಧಿಕರ ಮನೆಗಳಿಗೆ ಹೋಗಿ ಬೇವುಬೆಲ್ಲ ತಿನ್ನುವುದು. ಅವರುಗಳ ಆಶೀರ್ವಾದ ಪಡೆಯುವ ವಾಡಿಕೆ ನಮ್ಮೂರ ಕಡೆ  ಇದೆ.  

ಈ ವರ್ಷ ಅಂದರೆ 2017 ರ ಯುಗಾದಿಯು ಹಿಂದೂ ಪಂಚಾಂಗದ ಪ್ರಕಾರ 30 ನೇ ದುರ್ಮುಖಿ ಸಂವತ್ಸರದಿಂದ ಹೇವಿಳಂಬಿ  ( ಹೇಮಲಂಬಿ) ಎಂಬ 31 ನೇ  ಸಂವತ್ಸರಕ್ಕೆ ಹೆಜ್ಜೆ ಇಡುವ ದಿನ. ಈ ಸಂವತ್ಸರ ಅಂದ್ರೆ ಏನು? ಪ್ರತಿ ಯುಗಾದಿ ಹಬ್ಬದಂದು ಈ ಸಂವತ್ಸರ ಅನ್ನೋ ಪದ ನಂಗೆ ತುಂಬಾ ಸೆಳಿತಾ ಇತ್ತು. ಏನಿವು ಸಂವತ್ಸರ? ಯಾರು ಇವನ್ನ ಕಂಡು ಹಿಡಿದದ್ದು?  ಯಾವ ಆಧಾರದ ಮೇಲೆ ಈ  60 ಸಂವತ್ಸರಗಳಿಗೆ ಹೆಸರುಗಳನ್ನ ಇಟ್ಟಿದ್ದಾರೆ?  ಆ ಸಂವತ್ಸರಗಳ ಸಂಖ್ಯೆ 100 ಕೂಡ ಯಾಕೆ ಆಗಿಲ್ಲ. 100 ವರ್ಷಗಳಿಗೆ ಶತಮಾನ ಅನ್ನೋ ಹೆಸರಿದೆ. ಅದಕ್ಕನುಗುಣವಾಗಿ 100 ಹೆಸರುಗಳನ್ನ ಇಡಬಹುದಿತ್ತು ಅಲ್ವ? ಅನ್ನೋ ಪ್ರಶ್ನೆ ಗಳು ನನ್ನ ತಲೆಯಲ್ಲಿ ತುಂಬಾ ವರ್ಷಗಳಿಂದ ಕಾಡುತ್ತಾ ಇವೆ.. ಅವಕ್ಕೆ ಉತ್ತರ ಹುಡುಕಲೆಂದು ಅಂತರ್ಜಾಲ ಮೊರೆ ಹೋದಾಗ ನನಗೆ ಯುಗಾದಿ ಹಬ್ಬದ ಬಗ್ಗೆ ಮತ್ತು ಸಂವತ್ಸರದ ಬಗ್ಗೆ  ಸಿಕ್ಕ ಕೆಲವು ಮಾಹಿತಿಗಳನ್ನ ಇಲ್ಲಿ ಬರೀತಾಯಿದಿನಿ.


  • ಈ ದಿನ ಹೊಸ ವರ್ಷದ ಆಚರಣೆಯನ್ನ ಹಿಂದೂಗಳು ಮಾತ್ರವಲ್ಲ ಇರಾನಿಗರು  ಕೂಡ ನೌರೋಜ್ ಎಂಬ ಹೆಸರಿನಲ್ಲಿ ಹೊಸ ವರ್ಷ ಆಚರಿಸುತ್ತಾರೆ. 
  • 60 ಸಂವತ್ಸರಗಳು ಶಾಪಗ್ರಸ್ತ ನಾರದನ ಮಕ್ಕಳು  ಎಂದು ಹೇಳಲಾಗುತ್ತದೆ. 
  • ಚಂದ್ರನ ಆಕಾರಗಳನ್ನು ಅನುಸರಿಸಿ ತಿಂಗಳುಗಳು ಉಂಟಾಗುತ್ತವೆ. ಸೂರ್ಯನ ಚಲನೆಯನ್ನು ಅನುಸರಿಸಿ ಸಂವತ್ಸರಗಳಾಗುತ್ತವೆ. ಈ ರೀತಿ ಭಾಸ್ಕರಾಚಾರ್ಯರು ತಮ್ಮ ಸಿಧ್ಧಾಂತ ಶಿರೋಮಣಿಯಲ್ಲಿ ಚಂದ್ರ ಮತ್ತು ಸೂರ್ಯನ ಚಲನೆಯ ಸಂಬಂಧದ ಬಗ್ಗೆ ವಿವರಿಸಿರುವುದು ಸಮಂಜಸವಾಗಿದೆ.
  • ಈ ದಿನ ಶಾಲಿವಾಹನನು ವಿಕ್ರಮಾದಿತ್ಯನ ವಿರುದ್ಧ  ಜಯಿಸಿ ಶಾಲಿವಾಹನ ಶಕ ಪ್ರಾರಂಭವಾದ ದಿನ ಎಂದು ಹೇಳಲಾಗುತ್ತದೆ.
  • ವಾಲ್ಮೀಕಿ ರಾಮಾಯಣದ ಪ್ರಕಾರ ಶ್ರೀರಾಮ ವನವಾಸ ಮುಗಿಸಿ ಅಯೋದ್ಯೆಗೆ ಹಿಂತಿರುಗಿ ಬಂದ ದಿನ. 
  • 60 ವರ್ಷ ತುಂಬಿದ ನಂತರ  ಕೆಲವು ಮನೆತನಗಳಲ್ಲಿ 60 ವರ್ಷ ತುಂಬಿದ್ದಕ್ಕೆ ಆಚರಣೆ ಮಾಡುವುದು ಕೂಡ ರೂಢಿಯಲ್ಲಿದೆ. ಅದಕ್ಕೆ ಕಾರಣ ಈ 60 ಸಂವತ್ಸರಗಳನ್ನ ಆ ವ್ಯಕ್ತಿ ಕಂಡಿದ್ದಾನೆ ಅನ್ನುವುದು ಕೂಡ ಆಗಿದೆ.


ಹಿಂದೂ ಧರ್ಮದ ಪ್ರಕಾರ ಸಂವತ್ಸರಗಳು 60 ಇದ್ದು ಒಂದಾದ ಮೇಲೊಂದರಂತೆ  ಬರುತ್ತಿರುತ್ತವೆ. ಅವುಗಳ ಹೆಸರು ಈ ಕೆಳಗಿನಂತಿವೆ.


Thursday, 8 September 2016

ರೈತ ಸ್ನೇಹಿ ಮತ್ತು ಬಾಂಧವ್ಯಗಳನ್ನ ಉಳಿಸಿಕೊಡುವ ಆಚರಣೆಯಾಗಿ ಗೌರಿ-ಗಣೇಶ ಹಬ್ಬ

ಗೌರಿ-ಗಣೇಶ ಹಬ್ಬ ಜನರಲ್ಲಿ ಸಂಬಂಧಗಳನ್ನ ಉಳಿಸಿಕೊಡುವ ಮತ್ತು ಗಟ್ಟಿಗೊಳಿಸುವ ಹಬ್ಬ ಎಂದೇ ಹೇಳಬಹುದು. ಏಕೆಂದರೆ ಈ ಹಬ್ಬವನ್ನು ಮಾಡುವ ಸಲುವಾಗಿ ಅಣ್ಣತಮ್ಮಂದಿರಿಗೆ ತನ್ನ ಅಕ್ಕತಂಗಿಯರ ನೆನಪು ಆಗುತ್ತದೆ. ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದ ನಂತರ ಅಣ್ಣ ತಮ್ಮಂದಿರು ಅವರುಗಳ ಮನೆಗೆ ಹೋಗಿ ಬಾಗಿನ ಅಥವಾ ಕಾಯಿಕಣ ಕೊಡುವ ರೂಢಿ ಈ ಹಬ್ಬದಲ್ಲಿದೆ. ಈ ಹಬ್ಬ ಬಂದಾಗ ಅಕ್ಕ ತಂಗಿಯರು ತಮ್ಮ ಅಣ್ಣ ತಮ್ಮಂದಿರು ತವರಿನಿಂದ ಯಾರು ಬರಲಿಲ್ಲವೆಂದು ಮತ್ತು ಬಾಗಿನ ಕಾಯಿಕಣ ಕೊಡಲು ಅಣ್ಣ ತಮ್ಮಂದಿರು ಅಕ್ಕತಂಗಿಯರ ಮನೆಗೆ ಹೋಗುವ ಪ್ರಸಂಗಗಳು, ಚಿಕ್ಕ ಮಕ್ಕಳುಗಳು ತಮ್ಮ ಸೋದರಮಾವನ ಬರುವಿಕೆಗೆ ಕಾಯುವ ಪ್ರಸಂಗಗಳು, ನಮ್ಮ ಜಾನಪದ ಹಾಡುಗಳಲ್ಲಿ ವರ್ಣಿತವಾಗಿವೆ.

ನನ್ನ ತವರೂರಿನ ಕಡೆ ಗೌರೀ ಪೂಜೆಯ ನಂತ್ರ ಹುತ್ತಕ್ಕೆ ಪೂಜೆ ಮಾಡಿ,  ಹಾಲನ್ನು ತನೆ  ಎರೆದು ಅಲ್ಲಿಯೇ ಊಟ ಮಾಡಿ ಬರುವ ವಾಡಿಕೆ ಇದೆ. ಆಗ ನಮಗೆ ಈ ಸಾಲುಗಳನ್ನ ಹೇಳಿಕೊಡುತ್ತಿದ್ದರು, ಅದು ಯಾಕೆ? ಏನು? ಅಂತ ನಂಗು ಆಗ ಗೊತ್ತಿರ್ಲಿಲ್ಲ. ಅದನ್ನ ನೆನಪಿಸಿಕೊಂಡು ಇಲ್ಲಿ ಬರೆದಿದೀನಿ.

ತನ್ನಿರೆ ಹಾಲ ತನಿ ಎರೆಯೋಣ 
ತಾಯ ಹಾಲ ಋಣ ತೀರಿಪ ಇಂದೇ ಪುಣ್ಯ ದಿನ 
ತಣ್ಣಗಿರಲಿ ಬೆನ್ನು ಉದರ ಅಣ್ಣ ತಮ್ಮ0ದಿರ 
ಕಾಯ ನೀಡಿದ ತಾಯಿ ಕರುಳು ನೋಯದಿರಲೆಂದು
ತವರಿನ ಕೀರ್ತಿ ಘನತೆ ಬೆಳಗಲೆಂದೆಂದು ।। 
ಒಂದೆ ಬಸಿರು ಒಂದೆ ಉಸಿರು ಅಂಟಿಕೊಂಡಂಥ
ನನ್ನ ಅಣ್ಣನ ಬಾಳ ಬಳ್ಳಿ ಬಾಡದಿರಲೆಂದು 
ನಲಿವಿನ ತುಂಬು ಜೀವನ ಆಗಲೆಂದೆಂದು ।। 
ತಂದೆ ಯಾರೋ ತಾಯಿ ಯಾರೋ ಯಾವುದೂ ಅರಿಯೇ 
ದೇವರಂಥ ಅಣ್ಣನಿರಲು ಸಂತಸಕೆ ಕೊರೆಯೇ 
ಆತನ ಪ್ರೀತಿ ಆದರ ಎಂದಿಗೂ ಮರೆಯೇ ।।






ಬಾಗಿನದಲ್ಲಿ ಇರಿಸುವ ವಸ್ತುಗಳು.---
ಮೊರ, ಹರಿಶಿನ, ಕುಂಕುಮ. ಎಲೆ ಅಡಿಕೆ, ಜೋಡಿ ತೆಂಗಿನಕಾಯಿ, ಗಾಜಿನ ಬಳೆಗಳು, ಹೂವು ಹಣ್ಣುಗಳು, ತರಕಾರಿಗಳು  ಅಕ್ಕಿ, ಬೇಳೆ,  ಅಂಗುನೂಲು, ಅಕ್ಷತೆ,  ಬಟ್ಟೆ, ಸೀರೆ ಕುಪ್ಪಸ, ಕನ್ನಡಿ,  ಬಾಚಣಿಕೆ, ಕರ್ಜೀಕಾಯಿ, ಚಕ್ಕುಲಿ ಇನ್ನು ಮುಂತಾದುವು.

ಕಾಯಿಕಣದಲ್ಲಿ ಇರಿಸುವ ವಸ್ತುಗಳು.-------
ಬಟ್ಟೆ, ಹರಿಶಿನ, ಕುಂಕುಮ, ಅಕ್ಕಿ, ಬೇಳೆ, ಕಾಳು, ತೆಂಗಿನಕಾಯಿ, ಹೂ- ಹಣ್ಣು, ತರಕಾರಿಗಳು, ಕನ್ನಡಿ, ಬಾಚಣಿಕೆ, ಬಳೆಗಳು, ಉಂಡೆಗಳು, ಸಿಹಿ ಮತ್ತು ಖಾರದ ತಿನಿಸುಗಳು, ಆ ಸಮಯದಲ್ಲಿ ತಮ್ಮ ಹೊಲಗಳಲ್ಲಿ ಮತ್ತು ತೋಟಗಳಲ್ಲಿ ಬೆಳೆದಿರುವ ವಸ್ತುಗಳು  ಇತ್ಯಾದಿ.

ಗೌರಿ-ಗಣೇಶಹಬ್ಬದ ಪೌರಾಣಿಕ ಕಥೆ------
ಗೌರಿ-ಗಣೇಶ ಹಬ್ಬವೆಂದರೆ ವಿಷಯವಾಗಿ ಒಂದು  ಪೌರಾಣಿಕ ಕಥೆ ಇದೆ. ಗೌರಿ ಶಿವನ  ಹೆಂಡತಿ, ಪರ್ವತ ರಾಜನ ಮಗಳು ಭೂಮಿಯು ಆಕೆಯ ತವರು, ಕೈಲಾಸದಿಂದ ವರ್ಷಕ್ಕೊಮೆ ಗೌರಿ ತವರಿಗೆ ಬರುವ ದಿನವನ್ನ ಗೌರಿಹಬ್ಬ ಎಂತಲೂ ತನ್ನ ತಾಯಿಯನ್ನು ತವರಿನಿಂದ ಕೈಲಾಸಕ್ಕೆ ಹಿಂತಿರುಗಿ ಕರೆದುಕೊಂಡು ಹೋಗಲು ಮಾರನೇ ದಿನ ಗಣೇಶ ಬರುವ ದಿನವನ್ನು ಗಣೇಶ ಹಬ್ಬ ಎಂತಲೂ ಆಚರಿಸಲಾಗುತ್ತದೆ. ಈ ಎರೆಡು ಹಬ್ಬಗಳು ಜೊತೆಯಲ್ಲೇ ಬರುವುದರಿಂದ ಈ ಹಬ್ಬಗಳನ್ನು ಜೊತೆಯಾಗಿ ಗೌರಿ-ಗಣೀಶ ಹಬ್ಬ ಎಂದು ಕರೆಯುತ್ತಾರೆ.


ಕೃಷಿಗೂ ಈ ಹಬ್ಬಕ್ಕೂ ಇರುವ ನಂಟು ------
ನಮ್ಮದು ಕೃಷಿ ಪ್ರಧಾನ  ದೇಶ ಹಾಗಾಗಿ ಈ ಹಬ್ಬವನ್ನು ರೈತಾಪಿ ಜನರ ದೃಷ್ಟಿಯಿಂದ ನೋಡಿದಾಗ ಸಾಮಾನ್ಯವಾಗಿ ಈ ಹಬ್ಬ ಬರುವುದು ಬಿತ್ತನೆ ಮುಗಿದು ಪೈರು ಬಂದಿರುವ  ಕಾಲದಲ್ಲಿ.  ಈ ಸಮಯದಲ್ಲಿ ಪರಸ್ಪರ ಬಾಗಿಣ ಕಾಯಿಕಣ ಕೊಡುವ ರೂಪದಲ್ಲಿ ಸಂಬಂಧಿಕರ ಮನೆಗೆ ಹೋಗಿ ಬೆಳೆಗಳು ಹೇಗೆ ಬಂದಿವೆ ಎಂಬ ವಿಷಯಗಳ ಬಗ್ಗೆ ಮಾತಾಡಲು ಅವಕಾಶ ದೊರೆತಂತೆ ಆಗುತಿತ್ತು. ಹಿಂದಿನ ಕಾಲದಲ್ಲಿ ಆರ್ಥಿಕ ವಿನಿಮಯ ದುಡ್ಡಿನ ಮೂಲಕ ಆಗುತ್ತಿರಲಿಲ್ಲ ಪರಸ್ಪರ ವಸ್ತುಗಳ ವಿನಿಮಯ ಪದ್ಧತಿ ಇತ್ತು (ಕಡ ಕೊಟ್ಟು ಕಡ ತೆಗೆದುಕೊಳ್ಳುವುದು ) ತಾವು ಬೆಳೆದ ಬೆಳೆ ಚೆನ್ನಾಗಿ ಆದ್ರೆ ಯಾವ ಯಾವ ವಸ್ತುಗಳನ್ನು ಎಸ್ಟೆಸ್ಟು ಕಡ ಕೊಟ್ಟು ಕಡ ತೆಗೆದುಕೊಳ್ಳಬಹುದು ಎಂಬ ಮಾತುಕತೆಗಳು ಹಿಂದಿನ ಕಾಲದಲ್ಲಿ ನಡೆಯುತಿದ್ದವು ಎಂದೆನಿಸುತ್ತಿದೆ. ಆಗ ಅಕ್ಕತಂಗಿಯರು ತನ್ನ ತವರಿಂದ ಬಂದ ಬಾಗಿನ ಅಥವಾ ಕಾಯಿಕಣದಲ್ಲಿನ ವಸ್ತುಗಳನ್ನು ನೋಡಿ ತನ್ನ ತವರಿನ ಆರ್ಥಿಕತೆಯನ್ನು   ಅರ್ಥ ಮಾಡಿಕೊಳ್ಳುತಿದ್ದಳು ಎಂದು ಕೆಲವೊಂದು ಜಾನಪದ ಹಾಡುಗಳಲ್ಲಿ ನಾವು ಕೇಳಿದ್ದೇವೆ.

ಕುಟುಂಬ ಸಮಾನತೆ ಸಾರುವಲ್ಲಿ-- 
ಇನ್ನು ಕೆಲವು ಊರುಗಳಲ್ಲಿ ಮನೆಯಲ್ಲಿ ಗೌರಿಯನ್ನು ತಂದಿರಿಸಿ ಹೆಣ್ಣುಮಕ್ಕಳಿಗೆ ಬಾಗಿನ ಕೊಡಿಸಿದ ನಂತರ ನಾಗಪ್ಪನಿಗೆ ತನೆಯರೆಯುವುದು ರೂಢಿಯಲ್ಲಿದೆ. ತಮ್ಮ ತಮ್ಮ ತೋಟ, ಹೊಲ ಜಮೀನುಗಳಲ್ಲಿ  ಇರುವ ನಾಗಪ್ಪನ ಹುತ್ತ ಅಥವಾ ನಾಗಪ್ಪನ ಕಲ್ಲುಗಳು ಇರುವ ಜಾಗಕ್ಕೆ ತಮ್ಮ ಮನೆಯಲ್ಲಿ ಗೌರಿ ಹಬ್ಬದ ಅಡುಗೆಯನ್ನೆಲ್ಲ ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ಮಾಡಿ, ಎಡಿ ಮಾಡಿ, ಅಲ್ಲೇ ಊಟ ಮಾಡುವ ರೂಢಿ ಇದೆ. ಅಲ್ಲಿನ ಪೂಜೆ ಯಲ್ಲೂ ವಿಶೇಷತೆ ಇದೆ. ಅಲ್ಲಿ ಬೆರಣಿಯಿಂದ ಮಾಡಿದ ಗಣೇಶನನ್ನು ಇಡುತ್ತಾರೆ, ಹತ್ತಿಯನ್ನು ದುಂಡಗೆ ಮಾಡಿ ಮದ್ಯಕ್ಕೆ ಮಸಿ ಹಚ್ಚಿ ಮೂರೂ ಕಣ್ಣುಗಳನ್ನು ಹುತ್ತಕ್ಕೆ ಇಡುತ್ತಾರೆ, ನಾಗರ ಹಾವು ಸುಬ್ರಮಣ್ಯ, ಹತ್ತಿಯ ಮೂರೂ ಕಣ್ಣುಗಳು ಶಿವನ ಗುರುತು, ಬೆರಣಿಯ ಗಣೇಶ ಆ ಮೂವರನ್ನು ಪೂಜಿಸಿದಂತೆ ಆಗುತ್ತದೆ. ಮನೆಯಲ್ಲಿ ಗೌರಿ ಪೂಜೆ ಒಟ್ಟಿನಲ್ಲಿ ಶಿವನ ಕುಟುಂಬಕ್ಕೆ  ಆದರದ ಸತ್ಕಾರ ಈ ಹಬ್ಬದಲ್ಲಿ ಸಿಗುತ್ತದೆ.

ಪೈರಿನ ರಕ್ಷಣೆಯ ಪಾಠ ----
ಹುತ್ತಕ್ಕೆ ಹುರಿದ ಜೋಳದ ಕಾಳನ್ನು ಹಾಕುವ ರೂಢಿಯಿದೆ. ನೆನೆಸಿದ ಶೇಂಗ, ಕಡಲೆಕಾಳು, ಹೆಸರುಕಾಳು ಅಲ್ಲಿ ಚೆಲ್ಲಿ ಬರುತ್ತಾರೆ. ನಾವು ಚಿಕ್ಕವರಿದ್ದಾಗ ಇವನ್ನೆಲ್ಲ ತಿನ್ನೋದು ಬಿಟ್ಟು ಯಾಕೆ ಹೀಗೆ ಚೆಲ್ಲ್ತಾರೆ ಅಂತ ಗೊತ್ತಾಗ್ತಾ ಇರ್ಲಿಲ್ಲ. ಈಗ ಸ್ವಲ್ಪ ಆಲೋಚನೆ ಮಾಡಿದಾಗ ಅನ್ನಿಸಿದ್ದು, ಇದು ಒಳ್ಳೆಯ ಬೆಲೆಯ ಕಾಲವಾದ್ದರಿಂದ ಇಲಿಗಳು ಮತ್ತು ಪಕ್ಷಿಗಳು ತಮ್ಮ ಬೆಲೆಯನ್ನು ತಿಂದು ಹಾಳುಮಾಡಿಯಾವು ಎಂದು  ಮಳೆಗಾಲವಾದ್ದರಿಂದ ಇಲಿ ಮತ್ತು ಪಕ್ಷಿಗಳನ್ನು ತಿನ್ನುವ ಹಾವುಗಳಿಗೆ ಸುಲಭವಾಗಲಿ ಬೇಟೆ ಸಿಗಲಿ ಎಂಬ ಉದ್ದೇಶದಿಂದ ಈ ಆಚರಣೆ ಬೆಳಕಿಗೆ ಬಂದಿರಬಹುದು ಎನಿಸಿತು.

ಅವೇನೆ ಕಾರಣಗಳು ಇರಲಿ ಅಣ್ಣ-ತಂಗಿಯರು ತಾವು  ಸಾಯುವವರೆಗೂ  ಪರಸ್ಪರ ತಮ್ಮ ಕಷ್ಟ ಸುಖಗಳಲ್ಲಿ  ಒಬ್ಬರಿಗೊಬ್ಬರು ಆಗಿಬರುತ್ತಾರೆ. ಈಗಿನ ಓಟದ ಜೀವನದಲ್ಲಿ ಪ್ರತಿದಿನ ಭೇಟಿಮಾಡಲು ಆಗದಿದ್ದರು ಈ ಗೌರಿ-ಗಣೇಶ ಹಬ್ಬಗಳಲ್ಲಿ ಮಾತ್ರ ಅಣ್ಣ ತಮ್ಮಂದಿರು ತನ್ನ ಅಕ್ಕ ತಂಗಿಯರ ಮನೆಗೆ ಹೋಗಿ ಯೋಗಕ್ಷೇಮ ವಿಚಾರಿಸುತ್ತಾರೆ. ಇಲ್ಲಿ ಬಾಗಿನ ಮತ್ತು ಕಾಯಿಕಣ ಸಂಬಂಧವನ್ನು ಉಳಿಸಿಕೊಳ್ಳಲು ಅಥವಾ  ಗಟ್ಟಿಗೊಳಿಸಲು ಇರುವ ಒಂದು ಆಚರಣೆಯ ಕೊಂಡಿ.




ಇನ್ನು ಕೆಲವು ಕಡೆಗಳಲ್ಲಿ ಹಿಂದೂ, ಮುಸ್ಲಿಂ ,ಕ್ರಿಸ್ತ ,ಜೈನ, ಸಿಕ್ಖ್ ಎಲ್ಲರು ಈ ಗಣೇಶ ಹಬ್ಬದಲ್ಲಿ ತಮ್ಮಲ್ಲಿಯ ಭೇದವನ್ನು ಮರೆತು ಈ ಹಬ್ಬದ ಆಚರಣೆಯಲ್ಲಿ  ಭಾಗಿಯಾಗುತ್ತಾರೆ.