Monday 24 July 2017

ಶ್ರಾವಣ ಮಾಸ ಬಂದಾಗ - ಹಬ್ಬಗಳು ಬಂದಾಗ

ಶ್ರಾವಣ ಬಂತೆಂದರೆ ನಮ್ಮ ಹೆಣ್ಣುಮಕ್ಕಳ ಕಣ್ಣುಗಳಲ್ಲಿ ಸಂತಸದ ಛಾಯೆ ಎದ್ದು ಕಾಣುತ್ತಿರುತ್ತದೆ. ಎಲ್ಲ ಹೆಣ್ಣುಮಕ್ಕಳ ಸಮೂಹ ಒಟ್ಟುಗೂಡಿ ಹಬ್ಬಗಳ ಆಚರಣೆಗೆ ಮುಂದಾಗುತ್ತಾರೆ. ಭೀಮನ ಅಮಾವಾಸ್ಯೆಯಿಂದ ಶುರುವಾಗೋ ನಮ್ಮ ಹೆಣ್ಣುಮಕ್ಕಳ ವ್ರತಗಳು, ಹಬ್ಬಗಳು,  ಮನೆ- ಮಂದಿ,  ಊರು- ಕೇರಿ, ಕಣ್ಣು ಹೊರಳಿದ ಕಡೆಯಲ್ಲೆಲ್ಲಾ ಹೊಸತನದ ರಂಗು ಚಿಮ್ಮುತ್ತಿರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಮನೆಯ ಸುಖ ಸಮೃದ್ಧಿಗಾಗಿ ಹೆಣ್ಣುಮಕ್ಕಳು ಪೂಜೆ ವ್ರತಾಚಾರಣೆಗಳನ್ನ  ಮಾಡುವುದು  ಸಾಮಾನ್ಯ.

ಮಂಗಳ ಗೌರೀ ವ್ರತ  
 ಶ್ರಾವಣ ಮಾಸ ಎಂದರೆ ಶಿವನ ಮಾಸ ಎಂದು ಹೇಳಲಾಗುತ್ತದೆ. ನಮ್ಮೂರಿನ ಕಡೆ ಶ್ರಾವಣ ಮಾಸದಲ್ಲಿ ಅವರವರ ಮನೆಯ ರೂಢಿಯಂತೆ ಕುಲ ದೇವರ  ವಾರಗಳ  ದಿನಗಳಂದು  ವಿಶೇಷವಾಗಿ ಪೂಜೆ ಮಾಡುತ್ತಾರೆ.  ಅಂದು ಮನೆಯಲ್ಲಿ ಸಿಹಿ ಮಾಡಿ ಉಣ್ಣುತ್ತಾರೆ. ನಾವು ಚಿಕ್ಕವರಿದ್ದಾಗ ನಮ್ಗೆಲ್ಲಾ  ಶ್ರಾವಣ  ಅಂದ್ರೆ  ವಿವಿಧ ಬಗೆಯ ಊಟ ಮತ್ತು ವಿಶೇಷ ತಿಂಡಿಗಳನ್ನ ಚಪ್ಪರಿಸಿ ತಿನ್ನುವ  ಖುಷಿ. 

ನಾವು ಚಿಕ್ಕವರಿದ್ದಾಗ ಶ್ರಾವಣ ಮಾಸದಲ್ಲಿ ನಮ್ಮ ಮನೆಗಳಲ್ಲಿ ನಮಗೆ ವಹಿಸುತ್ತಿದ್ದ ಸಾಮಾನ್ಯ ಕೆಲಸ ಹೀಗಿತ್ತು ಸೋಮವಾರ ಬಸವಣ್ಣ ಮತ್ತು ಶಿವನ ಗುಡಿಗೆ,  ಮಂಗಳವಾರ, ಶುಕ್ರವಾರ , ಕುಕ್ಕಡದಮ್ಮ, ಕಾಳಮ್ಮ, ಕರಿಯಮ್ಮ ಗುಡಿಗಳಿಗೆ, ಗುರುವಾರ ದತ್ತಾತ್ರೇಯ ಆಶ್ರಮಕ್ಕೆ, ಶನಿವಾರ ಆಂಜನೇಯ ಗುಡಿಗಳಿಗೆ  ಎಣ್ಣೆ ಬತ್ತಿ , ಕಾಯಿ , ಬಾಳೆಹಣ್ಣು ,  ಊದುಬತ್ತಿ, ಎಡೆ  ಎಲ್ಲ ತೊಗೊಂಡ್ ಹೋಗಿ ಪೂಜೆ ಮಾಡಿ ಎಡೆ ಕೊಟ್ಟು ಬರೂ ಕೆಲಸ ವಹಿಸುತ್ತಿದ್ರು. ನಾವು ಗುಡಿಗಳಿಗೆ ಹೋದಾಗ ಅಲ್ಲಿ  ಗುಡಿಗಳಲ್ಲಿ ಎಷ್ಟೊಂದು ರೀತಿಯ ಎಡೆ ಇರ್ತಿದ್ವು  ಅಂದ್ರೆ!!! ನಮ ಬಾಯಲ್ಲಿ ನೀರು ಬರ್ತಿತ್ತು. ಕೆಲವೊಮ್ಮೆ ನಮ್ಮ ಇಷ್ಟದ ತಿಂಡಿಗಳು ಇದ್ರೆ ಅದು ನಮ್ಮ ಹೊಟ್ಟೆ ಸೇರೋದು ಖಾಯಂ ಆಗಿತ್ತು. ಗಿಣ್ಣವನ್ನ ಎಡೆಯಾಗಿ ಯಾರಾದ್ರೂ ಕೊಟ್ಟಿದ್ರಂತೂ ಅದು ನಮ್ಮೊಟ್ಟೆ ಸೇರೇಸೇರ್ತೀತ್ತು.  ಅಲ್ಲಿ ಯಾರಾದ್ರೂ ದೊಡ್ಡೋರು ನೋಡಿದ್ರೆ ದೇವ್ರಿಗೆ ಅಂತ ಎಡೆ  ಇಟ್ಟಿದ್ದನ್ನ ತಿನ್ನಬಾರದು ಅಂತ ಬೈಯ್ಯೋವ್ರು. ನಾವು ಅವ್ರಿಗೆ ತಿರುಗಿಸಿ 'ನಿಮ್ಮನೆ ಎಡೆ ನಾವೇನು ಮುಟ್ಟಿಲ್ಲ ಬಿಡಿ' ಅಂತ ತಿರುಗಿಸಿ ಉತ್ರ ಕೊಡುತಿದ್ವಿ.  ಇನ್ನು ಕೆಲವರು ಚಿಕ್ಕಮಕ್ಳು ತಿಂದ್ರೆ ಏನು ಆಗಲ್ಲ ತಿನ್ನಿ ತಿನ್ನಿ ಅಂತ ಪ್ರೋತ್ಸಾಹಿಸುತ್ತಿದ್ರು. ಇದು ನಮ್ಮ ಚಿಕ್ಕಂದಿನ ಶ್ರಾವಣ.

ವರಮಹಾಲಕ್ಷ್ಮಿ ವ್ರತ 
ಆಗೆಲ್ಲ ನಮಗೆ ಶ್ರಾವಣ ಅಂದ್ರೆ ಏನು? ಅದರ ವಿಶೇಷತೆ ಏನು ? ಏನೂ  ಗೊತ್ತಿರ್ಲಿಲ್ಲ, ಶ್ರಾವಣದ  ಬಗ್ಗೆ ಮೇಲೆ ಹೇಳಿದ ಸಂಗತಿಗಳು ಮಾತ್ರ ಈಗ ನಮಗೆ ನೆನಪಿರುವುದು.  ಆಮೇಲೆ  ನಾವು ಬೆಳೆದಂತೆ ತವರು ಮನೆ - ಗಂಡನ ಮನೆ ಅಂತ ನಾವು ಕೂಡ ಕೆಲವೊಂದು ಆಚರಣೆಗಳನ್ನ ಪಾಲಿಸಿಕೊಂಡು ಹೋಗುವ ಜವಾಬ್ದಾರಿಗಳು ಬಂದವು. ಅದರ ಜೊತೆ . ಕೆಲವೊಂದು ರೂಢಿಗಳನ್ನ  ಮನೆಯಲ್ಲಿ ಹೇಳಿಕೊಟ್ಟರೆ,  ಇನ್ನು ಕೆಲವು ನ್ಯೂಸ್ ಪೇಪರ್ ಓದಿ , ಟಿವಿ ಕಾರ್ಯಕ್ರಮಗಳನ್ನು ನೋಡಿ, ಅಥವಾ ಸುತ್ತ ಮುತ್ತ ಕೆಲವರು ಮಾಡುವದನ್ನು ನೋಡಿ.  ಒಹೋ ಇದನ್ನ ಮಾಡಿದರೆ ನಮಗೆ ಒಳ್ಳೆಯದಾಗುತ್ತೆ ಅನ್ನೋ ಆಸೆಯಲ್ಲಿ , ಈ ರೀತಿಯಾಗಿ ಹಲವಾರು ವ್ರತ ಪೂಜೆಗಳನ್ನ ರೂಢಿಸಿಕೊಂಡು ಶ್ರಾವಣದಲ್ಲಿ ಪ್ರತಿ ದಿನ ಹಬ್ಬ ಎನ್ನುವಂತೆ ವ್ರತಾಚರಣೆಗಳನ್ನ ಮಾಡುತ್ತಿದ್ದೇವೆ.

ಋತುಗಳ ರಾಜ ವಸಂತ ಋತುವಾದರೆ, ಮಾಸಗಳ ರಾಜ ಶ್ರಾವಣ ಮಾಸ ಎನ್ನಬಹುದೇನೋ. ಈ ಶ್ರಾವಣ ಮಾಸದಲ್ಲಿ ಬರುವಷ್ಟು ಹಬ್ಬ ಮತ್ತು ವ್ರತಾಚರಣೆಗಳು ಇನ್ನಾವ ಮಾಸದಲ್ಲೂ ಬರುವುದಿಲ್ಲ ಎಂದೇ ಹೇಳಬಹುದು.

ಪಂಚಾಂಗದ ಪ್ರಕಾರ ಶ್ರಾವಣ ಮಾಸದಲ್ಲಿ ಒಂದೇ ರೇಖೆಯಲ್ಲಿ ೧೭ ನಕ್ಷತ್ರಗಳು ಮಳೆಯನ್ನೂ ತರುತ್ತವೆ.

ನಮ್ಮಲ್ಲಿ ಆಷಾಢ ಮಾಸದಲ್ಲಿ ಅತ್ತೆ-ಸೊಸೆ, ಮಾವ-ಅಳಿಯ, ಗಂಡ-ಹೆಂಡತಿ ಒಂದೇ ಮನೆಯಲ್ಲಿ ಇರುವಂತಿಲ್ಲ.  ಮತ್ತು ಒಬ್ಬರ ಮುಖ ಒಬ್ಬರು ನೋಡುವಂತಿಲ್ಲ.  ಎಂಬ ವಾಡಿಕೆ ಇದೆ. ಆಷಾಢ ಮಾಸ ಕಳೆದ ನಂತ್ರ ಬರುವುದೇ ಈ ಶ್ರಾವಣ ಮಾಸ.  ಈ ಮಾಸದಲ್ಲಿ ದೂರಾಗಿದ್ದ ಗಂಡ - ಹೆಂಡತಿ , ಅತ್ತೆ - ಸೊಸೆ, ಮಾವ - ಅಳಿಯ, ಮುಖಾ ಮುಖಿಯಾಗಿ ಭೇಟಿಯಾಗುತ್ತಾರೆ. ಅದೂ ಹಲವು ಹಬ್ಬಗಳನ್ನ ಆಚರಿಸುವ ಮೂಲಕ!!.

ಮೊದಲು ಬರುವುದು ಭೀಮನ ಅಮಾವಾಸ್ಯೆ ಹೆಂಡತಿ ತನ್ನ ತಾಳಿ ಭಾಗ್ಯ ಗಟ್ಟಿ ಇರಲೆಂದು ಗಂಡನ ಆಯಸ್ಸು ಆರೋಗ್ಯ ಮತ್ತು ಸಮೃದ್ಧಿಗೆ ಶಿವನನ್ನು ಕುರಿತು ಮಾಡುವ ವ್ರತವಾಗಿದೆ. ಹೀಗೆ ಮಂಗಳ ಗೌರಿ, ನಾಡಹಬ್ಬ ನಾಗ ಚತುರ್ಥಿ (ಪಂಚಮಿ), ಬಸವ ಪಂಚಮಿ,  ಮಂಗಳ ಗೌರೀ ವ್ರತ, ವರಮಹಾಲಕ್ಷ್ಮೀ ವ್ರತ, ಗಾಯತ್ರೀ ಆರಾಧನೆ, ಶ್ರೀ ಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ, ಹೀಗೆ ಒಂದೊಂದಾಗಿ ಹಬ್ಬಗಳು ಆಚರಿಸಲ್ಪಡುತ್ತವೆ.

ನಾಗಪಂಚಮಿ 

No comments:

Post a Comment