Thursday 14 July 2016

ಮುಂಗಾರು ಮಳೆಯ ನೆನಪಿನ ಮಳೆಯಲ್ಲಿ ಮಿಂದಾಗ - first rain memories

ಬೇಸಿಗೆಯ ಕಾಲದ ಬಿಸಿಲಿನಲ್ಲಿ ಬೆಂದು ಹೈರಾಣಾದ ಭೂಮಿಯ ಬದುಕಿನಲ್ಲಿ  ಮುಂಗಾರು ಮಳೆಯ ಹನಿಗಳು ನೆಲಕ್ಕೆ ಬೀಳುತ್ತಿದ್ದಂತೆ  ಭೂಮಿ ಒದ್ದೆಯಾಗುತ್ತಾ ಜೀವ ಸಂಕುಲಕ್ಕೆ ಜೀವ ತುಂಬುತ್ತಾ ಮುಗಿಲ ಮಾಯಾವಿಯಿಂದ  ಇಡೀ ಪ್ರಪಂಚಕ್ಕೆ ಜೀವಕಳೆ ಬರುವ ಸಮಯ ಅದು. ಮುಂಗಾರು ಮಳೆ ಹನಿಗಳು ಮುತ್ತುಗಳಂತೆ ಕಾದ ಭೂ ರಮೆಯ ಮೈ ಮೇಲೆ ತಾಕುತ್ತಲೇ ಘಂ ಎಂದು ಬರುವ  ಮಣ್ಣಿನ ಆ ವಾಸನೆ. ಹಾಗೆ ಬೆಂಕಿಯಂತಿದ್ದ ವಾತಾವರಣ ತಣ್ಣನೆಯ ಹಿತ ಅನುಭವಗಳನ್ನ ತರುತ್ತಾ ಮೂಡುವ ಕಾಮನ ಬಿಲ್ಲು, ಹಾಗೇ ಹೆದರಿಸುವಂಥಹ ಗಾಳಿಯ ಅಬ್ಬರ , ಗುಡುಗು-ಸಿಡಿಲುಗಳ ಭಯಂಕರ ಸದ್ದು, ಮಳೆ ಜೋರಾದಂತೆ ನೀರಿನ ಮೇಲೆ ದೀಪಗಳಂತೆ ಬೀಳುವ ಮಳೆಹನಿ, ಕೆಲವೊಮ್ಮೆ ಆಲಿಕಲ್ಲು ಮಳೆ, ಆಹಾ ಎಸ್ಟೊಂದು ನೆನಪಿನ ಸಾಗರ ಈ ಮುಂಗಾರು ಮಳೆಯ ಸಡಗರ.

ಬಿರು ಬೇಸಗೆಯ ತಾಪ ತಾಳರಾದೆ ವಲಸೆ ಹೋಗಿದ್ದ ಪ್ರಾಣಿ-ಪಕ್ಷಿಗಳು ತವರು ಸೇರುವ ಕಾಲ ಈ ಮುಂಗಾರು ಮಳೆಯಕಾಲ. ರೈತರು ತಮ್ಮ ಕಾಯಕ ಮಾಡಲು ಮುಂದಾಗುವ ಕಾಲ ನೇಗಿಲು, ಕುಂಟೆ , ಎತ್ತು, ಸಡ್ಡಿ ಗಳೊಡನೆ ಕೂಡಿ ತಮ್ಮ ತಮ್ಮ ಹೊಲ ಗದ್ದೆ ತೋಟಗಳಲ್ಲಿ ಭೂಮಿ ತಾಯಿ ಪೂಜೆ ಮಾಡಿ ಬೀಜಗಳನ್ನು ಬಿತ್ತುವ ಕಾಲ ಈ  ಮುಂಗಾರು ಮಳೆಯ ಕಾಲ.

ನಾವು ಚಿಕ್ಕವರಿದ್ದಾಗ  ಈ ಮಳೆ ಎಂದರೆ ಎಲ್ಲಿಲ್ಲದ ಸಡಗರ. ಅಲ್ಲಲ್ಲಿ ಗುಂಡಿಗಳಲ್ಲಿ ನಿಂತ ನೀರಲ್ಲಿ ಧೊಪ್ಪನೆ ಧುಮುಕಿ ಆನಂದಿಸಿದ ದಿನಗಳು, ಪಕ್ಕದಲ್ಲಿದ್ದವರಿಗೆ ನೀರನ್ನು ಚುಮುಕಿಸಿ ನಲಿದ ಕ್ಷಣಗಳು, ಮಳೆ ನಿಂತ ತಕ್ಷಣ ನಮ್ಮೂರ ಕೆರೆ, ಹೊಂಡ, ಕಲ್ಯಾಣಿ, ಬಾವಿಗಳ ನೀರಿನ ಮಟ್ಟ ಎಷ್ಟು ಮೇಲೆ ಬಂದಿದೆ ಎಂದು ಓಡಿಹೋಗಿ ನೋಡುತಿದ್ದುದು. ಈ ಮುಂಗಾರುಮಳೆ ನಮ್ಮ ಶಾಲಾದಿನಗಳಲ್ಲಿ  ನಮ್ಮ ಶಾಲಾ ಜೊತೆಗಾರ ಈ ಮಳೆಯೇ ಆಗಿತ್ತು. ಒಮ್ಮೊಮ್ಮೆ ಶಾಲೆಗೆ  ತಡವಾಗಿ  ಹೋಗಿ ಈ ಮಳೆರಾಯನ ನೆಪ ಹೇಳಿ ಒದೆಗಳಿಂದ ತಪ್ಪಿಸಿಕೊಂಡದ್ದು ಇದೆ.

ಶಾಲೆಯಿಂದ ಮನೆಗೆ ಬಂದಾಕ್ಷಣ ನಮ್ಮ ಮುಂದೆ  ಮಳೆಗಾಲದ ಸ್ಪೆಷಲ್ ಕಾಫೀ, ಟೀ ಗಳು ಅಂದರೆ ತುಳಸಿ, ಶುಂಟಿ, ಕೊತ್ತಂಬರಿ, ಜೀರಿಗೆ, ಮೆಣಸು ಇವುಗಳ ರುಚಿ ಸಿಗುವಂತಹ ಬಿಸಿ,ಬಿಸಿ ಟೀ, ಕಾಫೀ ಮತ್ತೆ ಬೇಸಿಗೆಯಲ್ಲಿ ಮಾಡಿ ಒಣಗಿಸಿಟ್ಟುಕೊಂಡಿದ್ದ ಹಪ್ಪಳ, ಸಂಡಿಗೆ, ಚಕ್ಕುಲಿಗಳು ಎಣ್ಣೆಯಲ್ಲಿ ಕುಣಿದಾಡಿ ಮಿಂದೆದ್ದು  ನಾವು ತಿನ್ನಲೆಂದೇ ತಟ್ಟೆಯಲ್ಲಿ  ತಯಾರಾಗಿ ಕುಳಿತಿರುತಿದ್ದವು. ಒಮ್ಮೊಮ್ಮೆ ಕೆಂಡದ ಮೇಲೆ ಸುಟ್ಟ ಉದ್ದಿನ ಹಪ್ಪಳ, ಜೋಳದ ಹಪ್ಪಳಗಳ ಜೊತೆ ತೆಂಗಿನಕಾಯಿ ಚೂರು ನೆಂಚಿಕೊಂಡು ತಿನ್ನುವುದು, ಹುರಿದ ಶೇಂಗಾ ಜೊತೆ ಬೆಲ್ಲ ನೆಂಚಿಕೊಂಡು ತಿನ್ನುತಿದ್ದುದು, ಸುಟ್ಟಹಲಸಿನಬೀಜ, ಸೂರ್ಯಕಾಂತಿ ಬೀಜ ಇವೆಲ್ಲ ಉಟಕ್ಕಿಂತ ಹೆಚ್ಚಾಗಿ ನಮ್ಮ ಹೊಟ್ಟೆ ಸೇರುತಿದ್ದವು. ಈ ಎಲ್ಲಾ ರುಚಿಗಳ ಮುಂದೆ ಈಗಿನ junk-food ಏನೂ ಅಲ್ಲ. ಇವೆಲ್ಲಾ ನಮ್ಮ junk-food.  ಆರೋಗ್ಯಕರ ಮತ್ತು ರುಚಿಕರ ಕುರುಕಲು ತಿಂಡಿಗಳು ಅವಾಗಿದ್ದವು.

ರಾತ್ರಿಯಾದರೆ ಸಾಕು ಕಪ್ಪೆರಾಯರ ಸಮೂಹದ ವಟವಟ ಸದ್ದು, ಚಿಟ್ಟೆಗಳ ಚಿಟರ್-ಚಿಟ್ರ್ ಸದ್ದುಗಳು, ರಾತ್ರಿ ವೇಳೆ ಕರೆಂಟ್ ಹೋದಾಗ ಬುಡ್ಡಿದೀಪ, ಎಣ್ಣೆ ದೀಪ, ಮುಂಬತ್ತಿ ಹಚ್ಚಿ ಅವುಗಳ ಮುಂದೆ ಕೂತು ಅವುಗಳ ಸುತ್ತ ಬರುವ ಹುಳುಗಳ ಜೊತೆ ಆಟವಾಡುತ್ತ ಕಾಲ ಕಳೆದದ್ದು, ಕರೆಂಟ್ ಬಂದ ತಕ್ಷಣ  happy birthday ಅಂತ ಕೂಗಿ ಉಫ್ ಅಂತ ದೀಪ ಕೆಡಿಸ್ತಿದ್ದುದು, ದೀಪ ಕೆಡಿಸಿದ ತಕ್ಷಣ ಮತ್ತೆ ಕರೆಂಟ್ ಹೋಗಿ ದೊಡ್ಡವರೊಡನೆ ಬೈಸಿಕೊಳ್ಳುತಿದ್ದುದು ಇವೆಲ್ಲ ಸಾಮಾನ್ಯವಾಗಿದ್ದವು.

ನೆನೆಯುತ್ತಾ ಕೂತರೆ ಆ ದಿನಗಳ ಹೊತ್ತು ಹೋದದ್ದೇ ಗೊತ್ತಾಗದು. ಈ ಮುಂಗಾರು ಮಳೆಯ ಮಾಯೆಯೇ ಅಂಥದ್ದು. ಅದು ಕೊಟ್ಟ ನೆನಪಿನ ಬುತ್ತಿ ಅಪಾರ. ಮುಂಗಾರು ಮಳೆ ಬಿದ್ದಾಕ್ಷಣ ಹೇಗೆ ಒಣಗಿರುವ ಬೀಜ ಮೊಳಕೆಯೊಡೆದು ಸಸಿಯಾಗುವುದೋ ಹಾಗೆ ಈ ಮಳೆ ಅನೇಕ ಪ್ರೇಮಿಗಳಿಗೆ ಪ್ರೀತಿಗೆ ಮುನ್ನುಡಿ ಬರೆದು ಕೊಟ್ಟ ಅನೇಕ ಉದಾಹರಣೆಗಳಿವೆ. ಎಸ್ಟೋ ಚಲನ ಚಿತ್ರ ಗಳಿಗೆ ಸ್ಪೂರ್ತಿಯಾಗಿದೆ. ಇಸ್ಟೆಲ್ಲಾ ಮಧುರ ನೆನಪಿನ ಬುತ್ತಿಯನ್ನು ಮತ್ತೆ ಮತ್ತೆ ಹೊತ್ತು ತರುವ ಈ ಮುಂಗಾರು ಮಳೆ ಎಲ್ಲರ ಚೈತನ್ಯದ ಶಕ್ತಿಯೇ ಸರಿ ಅಲ್ಲವೇ,! 

No comments:

Post a Comment