Saturday, 3 March 2018

ಮಗುವಿನ ಮೊದಲ ತುತ್ತು , ಕೀಲ್ಸ ಎಂಬ ಕೈಲಾಸ.

ಕೀಲ್ಸ ಅನ್ನೋದು ಒಂದು ಸಿಹಿ ಊಟ. ನಮ್ಮೂರಿನ ಕಡೆ ಶಿವರಾತ್ರಿಯ ವಿಶೇಷ ಈ ಕೀಲ್ಸ. ಶಿವರಾತ್ರಿ ಹಬ್ಬವನ್ನ  ಉಪವಾಸದ ಹಬ್ಬ, ನಿದ್ದೆಗೆಡುವ ಹಬ್ಬ ಅಂತಾನೆ ಹೇಳಬಹುದು. ಆದರೆ ಶಿವರಾತ್ರಿ ದಿನ "ಕಿಲ್ಸ ತಿಂದು ಕೈಲಾಸ ಕಾಣು" ಎಂದು ನಮ್ಮ ಹಿರಿಯರು ಹೇಳಿದ ಮಾತು ಈಗ ಕಿವಿಯಲ್ಲಿ ಗುಯ್ಗುಡುತ್ತಿದೆ. ಅದು ಗಾದೆಯೋ ಅಥವಾ ಆ ಸಮಯಕ್ಕೆ ಆ ಕೀಲ್ಸಕ್ಕೆ ಕೊಟ್ಟ ಗೌರವವೋ ನಂಗೆ ಗೊತ್ತಿಲ್ಲ. ಆದರೂ ಈ ಕೀಲ್ಸಕ್ಕೆ ಶಿವರಾತ್ರಿ ದಿನ ರಾಜ ಗೌರವ ಅಂತೂ ಇದೆ. ಉಪವಾಸದ ನಂತರ  ಈ ಕೀಲ್ಸವೇ ದೇವರ ಎಡೆಗೆ (ನೈವೇದ್ಯ) ಮಾಡುವುದು. ಈಗಿನ ಹೊಸ ಹೊಸ ರುಚಿಗಳ ಮಧ್ಯೆಯೂ ಹಬ್ಬದ ದಿನ ನಾವು ಈ ಕೀಲ್ಸವನ್ನು ಮರೆಯುವುದಿಲ್ಲ. ಮಾಡುವ ವಿಧಾನವು ಕೂಡ ಸುಲಭವಾಗಿದೆ. 


ನಮ್ಮ ಅಜ್ಜ ಅಜ್ಜಿಯರ ಕಾಲದಲ್ಲಿ ಮಕ್ಕಳಿಗೆ ಮೊದಲ ತುತ್ತು ಈ ಕೀಲ್ಸ ಆಗಿರುತ್ತಿತ್ತು. ಇದು ಮಕ್ಕಳಿಗೆ ಸುಲಭವಾಗಿ ಜೀರ್ಣವಾಗುತ್ತದೆ. ಈಗಿನ ಮಕ್ಕಳಿಗೆ ನಾವು "ಆರು ತಿಂಗಳಿಗೆ ಅನ್ನದ ಆಸೆ" ಅಂತ ಅನ್ನ ತಿನ್ನಿಸಲು ಶುರು ಮಾಡ್ತೀವಿ. ಆದ್ರೆ ನಮ್ಮ ಅಜ್ಜ ಅಜ್ಜಿಯರ  ಕಾಲದಲ್ಲಿ  ಈಗ ನಾವು ಉಣ್ಣುವ ಅಕ್ಕಿಯ ಅನ್ನ ಅವರು ತಿನ್ನುತ್ತಿರಲಿಲ್ಲವಂತೆ - ನವಣೆ ಅಕ್ಕಿ ಅನ್ನ ತಿನ್ನುತ್ತಿದ್ದರಂತೆ. ಅದು ತುಂಬಾ ಗಟ್ಟಿ ಆಹಾರ. ಅನ್ನಕ್ಕಿಂತ ಮೊದಲು  ರಾಗಿ ಹಾಲಿನಿಂದ ಮಾಡಿದ ಈ ಕೀಲ್ಸವನ್ನು ಮಕ್ಕಳ ಮೊದಲ ಬೇಯಿಸಿದ ತುತ್ತು ಅಂತ ತಿನ್ನಿಸ್ತಿದ್ರಂತೆ. 

ಮಕ್ಕಳಷ್ಟೇ ಅಲ್ಲ, ಎಲ್ಲಾ ವಯೋಮಾನದವರು  ಕೂಡ ಇಷ್ಟಪಡುವ ಸಿಹಿ ಇದಾಗಿದೆ.  ಹೊಟ್ಟೆಯಲ್ಲಿ ಕಸಿವಿಸಿ ಆಗಿ ಏನೂ ಊಟ ಸೇರುತ್ತಿಲ್ಲ ಎಂದಾಗ ಈ ಕೀಲ್ಸ ತಿಂದರೆ ಹೊಟ್ಟೆ ನಿರಾಳವಾಗುತ್ತದೆ. ಇದು ಮನೆಯಲ್ಲೇ ತಯಾರಿಸುವುದರಿಂದ ಮತ್ತು ಇಲ್ಲಿ ಸಿಹಿಗಾಗಿ ಬೆಲ್ಲ ಹಾಕುವುದರಿಂದ ಸಕ್ಕರೆ ಕಾಯಿಲೆ ಇರುವವರು ಕೂಡ ನಿರಾತಂಕವಾಗಿ ತಿನ್ನಬಹುದು. ಬೇಸಿಗೆಯಲ್ಲಿ ದೇಹದ ಉಷ್ಣ ಹೋಗಿಸಿ ದೇಹವನ್ನು ತಂಪಾಗಿಸಲು ಈ ಕಿಲ್ಸ ಮಾಡಿಕೊಂಡು ತಿನ್ನುವರು. ಈ ಕೀಲ್ಸ ಸಾಮಾನ್ಯವಾಗಿ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು  ಈ ಭಾಗಗಳಲ್ಲಿ ಹೆಚ್ಚಾಗಿ ಮಾಡುವರು.
ಕೀಲ್ಸ ಮಾಡುವ ವಿಧಾನ :-
  • ಮೊದಲು 2 ಲೋಟ ರಾಗಿಯನ್ನು ತೆಗೆದುಕೊಂಡು ನೀರಿನಲ್ಲಿ 5-6 ಗಂಟೆಗಳ ಕಾಲ ನೆನೆಸಿಡಬೇಕು.
  • ಎರೆಡು ಲೋಟ ರಾಗಿಗೆ ಒಂದು ವರೆ ಲೋಟ ಬೆಲ್ಲ ಪುಡಿಮಾಡಿ  ಬೆಲ್ಲವನ್ನು ಪಾಕ ಕುದಿಸಬೇಕು.
  • ನೆಂದಿರುವ ರಾಗಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ರಾಗಿ ಹಾಲನ್ನು ಒಂದು ಪಾತ್ರೆಗೆ ಸೋಸಿಕೊಳ್ಳಬೇಕು.
  • ಏಲಕ್ಕಿ ಶುಂಟಿ ಗಳನ್ನೂ ಕುಟ್ಟಿ ಪುಡಿ ಮಾಡಿಟ್ಟು, ಕುದಿಯುತ್ತಿರುವ ಬೆಲ್ಲದ ಪಾಕಕ್ಕೆ ಹಾಕಬೇಕು.
  • ನಂತರ ಬೆಲ್ಲದ ಪಾಕವನ್ನು ಸೋಸಿಕೊಂಡಿರುವ ರಾಗಿ ಹಾಲಿಗೆ ಸೇರಿಸಿ ಒಲೆಮೇಲೆ ಕಡಿಮೆ ಉರಿಯಲ್ಲಿ ಬೇಯಿಸಬೇಕು. ಬೇಯಿಸುವಾಗ ರಾಗಿ ಹಾಲು ಗಂಟು ಆಗದಂತೆ ಮತ್ತು ಪಾತ್ರೆ ತಳ ಹಿಡಿದು ಸೀದು ಹೋಗದಂತೆ ಎಚ್ಚರಿಕೆಯಿಂದ ಗೂರಡುತ್ತಿರಬೇಕು.
  • ಸ್ವಲ್ಪ ಹೊತ್ತು ಚೆನ್ನಾಗಿ ಬೇಯುತ್ತಾ ಅದು ಗಟ್ಟಿಯಾಗುತ್ತಾ ಹೋಗುತ್ತದೆ.  
  • ಆಗ ಪಾತ್ರೆಯನ್ನು ಕೆಳಗಿಳಿಸಿ, ಬಿಸಿಬಿಸಿ ಯಾಗಿರುವಾಗಲೇ ಒಂದು ತಟ್ಟೆಗೆ ಅದನ್ನು ಹಾಕಿ ಮೇಲೆಕೆಳಗೆ ಆಗದಂತೆ ಸಮವಾಗಿ ಸವರಬೇಕು.
  • 3-4 ಗಂಟೆಗಳ ನಂತರ ಅದು ಗಟ್ಟಿಯಾಗುತ್ತದೆ. ನಂತರ ಚಾಕುವಿನಿಂದ ಬರ್ಫಿಯ ರೀತಿ ಚೌಕಾಕಾರವಾಗಿ ಕತ್ತರಿಸಿ ತೆಗೆದರೆ ಕಿಲ್ಸ ತಿನ್ನಲು  ರೆಡಿ. 

ಒಳ್ಳೆ ಗುಣ ಇರುವ ಈ ರೀತಿಯ ನಮ್ಮ ಹಿರಿಕರ ಊಟವನ್ನು ನಾವು ಮುಂದುವರೆಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಳ್ಳೆಯದು ಅಲ್ಲವ. ನನ್ನ ಅನಿಸಿಕೆಯ ಪ್ರಕಾರ ನಮ್ಮ ಆರೋಗ್ಯ ಇರುವುದು ನಮ್ಮ ಊಟದಲ್ಲೇ. ಪ್ರಪಂಚದಲ್ಲಿ ಎಲ್ಲೇ ಹೋದರು ಆ  ಭೌಗೋಳಿಕ ಪರಿಸರಕ್ಕೆ ತಕ್ಕಂತೆ ಆಹಾರ ಪಧ್ಧತಿಗಳು ರೂಢಿಯಾಗುತ್ತಾ ಬಂದಿವೆ. ಆದರೆ ನಾವು ನಾವು ಆಧುನಿಕತೆಗೆ ಒಳಗಾಗಿ ಇಡೀ ಪ್ರಪಂಚದ ಊಟದ ಪಧ್ಧತಿಗಳನ್ನು ನಮ್ಮ ತಟ್ಟೆಗೆ ತಂದು ಇರಿಸಿಕೊಂಡಿದ್ದೇವೆ. ಅದು ತಪ್ಪು ಅಂತ ಹೇಳುವುದಕ್ಕೆ ಆಗೋಲ್ಲ. ಊಟ ತನ್ನಿಚ್ಛೆ. ನೋಟ ಪರರ ಇಚ್ಛೆ. ಅಲ್ವಾ. 

1 comment: